BMTC: ಬಿಎಂಟಿಸಿಯಿಂದ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ.. ಕ್ಯೂಆರ್ ಕೋಡ್ ಪರಿಚಯ, ಅನುಕೂಲವೇನು?
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ - BMTC), ತನ್ನ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ನಗರದ 40 ಮೆಟ್ರೋ ನಿಲ್ದಾಣ (Metro Stations)ದಲ್ಲಿ ಫೀಡರ್ ಬಸ್‌ಗಳ ವೇಳಾಪಟ್ಟಿ (Time Table) ಸೇರಿದಂತೆ ವಿವಿಧ ಮಾಹಿತಿಯನ್ನು ಒದಗಿಸಲು ಕ್ಯೂಆರ್ ಕೋಡ್‌ನ್ನು ಪರಿಚಯಿಸಿದೆ.
ಫೆಬ್ರವರಿ 19 ರಿಂದ ಮೆಟ್ರೋ ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್ ಫಲಕ (ಬೋರ್ಡ್) ಅಳವಡಿಸಲಾಗಿದೆ. ಪ್ರತಿದಿನ 2000 ರಿಂದ 3000 ಪ್ರಯಾಣಿಕರು ಸ್ಕ್ಯಾನ್ ಮಾಡಿ, ಫೀಡರ್ ಬಸ್‌ಗಳ ವೇಳಾಪಟ್ಟಿ, ನಿರ್ಗಮ ಸಮಯ, ನಕ್ಷೆ (Map), ನೈಜ ಸಮಯದ ಸ್ಥಳ (Real Time Location) ಕುರಿತ ವಿವರವನ್ನು ನೋಡಿದ್ದಾರೆ ಎಂದು ಬಿಎಂಟಿಸಿ ಹೇಳಿದೆ.

ಈ ಬಗ್ಗೆ ನಮ್ಮ ಮೆಟ್ರೋ (Namma Metro) 'ಎಕ್ಸ್' ಖಾತೆಯಲ್ಲಿಯು ಪೋಸ್ಟ್ ಮಾಡಲಾಗಿದೆ. 'ಬಿಎಂಟಿಸಿ ಕ್ಯೂಆರ್ ಕೋಡ್ ಫಲಕದ ಮೂಲಕ ಪ್ರಯಾಣಿಕರಿಗೆ ಸೂಕ್ತ ಮಾಹಿತಿಯನ್ನು ಒದಗಿಸುತ್ತಿದೆ. ಇದನ್ನು ರೈಲು ಹಾಗೂ ಮೆಟ್ರೋ ನಿಲ್ದಾಣದ ನಿರ್ಗಮನದಲ್ಲಿ ಹಾಕಲಾಗಿದ್ದು, ಪ್ರಯಾಣಿಕರು ಮತ್ತು ಸಾರ್ವಜನಿಕರು ಉತ್ತಮ ಪ್ರಯಾಣದ ಅನುಭವವನ್ನು ಪಡೆಯಲು ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ವಿನಂತಿಸುತ್ತಿವೆ ಎಂದು ತಿಳಿಸಿದೆ.
ಬಿಎಂಟಿಸಿ 43 ಮೆಟ್ರೋ ನಿಲ್ದಾಣಗಳನ್ನು ಸಂಪರ್ಕಿಸಲು 46 ಮಾರ್ಗಗಳಲ್ಲಿ 158 ಫೀಡರ್ ಬಸ್‌ಗಳನ್ನು ಓಡಿಸುತ್ತಿದೆ. ಪ್ರತಿದಿನ 90 ಸಾವಿರದಿಂದ 1 ಲಕ್ಷ ಮಂದಿ ಪ್ರಯಾಣಿಸುತ್ತಾರೆ. ಸಾರ್ವಜನಿಕರಿಗೆ ಮತ್ತಷ್ಟು ಅನುಕೂಲವನ್ನು ಕಲ್ಪಿಸುವ ನಿಟ್ಟಿನಲ್ಲಿ ಬಿಎಂಟಿಸಿ 300 ಹೊಸ ಫೀಡರ್ ಬಸ್‌ಗಳನ್ನು ಪರಿಚಯಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಭಾನುವಾರ ಹೊರತುಪಡಿಸಿ ವಾರದ ಎಲ್ಲ ದಿನವು ಬೆಳಗ್ಗೆ 5 ಗಂಟೆಗೆ ಮೆಟ್ರೋ ಸಂಚಾರ ಪ್ರಾರಂಭವಾಗಿದೆ.

ಕಳೆದ ಫೆ.16ರಂದು ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿಗೆ ಮುಂದಿನ ದಿನಗಳಲ್ಲಿ 1,334 ಹೊಸ ಎಲೆಕ್ಟ್ರಿಕ್ ಬಸ್, 820 ಬಿಎಸ್6 ಆಧಾರಿತ ಡೀಸೆಲ್ ಬಸ್‌ಗಳನ್ನು ಸೇರ್ಪಡೆಗೊಳಿಸಲಾಗುವುದು. ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ವೆಹಿಕಲ್ ಟ್ರ್ಯಾಕಿಂಗ್ ಹೊಂದಿರುವ ಮೊಬೈಲ್ ಆಪ್ ಪರಿಚಯಿಸಲಾಗುವುದು ಎಂದು ಘೋಷಣೆ ಮಾಡಿದ್ದರು.
ಬೆಂಗಳೂರು ಶೀಘ್ರದಲ್ಲಿಯೇ ಚಾಲಕ ರಹಿತ ಮೆಟ್ರೋಗೆ ಸಾಕ್ಷಿಯಾಗಲಿದ್ದು, ಚೀನಾದಿಂದ ಬೆಂಗಳೂರಿನ ಹೆಬ್ಬಗೋಡಿಯ ನಮ್ಮ ಮೆಟ್ರೋ (Namma Metro) ಡಿಪೋಗೆ ಮೊದಲ ಚಾಲಕ ರಹಿತ ಮೆಟ್ರೋ ರೈಲು ಇತ್ತೀಚೆಗೆ ಆಗಮಿಸಿದೆ. ವಿವಿಧ ಪರೀಕ್ಷೆಗಳ ಬಳಿಕ ಹಳಿಗೆ ಬರಲಿದೆ. ಇವೆಲ್ಲ ಮುಕ್ತಾಯಗೊಳ್ಳಲು 5 - 6 ತಿಂಗಳು ಹಿಡಿಯಲಿದ್ದು, ಆ ನಂತರ ಹಳದಿ ಮಾರ್ಗದಲ್ಲಿ ಓಡಾಟ ನಡೆಸಲಿದೆ.
ಈ ಹಿಂದೆ ಬಿಇಎಂಎಲ್ (BEML) ಚಾಲಕ ರಹಿತ ಬೋಗಿ (ಕೋಚ್)ವೊಂದಕ್ಕೆ ರೂ.9.28 ಕೋಟಿ ವೆಚ್ಚದಲ್ಲಿ ಬಿಡ್ (ಹರಾಜು) ಆಹ್ವಾನಿಸಿತ್ತು. ಚೀನಾದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್ ಪ್ರತಿ ಬೋಗಿಯನ್ನು ರೂ.7.31 ಕೋಟಿ ವೆಚ್ಚದಲ್ಲಿ ತಯಾರಿಸಿಕೊಡುವುದಾಗಿ ತಿಳಿಸಿ, ಬಿಡ್‌ನ್ನು ಗೆದ್ದುಕೊಂಡಿತ್ತು. ನಮ್ಮ ಮೆಟ್ರೋ ಮೇ ತಿಂಗಳ ವೇಳೆಗೆ ಇನ್ನೂ 2 ಚಾಲಕ ರಹಿತ ಮೆಟ್ರೋ ರೈಲುಗಳನ್ನು ಪಡೆಯಲಿದೆ. ಆ ನಂತರ ತಿಂಗಳೊಂದಕ್ಕೆ 2 ರೈಲುಗಳು ಸೇರ್ಪಡೆಗೊಳ್ಳಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications