ದಾರಿ ಬಿಡ್ರಪ್ಪ ಎಂದು ಹಾರ್ನ್ ಮಾಡಿದ ಟ್ರಕ್ ಮುಂದೆ ನಾಗಿನ್ ಸ್ಟೆಪ್ಸ್ ಹಾಕಿದ ಬೈಕ್ ಸವಾರರು
ಭಾರತದಲ್ಲಿ ಮಳೆಗಾಲ ಬಂತೆಂದರೆ ಸಾಕು ಎಲ್ಲಿಲ್ಲದ ಖುಷಿ. ಮಳೆಯನ್ನು ಸವಿಯುತ್ತಾ ಬೋಂಡಾ, ಬಜ್ಜಿ ತಿನ್ನುವುದೇ ದೇಶೀಯರಿಗೆ ರೋಮಾಂಚನದ ಅನುಭವ. ಹಾಗೇಯೇ ಇನ್ನೂ ಕೆಲವರು ಮಾನ್ಸೂನ್‌ನಲ್ಲಿ ಲಾಂಗ್‌ಡ್ರೈವ್ ಹೋಗಲು ಇಷ್ಟಪಡುತ್ತಾರೆ. ಹೀಗೆ ಲಾಂಗ್ ಡ್ರೈವ್ ಹೋಗಿದ್ದ ತಂಡವೊಂದು ಮಳೆಯಲ್ಲಿ ಲಾರಿ ಹಾರ್ನ್‌ಗೆ ನಡು ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ವಿಡಿಯೋವೊಂದು ಸಖತ್ ವೈರಲ್ ಆಗಿದೆ.

ಸೆರೆಯಾಗಿರುವ ವಿಡಿಯೋದಲ್ಲಿ, ರಸ್ತೆಯಲ್ಲಿ ಬೈಕ್ಗಳನ್ನು ಅಡ್ಡಲಾಗಿ ನಿಲ್ಲಿಸಿ ಯುವಕರ ಗುಂಪು ಓಡುತ್ತಿರುವುದನ್ನು ಕಾಣಬಹುದು. ಮಳೆಯ ವಾತಾವರಣದಲ್ಲಿ ಅವರೆಲ್ಲರೂ ಫುಲ್ ಜೋಷ್‌ನಲ್ಲಿ ಬೈಕ್ ಇಳಿದು ಎಂಜಾಯ್ ಮಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ಟ್ರಕ್‌ವೊಂದು ದಾರಿ ಎಂದು ಹಾರ್ನ್ ಮಾಡಿದೆ.

ಹಾರ್ನ್ ಕೂಡ ಎಂದಿನಂತೆ ಮಾಡದೆ ಹಾರ್ನ್‌ನಲ್ಲಿ ಹಾಡೊಂದು ಮೂಡಿಬರುವಂತೆ ಮಾಡಲಾಗಿದೆ. ಕೂಡಲೇ ಇದಕ್ಕೆ ಮತ್ತಷ್ಟು ಚಂಚಲವಾದ ಯುವಕರು ಕುಣಿದು ಕುಪ್ಪಳಿಸಿದ್ದಾರೆ. ಟ್ರಕ್ ಡ್ರೈವರ್ ಮೈನ್ ತೇರಿ ದುಷ್ಮನ್, ದುಷ್ಮನ್ ತು ಮೇರಾ ಹಾಡಿನ ಟ್ಯೂನ್ ಅನ್ನು ನುಡಿಸುತ್ತಿದ್ದ. ಈ ಹಾಡು 1986ರ ನಾಗಿನಾ ಚಲನಚಿತ್ರದ್ದಾಗಿದೆ.

ಬೈಕ್ ಸವಾರರು ಟ್ರಕ್ ಮುಂದೆ ಸಂತೋಷದಿಂದ ಕಿರುಚುತ್ತಾ ನಾಗಿನ್ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೋ 2 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದ್ದು, ವೈರಲ್ ಆಗಿದೆ. ಈ ವಿಡಿಯೋ ಈಗಾಗಲೇ ಟ್ವಿಟರ್‌ನಲ್ಲಿ 7 ಲಕ್ಷ ವೀವ್ಸ್ ಪಡೆದಿದೆ. ವರದಿಗಳ ಪ್ರಕಾರ, ಈ ವೀಡಿಯೊ ಕರ್ನಾಟಕ-ಗೋವಾ ಗಡಿಯ ಸಮೀಪವಿರುವ ದೂಧಸಾಗರ್ ಜಲಪಾತದ ಬಳಿ ಸೆರೆಹಿಡಿಯಲಾಗಿದೆ.
🇺🇸: This Kanye concert was so dope
— Ashish Singh 🪁 (ashzingh) July 11, 2022
🇮🇳: pic.twitter.com/D28ZUXytqd
ನೆಟ್ಟಿಗರು ಈ ವೀಡಿಯೊವನ್ನು ಹೆಚ್ಚಾಗಿ ಷೇರ್ ಮಾಡುತ್ತಿದ್ದಾರೆ. ಕೇಂದ್ರ ರಸ್ತೆ ಸಚಿವ ನಿತಿನ್ ಗಡ್ಕರಿ ಅವರನ್ನು ಟ್ಯಾಗ್ ಮಾಡಿದ್ದಾರೆ. ಸಚಿವರನ್ನು ಟ್ಯಾಗ್ ಮಾಡಿದ ನಂತರ, ಬಳಕೆದಾರರು ಇದು ಮ್ಯೂಸಿಕಲ್ ಹಾರ್ನ್‌ನ ಅಡ್ಡಪರಿಣಾಮಗಳು ಎಂದು ಬರೆದಿದ್ದಾರೆ.

ಡಿಜೆ ಸ್ನೇಕ್ ಈ ವೀಡಿಯೊವನ್ನು ನೋಡುತ್ತಿರಬೇಕು ಎಂದು ಮತ್ತೊಬ್ಬ ಕಮೆಂಟ್ ಮಾಡಿದ್ದಾನೆ. ಈ ಆಸಕ್ತಿದಾಯಕ ಪ್ರತಿಕ್ರಿಯೆಗಳ ಹೊರತಾಗಿಯೂ, ವೀಡಿಯೊದಲ್ಲಿ ಹಂಚಿಕೊಳ್ಳಲಾದ ಸ್ಥಳವನ್ನು ಹಲವರು ಟೀಕಿಸಿದ್ದಾರೆ. ಈ ವೀಡಿಯೊದ ಸ್ಥಳವು ದೂಧಸಾಗರ್ ಜಲಪಾತದ ಸ್ಥಳವಲ್ಲ. ಈ ಸ್ಥಳವು ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಅಕೋಲೆ ತಹಸಿಲ್ ಎಂದು ಹೇಳಿದ್ದಾರೆ.

ಅಪಾಯಕಾರಿ ಆಟ ಬೇಡ
ಈ ವಿಡಿಯೋ ಯುವಕರ ಉತ್ಸಾಹವನ್ನು ತೋರುತ್ತಿದೆ, ಆದರೆ ಇವು ಅಪಾಯಕಾರಿಯು ಹೌದು. ಸಾಮಾನ್ಯವಾಗಿ ಮಳೆಗಾಲದಲ್ಲಿ ಗಾಡ್ ಸೆಕ್ಷನ್‌ನಂತಹ ದಾರಿಗಳಲ್ಲಿ ಮಂಜು ಹೆಚ್ಚಾಗಿ ಆವರಿಸುತ್ತದೆ. ಈ ವೇಳೆ ವಾಹನಗಳು ನಡು ರಸ್ತೆಯಲ್ಲಿ ನಿಲ್ಲುವುದರಿಂದ ಹಿಂಬರುವ ವಾಹನಗಳಿಗೆ ಕಾಣದೆ ಅಪಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚು.

ಹಾಗಾಗಿ ವಾಹನಗಳನ್ನು ನಡುರಸ್ತೆಗಳಲ್ಲಿ ನಿಲ್ಲಿಸುವುದು ಅಪಾಯಕಾರಿ. ಮಳೆ ಇಲ್ಲದಿದ್ದ ಸಂದರ್ಭಗಳಲ್ಲೂ ಹೀಗೆ ರಸ್ತೆಗಳಲ್ಲಿ ಬೈಕ್‌ಗಳನ್ನು ನಿಲ್ಲಿಸುವುದು ಸರಿಯಲ್ಲ. ಕೆಲವೊಮ್ಮೆ ತುರ್ತು ವಾಹನಗಳು ಸಂಚರಿಸಬೇಕಾದರೆ ಇಂತಹ ಘಟನೆಗಳು ನಡೆದರೆ ಭಾರೀ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಗುಂಡಿಗೆ ಬಿದ್ದ ದಂಪತಿ
ಜೂನ್ 18-19 ರಂದು ಉತ್ತರ ಪ್ರದೇಶ ರಾಜ್ಯದ ಅಲಿಗಢದಲ್ಲಿ ಜೋರು ಮಳೆಯಾಗಿದೆ, ಎಡೆಬಿಡದೆ ಸುರಿದ ಮಳೆರಾಯನ ಆರ್ಭಟಕ್ಕೆ ಅಲಿಗಡ ತತ್ತರಿಸಿತ್ತು. ರಸ್ತೆಗಳು ಸಂಪೂರ್ಣ ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಇಂತಹ ಸಂದರ್ಭದಲ್ಲಿ ಅನಾರೋಗ್ಯ ಕಾರಣ ಆಸ್ಪತ್ರೆಗೆ ತೆರಳಿದ್ದ ಪೊಲೀಸ್ ಪೇದೆ ಹಾಗೂ ಅವರ ಪತ್ನಿ ರಸ್ತೆ ಬದಿಯ ತೆರೆದ ಹಳ್ಳದಲ್ಲಿ ವಾಹನ ಸಮೇತ ಬಿದ್ದಿದ್ದಾರೆ.

ಅನಿರೀಕ್ಷಿತವಾಗಿ ನಡೆದ ಈ ಘಟನೆಯಲ್ಲಿ ಪತಿ-ಪತ್ನಿ ಇಬ್ಬರೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸ್ಥಳದಲ್ಲಿದ್ದ ನಾಗರಿಕರು ಕೂಡಲೇ ಧಾವಿಸಿ ಇಬ್ಬರನ್ನು ರಕ್ಷಿಸಿದ್ದು, ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ನಡೆದ ದಿನ ಆರೋಗ್ಯ ಹದಗೆಟ್ಟ ಕಾರಣ ಇಬ್ಬರೂ ಆಸ್ಪತ್ರೆಗೆ ಆಗಮಿಸಿದ್ದರು. ತೆರೆದಿದ್ದ ಕಾಲುವೆಯಲ್ಲಿ ವಾಹನ ಸಮೇತ ಬಿದ್ದು ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರಿ ಮಳೆಯಲ್ಲಿ ಸುರಕ್ಷಿತವಾಗಿರುವುದು ಹೇಗೆ
ಭಾರೀ ಮಳೆಯಾದಾಗ ಜನರು ಮನೆಯಿಂದ ಹೊರಗೆ ಹೋಗದಿರುವುದು ಉತ್ತಮ. ಮುಖ್ಯವಾಗಿ ದ್ವಿಚಕ್ರ ವಾಹನಗಳಲ್ಲಿ ಸವಾರಿ ಮಾಡುವುದನ್ನು ಬಿಟ್ಟುಬಿಡಿ. ಏಕೆಂದರೆ ಮಳೆಗೆ ರಸ್ತೆಗಳಲ್ಲಿನ ಗುಂಡಿಗಳು ಕಾಣುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಅಲಿಗಡ ಪೊಲೀಸ್ ಪೇದೆಯದ್ದಾಗಿದೆ. ಹಾಗಾಗಿ ಜೋರು ಮಳೆಯಾದರೆ ಮನೆಯಲ್ಲೇ ಉಳಿದುಕೊಳ್ಳಿ.

ಒಂದು ವೇಳೆ ನೀವು ಹೊರಗೆ ಹೋದ ಸಂಧರ್ಭಗಳಲ್ಲಿ ಅನಿರೀಕ್ಷಿತವಾಗಿ ಜೋರು ಮಳೆಯಾಗಿ ರಸ್ತೆಗಳು ಜಲಾವೃತಗೊಂಡರೆ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ. ಮಳೆ ನಿಲ್ಲುವ ತನಕ ಕಾದು ಆ ಬಳಿಕ ತೆರಳುವುದು ಉತ್ತಮ. ಅವಸರದಲ್ಲಿ ಮಳೆಯಲ್ಲೇ ಪ್ರಯಾಣಿಸುವುದು ಜೀವಕ್ಕೆ ಕುತ್ತು ತರಬಹುದು.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಈ ಹಿಂದೆಯು ಇಂತಹ ಹಲವು ಘಟನೆಗಳು ನಡೆದಿವೆ. ಸಾಮಾನ್ಯವಾಗಿ ಜನರು ಇಂತಹ ಸಂದರ್ಭಗಳಲ್ಲಿ ಸಣ್ಣ ಮಳೆಗೆ ಅಪಾಯವೇನು ಇಲ್ಲವೆಂದುಕೊಂಡು ಮುನ್ನುಗ್ಗುತ್ತಾರೆ. ಆದರೆ ಇಲ್ಲಿ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯವೇನೆಂದರೆ ಮಳೆನೀರಿನ ರಭಸವು ನದಿ ನೀರಿನಷ್ಟೇ ಅಪಾಯವನ್ನು ತಂದೊಡ್ಡಬಹುದು. ಹಾಗಾಗಿ ಮಳೆ ಹೆಚ್ಚಾಗಿ ಬೀಳುವ ಸಂದರ್ಭಗಳಲ್ಲಿ ಯಾವುದೇ ಲಾಂಗ್‌ಡ್ರೈವ್ ಟ್ರಿಪ್‌ಗಳನ್ನು ಕೈಬಿಡುವುದು ಒಳಿತು.


Click it and Unblock the Notifications