ಪ್ರತಿ ಲೀಟರಿಗೆ 38 ಕಿ.ಮೀ ಮೈಲೇಜ್ ನೀಡುತ್ತದೆ ಕೋಳಿ ತ್ಯಾಜ್ಯದಿಂದ ತಯಾರಾಗುವ ಈ ಬಯೋ ಡೀಸೆಲ್
ಸುಮಾರು 7 ವರ್ಷಗಳ ಕಾಯುವಿಕೆಯ ನಂತರ ಕೇರಳದ ಪಶುವೈದ್ಯ ಜಾನ್ ಅಬ್ರಹಾಂ ಕೋಳಿ ತ್ಯಾಜ್ಯದಿಂದ ಜೈವಿಕ ಡೀಸೆಲ್ ತಯಾರಿಸಲು ಪೇಟೆಂಟ್ ಪಡೆದಿದ್ದಾರೆ. ಈ ಬಯೋ ಡೀಸೆಲ್ ಪ್ರತಿ ಲೀಟರ್‌ಗೆ 38 ಕಿ.ಮೀಗಳಿಗಿಂತ ಹೆಚ್ಚು ಮೈಲೇಜ್ ನೀಡುತ್ತದೆ.

ಬಯೋ ಡೀಸೆಲ್ ಸಾಮಾನ್ಯ ಡೀಸೆಲ್'ಗಿಂತ 40% ನಷ್ಟು ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತದೆ. ಜೊತೆಗೆ ಈ ಬಯೋ ಡೀಸೆಲ್ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ. ಸುಮಾರು 7 ವರ್ಷಗಳ ಪರಿಶ್ರಮದ ಬಳಿಕ ಕೋಳಿ ತ್ಯಾಜ್ಯದಿಂದ ಬಯೋ ಡೀಸೆಲ್ ತಯಾರಿಸಲು ಭಾರತೀಯ ಪೇಟೆಂಟ್ ಕಚೇರಿ ಪೇಟೆಂಟ್ ನೀಡಿದೆ.

ಈ ತಿಂಗಳ ಜುಲೈ 7 ರಂದು ಪೇಟೆಂಟ್ ನೀಡಲಾಗಿದೆ. ಈ ಬಯೋ ಡೀಸೆಲ್ ಅನ್ನು ಕೇರಳ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ವಯನಾಡ್ ಪಶು ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಜಾನ್ ಅಬ್ರಹಾಂ ಕಂಡುಹಿಡಿದಿದ್ದಾರೆ.

ಗಮನಿಸಬೇಕಾದ ಸಂಗತಿಯೆಂದರೆ ಈ ಆವಿಷ್ಕಾರವು ತಮಿಳುನಾಡು ಪಶುವೈದ್ಯಕೀಯ ವಿಶ್ವವಿದ್ಯಾಲಯದ ನಾಮಕ್ಕಲ್‌ನ ಪಶುವೈದ್ಯಕೀಯ ಕಾಲೇಜಿನ ಜೊತೆ ಸಂಪರ್ಕ ಹೊಂದಿದೆ. 2009-12 ರಿಂದ ಜಾನ್ ಅಬ್ರಹಾಂ ಅವರು ನಾಮಕ್ಕಲ್‌ನಲ್ಲಿ ಸಂಶೋಧನೆ ನಡೆಸುತ್ತಿದ್ದಾಗ ಈ ಬಯೋ ಡೀಸೆಲ್ ಅನ್ನು ಅಭಿವೃದ್ಧಿಪಡಿಸುತ್ತಿದ್ದರು ಎಂಬುದು ಗಮನಾರ್ಹ.

ಈ ಸಂಶೋಧನಾ ಕೋರ್ಸ್ ನಂತರ ಅವರು ಕೇರಳದ ವಯನಾಡದ ಪಶುವೈದ್ಯಕೀಯ ಕಾಲೇಜಿಗೆ ಸೇರಿದರು. ಇದರ ಆಧಾರದ ಮೇಲೆ ಭಾರತ್ ಪೆಟ್ರೋಲಿಯಂನ ಕೊಚ್ಚಿ ವಿಭಾಗವು ಈ ಬಯೋ ಡೀಸೆಲ್'ಗೆ ಗುಣಮಟ್ಟದ ಪ್ರಮಾಣಪತ್ರವನ್ನು ನೀಡಿತು.

ಆಗ ಕಾಲೇಜು ವಾಹನವೊಂದನ್ನು ಈ ಬಯೋ ಡೀಸೆಲ್ ಮೂಲಕ ಚಾಲನೆ ಮಾಡಲಾಗಿತ್ತು. ಜಾನ್ ಅಬ್ರಹಾಂ ಹಾಗೂ ಅವರ ಮೂವರು ವಿದ್ಯಾರ್ಥಿಗಳು ಈಗ ಹಂದಿ ತ್ಯಾಜ್ಯದಿಂದ ಬಯೋ ಡೀಸೆಲ್ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಬಯೋ ಡೀಸೆಲ್ ಎಂಜಿನ್‌ನ ದಕ್ಷತೆಯನ್ನು ಹೆಚ್ಚಿಸುತ್ತದೆ ಎಂಬುದು ಗಮನಾರ್ಹ. ಬಯೋ ಡೀಸೆಲ್ ಸಸ್ಯಾಹಾರಿ ಎಣ್ಣೆಯ ವಾಸನೆ ಹೊಂದಿದ್ದು, ಈಗ ಮಾರಾಟವಾಗುತ್ತಿರುವ ಡೀಸೆಲ್‌ನಂತೆ ಕಾಣುತ್ತದೆ ಎಂದು ಜಾನ್ ಅಬ್ರಹಾಂ ಹೇಳಿದ್ದಾರೆ. ಈ ಬೆಳವಣಿಗೆ ವಾಹನ ಸವಾರರಲ್ಲಿ ಸಂತಸವನ್ನುಂಟು ಮಾಡಿರುವುದು ಸುಳ್ಳಲ್ಲ.

ಭಾರತದಲ್ಲಿ ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬಹುತೇಕ ರಾಜ್ಯಗಳಲ್ಲಿ ಈಗ ಪ್ರತಿ ಲೀಟರ್ ಡೀಸೆಲ್ ಬೆಲೆ ರೂ.100 ರ ಅಂಚಿನಲ್ಲಿದೆ. ಈ ಸಂದರ್ಭದಲ್ಲಿ ಡೀಸೆಲ್ ಕಡಿಮೆ ಬೆಲೆಗೆ ಲಭ್ಯವಾದರೆ ವಾಹನ ಸವಾರರಿಗೆ ಸಾಕಷ್ಟು ಅನುಕೂಲವಾಗಲಿದೆ.

ಭಾರತದ ಕಚ್ಚಾ ತೈಲ ಆಮದು ಪ್ರಮಾಣವನ್ನು ಕಡಿಮೆ ಮಾಡಲು ಬಯೋ ಡೀಸೆಲ್ ನೆರವಾಗಲಿದೆ. ಭಾರತದ ಕಚ್ಚಾ ತೈಲ ಆಮದು ಪ್ರಮಾಣವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಹಾಗೂ ಸಿಎನ್‌ಜಿ ವಾಹನಗಳ ಬಳಕೆಗೂ ಉತ್ತೇಜನ ನೀಡಲಾಗುತ್ತಿದೆ.


Click it and Unblock the Notifications