ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನಿಗೆ ಸಿಕ್ತು ಜನಪ್ರಿಯ ಮಾರುತಿ ವಿಕ್ಟೋರಿಸ್ ಕಾರು.. 29 ಕಿ.ಮೀ ಮೈಲೇಜ್, ಬೆಲೆ ಎಷ್ಟು?
ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ 12ಕ್ಕೆ ಭಾನುವಾರ ಅದ್ದೂರಿ ತೆರೆ ಬಿದ್ದಿದೆ. ಗಿಲ್ಲಿ ನಟ (Gilli Nata) ಜಯಶಾಲಿಯಾಗಿದ್ದಾರೆ. ರಕ್ಷಿತಾ ಮೊದಲ ರನ್ನರ್ ಅಪ್ ಆಗಿದ್ದು, ಅಶ್ವಿನಿ ಗೌಡ ಎರಡನೇ ರನ್ನರ್ ಅಪ್ ಆಗಿದ್ದಾರೆ. ಗಿಲ್ಲಿಗೆ ಬಿಗ್ ಬಾಸ್ ಟ್ರೋಫಿ ಹಾಗೂ 50 ಲಕ್ಷ ರೂಪಾಯಿ ನಗದು ಲಭಿಸಿದೆ. ಇದರೊಂದಿಗೆ ಜನಪ್ರಿಯ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಕಾರು ಸಹ ಬಹುಮಾನವಾಗಿ ಸಿಕ್ಕಿದೆ.
ಈ ಬಾರಿಯ ಬಿಗ್ ಬಾಸ್ ಸೀಸನ್ 12ಕ್ಕೆ 'ಮಾರುತಿ ಸುಜುಕಿ' ಪ್ರಾಯೋಜಕತ್ವವನ್ನು ವಹಿಸಿದೆ. ಹೀಗಾಗಿ ಗಿಲ್ಲಿ ನಟನಿಗೆ 'ವಿಕ್ಟೋರಿಸ್' ಎಸ್‌ಯುವಿ ದೊರೆತಿದೆ. ಕಳೆದ ವರ್ಷದ (2025) ಸೆಪ್ಟೆಂಬರ್‌ನಲ್ಲಿ ಹೊಸ 'ವಿಕ್ಟೋರಿಸ್'ನ್ನು ಮಾರಾಟಕ್ಕೆ ತರಲಾಗಿತ್ತು. ಇದು ರೂ.10.50 ಲಕ್ಷದಿಂದ ರೂ.19.99 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

ನೂತನ 'ಮಾರುತಿ ವಿಕ್ಟೋರಿಸ್' ಎಲ್ಎಕ್ಸ್ಐ, ವಿಎಕ್ಸ್ಐ, ಜಡ್ಎಕ್ಸ್ಐ, ಜಡ್ಎಕ್ಸ್ಐ (ಒ), ಜಡ್ಎಕ್ಸ್ಐ ಪ್ಲಸ್ ಮತ್ತು ಜಡ್ಎಕ್ಸ್ಐ (ಒ) ಪ್ಲಸ್ ಎಂಬ ರೂಪಾಂತರಗಳೊಂದಿಗೂ ಲಭ್ಯವಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಶಾರ್ಪ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಶಾರ್ಕ್ ಫಿನ್ ಆಂಟೆನಾ, ಎಲ್ಇಡಿ ಟೈಲ್‌ಲ್ಯಾಂಪ್‌ಗಳು ಹಾಗೂ 18-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ.
ಇದು ಹೆಚ್ಚು ವಿಶಾಲ ಗಾತ್ರದಲ್ಲಿದೆ. 210 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,600 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಆರ್ಕ್ಟಿಕ್ ವೈಟ್, ಸ್ಪ್ಲೆಂಡಿಡ್ ಸಿಲ್ವರ್, ಎಟರ್ನಲ್ ಬ್ಲೂ, ಸಿಜ್ಲಿಂಗ್ ರೆಡ್, ಬ್ಲೂಯಿಶ್ ಬ್ಲ್ಯಾಕ್ ಹಾಗೂ ಮಿಸ್ಟಿಕ್ ಗ್ರೀನ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಲಭ್ಯವಿದೆ.

ಈ ಕಾರು ಶಕ್ತಿಶಾಲಿಯಾದ 3 ಪವರ್‌ಟ್ರೇನ್‌ನ್ನು ಹೊಂದಿದೆ. ಇದರ 1.5-ಲೀ. ಪೆಟ್ರೋಲ್ ಎಂಜಿನ್, 103 ಬಿಹೆಚ್‌ಪಿ ಅಶ್ವ ಶಕ್ತಿ ಮತ್ತು 137 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು 1.5-ಲೀ. ಸ್ಟ್ರಾಂಗ್ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಎಂಜಿನ್, 116 ಬಿಹೆಚ್‌ಪಿ ಅಶ್ವ ಶಕ್ತಿ ಹಾಗೂ 141 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ.
ಇನ್ನೊಂದು 1.5-ಲೀ. ಸಿಎನ್‌ಜಿ ಎಂಜಿನ್, 88 ಬಿಹೆಚ್‌ಪಿ ಅಶ್ವ ಶಕ್ತಿ ಮತ್ತು 121 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ ನೂತನ 'ವಿಕ್ಟೋರಿಸ್' 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಹಾಗೂ ಇ-ಸಿವಿಟಿ ಗೇರ್‌ಬಾಕ್ಸ್‌ನ್ನು ಹೊಂದಿದೆ. 21.06 ರಿಂದ 28.65 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 135 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಬರೀ 14.2 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.
ಹೊಸ 'ವಿಕ್ಟೋರಿಸ್' 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. ಪ್ರಯಾಣಿಕರು ಸುಲಭವಾಗಿ ಸಂಚಾರ ಮಾಡಬಹುದು. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 373 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸನ್‌ರೂಫ್, ಕಪ್ ಹೋಲ್ಡರ್‌ಗಳು, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಆಟೋ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.
ಈ ಕಾರು ಸುರಕ್ಷತೆಯಿಂದಲೂ ಮನೆ ಮಾತಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ ಗ್ಲೋಬಲ್ ಎನ್‌ಸಿಎಪಿ & ಭಾರತ್ ಎನ್‌ಸಿಎಪಿಯಿಂದ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಪಡೆದಿದೆ. 6-ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ 360-ಡಿಗ್ರಿ ಕ್ಯಾಮೆರಾನಂತಹ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿದೆ.
ಇದಕ್ಕೆ ಸಾಲು - ಸಾಲು ಎದುರಾಳಿಗಳಿವೆ. ಬಹುಮುಖ್ಯವಾಗಿ ಹ್ಯುಂಡೈ ಕ್ರೆಟಾ (Hyundai Creta), ಕಿಯಾ ಸೆಲ್ಟೋಸ್ (Kia Seltos), ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ (Toyota Urban Cruiser Hyryder), ಟಾಟಾ ಸಿಯೆರಾ (Tata Sierra) ಹಾಗೂ ಹೋಂಡಾ ಎಲಿವೇಟ್ (Honda Elevate) ಕಾರುಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications








