BMTC: ಬಿಎಂಟಿಸಿಗೆ ಲಾಭವಾದ 'ಬೆಂಗಳೂರು ದರ್ಶಿನಿ' ಪ್ಯಾಕೇಜ್.. ನೀವು ಉದ್ಯಾನ ನಗರಿಯನ್ನು ಸುತ್ತಬಹುದು!
ಬೆಂಗಳೂರಿನ ಜೀವನಾಡಿಯಾಗಿ ಬಿಎಂಟಿಸಿ (BMTC) ಖ್ಯಾತಿಗಳಿಸಿದೆ. ಪ್ರತಿನಿತ್ಯ ಲಕ್ಷಂತಾರ ಪ್ರಯಾಣಿಕರನ್ನು ನಿರ್ದಿಷ್ಟ ಗಮ್ಯ ಸ್ಥಾನ ತಲುಪಿಸುವ ಮೂಲಕ ಮನೆಮಾತಾಗಿದೆ. ಸಂಸ್ಥೆಯ ಸಾಮಾನ್ಯ ಹಾಗೂ ಹವಾನಿಯಂತ್ರಿತ (ಎಸಿ) ಬಸ್‌ಗಳು ನಗರದ ಪ್ರತಿಯೊಂದು ಭಾಗದಲ್ಲಿ ಕಾರ್ಯಾಚರಣೆಯನ್ನು ನಡೆಸಲಿದ್ದು, ಶ್ರೀಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಬೆಂಗಳೂರು ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಾರೆ. ಸದ್ಯ ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ನಿರ್ವಹಿಸುವ 'ಬೆಂಗಳೂರು ದರ್ಶಿನಿ' ಬಸ್ ಸೇವೆಗೆ ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಂಸ್ಥೆಗೆ ಭಾರೀ ಆದಾಯವೇ ಬಂದಿದೆ.
ಉದ್ಯಾನ ನಗರಿಯ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕವನ್ನು ಕಲ್ಪಿಸುವ ಸಲುವಾಗಿ 2015ರಲ್ಲಿ ಆರಂಭವಾದ ಬೆಂಗಳೂರು ದರ್ಶಿನಿ (Bengaluru Darshini) ಬಸ್ ಸೇವೆಗೆ ಉತ್ತಮ ಜನ ಬೆಂಬಲ ಸಿಕ್ಕಿದ್ದು, 2021 ಹಾಗೂ 2024ರ ನಡುವೆ 17,800 ಮಂದಿ ಪ್ರಯಾಣಿಸಿದ್ದಾರೆ. ಇದರಿಂದ ಬಿಎಂಟಿಸಿಗೆ ರೂ.72.59 ಲಕ್ಷ ಆದಾಯ ಬಂದಿದೆ.

ಈ ಪ್ರವಾಸಿ ಪ್ಯಾಕೇಜ್ ಆಯ್ದುಕೊಳ್ಳುವವರಿಗೆ ವೋಲ್ವೋ ಬಸ್‌ನಲ್ಲಿ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್)ದಿಂದ ವಿಧಾನಸೌಧ, ಸರ್ ಎಂ.ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯ, ಟಿಪ್ಪು ಅರಮನೆ, ಬುಲ್ ಟೆಂಪಲ್ (ದೊಡ್ಡ ಗಣಪತಿ ದೇಗುಲ) ಹಾಗೂ ಲಾಲ್‌ಬಾಗ್‌ಗೆ ಕರೆದೊಯ್ಯಲಾಗುತ್ತದೆ. ವಯಸ್ಕರಿಗೆ ರೂ.400 ಮತ್ತು ಮಕ್ಕಳಿಗೆ ರೂ.300 ಟಿಕೆಟ್ ದರವಿದ್ದು, ರೂ.15 ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ.
ಬೆಂಗಳೂರು ದರ್ಶಿನಿ ಪ್ರವಾಸಿ ಪ್ಯಾಕೇಜ್‌ಗೆ ಆರಂಭದಲ್ಲಿ ಪ್ರವಾಸಿಗರಿಂದ ನಿರಾಸಕ್ತಿ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಹಾಗೂ ಜಾಹೀರಾತಿನ ಕಾರಣದಿಂದ ಈ ಸೇವೆಯು ಹೆಚ್ಚಿನ ಜನರನ್ನು ಸೆಳೆಯಿತು. 2021ರಲ್ಲಿ 685 ಜನರು ಬೆಂಗಳೂರು ದರ್ಶಿನಿ ಪ್ರವಾಸಿ ಪ್ಯಾಕೇಜ್‌ನ ಸದುಪಯೋಗಪಡಿಸಿಕೊಂಡಿದ್ದರು. ಅದು 2022ರಲ್ಲಿ ಹತ್ತುಪಟ್ಟು ಹೆಚ್ಚಳಗೊಂಡಿತ್ತು. ಬರೋಬ್ಬರಿ 6,400 ಮಂದಿ ನಗರವನ್ನು ವೀಕ್ಷಿಸಿದ್ದರು. ಸಾರಿಗೆ ಸಂಸ್ಥೆಗೆ ಆ ವರ್ಷ ರೂ.26.27 ಆದಾಯ ಬಂದಿತ್ತು.

2023ರಲ್ಲಿ 8,100 ಪ್ರವಾಸಿಗರು ಬೆಂಗಳೂರು ದರ್ಶಿನಿ ಬಸ್ ಸೇವೆಯನ್ನು ಬಳಕೆ ಮಾಡಿದ್ದು, ಬಿಎಂಟಿಸಿಗೆ ರೂ. 32.97 ಲಕ್ಷ ಲಾಭವಾಗಿತ್ತು. ಅಲ್ಲದೆ, ಈ ಬೇಸಿಗೆಯಲ್ಲಿ ವಾಯುವಜ್ರ ಬಸ್‌ಗಳು ಸಾರಿಗೆ ಸಂಸ್ಥೆಗೆ ಹೆಚ್ಚಿನ ಆದಾಯವನ್ನು ತಂದುಕೊಟ್ಟಿವೆ. ಹವಾನಿಯಂತ್ರಿತ (ಎಸಿ) ವೋಲ್ವೋ ಬಸ್‌ಗಳಲ್ಲಿ ಶೇಕಡ 10% ಹೆಚ್ಚು ಪ್ರಯಾಣಿಕರು ಓಡಾಟ ನಡೆಸಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ ಬಿಎಂಟಿಸಿಯು ಪ್ರತಿದಿನ ಸರಾಸರಿ 457 ವೋಲ್ವೋ (ವಜ್ರ ಮತ್ತು ವಾಯು ವಜ್ರ) ಬಸ್‌ಗಳ ಸೇವೆಯನ್ನು ಒದಗಿಸಿತ್ತು. ದೈನಂದಿನ ಪ್ರಯಾಣಿಕರ ಸಂಖ್ಯೆ 1.15 ಲಕ್ಷದಿಂದ 1.27 ಲಕ್ಷಕ್ಕೆ ಏರಿಕೆಯಾಗಿದ್ದು, ದಿನವೊಂದರ ಆದಾಯವು ರೂ.62.54 ಲಕ್ಷದಿಂದ ರೂ.66.05 ಲಕ್ಷಕ್ಕೆ ಅಧಿಕಗೊಂಡಿದೆ. ಈ ಮೇನಲ್ಲಿಯೂ ಪ್ರಯಾಣಿಕರ ದಟ್ಟಣೆ ಮುಂದುವರಿದಿದೆ.

ಬಿಎಂಟಿಸಿಯ ಒಟ್ಟು 575 ವೋಲ್ವೋ ಬಸ್‌ಗಳಲ್ಲಿ 484 ಬಸ್‌ಗಳು ಕಾರ್ಯಾಚರಣೆಯನ್ನು ನಡೆಸುತ್ತಿವೆ. ಬೆಂಗಳೂರಿನ ವಿವಿಧ ಭಾಗಗಳಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕವನ್ನು ಕಲ್ಪಿಸುವ ವಾಯು ವಜ್ರ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆಯು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಈ ಬಸ್‌ಗಳಲ್ಲಿ ಪ್ರತಿದಿನ ಸರಾಸರಿ 17,921 ಜನರು ಓಡಾಟವನ್ನು ನಡೆಸುತ್ತಿದ್ದಾರೆ. ಹೋದ ವರ್ಷ ಏಪ್ರಿಲ್‌ನಲ್ಲಿ 16,260 ಮಂದಿ ಸಂಚರಿಸಿದ್ದರು. ದಿನನಿತ್ಯದ ಲಾಭಂಶವು ರೂ.33.31 ಲಕ್ಷದಿಂದ ರೂ.33.62 ಲಕ್ಷಕ್ಕೆ ಏರಿಕೆಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications