Bengaluru-Mysuru Expressway: ಅತಿ ವೇಗಕ್ಕೆ ಫಾಸ್ಟ್ಟ್ಯಾಗ್ ಮೂಲಕ ದಂಡ ವಿಧಿಸಲು ಚಿಂತನೆ
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ (Bengaluru-Mysuru Expressway)ಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಎಕ್ಸ್‌ಪ್ರೆಸ್‌ವೇಯಲ್ಲಿ ಕಾರುಗಳು ಯಮದೂತ ವೇಗದಲ್ಲಿ ಹೋಗಿ ಅಪಘಾತಗಳು ಸಂಭವಿಸುತ್ತಿವೆ. ಇದರಿಂದ ಎಕ್ಸ್‌ಪ್ರೆಸ್‌ವೇಯಲ್ಲಿ ವೇಗದ ವಾಹನ ಚಾಲನೆಯನ್ನು ತಡೆಗಟ್ಟಲು ಪೊಲೀಸರು ಹೊಸ ವಿಧಾನವನ್ನು ತರಲು ಚಿಂತನೆ ನಡೆಸುತ್ತಿದ್ದಾರೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಿದೆ.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುವುದರಿಂದ ಇದನ್ನು ತಡೆಗಟ್ಟಲು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಎಕ್ಸ್‌ಪ್ರೆಸ್‌ವೇ ಉತ್ತಮ ರೋಡ್ ಆಗಿರುವುದರಿಂದ ವಾಹನ ಸವಾರರು ವೇಗವಾಗಿ ಚಲಿಸುತ್ತಾರೆ. ಆದರೆ ಇನ್ನು ಮುಂದೆ ವೇಗವಾಗಿ ವಾಹನ ಚಲಾಯಿಸಿದರೆ ದಂಡ ಬೀಳುವುದು ಪಕ್ಕ. 3 ಲೈನಿಗೆ ಪ್ರತ್ಯೇಕ ವೇಗ ಮಿತಿ ಏರಿಕೆ. 60, 80, 100 ಕಿಮೀ ವೇಗದ ಮಿತಿ ಅಳವಡಿಸಲಾಗಿದೆ.

ಮಂಡ್ಯದ ಅಮರಾವತಿ ಬಳಿ ಸಿಸಿ ಕ್ಯಾಮರಾಗಳ ಅಳವಡಿಸಲಾಗಿದೆ. ಲೈನ್ ಕ್ರಾಸ್ ಮಾಡಿದ್ರೆ ದಂಡ ಕಟ್ಟಬೇಕಾಗುತ್ತೆ. ಮೊದಲ ಹಂತವಾಗಿ ಮಂಡ್ಯ ಪೊಲೀಸರೇ ದಂಡ ವಸೂಲಿ ಮಾಡುತ್ತಾರೆ. ಕೆಲ ದಿನಗಳಲ್ಲಿ ಫಾಸ್ಟ್ ಟ್ಯಾಗ್ (FASTag) ಮೂಲಕ ದಂಡ ವಸೂಲಿ ಮಾಡಲು ಚಿಂತನೆ ನಡೆಸುತ್ತಿದ್ದಾರೆ. ಈ ಬಗ್ಗೆ ಸದ್ಯಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಯಾರಿ ನಡೆಸಿದೆ. ಅಪಘಾತಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದಿಟ್ಟ ಹೆಜ್ಜೆ ಇಟ್ಟಿದೆ.
ಬೈಕ್, ಆಟೋ ಹಾಗೂ ಟ್ರಾಕ್ಟರ್ ಗಳ ಸಂಚಾರವನ್ನು ನಿಷೇಧಿಸಿ, ಅಧಿಸೂಚನೆ ಹೊರಡಿಸಿದೆ. ಆಗಸ್ಟ್ 1ರಿಂದ ಸಂಚಾರ ನಿರ್ಬಂಧ ಆದೇಶ ಜಾರಿಯಾಗಲಿದೆ. ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಹಿನ್ನೆಲೆ, ಈ ಬಗ್ಗೆ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದವು. ಅಂತಿಮವಾಗಿ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ ನಿಷೇಧಿಸಲು ತೀರ್ಮಾನಿಸಲಾಗಿದೆ. ಈ ಮೊದಲು, ಬೈಕ್ ಹಾಗೂ ಆಟೋ ಸಂಚಾರಕ್ಕೆ ನಿರ್ಬಂಧ ಹೇರುವ ಕುರಿತಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.

ಇನ್ನು ಇತ್ತೀಚೆಗೆ, ಎಕ್ಸ್‌ಪ್ರೆಸ್‌ವೇ ಕಾಮಗಾರಿಯನ್ನು ಅವೈಜಾನಿಕವಾಗಿ ಮಾಡಲಾಗಿದೆ ಎಂದು ಟೀಕೆಗೆ ಗುರಿಯಾಗಿದ್ದ ಹೆದ್ದಾರಿ ಪ್ರಾಧಿಕಾರ, ಈ ರಸ್ತೆ ಪರಿಶೀಲನೆಗೆ ವಿಶೇಷ ಸಮಿತಿ ರಚಿಸಿತ್ತು. ಆ ತಂಡ ಸದಸ್ಯರು, ಜುಲೈ 17ರಿಂದ ಜುಲೈ 20ರವರೆಗೆ ಈ ಹೆದ್ದಾರಿಯಲ್ಲಿ ಅಪಘಾತಗಳ ತಡೆಗೆ ಪರಿಶೀಲನೆ ನಡೆಸಿದ್ದರು. ಅಲ್ಲದೆ, ಮಾರ್ಚ್ ತಿಂಗಳಲ್ಲಿ ಉದ್ಘಾಟನೆಗೊಂಡ ಈ ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದ ವಿವಿಧ ಅಪಘಾತಗಳಲ್ಲಿ 100ಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದಾರೆ.
ಬೆಂಗಳೂರಿನ ಸಮೀಪದ ಪಂಚಮುಖಿ ದೇವಸ್ಥಾನದಿಂದ ಮೈಸೂರಿನ ಮಣಿಪಾಲ್ ಆಸ್ಪತ್ರೆ ಜಂಕ್ಷನ್‌ವರೆಗೆ 118 ಕಿಮೀ ಉದ್ದದ ಈ ಎಕ್ಸ್‌ಪ್ರೆಸ್‌ವೇಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೈ ಸ್ಪೀಡ್ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಿದೆ. ವಾಹನ ಸವಾರರ ಹಿತದೃಷ್ಟಿಯಿಂದ ಗರಿಷ್ಠ ವೇಗದ ಮಿತಿಗಳು 80 kmph ನಿಂದ 100 kmphಗೆ ಸೀಮಿತಗೊಳಿಸಿದೆ.

ಇನ್ನು ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಹಾದುಹೋಗುವ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಗಳ ತಡೆಗೆ ಅಲ್ಲಿನ ಪೊಲೀಸರು ಶತ ಪ್ರಯತ್ನ ನಡೆಸುತ್ತಿದ್ದು, ಜುಲೈ 4 ರಿಂದ ಸ್ಪೀಡ್ ರಾಡಾರ್ ನಿಯೋಜಿಸಿ, ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕೇಸ್ ದಾಖಲಿಸಿಕೊಂಡು ದಂಡ ವಿಧಿಸುವುದನ್ನು ಆರಂಭಿಸಿದ್ದರು. ಅದರ ಭಾಗವಾಗಿ, ಕೇವಲ 15 ದಿನದಲ್ಲಿ 2340 ಪ್ರಕರಣ ದಾಖಲಿಸಿ, ರೂ.16 ಲಕ್ಷ ದಂಡವನ್ನು ಸಂಗ್ರಹಿಸಿದ್ದರು.
ಒಟ್ಟಾರೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣ ಮಾಡಲಾಗಿದ್ದು, ಇದರಿಂದಾಗಿರುವ ದೊಡ್ಡ ಅನುಕೂಲವೆಂದರೆ, ಬೆಂಗಳೂರು, ಮೈಸೂರು ನಡುವೆ ಪ್ರಯಾಣದ ಅವಧಿ ಎಷ್ಟೋಪಟ್ಟು ಕಡಿಮೆಯಾಗಿರುವುದು. ಆದರೆ, ವಾಹನಗಳ ಅತಿಯಾದ ವೇಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದವು. ಸದ್ಯ, ಇದರ ತಡೆಗೆ ಹೆದ್ದಾರಿ ಪ್ರಾಧಿಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಇನ್ನು ವೇಗದಲ್ಲಿ ವಾಹನ ಚಾಲನೆಗೆ ದಂಡ ಕೂಡ ಬೀಳಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications