Bengaluru-Mysuru expressway: ಬರೋಬ್ಬರಿ 16 ಲಕ್ಷ ರೂಪಾಯಿ ದಂಡ ಸಂಗ್ರಹ
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ (Benagaluru-Mysuru expressway)ಯಲ್ಲಿ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಹಾದುಹೋಗುವ ಹೆದ್ದಾರಿಯಲ್ಲಿ ಅಲ್ಲಿನ ಪೊಲೀಸರು, ಜುಲೈ 4ರಿಂದ ಮೊಬೈಲ್ ಸ್ಪೀಡ್ ರಾಡಾರ್‌ಗಳನ್ನು ನಿಯೋಜಿಸಿದ್ದರು. ಸಂಚಾರಿ ನಿಯಮ ಪಾಲಿಸದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸುವುದನ್ನು ಶುರು ಮಾಡಿದ್ದರು.
ಅದರಂತೆ ದಶಪಥ ಹೆದ್ದಾರಿಯಲ್ಲಿ ವೇಗ ಮಿತಿ (100 kmph), ಸೀಟ್ ಬೆಲ್ಟ್, ಹೆಲ್ಮೆಟ್ ಹಾಕದಿರುವುದು ಸೇರಿದಂತೆ ವಿವಿಧ ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿರುವ ರಾಮನಗರ ಜಿಲ್ಲಾ ಪೊಲೀಸರು, ಕಳೆದ 15 ದಿನಗಳಲ್ಲಿ 16 ಲಕ್ಷ ರೂಪಾಯಿ ದಂಡದ ಮೊತ್ತವನ್ನು ಸಂಗ್ರಹಿಸಿದ್ದಾರೆ ಎಂದು ಸದ್ಯ ವರದಿಯಾಗಿದೆ.

ರಾಮನಗರ ವ್ಯಾಪ್ತಿಯಲ್ಲಿ ಹಾದುಹೋಗುವ ಎಕ್ಸ್‌ಪ್ರೆಸ್‌ವೇಯಲ್ಲಿ ಜುಲೈ 4ರಿಂದ ಪ್ರಕರಣಗಳನ್ನು ದಾಖಲಿಸುವುದನ್ನು ಆರಂಭಿಸಿರುವ ಪೊಲೀಸರು, ಕೇವಲ 15 ದಿನಗಳಲ್ಲಿ ಸುಮಾರು 2340 ಕೇಸ್ ಹಾಕಿದ್ದಾರೆ. ಅತಿವೇಗದ ಚಾಲನೆಗೆ 877 ಪ್ರಕರಣ, ಪಥ ಶಿಸ್ತು (Lane discipline) ಉಲ್ಲಂಘನೆಯಡಿ, 580, ಸೀಟ್ ಬೆಲ್ಟ್ ಹಾಕದಿರುವುದಕ್ಕೆ 189 ಹಾಗೂ ಹೆಲ್ಮೆಟ್ ಧರಿಸದಿರುವುದಕ್ಕೆ 274 ಕೇಸ್ ದಾಖಲಿಸಿ, 16 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಜೂನ್ ತಿಂಗಳ ಕೊನೆಯಲ್ಲಿ ರಾಮನಗರ ಜಿಲ್ಲಾ ವ್ಯಾಪ್ತಿಯ ಎಕ್ಸ್‌ಪ್ರೆಸ್‌ವೇಯನ್ನು ಸಂಚಾರಿ ಹಾಗೂ ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲಿಸಿದ್ದರು. ಆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗದಿತ ವೇಗಮಿತಿ ದಾಟುವ ಚಾಲಕರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದರು. ರಾಮನಗರ ಜಿಲ್ಲಾ ಪೊಲೀಸರು, ತಕ್ಷಣ ಕಾರ್ಯಪ್ರವೃತರಾಗಿ ಜುಲೈ 4ರಿಂದ ಸ್ಪೀಡ್ ರಾಡಾರ್ ನಿಯೋಜಿಸಿ, ಮೊದಲ ದಿನವೇ 44 ಪ್ರಕರಣ ದಾಖಲಿಸಿದ್ದರು.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಅವೈಜಾನಿಕವಾಗಿ ನಿರ್ಮಿಸಲಾಗಿದೆ ಎಂದು ವ್ಯಾಪಕ ಟೀಕೆಗೆ ಗುರಿಯಾಗಿದ್ದ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ (NHAI) ಎಚ್ಚೆತ್ತುಕೊಂಡು, ಹೆದ್ದಾರಿ ಪರಿಶೀಲನೆಗೆ ವಿಶೇಷ ಸಮಿತಿಯನ್ನು ರಚಿಸಿತ್ತು. ಆ ಸಮಿತಿ ಜುಲೈ 17ರಿಂದ ಜುಲೈ 20ರವರೆಗೆ ಪರಿಶೀಲನೆ ನಡೆಸಿದ್ದು, ಹತ್ತು ದಿನದೊಳಗೆ ವರದಿ ನೀಡಲಿದೆ. ಆ ಬಳಿಕ, ಅಪಘಾತಗಳ ತಡೆಗೆ ಹೆದ್ದಾರಿ ಪ್ರಾಧಿಕಾರ ಮುಂದಿನ ನಿರ್ಧಾರವನ್ನು ಕೈಗೊಳ್ಳಲಿದೆ.
ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಈ ಎಕ್ಸ್‌ಪ್ರೆಸ್‌ವೇಯನ್ನು ನಿರ್ಮಾಣ ಮಾಡಲಾಗಿದೆ. ಇದರಿಂದಾಗಿರುವ ಅನುಕೂಲ ಬೆಂಗಳೂರು ಹಾಗೂ ಮೈಸೂರು ನಗರಗಳ ನಡುವೆ ಪ್ರಯಾಣದ ಅವಧಿ ಕಡಿಮೆಯಾಗಿರುವುದು. ಇಷ್ಟೆಲ್ಲ ಉಪಯೋಗವಿದ್ದರೂ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಾರ್ಚ್ 12ರಂದು ಲೋಕಾರ್ಪಣೆಗೊಂಡ ಈ ರಸ್ತೆಯಲ್ಲಿ ಜರುಗಿದ ವಿವಿಧ ಅಪಘಾತಗಳಲ್ಲಿ 100 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಒಟ್ಟಾರೆ, ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಹಾದುಹೋಗುವ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ ತಡೆಗೆ ಅಲ್ಲಿನ ಪೊಲೀಸರು ದಿಟ್ಟ ಹೆಜ್ಜೆ ಇಟ್ಟಿದ್ದು, ಕೇವಲ 15 ದಿನದಲ್ಲಿ ಸುಮಾರು 2340 ಕೇಸ್ ವಿಧಿಸಿ, 16 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಈಗಲಾದರೂ ವಾಹನ ಸವಾರರು ಎಚ್ಛೆತ್ತುಕೊಂಡು, ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ವಾಹನ ಚಲಾಯಿಸಿದರೆ ಅಪಘಾತವನ್ನು ತಪ್ಪಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications