Bengaluru: ಇಂದಿನಿಂದ ಹೆಬ್ಬಾಳ ಮೇಲ್ಸೇತುವೆ ಮೇಲೆ ಈ ವಾಹನಗಳ ಸಂಚಾರ ಬಂದ್.. ಪರ್ಯಾಯ ಮಾರ್ಗಗಳಾವುವು?
ಬೆಂಗಳೂರು (Bengaluru) ನಗರದ ಹೃದಯ ಭಾಗಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳ ಮೇಲ್ಸೇತುವೆ (Hebbal flyover) ಮೇಲೆ ಇಂದಿನಿಂದ ದ್ವಿಚಕ್ರ ವಾಹನ ಹೊರತುಪಡಿಸಿ, ಉಳಿದೆಲ್ಲ ವಾಹನಗಳ ಸಂಚಾರ ಬಂದ್ ಆಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಈ ಫ್ಲೈಓವರ್ ಗೆ 2 ಹೊಸ ಟ್ರ್ಯಾಕ್ ಗಳನ್ನು ನಿರ್ಮಿಸಲು ಕಾಮಗಾರಿಯನ್ನು ಆರಂಭಿಸಿದೆ.
ಈ ಬಗ್ಗೆ ಮಂಗಳವಾರ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆಗೊಳಿಸಿರುವ ಬೆಂಗಳೂರು ಸಂಚಾರಿ ಪೊಲೀಸರು, ಕೆಆರ್ ಪುರಂ ಲೂಪ್ ಸೇರುವ ಮುಖ್ಯ ಟ್ರ್ಯಾಕ್ ಬಳಿ 2 ಸ್ಪ್ಯಾನ್‌ಗಳನ್ನು ತೆರವುಗೊಳಿಸಲಾಗುವುದು. ಇದರಿಂದ ಮುಂದಿನ ನಾಲ್ಕು ತಿಂಗಳು ಸಂಚಾರದಲ್ಲಿ ವ್ಯತ್ಯಯವಾಗಲಿದ್ದು, ಸುಗಮ ಓಡಾಟಕ್ಕಾಗಿ ವಾಹನ ಸವಾರರು ಬದಲಿ ಮಾರ್ಗಗಳನ್ನು ಬಳಕೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಏ.17ರಿಂದ ನಾಗವಾರದಿಂದ ಹೆಬ್ಬಾಳ ಮೇಲ್ಸೇತುವೆ ಕಡೆಗೆ ಬರುವ ದ್ವಿಚಕ್ರ ವಾಹನ ಹೊರತುಪಡಿಸಿ, ಉಳಿದೆಲ್ಲ ವಾಹನಗಳ ಸಂಚಾರವನ್ನು ಕೆಆರ್ ಪುರಂ ಅಪ್-ರ್‍ಯಾಂಪ್ ಮೇಲೆ ನಿರ್ಬಂಧಿಸಲಾಗಿದೆ. ನಾಗವಾರದಿಂದ (ಔಟರ್ ರಿಂಗ್‌ರೋಡ್) ನಗರದೊಳಗೆ ಮೇಖ್ರಿ ಸರ್ಕಲ್ ಮೂಲಕ ಬರುತ್ತಿದ್ದ ವಾಹನಗಳು, ಹೆಬ್ಬಾಳ ವೃತ್ತದಲ್ಲಿ ಮೇಲ್ಸೇತುವೆ ಕೆಳಗಿನಿಂದ ಬಲಕ್ಕೆ ತಿರುಗಿ, ಕೊಡಿಗೆಹಳ್ಳಿ ಜಂಕ್ಷನ್ ಬಳಿಯು ತಿರುವು ಪಡೆದು ಸರ್ವಿಸ್ ರಸ್ತೆಯಿಂದ ಹೆಬ್ಬಾಳ ಮೇಲ್ಸೇತುವೆಯ ರ್‍ಯಾಂಪ್ ಮೂಲಕ ನಗರದ ಕಡೆಗೆ ಚಲಿಸಬೇಕು.
ಕೆಆರ್ ಪುರಂ, ನಾಗವಾರ ಕಡೆಯಿಂದ ನಗರದೊಳಗೆ ಬರುವ ವಾಹನ ಚಾಲಕರು, ಐಒಸಿ-ಮುಕುಂದ ಚಿತ್ರಮಂದಿರ ರಸ್ತೆ, ಲಿಂಗರಾಜಪುರ ಮೇಲ್ಸೇತುವೆ ಮಾರ್ಗ, ನಾಗವಾರ ಟ್ಯಾನರಿ ರಸ್ತೆಯಲ್ಲಿ ನಗರದೊಳಗೆ ಬರಬಹುದು. ಹೆಗಡೆ ನಗರ-ಥಣಿಸಂದ್ರ ಕಡೆಯಿಂದ ಬರುವ ವಾಹನ ಸವಾರರು, ಜಿಕೆವಿಕೆ - ಜಕ್ಕೂರು ರಸ್ತೆ ಮೂಲಕ ನಗರವನ್ನು ಪ್ರವೇಶಿಸಬಹುದು.
ಕೆಆರ್ ಪುರಂನಿಂದ ಹೆಬ್ಬಾಳ ಮಾರ್ಗವಾಗಿ ಯಶವಂತಪುರ (Yeswanthpur) ಕಡೆಗೆ ಚಲಿಸುವ ವಾಹನಗಳು ಹೆಬ್ಬಾಳ ಫ್ಲೈಓವರ್ (Hebbal flyover) ಕೆಳಗಡೆ ನೇರವಾಗಿ ಬಿಇಎಲ್ ಸರ್ಕಲ್ ತಲುಪಿ ಎಡಗಡೆ ತಿರುಗಿ, ಸದಾಶಿವನಗರ ಜಂಕ್ಷನ್ ನಲ್ಲಿ ಬಲಭಾಗಕ್ಕೆ ತಿರುವು ಪಡೆದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‍ಸಿ) ಮುಖಾಂತರ ಚಲಿಸಬಹುದು.
ಕೆಆರ್ ಪುರಂ, ಹೆಣ್ಣೂರು, ಹೆಚ್‌ಆರ್‌ಬಿಆರ್ ಲೇಔಟ್, ಕೆಜಿ ಹಳ್ಳಿ, ಬಾಣಸವಾಡಿ, ಕಡೆಯಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport)ಕ್ಕೆ ಹೋಗುವ ವಾಹನಗಳು, ಹೆಣ್ಣೂರು - ಬಾಗಲೂರು ರಸ್ತೆಯನ್ನು ಬಳಸಿ ವಿಮಾನ ನಿಲ್ದಾಣಕ್ಕೆ ತಲುಪಬಹುದು ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಇದೇ ತಿಂಗಳ ಆರಂಭದಿಂದ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ, ಬನ್ನೇರುಘಟ್ಟ ರಸ್ತೆಯ 1 ಕಿಲೋಮೀಟರ್ ಮಾರ್ಗವನ್ನು ಒಂದು ವರ್ಷದವರೆಗೆ ಮುಚ್ಚಲಾಗಿದೆ. ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಡೈರಿ ಸರ್ಕಲ್ ಕಡೆಯಿಂದ ಚಲಿಸುವ ವಾಹನಗಳು ಮತ್ತು ಆನೆಪಾಳ್ಯ ಜಂಕ್ಷನ್ ಕಡೆಗೆ ತೆರಳಬೇಕಾದ ವಾಹನಗಳು, ಮೈಕೋ ಸಿಗ್ನಲ್ ನಲ್ಲಿ ಬಲಕ್ಕೆ ತಿರುಗಿ, ಭೋಷ್ ಲಿಂಕ್ ರಸ್ತೆಯ ಮೂಲಕ ಆಡುಗೋಡಿ ಸಿಗ್ನಲ್ ತಲುಪಿ, ಎಡಕ್ಕೆ ತಿರುಗಿ ಚಲಿಸಬೇಕು.
ಆನೆಪಾಳ್ಯ ಜಂಕ್ಷನ್ ನಿಂದ ಡೈರಿ ಸರ್ಕಲ್ ಕಡೆಗೆ ಹೋಗುವ ವಾಹನ ಸಂಚಾರದಲ್ಲಿ ಯಾವುದೇ ವ್ಯತ್ಯಯವಿರುವುದಿಲ್ಲ. ಡೈರಿ ಸರ್ಕಲ್ ನಿಂದ ಶಾಂತಿನಗರ ಕಡೆಗೆ ಚಲಿಸುವ ವಾಹನಗಳು ವಿಲ್ಸನ್ ಗಾರ್ಡನ್ ಬಡಾವಣೆಯ 7ನೇ ಮುಖ್ಯರಸ್ತೆಯಲ್ಲಿ ಎಡಕ್ಕೆ ತಿರುವು ಪಡೆಯಬೇಕು ಎಂದು ಬಿಎಂಆರ್‌ಸಿಎಲ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿಯನ್ನು ನೀಡಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications