Expressway: ಬೆಂಗಳೂರು - ಮಂಗಳೂರು ಮಧ್ಯೆ ಹೊಸ ಎಕ್ಸ್‌ಪ್ರೆಸ್‌ವೇ.. ಸುಲಭ ಪ್ರಯಾಣ, ಕಾಮಗಾರಿ ಯಾವಾಗ ಆರಂಭ?
ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಕರಾವಳಿ ನಗರಿ ಮಂಗಳೂರನ್ನು ಮತ್ತಷ್ಟು ಹತ್ತಿರವಾಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಹಾಸನ ಮೂಲಕ ಬೆಂಗಳೂರು ಮತ್ತು ಮಂಗಳೂರು ನಡುವೆ ಹೊಸ ಎಕ್ಸ್‌ಪ್ರೆಸ್‌ವೇ (Expressway) ನಿರ್ಮಿಸಲು ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಯೋಜಿಸಿದೆ. ಈ ಹೆದ್ದಾರಿ ನಿರ್ಮಾಣದ ನಂತರ ಇವೆರಡು ನಗರಗಳ ನಡುವಿನ ಪ್ರಯಾಣದ ಅವಧಿಯು ಸಾಕಷ್ಟು ಕಡಿಮೆಯಾಗಲಿದೆ. ಬನ್ನಿ.. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಬೆಂಗಳೂರು - ಮಂಗಳೂರು ಎಕ್ಸ್‌ಪ್ರೆಸ್‌ವೇ (Bengaluru - Mangaluru Expressway) ಕಾಮಗಾರಿಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮತ್ತು ಕರ್ನಾಟಕ ಲೋಕೋಪಯೋಗಿ ಇಲಾಖೆ ಜಂಟಿಯಾಗಿ ನಡೆಸಲಿವೆ ಎಂದು ವರದಿಯಾಗಿದೆ. ಈ ಎಕ್ಸ್‌ಪ್ರೆಸ್‌ವೇ ಒಟ್ಟು 335 ಕಿಲೋಮೀಟರ್ ಉದ್ದವಿರಲಿದ್ದು, 4 ರಿಂದ 6 ಪಥಗಳಲ್ಲಿ ನಿರ್ಮಿಸಲು ಯೋಜಿಸಲಾಗಿದೆ.

ಕಳೆದ ಜುಲೈನಲ್ಲಿ, ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಕೇಂದ್ರ ಹೆದ್ದಾರಿ ಸಚಿವಾಲಯ ಟೆಂಡರ್ ಕರೆದಿತ್ತು. ನವೆಂಬರ್‌ನಲ್ಲಿ 9 ಕಂಪನಿಗಳು ಬಿಡ್ ಸಲ್ಲಿಸಿದ್ದವು. ಅತಿ ಶೀಘ್ರದಲ್ಲಿ ಕಂಪನಿಯೊಂದಕ್ಕೆ ಡಿಪಿಆರ್ ತಯಾರಿಸಲು ಟೆಂಡರ್ ನೀಡಲಾಗುತ್ತದೆ ಎನ್ನಲಾಗಿದೆ. ಆ ಕಂಪನಿಗೆ ಅಂತಿಮ ವರದಿ ನೀಡಲು 540 ದಿನಗಳ ಕಾಲಾವಕಾಶ ಕೊಡಲಾಗುತ್ತದೆ ಎಂದು ತಿಳಿದುಬಂದಿದೆ.
ಭೂ ಸ್ವಾಧೀನ ಸೇರಿದಂತೆ ಎಲ್ಲ ಪ್ರತಿಕ್ರಿಯೆಗಳು ಸುಸೂತ್ರವಾಗಿ ಮುಕ್ತಾಯಗೊಂಡರೆ, ಈ ಬೆಂಗಳೂರು - ಮಂಗಳೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣದ ಕೆಲಸಗಳು 2028ರಲ್ಲಿ ಪ್ರಾರಂಭವಾಗುವ ನೀರಿಕ್ಷೆಯಿದೆ. ಆ ನಂತರದಲ್ಲಿ ಎರಡರಿಂದ ಮೂರು ವರ್ಷಗಳಲ್ಲಿ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಳ್ಳಲಿದ್ದು, ವಾಹನ ಸಂಚಾರಕ್ಕೂ ಒಪ್ಪಿಗೆ ಕೊಡಲಾಗುತ್ತದೆ.
ಸದ್ಯ ಬೆಂಗಳೂರು ಮತ್ತು ಮಂಗಳೂರು ನಡುವೆ ಪ್ರಯಾಣಿಸಲು ಸಾಮಾನ್ಯ ವಾಹನಗಳಲ್ಲಿ ಪ್ರಯಾಣಿಸಲು ಸರಿ ಸುಮಾರು 7 ರಿಂದ 8 ಗಂಟೆ ಬೇಕಾಗುತ್ತದೆ. ಈ ಹೊಸ ಎಕ್ಸ್‌ಪ್ರೆಸ್‌ವೇ ನಿರ್ಮಾಣದಿಂದ ಇವೆರೆಡು ನಗರಗಳ ಮತ್ತಷ್ಟು ತ್ವರಿತವಾಗಿ ಪ್ರಯಾಣಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.
ಬೆಂಗಳೂರು - ಮಂಗಳೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣದಿಂದ ರಾಜ್ಯ ರಾಜಧಾನಿ ಹಾಗೂ ಕರಾವಳಿ ಜಿಲ್ಲೆಯ ಜನರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ. ವ್ಯಾಪಾರ & ವಹಿವಾಟುಗಳು ಅಭಿವೃದ್ಧಿಯಾಗಲಿದ್ದು, ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರಗಳು ಕೂಡ ಬೆಳವಣಿಗೆಯೊಂದಲಿವೆ. ಜೊತೆಗೆ ಪ್ರವಾಸೋದ್ಯಮ ಹಾಗೂ ರಿಯಲ್ ಎಸ್ಟೇಟ್ ಉದ್ಯಮಗಳು ಸಹ ವ್ಯಾಪಕವಾಗಿ ಪ್ರಗತಿಯೊಂದಲಿವೆ.
ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru - Chennai Expressway) ಕೂಡ ಶೀಘ್ರದಲ್ಲಿಯೇ ಲೋಕಾರ್ಪಣೆ: ಈ ಹೆದ್ದಾರಿ 262 ಕಿಲೋಮೀಟರ್ ಉದ್ದವಿದೆ. ರಾಜ್ಯದಲ್ಲಿ 71 ಕಿಲೋಮೀಟರ್ ಹಾದು ಹೋಗಲಿದೆ. ಬಹುತೇಕ ಎಲ್ಲ ಕಾಮಗಾರಿ ಮುಕ್ತಾಯಗೊಂಡಿದೆ. ಇಲ್ಲಿ ವಾಹನ ಸಂಚಾರಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಆಂಧ್ರ ಪದೇಶ ಮತ್ತು ತಮಿಳುನಾಡಿನಲ್ಲಿ ಕಾಮಗಾರಿ ಬಾಕಿಯಿದ್ದು, ಆ ಬಳಿಕ ನೂತನ ಹೆದ್ದಾರಿಯು ಅಧಿಕೃತವಾಗಿ ಲೋಕಾರ್ಪಣೆಯಾಗಲಿದೆ.
ಈ ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ 4 ಪಥಗಳನ್ನು ಹೊಂದಿದೆ. ಕರ್ನಾಟಕದ ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ, ಆಂಧ್ರ ಪ್ರದೇಶದ ಚಿತ್ತೂರು, ತಮಿಳುನಾಡಿನ ರಾಣಿಪೇಟೆ ಹಾಗೂ ಶ್ರೀಪೆರಂಬದೂರುಗಳಲ್ಲಿ ಹಾದು ಹೋಗುತ್ತದೆ. ಈಗಿರುವ 5 ರಿಂದ 6 ಗಂಟೆ ಪ್ರಯಾಣದ ಅವಧಿಯು 2 ರಿಂದ 3 ಗಂಟೆಗಳಿಗೆ ಕಡಿಮೆಯಾಗುವ ಸಂಭವವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications