ಮದುರೈ ಮೀನಾಕ್ಷಿ ದರ್ಶನಕ್ಕೆ ತೆರಳುವವರಿಗೆ ಸಿಹಿಸುದ್ದಿ.. ನಾಳೆ ವಂದೇ ಭಾರತ್ ರೈಲಿಗೆ ಚಾಲನೆ, ಬೇಗ ಹೋಗಬಹುದು!
ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಸೆಮಿ ಹೈಸ್ಪೀಡ್ ರೈಲಾಗಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿದೆ. ಈ ರೈಲಿಗೆ ಪ್ರಯಾಣಿಕರಿಂದಲೂ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಳೆ (ಆಗಸ್ಟ್ 31) ಬೆಂಗಳೂರು (Bengaluru) ಹಾಗೂ ಮದುರೈ (Madurai) ನಡುವೆ ಸಂಚರಿಸುವ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಅಧಿಕೃತವಾಗಿ ಚಾಲನೆ ದೊರೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಿಸಲಿದ್ದಾರೆ.
ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ಬೆಂಗಳೂರು ಮತ್ತು ಮದುರೈ ಮಧ್ಯೆಯಿರುವ 430 ಕಿಲೋಮೀಟರ್ ಅಂತರವನ್ನು 8 ಗಂಟೆಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಕ್ರಮಿಸಲಿದೆ. ಪ್ರಸ್ತುತ ಸಾಮಾನ್ಯ ಎಕ್ಸ್‌ಪ್ರೆಸ್ ರೈಲುಗಳು ಈ ದೂರವನ್ನು ಕ್ರಮಿಸಲು 9 ಗಂಟೆ ತೆಗೆದುಕೊಳ್ಳುತ್ತವೆ. ಹೊಸ ವಂದೇ ಭಾರತ್ ರೈಲು ಕೆಆರ್ ಪುರಂ, ಸೇಲಂ, ನಾಮಕ್ಕಲ್, ಕರೂರು, ತಿರುಚಿರಾಪಳ್ಳಿ ಹಾಗೂ ದಿಂಡಿಗಲ್‌ನಲ್ಲಿ ನಿಲುಗಡೆಯಾಗುತ್ತದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ಮಧುರೈನಿಂದ ಬೆಳಗ್ಗೆ 5.15ಕ್ಕೆ ಹೊರಟು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೆಂಗಳೂರಿನ ಕಂಟೋನ್ಮೆಂಟ್ ನಿಲ್ದಾಣವನ್ನು ತಲುಪುತ್ತದೆ. ಬೆಂಗಳೂರಿನ ಕಂಟೋನ್ಮೆಂಟ್‌ನಿಂದ ಮಧ್ಯಾಹ್ನ 1.30ಕ್ಕೆ ಸಂಚಾರವನ್ನು ಆರಂಭಿಸಿ, ರಾತ್ರಿ 9.45ರ ಹೊತ್ತಿಗೆ ಮಧುರೈಗೆ ಹಿಂದಿರುಗಲಿದೆ. ಮಂಗಳವಾರ ಹೊರತುಪಡಿಸಿ ವಾರದ 6 ದಿನಗಳು ಓಡಾಟ ನಡೆಸಲಿದೆ.
ಈ ವಂದೇ ಭಾರತ್ ಎಕ್ಸ್‌ಪ್ರೆಸ್ 7 ಚೇರ್ ಕಾರ್ ಹಾಗೂ 1 ಎಕ್ಸಿಕ್ಯೂಟಿವ್ ಕೋಚ್ ಹೊಂದಿರಲಿದೆ. ಚೇರ್ ಕಾರ್ ಪ್ರಯಾಣಕ್ಕೆ ಟಿಕೆಟ್‌ವೊಂದಕ್ಕೆ ರೂ.1,200 ರಿಂದ ರೂ1,300 ಹಾಗೂ ಎಕ್ಸಿಕ್ಯೂಟಿವ್ ಕೋಚ್‌ನಲ್ಲಿ ರೂ.1,800 ರಿಂದ ರೂ.2,000 ದರವಿರಬಹುದು ಎಂದು ಅಂದಾಜಿಸಲಾಗಿದೆ. ದಕ್ಷಿಣ ರೈಲ್ವೆ ಮದುರೈ ಜಂಕ್ಷನ್ ನಿಲ್ದಾಣದಲ್ಲಿ ಈ ರೈಲನ್ನು ನಿರ್ವಹಣೆ ಮಾಡಲಿದೆ.
ಮುಂಬರುವ ದಿನಗಳಲ್ಲಿ ಅಧಿಕೃತ ಕಾರ್ಯಚರಣೆ ದಿನಾಂಕ ಹಾಗೂ ಟಿಕೆಟ್ ದರದ ಕುರಿತಂತೆ ಹೆಚ್ಚಿನ ವಿವರಗಳು ಲಭ್ಯವಾಗಲಿವೆ. ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ (V Somanna) ಅವರು ಕೂಡ ನಾಳಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿದೆ ಎಂದು ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸದ್ಯ ಚೆನ್ನೈ-ಬೆಂಗಳೂರು-ಮೈಸೂರು, ಬೆಂಗಳೂರು-ಧಾರವಾಡ, ಬೆಂಗಳೂರು-ಕಲಬುರಗಿ, ಬೆಂಗಳೂರು-ಹೈದರಾಬಾದ್, ಬೆಂಗಳೂರು-ಕೊಯಮತ್ತೂರು ಹಾಗೂ ಬೆಂಗಳೂರು-ಎರ್ನಾಕುಲಂ ನಡುವೆ ಒಟ್ಟು 7 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಬೆಂಗಳೂರಿನಿಂದ ವಿಜಯಪುರ, ಬೆಳಗಾವಿ ಹಾಗೂ ಮಂಗಳೂರಿಗೂ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಸೇವೆಯನ್ನು ನೀಡುವಂತೆ ಅಲ್ಲಿನ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಈ ವಂದೇ ಭಾರತ್ ಎಕ್ಸ್‌ಪ್ರೆಸ್ ಗರಿಷ್ಠ ವೇಗದಲ್ಲಿ ಕಾರ್ಯಾಚರಣೆ ನಡೆಸುವುದಕ್ಕೆ ಹೆಸರುವಾಸಿಯಾಗಿದೆ. ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕವಾಚ್ ವ್ಯವಸ್ಥೆಯನ್ನು ಹೊಂದಿವೆ. ಪ್ರಯಾಣಿಕರಿಗೂ ಅತ್ಯಾಧುನಿಕ ಸೌಕರ್ಯವನ್ನು ಕಲ್ಪಿಸಲಾಗುತ್ತಿದೆ. ಸಂಪೂರ್ಣ ಎಸಿ (ಹವಾನಿಯಂತ್ರಿತ) ವ್ಯವಸ್ಥೆಯಿರುವ ಈ ರೈಲಿನ ಸೀಟುಗಳು, ಹೆಚ್ಚು ಆರಾಮದಾಯವಾಗಿವೆ. ಜೈವಿಕ ಶೌಚಾಲಯ, ಸ್ವಯಂಚಾಲಿತ ಬಾಗಿಲು ಮತ್ತು ಅಗ್ನಿ ನಿರೋಧಕ ಸಾಧನಗಳನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications