Bengaluru - Tumakuru Flyover: ಬೆಂಗಳೂರು - ತುಮಕೂರು ಮೇಲ್ಸೇತುವೆ ಮೇಲೆ ಕೆಲವೇ ದಿನಗಳಲ್ಲಿ ಬಸ್ ಸಂಚಾರ!
ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಬೆಂಗಳೂರು - ತುಮಕೂರು ಮೇಲ್ಸೇತುವೆ (Bengaluru - Tumakuru Flyover) ಲೋಡ್ ಟೆಸ್ಟ್ ಸಲುವಾಗಿ ಮುಂದಿನ ಮಂಗಳವಾರದಿಂದ ಬಂದ್ ಆಗಲಿದೆ. ಆ ಬಳಿಕ ಕೆಲವೇ ದಿನಗಳಲ್ಲಿ ಬಸ್ ಸೇರಿದಂತೆ ಎಲ್ಲ ವಾಹನಗಳ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ.
ಫ್ಲೈಓವರ್ ಪಿಲ್ಲರ್ಗಳಲ್ಲಿ ಕೇಬಲ್ ಅಳವಡಿಕೆ ಕಾರ್ಯ ಬಹುತೇಕ ಮುಗಿದಿದೆ ಎಂದು ವರದಿಯಾಗಿದೆ. ಲೋಡ್ ಟೆಸ್ಟ್ ನಡೆಸುವ ಹಿನ್ನೆಲೆ, ಜನವರಿ 16ರ ರಾತ್ರಿ 11 ರಿಂದ ಜನವರಿ 19ರ ಬೆಳಗ್ಗೆ 11 ಗಂಟೆವರೆಗೆ ಎಲ್ಲಾ ವಾಹನಗಳ ಸಂಚಾರವನ್ನು ನಿರ್ಬಂಧಿಸಿ, ಪೀಣ್ಯ ಮೇಲ್ಸೇತುವೆಯನ್ನು ಮುಚ್ಚಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ಧರಿಸಿದೆ. ಇದರಿಂದ ತುಮಕೂರು ರಸ್ತೆಯಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗಬಹುದು.

15 - ಮೀಟರ್ ಅಗಲ, 4.2 - ಕಿಮೀ ಉದ್ದವಿರುವ ಈ ಫ್ಲೈಓವರ್ ಪೀಣ್ಯದಲ್ಲಿ ಶುರುವಾಗಿ, ತುಮಕೂರು ರಸ್ತೆಯ ನಾಗಸಂದ್ರದಲ್ಲಿ ಕೊನೆಗೊಳ್ಳುತ್ತದೆ. ಇದು ಅರ್ಧ ಕರ್ನಾಟಕದ ಜಿಲ್ಲೆಗಳ ಸಂಪರ್ಕ ಕೊಂಡಿಯಾಗಿದೆ. 2021ರ ಡಿಸೆಂಬರ್ ತಿಂಗಳಲ್ಲಿ 8ನೇ ಮೈಲಿ ಸಮೀಪ ಮೇಲ್ಸೇತುವೆಯ ಕೆಲವೊಂದು ಪ್ಲಿಲರ್ ನಡುವೆ ಬಿರುಕು ಕಂಡುಬಂದಿತ್ತು. ಆ ಕಾರಣಕ್ಕೆ ಇಲ್ಲಿ ಎಲ್ಲ ವಿಧದ ವಾಹನ ಓಡಾಟವನ್ನು ನಿರ್ಬಂಧಿಸಲಾಗಿತ್ತು.
ಕೆಲವು ತಿಂಗಳ ನಂತರ, ದ್ವಿಚಕ್ರ ವಾಹನ, ಕಾರು ಒಳಗೊಂಡಂತೆ ಲಘು ವಾಹನಗಳ ಓಡಾಡಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಬಸ್ ಸೇರಿದಂತೆ ಭಾರೀ ವಾಹನಗಳಿಗೆ ನಿರ್ಬಂಧವನ್ನು ಹಾಗೆಯೇ ಮುಂದುವರಿಸಲಾಗಿತ್ತು. ಪರಿಣಾಮ ವಾರಾಂತ್ಯದ ದಿನ ಮತ್ತು ಹಬ್ಬಗಳ ಸೀಸನ್ ನಲ್ಲಿ ಮೇಲ್ಸೇತುವೆ ಕೆಳಗೆ ವಾಹನ ಸವಾರರು, ಗಂಟೆಗಟ್ಟಲೇ ಟ್ರಾಫಿಕ್ ನಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದರು.

ಬೆಂಗಳೂರು - ತುಮಕೂರು ಮೇಲ್ಸೇತುವೆ ಮೇಲೆ ಸಂಚಾರ ನಿರ್ಬಂಧಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ (ಬೆಂಗಳೂರು) ಕೆ.ಬಿ ಜಯಕುಮಾರ್ ಅವರು, 'ಲೋಡ್ ಟೆಸ್ಟ್ ನಡೆಸಲು ಫ್ಲೈಓವರ್ ಮೇಲೆ ಟ್ರಾಫಿಕ್ ಬ್ಲಾಕ್ ಅಗತ್ಯವಾಗಿದೆ. ಈ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಮುಂಬರುವ ವಾರಗಳಲ್ಲಿ ಮೇಲ್ಸೇತುವೆಯನ್ನು ಎಲ್ಲ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಬಹುದು' ಎಂದು ಹೇಳಿದ್ದಾರೆ.
'ಲೋಡ್ ಟೆಸ್ಟ್ ವೇಳೆ ತಲಾ 32 ಟನ್ ಭಾರ ಹೊತ್ತಿರುವ 8 ಟ್ರಕ್‌ಗಳನ್ನು 48 ಗಂಟೆಗಳಿಗೂ ಹೆಚ್ಚು ಕಾಲ ಫ್ಲೈಓವರ್ ಮೇಲೆ ಓಡಿಸಲಾಗುತ್ತದೆ. ನಾವು ಸಂಪೂರ್ಣವಾಗಿ ಮೇಲ್ಸೇತುವೆಯನ್ನು ಪರೀಕ್ಷೆಗೆ ಒಳಪಡಿಸುವುದಿಲ್ಲ. ಅದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ. ಲೋಡ್ ಟೆಸ್ಟ್ ಗಾಗಿ 105 - 106 ಹಾಗೂ 117 - 118 ಪಿಲ್ಲರ್ಗಳಲ್ಲಿ ಸಂಪರ್ಕಿಸುವ ಸ್ಥಳಗಳನ್ನು ಎನ್‌ಎಚ್‌ಎಐ ಗುರುತಿಸಿದೆ' ಎಂದು ಜಯಕುಮಾರ್ ತಿಳಿಸಿದ್ದಾರೆ.

ಬೆಂಗಳೂರು - ತುಮಕೂರು ಮೇಲ್ಸೇತುವೆ (Bengaluru - Tumakuru Flyover)ಯಲ್ಲಿ ಲೋಡ್ ಟೆಸ್ಟ್ ಯಶಸ್ವಿಯಾದ ಬಳಿಕ, ಬಸ್ ಒಳಗೊಂಡಂತೆ ಭಾರೀ ಗಾತ್ರದ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಹುದು. ಪ್ರಮುಖವಾಗಿ ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಹಾವೇರಿ, ಮಂಗಳೂರು, ಶಿವಮೊಗ್ಗ ಸೇರಿದಂತೆ ಅರ್ಧ ಕರ್ನಾಟಕದ 14 ಜಿಲ್ಲೆಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಕೇಬಲ್ ಅಳವಡಿಕೆ ಕಾಮಗಾರಿಗೆ ರೂ.30 ಕೋಟಿ ವೆಚ್ಚವಾಗಿದೆ ಎಂದು ಹೇಳಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications