ಬೆಂಗಳೂರು: ಮಾನವೀಯತೆಯೇ ಇಲ್ವಾ.. ಸ್ಕಾರ್ಪಿಯೋ ಹತ್ತಿಸಿ ಕೊಲೆ, ಬೆಚ್ಚಿಬೀಳಿಸುತ್ತೆ ವಿಡಿಯೋ
ಬೆಂಗಳೂರಿನಲ್ಲಿ ಕಾರು ಹತ್ತಿಸಿ, ವ್ಯಕ್ತಿಯೋರ್ವನನ್ನು ಕೊಲೆ ಮಾಡಲಾಗಿದೆ. ಪುಲಿಕೇಶಿ ನಗರದಲ್ಲಿ ಅಕ್ಟೋಬರ್ 18ರಂದು ತಡರಾತ್ರಿ 12:30ರ ಸುಮಾರಿಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೇರೆ ವಾಹನ ಸವಾರರು ತಮ್ಮ ಮೊಬೈಲ್ ಫೋನ್‌ನಲ್ಲಿ ವಿಡಿಯೋವನ್ನು ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಖ್ಯ ಆರೋಪಿ ಅಮ್ರೀನ್ ಹಾಗೂ ಆತನ ಇಬ್ಬರು ಸಹಚರನ್ನು ಪೊಲೀಸರು ಬಂಧಿಸಿದ್ದು, ಅವರೆಲ್ಲರೂ ಈ ಕೃತ್ಯ ವೆಸಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದು ಹಣಕಾಸಿನ ವಿಚಾರವಾಗಿ ನಡೆದಿದ್ದು, ಸಿನಿಮೀಯ ಶೈಲಿಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ (Mahindra Scorpio)ನಲ್ಲಿ ಮೃತ ಅಸ್ಗರ್ ಎಂಬಾತನನ್ನು ಹಿಂಬಾಲಿಸಿ, ಕಾರು ಹತ್ತಿಸಿ ಹತ್ಯೆ ಮಾಡಲಾಗಿದೆ. ಆ ಬಳಿಕ, ಆರೋಪಿಗಳು ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ.

ಮೊದಲಿಗೆ ಪೊಲೀಸರು, ಅಪಘಾತವೆಂದು ಕೇಸ್ ದಾಖಲಿಸಿದ್ದರು. ಆದರೆ, ಅಸ್ಗರ್ ಸ್ನೇಹಿತ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ ನಂತರ, ಈ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಆತನ ಹೇಳಿಕೆ ಆಧರಿಸಿ, ಅಮ್ರೀನ್ ಹಾಗೂ ಇತರೆ ಇಬ್ಬರು ಸಹಚರ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದು, ಸದ್ಯ ತನಿಖೆಯನ್ನು ನಡೆಸುತ್ತಿದ್ದಾರೆ.
ಘಟನೆಯ ಹಿನ್ನೆಲೆ: ಅಸ್ಗರ್ ಸೆಕೆಂಡ್ ಹ್ಯಾಂಡ್ ಕಾರು ಡೀಲರ್ ಆಗಿದ್ದು, ಆರೋಪಿ ಅಮ್ರೀನ್, ಅಸ್ಗರ್ ನಿಂದ ಕಾರು ಖರೀದಿಸಿದ್ದನು. ಆದರೆ ಹಣಕಾಸು ವಿಚಾರವಾಗಿ ಇವರಿಬ್ಬರ ಮಧ್ಯೆ ಗಲಾಟೆ ನಡೆದಿತ್ತು. ಈ ಘಟನೆ ಸಂಬಂಧ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೇಸ್ ವಾಪಾಸ್ ಪಡೆಯುವಂತೆ ಆರೋಪಿ ಅಮ್ರೀನ್, ಅಸ್ಗರ್ ನನ್ನು ಕೇಳಿದ್ದನು. ಆದರೆ, ಅಸ್ಗರ್ ನಿರಾಕರಿಸಿದ್ದನು.

ಕೊಲೆಯಾದ ರಾತ್ರಿ, ಆರೋಪಿಗಳು ಸಂಧಾನ ನೆಪದಲ್ಲಿ ಅಸ್ಗರ್ ನನ್ನು ಭೇಟಿಯಾಗುವಂತೆ ತಿಳಿಸಿದ್ದರು. ಅಸ್ಗರ್, ಮೊದಲೇ ನಿರ್ಧರಿಸಿದ ಸ್ಥಳಕ್ಕೆ ಬಂದಾಗ, ಮೂವರು ಆರೋಪಿಗಳು, ಆತನ ಮೇಲೆ ಕಾರನ್ನು ಹತ್ತಿಸಿ, ದಾರುಣವಾಗಿ ಕೊಲೆ ಮಾಡಿದ್ದಾರೆ. ಪೋಲೀಸರ ವಿಚಾರಣೆ ವೇಳೆ, ಈ ಕೃತ್ಯವನ್ನು ನಾವು ಮಾಡಿಲ್ಲ ಎಂದು ಆರೋಪಿಗಳು ಹೇಳಿದ್ದರು. ಅಂತಿಮವಾಗಿ ಅಪರಾಧವನ್ನು ಒಪ್ಪಿಕೊಂಡಿದ್ದು, ತನಿಖೆ ಮುಂದುವರಿದಿದೆ.
ಕೆಲವೇ ದಿನಗಳ ಹಿಂದೆಯಷ್ಟೇ ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಅಡ್ಡಾ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ಮಧ್ಯೆ ಗಲಾಟೆ ನಡೆದಿತ್ತು. ಸ್ವಲ್ಪವು ಮಾನವೀಯತೆ ಇಲ್ಲದೆ ಚಾಲಕ ಬರೋಬ್ಬರಿ 8 ಬಾರಿ ಟ್ರ್ಯಾಕ್ಟರ್ ಹತ್ತಿಸಿ, ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ್ದನು. ಕುಟುಂಬಸ್ಥರು, ಆ ವ್ಯಕ್ತಿಯನ್ನು ಉಳಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು.
ಅಡ್ಡಾ ಗ್ರಾಮದ ಬಹದ್ದೂರ್ ಸಿಂಗ್ ಗುರ್ಜರ್ ಹಾಗೂ ಅತಾರ್ ಸಿಂಗ್ ಗುರ್ಜರ್ ಅವರ ಕುಟುಂಬದ ನಡುವೆ ಜಮೀನಿಗೆ ಸಂಬಂಧಿಸಿದಂತೆ ಆಗಾಗ ಜಗಳ ನಡೆಯುತ್ತಲೇ ಇತ್ತು. ಮೂರು ದಿನಗಳ ಹಿಂದೆಯೂ ಗಲಾಟೆ ನಡೆದಿದ್ದು, ಎರಡು ಕಡೆಯವರೂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಒಂದೆರೆಡು ದಿನದ ನಂತರ ವಿವಾದಿತ ಜಮೀನಿನಲ್ಲಿ ಟ್ರ್ಯಾಕ್ಟರ್‌ಗಳಲ್ಲಿ ಉಳುಮೆ ಮಾಡಲು ಬಹದ್ದೂರ್ ಸಿಂಗ್ ಗುರ್ಜರ್ ಕುಟುಂಬ ಬಂದಾಗ ಈ ಘಟನೆ ನಡೆದಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications