ಟೆಸ್ಲಾ ಕಾರಿಗೆ ಪ್ರೀತಿಯ BMTC ನಂಬರ್: ಅಮೆರಿಕ ಕನ್ನಡಿಗ ಮನಮೆಚ್ಚುವ ಕಥೆ
ಬೆಂಗಳೂರು ಮಹಾನಗರಿ ಜನರ ಜೀವನನಾಡಿ ಬಿಎಂಟಿಸಿ. ಪ್ರತಿಯೊಬ್ಬರು ಒಂದಲ್ಲ ಒಂದು ಬಾರಿ ಈ ಬಸ್ಸುಗಳಲ್ಲಿ ಪ್ರಯಾಣಿಸಿರುತ್ತಾರೆ. ಅದರಲ್ಲೂ ಶಾಲಾ-ಕಾಲೇಜಿಗೆ ಹೋಗುವವರೂ ತಮ್ಮ ಜೀವನದ ಮರೆಯಾಗಲಾಗದ ಕ್ಷಣಗಳನ್ನು ಇದರಲ್ಲಿಯೇ ಕಳೆದಿರುತ್ತಾರೆ. ನಾವು ಹೇಳಲು ಹೊರಟಿರುವುದು ಅಂತಹದ್ದೇ ಸುಮಧುರ ಭಾಂದವ್ಯದ ಕತೆಯನ್ನೇ.
ನಮ್ಮ ಸ್ಟೋರಿಯ ಹೀರೋ.. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಕನ್ನಡಿಗ ಚೆಂಗಪ್ಪ. ಅಲ್ಲಿಗೆ ತೆರಳಿ ದಶಕಗಳೇ ಕಳೆದ್ರು ಕರ್ನಾಟಕದ ನೆನಪುಗಳನ್ನು ಮರೆತಿಲ್ಲ. ಬೆಂಗಳೂರಿನಲ್ಲಿ ತಾನು ಶಾಲೆಗೆ ಹೋಗುವಾಗ ಪ್ರತಿದಿನ ಬಿಎಂಟಿಸಿಯಲ್ಲಿ ಪ್ರಯಾಣ ಮಾಡುತ್ತಿದ್ದದ್ದು. ಜೊತೆಗೆ ಆ ಬಸ್ಸಿನ ಚಾಲಕನ ಪ್ರೀತಿ, ವಿಶ್ವಾಸವು ಇಂದಿಗೂ ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಸಿದೆ. ಇದಕ್ಕಾಗಿ ಚೆಂಗಪ್ಪ ತಮ್ಮ ನೂತನ ಟೆಸ್ಲಾ ಕಾರಿಗೂ ಬಿಎಂಟಿಸಿ ನೋಂದಣಿ ಸಂಖ್ಯೆಯನ್ನೇ ಪಡೆದಿದ್ದಾರೆ.

ಈ ಬಗ್ಗೆ ಅನಿವಾಸಿ ಕನ್ನಡಿಗರಾಗಿರುವ ಶ್ರೀವತ್ಸ ಜೋಶಿ ಎಂಬುವವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದು, 1990ರ ದಶಕದಲ್ಲಿ ಬೆಂಗಳೂರಿನ ವಿದ್ಯಾರಣ್ಯಪುರದಿಂದ ಯಶವಂತಪುರಕ್ಕೆ ಸಂಚರಿಸುತ್ತಿದ್ದ KA-01 F 232' ನೋಂದಣಿ ಸಂಖ್ಯೆಯ ಬಸ್ ನಲ್ಲಿ ಚೆಂಗಪ್ಪ ಶಾಲೆಗೆ ತೆರಳುತ್ತಿದ್ದರು. ಅವರಿಗೆ ಆ ಹಳೆಯ ಬಿಎಂಟಿಸಿ ಹಾಗೂ ಅದರ ಚಾಲಕ ಧನಪಾಲ್ ಎಂದರೆ ತುಂಬಾ ಅಚ್ಚುಮೆಚ್ಚು. ಅದಕ್ಕಾಗಿ ತಮ್ಮ ಹೊಸ ಟೆಸ್ಲಾ ಕಾರಿಗೆ 'KA1F232' ನಂಬರ್ ಪ್ಲೇಟ್ ಹಾಕಿಸಿದ್ದಾರೆ' ಎಂದು ಹೇಳಿದ್ದಾರೆ.
ಸ್ವತಃ ಚೆಂಗಪ್ಪ ಟೆಸ್ಲಾ ಕಾರಿನೊಂದಿಗೆ ನಿಂತು ವಿಡಿಯೋವೊಂದನ್ನು ಮಾಡಿದ್ದು, ಬಿಎಂಟಿಸಿ ಬಸ್ಸಿನ ಚಾಲಕ ಧನಪಾಲ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನಾಡಿದ್ದಾರೆ. 'ಧನಪಾಲ್ ಅವರ ನಿವೃತ್ತಿಗೆ ಅಭಿನಂದನೆಗಳು. ನಿಮ್ಮನ್ನು ಭೇಟಿಯಾಗಿದ್ದು 401 B ರೋಟ್ ಬಸ್ಸಿನಲ್ಲಿ. ಈಗ ಸರಿ ಸುಮಾರು 31 ವರ್ಷಗಳಾಯಿತು. ಎಷ್ಟೇ ಒತ್ತಡವಿದರೂ ಪ್ರಾಮಾಣಿಕವಾಗಿ ನಿಮ್ಮ ಕೆಲಸವನ್ನು ಮಾಡುತ್ತಿದ್ರಿ. ಇದೀಗ, ನನ್ನ ಹೊಸ ಕಾರಿಗೆ ನೀವು ಓಡಿಸುತ್ತಿದ್ದ ಬಿಎಂಟಿಸಿ ಬಸ್ ನ ನೋಂದಣಿ ಸಂಖ್ಯೆಯನ್ನೇ ಪಡೆದಿದ್ದೇನೆ' ಎಂದು ಹೇಳಿದ್ದಾರೆ.
ಹಳೆಯ ಕೆಂಪು ಬಣ್ಣದ ಬಿಎಂಟಿಸಿ ಬಸ್ ಫೋಟೋ ಹಾಗೂ ಟೆಸ್ಲಾ ಕಾರಿನೊಂದಿಗೆ ಚೆಂಗಪ್ಪ ಮಾತನಾಡಿರುವ ವಿಡಿಯೋವನ್ನು ಆ ಬಸ್ಸಿನ ಚಾಲಕರಾಗಿದ್ದ ಧನಪಾಲ್ ಹಂಚಿಕೊಂಡಿದ್ದು, ಮನಬಿಚ್ಚಿ ಮಾತನಾಡಿದ್ದಾರೆ. ನಾನು 1992ರಲ್ಲಿ ಬಿಎಂಟಿಸಿ ಘಟಕ 11ರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾಗ ಹಲವು ಶಾಲಾ ಮಕ್ಕಳಿಗೆ ನನ್ನ ಬಸ್ ಅಂದ್ರೆ ತುಂಬಾ ಪ್ರೀತಿ. ಆ ಮಕ್ಕಳಲ್ಲಿ ಚೆಂಗಪ್ಪ, ಆದಿತ್ಯ ಎಂಬ ಹುಡುಗರು ಬಸ್ಸಿನ ಮುಂಭಾಗದ ಬಾನೆಟ್ ಮೇಲೆ ಕುಳಿತು ಎಷ್ಟೋ ವರ್ಷಗಳು ಶಾಲೆಗೆ ತೆರಳಿದ್ದಾರೆ.
ಅದರಲ್ಲಿ ಆದಿತ್ಯ ಸದ್ಯ, ಜರ್ಮನಿಯಲ್ಲಿ ನೆಲೆಸಿದ್ದಾನೆ. ಚೆಂಗಪ್ಪ ಅಮೆರಿಕದ ಕ್ಯಾಲಿಫೋರ್ನಿಯದಲ್ಲಿದ್ದು, ಇತ್ತೀಚಿಗೆ ಆತ, ಹೊಚ್ಚ ಹೊಸ ಕಾರನ್ನು ಖರೀದಿಸಿದ್ದು, ಅದಕ್ಕೆ ನಾನು ಈ ಹಿಂದೆ, ಚಲಾಯಿಸುತ್ತಿದ್ದ ಬಿಎಂಟಿಸಿ ಬಸ್ಸಿನ ನಂಬರ್ ಅನ್ನೇ ಪಡೆದಿದ್ದು, ಈಗಲೂ ಅವನು ನನ್ನ ಜೊತೆಗೆ ಸಂಪರ್ಕದಲ್ಲಿದ್ದಾನೆ. ಅವನ ಅಭಿಮಾನಕ್ಕೆ ತುಂಬು ಮನಸ್ಸಿನ ಚಿರಋಣಿ ಎಂದು ಧನಪಾಲ್ ಅವರು ಬರೆದುಕೊಂಡಿದ್ದಾರೆ.
ನಿಮಗೆ ತಿಳಿದಿರಲಿ ಅಮೆರಿಕ ದೇಶದಲ್ಲಿ ನಿಮಿಷ್ಟದ ನಂಬರ್ ಪ್ಲೇಟ್ ಅನ್ನು ನಿಮ್ಮ ವಾಹನಗಳಿಗೆ ಹಾಕಿಸಿಕೊಳ್ಳಬಹುದು. ಆದರೆ, ಕೆಲವೊಂದು ನಿಯಮಗಳು ಅನ್ವಯವಾಗಲಿದೆ. ಇನ್ನು, ನಾವೆಲ್ಲ ಬಿಎಂಟಿಸಿ ಎಂದು ಕರೆಯುವ ಬೆಂಗಳೂರಿನ ಜೀವನಾಡಿಗೆ ಹಲವು ವರ್ಷಗಳ ಹಿಂದೆ ಬಿಟಿಎಸ್ (ಬೆಂಗಳೂರು ಟ್ರಾನ್ಸ್‌ಪೋರ್ಟ್ ಸರ್ವಿಸ್) ಎಂದು ಕರೆಯಲಾಗುತ್ತಿದ್ದು, ಕಾಲ ಬದಲಾದಂತೆ ಬಿಎಂಟಿಸಿ (ಬೆಂಗಳೂರು ಮೆಟ್ರೊಪೊಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್) ಆಯಿತು.
ಚೆಂಗಪ್ಪರಂತೆ ಎಷ್ಟೋ ಮಂದಿ ಬಿಎಂಟಿಸಿ ಬಸ್ ಗಳೊಂದಿಗೆ ತಮ್ಮ ಸುಮಧುರ ಬಾಂಧವ್ಯವನ್ನು ಹೊಂದಿದ್ದಾರೆ. ಕೆಲವರು ಆಗಾಗ ಇಂತಹ ನೆನಪುಗಳನ್ನು ಬಿಚ್ಚಿಡುತ್ತಾರೆ. ಹಬ್ಬವಿರಲಿ ಜೊತೆಗೆ ಎಂತಹದ್ದೇ ಸಂದರ್ಭವಿರಲಿ ನಮ್ಮ ಕೆಂಪು ಬಸ್ ಚಾಲಕರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಾರೆ. ಪ್ರಯಾಣಿಕರನ್ನು ಕುಟುಂಬದಂತೆ ನೋಡವ ಅವರು, ರಿಯಲ್ ಹಿರೋಗಳಾಗಿ ತೆರೆಮರೆಯಲ್ಲಿಯೇ ಇದ್ದು ಬಿಡುತ್ತಾರೆ.


Click it and Unblock the Notifications