Bengaluru Mysuru Expressway: ಕೆಲವೇ ಗಂಟೆಗಳಲ್ಲಿ ಬೈಕ್, ಆಟೋ ಸಂಚಾರ ನಿಷೇಧ
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ (Bengaluru Mysuru Expressway)ಯಲ್ಲಿ ಅಪಘಾತಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಹತ್ವದ ಕ್ರಮ ಕೈಗೊಂಡಿದ್ದು, ನಾಳೆಯಿಂದ ಬೈಕ್, ಆಟೋ ಸಂಚಾರ ನಿಷೇಧ ಮಾಡಿದೆ. ಮಧ್ಯರಾತ್ರಿಯಿಂದ ಅಧಿಕೃತವಾಗಿ ಜಾರಿಯಾಗಲಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೆದ್ದಾರಿ ಪ್ರಾಧಿಕಾರ ಜುಲೈ 12 ರಂದೇ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, 'ರಾಷ್ಟ್ರೀಯ ಹೆದ್ದಾರಿಗಳ ನಿಯಂತ್ರಣ ಕಾಯಿದೆ 2002' ಅಡಿಯಲ್ಲಿ ಸುರಕ್ಷತೆ ದೃಷ್ಟಿಯಿಂದ ದ್ವಿಚಕ್ರ ವಾಹನಗಳು (ಬೈಕ್, ಸ್ಕೂಟರ್), ಮೂರು ಚಕ್ರದ ವಾಹನಗಳು (ಆಟೋ), ಟ್ರಾಕ್ಟರ್, ಮಲ್ಟಿ ಆಕ್ಸೆಲ್ ಹೈಡ್ರಾಲಿಕ್ ಟ್ರೈಲರ್ ವಾಹನಗಳು ಹಾಗೂ ಕ್ವಾಡ್ರಿ ವಾಹನಗಳ ಸಂಚಾರವನ್ನು ಆಗಸ್ಟ್ 1ರಿಂದ ಎಕ್ಸ್‌ಪ್ರೆಸ್‌ವೇಯಲ್ಲಿ ನಿಷೇಧಿಸಿದೆ.

ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆಯಲ್ಲಿ ಕಡಿಮೆಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ, ಈ ತೀರ್ಮಾನವನ್ನು ಕೈಗೊಂಡಿದೆ. ಹೆದ್ದಾರಿಗೆ ಪ್ರಾಧಿಕಾರದ ನಿರ್ಧಾರವನ್ನು ಗೂಡ್ಸ್ ಆಟೋ ಚಾಲಕರು ವಿರೋಧಿಸಿದ್ದು, ಎಕ್ಸ್‌ಪ್ರೆಸ್‌ವೇಯಲ್ಲಿ ಖುಷಿಯಿಂದ ಓಡಾಡುತ್ತಿದ್ದವು. ಅದಕ್ಕೆ ನಿರ್ಬಂಧ ವಿಧಿಸಿರುವುದು ಬೇಸರ ತರಿಸಿದೆ ಎಂದು ಆಟೋ ಚಾಲಕರು ಹೇಳಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಇದೇ ಮೊದಲ ಬಾರಿಗೆ ಶನಿವಾರ ಸಿದ್ದರಾಮಯ್ಯ (Siddaramaiah) ಅವರು, ಮಂಡ್ಯಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಪರಿಶೀಲನೆ ನಡೆಸಿ, ಸ್ಪೀಡ್ ಡಿಟೆಕ್ಟರ್‌ಗೆ ಚಾಲನೆ ನೀಡಿದರು. ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಎಕ್ಸ್‌ಪ್ರೆಸ್ ವೇನಲ್ಲಿ ಕೆಲವು ಸುರಕ್ಷತಾ ಕ್ರಮ ಅಗತ್ಯವಿದ್ದು, ಅದಕ್ಕಾಗಿ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾನೆ' ಎಂದು ಹೇಳಿದ್ದರು.
ಪೊಲೀಸ್ ಇಲಾಖೆಯು ಅಪಘಾತಗಳ ತಡೆಗೆ ಮುಂದಾಗಿದ್ದು, ಅದಕ್ಕಾಗಿ ದಶಪಥ ಹೆದ್ದಾರಿಯಲ್ಲಿ AI (ಕೃತಕ ಬುದ್ದಿಮತ್ತೆ) ಕ್ಯಾಮೆರಾವನ್ನು ಅಳವಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿದ್ದ ಸಂಚಾರಿ ಹಾಗೂ ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು, 'ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಕ್ಯಾಮೆರಾಗಳನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಈ ಕ್ರಮದಿಂದ ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಸಾಧ್ಯವಾಗುತ್ತದೆ' ಎಂದು ತಿಳಿಸಿದ್ದರು.
ಜುಲೈ ತಿಂಗಳಲ್ಲಿ ಪೋಲೀಸರ ಸತತ ಪರಿಶ್ರಮದಿಂದ, ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಮೃತರ ಸಂಖ್ಯೆ ಕಡಿಮೆಯಾಗಿದೆ. ಜುಲೈ 24 ರವರೆಗೆ 30 ಅಪಘಾತ ಪ್ರಕರಣಗಳು ವರದಿಯಾಗಿವೆ. 3 ಮಂದಿ ಸಾವನ್ನಪ್ಪಿದ್ದು, 40 ಮಂದಿ ಗಾಯಗೊಂಡಿದ್ದಾರೆ. ಅದಕ್ಕೂ ಮುನ್ನ ಮಾರ್ಚ್ ನಲ್ಲಿ ಲೋಕಾರ್ಪಣೆಗೊಂಡ ಈ ಹೆದ್ದಾರಿಯಲ್ಲಿ ಜರುಗಿದ ವಿವಿಧ ಆಕ್ಸಿಡೆಂಟ್ ಕೇಸ್ ಗಳಲ್ಲಿ 100ಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದರು.
ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ ಸುಮಾರು ರೂ.8172 ಕೋಟಿ ವೆಚ್ಚದಲ್ಲಿ ಕೈಗಾರಿಕೆ ಹಾಗೂ ಪ್ರವಾಸೋದ್ಯಮದ ಅಭಿವೃದ್ದಿಗಾಗಿ 118 ಕಿಲೋಮೀಟರ್ ಉದ್ದದ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣ ಮಾಡಿದೆ. ಇದು ದಶಪಥದ ರಸ್ತೆಯಾಗಿದ್ದು, ಆರು ಪಥದ ಎಕ್ಸ್‌ಪ್ರೆಸ್‌ವೇ ಹಾಗೂ ತಲಾ ಎರಡು ಪಥದ ಸರ್ವಿಸ್ ರಸ್ತೆಯಿದೆ. ಈ ಹೆದ್ದಾರಿಯಿಂದ ಆಗಿರುವ ಅನುಕೂಲವೆಂದರೆ, ಇವೆರೆಡು ನಗರಗಳ ನಡುವಿನ ಪ್ರಯಾಣದ ಅವಧಿ ಕಡಿಮೆಯಾಗಿರುವುದು.
ಇನ್ನು, ಹೆದ್ದಾರಿ ಪ್ರಾಧಿಕಾರ ಎಕ್ಸ್‌ಪ್ರೆಸ್‌ವೇಯನ್ನು ಹೈ ಸ್ಪೀಡ್ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಿದ್ದು, ವಾಹನ ಸವಾರರ ಹಿತದೃಷ್ಟಿಯಿಂದ ಗರಿಷ್ಠ ವೇಗದ ಮಿತಿಗಳು 80 kmph ನಿಂದ 100 kmphಗೆ ಸೀಮಿತಗೊಳಿಸಿದೆ. ಜೊತೆಗೆ ನಾಳೆಯಿಂದ ಬೈಕ್, ಆಟೋ ಸಂಚಾರ ನಿಷೇಧ ಮಾಡಿದೆ. ಮಧ್ಯರಾತ್ರಿಯಿಂದ ಅಧಿಕೃತವಾಗಿ ಜಾರಿಯಾಗಲಿದ್ದು, ಈಗಲಾದರೂ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತೆಯೇ ಎಂಬುದನ್ನು ಕಾದುನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications