World High Altitude Road: ವಿಶ್ವದ ಅತಿ ಎತ್ತರದ ರಸ್ತೆಗೆ ಸಾಕ್ಷಿಯಾಗಲಿದೆ ಭಾರತ, ಮಹಿಳಾ ಯೋಧರ ನೇತೃತ್ವ
ದೇಶದ ಗಡಿಯಲ್ಲಿ ಮೂಲಸೌಕರ್ಯ ಹೆಚ್ಚಿಸುವ ಪ್ರಯತ್ನವಾಗಿ, ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ಮಂಗಳವಾರ ಲಡಾಖ್‌ನ ಡೆಮ್‌ಚೋಕ್ ಪ್ರದೇಶದಲ್ಲಿ ವಿಶ್ವದ ಅತಿ ಎತ್ತರದ ರಸ್ತೆ (World High Altitude Road) ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
ಈ ರಸ್ತೆಯು ಫುಕ್ಚೆಗೆ ಸಂಪರ್ಕ ಕಲ್ಪಿಸುತ್ತದೆ. ಇದೊಂದು ಮಿಲಿಟರಿ ಔಟ್‌ಪೋಸ್ಟ್ ಆಗಿದ್ದು, ವಾಸ್ತವಿಕ ನಿಯಂತ್ರಣ ರೇಖೆ (Line of Actual Control - LAC)ಯಿಂದ ಕೇವಲ 3 ಕಿಲೋಮೀಟರ್ ದೂರದಲ್ಲಿದೆ. ಹೊಸದಾಗಿ ನಿರ್ಮಾಣ ಮಾಡುತ್ತಿರುವ ರಸ್ತೆಯು ಸುಮಾರು 19,400 ಅಡಿ ಎತ್ತರದಲ್ಲಿರಲಿದೆ. ಈ ಮೂಲಕ ವಿಶ್ವದಲ್ಲಿಯೇ ಅತಿ ಎತ್ತರದ ಮೋಟಾರು ರಸ್ತೆ (motorable road) ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಸದ್ಯ, ಪ್ರಪಂಚದಲ್ಲಿಯೇ ಅತಿ ಎತ್ತರದ ರಸ್ತೆ ಎಂಬ ದಾಖಲೆಯನ್ನು (19,024 ಅಡಿ) ಉಮ್ಲಿಂಗ್-ಲಾ ಮೂಲಕ ಹಾದುಹೋಗುವ ರೋಡ್ ಹೊಂದಿದ್ದು, ಅದನ್ನು ನೂತನ ರಸ್ತೆ ಅಳಿಸಲಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO), 77ನೇ ಸ್ವಾತಂತ್ರ್ಯ ದಿನಾಚರಣೆಯ ವೇಳೆ, ದೇಶದ ಆಯಕಟ್ಟಿನ ಸ್ಥಳವಾಗಿರುವ 'ಲಿಕಾರು-ಮಿಗ್ ಲಾ-ಫುಕ್ಚೆ' ರಸ್ತೆ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದೆ.
ಈ ರಸ್ತೆ 19400 ಅಡಿ ಎತ್ತರದಲ್ಲಿ ಹಾದುಹೋಗಲಿದ್ದು, ಉಮ್ಲಿಂಗ್-ಲಾ ಪಾಸ್ ಮೀರಿಸುವ ವಿಶ್ವದ ಅತಿ ಎತ್ತರದ ರೋಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಜೈ ಹಿಂದ್! ಎಂದು ಬರೆದುಕೊಂಡಿದೆ. ಅಲ್ಲದೆ, ಎರಡು ವರ್ಷಗಳ ಹಿಂದೆ, ಬಾರ್ಡರ್ ರೋಡ್ಸ್ ಆರ್ಗನೈಸೇಶನ್, 19,024 ಅಡಿ ಎತ್ತರದಲ್ಲಿ ಲಡಾಖ್‌ನ ಉಮ್ಲಿಂಗ್-ಲಾದಲ್ಲಿ ವಾಹನಗಳು ಸಂಚರಿಸಲು ಸಾಧ್ಯವಾಗುವಂತೆ ರಸ್ತೆ ನಿರ್ಮಾಣ ಮಾಡಿ, ಐತಿಹಾಸಿಕ ಸಾಧನೆ ಮಾಡಿತ್ತು.

ವಿವಿಧ ಮಾಧ್ಯಮಗಳ ವರದಿ ಪ್ರಕಾರ, ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO)ನ ಮಹಿಳಾ ಎಂಜಿನಿಯರ್‌ಗಳ ತಂಡವು ಲಿಕಾರು-ಮಿಗ್ ಲಾ-ಫುಕ್ಚೆ ರಸ್ತೆ ನಿರ್ಮಾಣದ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊತ್ತಿದೆ. ಐದು ಸದಸ್ಯರ ಈ ತಂಡಕ್ಕೆ ಕರ್ನಲ್ ಪೊನಂಗ್ ಡೊಮಿಂಗ್ ನೇತೃತ್ವ ವಹಿಸಿದ್ದಾರೆ. ಈ ಬಗ್ಗೆ ಸ್ವತಃ ಮಾತನಾಡಿರುವ ಪೊನಂಗ್ ಡೊಮಿಂಗ್ ಅವರು, ಈ ರಸ್ತೆ ನಿರ್ಮಾಣದ ಭಾಗವಾಗುತ್ತಿರುವುದಕ್ಕೆ ಅಪಾರ ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದಾರೆ.
ವಿಶ್ವದ ಅತ್ಯುನ್ನತ ಬಾರ್ಡರ್ ರೋಡ್ಸ್ ಟಾಸ್ಕ್ ಫೋರ್ಸ್ (BRTF)ನಲ್ಲಿ ಕೆಲಸ ಮಾಡುತ್ತಿರುವುದು ಖುಷಿ ತಂದಿದೆ ಎಂದು ಅವರು ತಿಳಿಸಿದ್ದಾರೆ. ಪ್ರಸ್ತುತ, ಲಡಾಖ್‌ನ ಹ್ಯಾನ್ಲೆಯಲ್ಲಿ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (15,000 ಅಡಿ ಎತ್ತರ) ರಸ್ತೆ ನಿರ್ಮಾಣ ಕಾಮಗಾರಿಯನ್ನು ನಡೆಸುತ್ತಿದ್ದು, ವಿಶ್ವದ ಅತಿ ಎತ್ತರದ ವಾಹನಗಳ ಓಡಾಟವಿರುವ ಉಮ್ಲಿಂಗ್-ಲಾ ರಸ್ತೆಯ ನಿರ್ವಹಣೆ ಸೇರಿದಂತೆ ವಿವಿಧ ರಸ್ತೆ ನಿರ್ಮಾಣ ಯೋಜನೆಗಳ ಜವಾಬ್ದಾರಿಯನ್ನು ಹೊತ್ತಿದೆ.
ಇದೆಲ್ಲ ಒಂದೆಡೆ ಆದ್ರೆ ಮುಂಬರುವ ವರ್ಷಗಳಲ್ಲಿ ಭಾರತದಿಂದ ವಿದೇಶಕ್ಕೆ ರಸ್ತೆ ಮೂಲಕವೇ ಪ್ರವಾಸ ಹೋಗಬಹುದು. ಕಳೆದ ತಿಂಗಳು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ಭಾರತ - ಮ್ಯಾನ್ಮಾರ್ - ಥಾಯ್ಲೆಂಡ್ ದೇಶಗಳ ಮಧ್ಯೆ ಹೆದ್ದಾರಿ ಕಾಮಗಾರಿ 70% ಮುಗಿದಿದೆ ಎಂದು ಹೇಳಿದ್ದರು. ಈ ಮೂರು ದೇಶಗಳು 1,400 ಕಿಲೋಮೀಟರ್ ಉದ್ದದ ರಸ್ತೆ ಅಭಿವೃದ್ಧಿಪಡಿಸುವ ಕೆಲಸದಲ್ಲಿ ನಿರತವಾಗಿವೆ.
ಈ ಹೆದ್ದಾರಿಯು ಭಾರತದ ಮಣಿಪುರದ ಮೋರೆಯಿಂದ ಮ್ಯಾನ್ಮಾರ್ ಮೂಲಕ ಥೈಲ್ಯಾಂಡ್‌ನ ಮೇಸೋಟ್ ನಗರವನ್ನು ಸಂಪರ್ಕಿಸುತ್ತದೆ. ಆದರೆ, ಯಾವಾಗ ಲೋಕಾರ್ಪಣೆಗೊಳ್ಳಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಭಾರತ, ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ದೇಶಗಳ ಮಧ್ಯೆ ಹೆದ್ದಾರಿ ನಿರ್ಮಾಣಕ್ಕೆ ಎರಡು ದಶಕಗಳ ಕನಸಿದೆ. ಆದರೆ ನಾನಾ ಕಾರಣಗಳಿಗೆ ಕಾಮಗಾರಿ ವಿಳಂಬವಾಗಿತ್ತು. ಸದ್ಯ, ವೇಗ ಪಡೆದುಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications