karnataka election: ಯಡಿಯೂರಪ್ಪರ ಅದೃಷ್ಟದ ಕಾರು 'ಅಂಬಾಸಿಡರ್'.. ಇಲ್ಲಿದೆ ಯಾರಿಗೂ ಗೊತ್ತಿರದ ಮಾಹಿತಿ
ಕರ್ನಾಟಕ ವಿಧಾನಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಜೋರಾಗಿದ್ದು, ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಪುತ್ರ ವಿಜಯೇಂದ್ರ ಅವರ ನಾಮಪತ್ರ ಸಲ್ಲಿಸಲು, ತಮ್ಮ ಅದೃಷ್ಟದ 'ಅಂಬಾಸಿಡಾರ್' ಕಾರಿನಲ್ಲಿ ಪ್ರಯಾಣಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಲ್ಲರ ಗಮನ ಸೆಳೆದಿದ್ದಾರೆ.
ಇತ್ತೀಚೆಗಷ್ಟೇ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿರುವ ಯಡಿಯೂರಪ್ಪ ಅವರು, ತಮ್ಮ ಸ್ವಕ್ಷೇತ್ರದಲ್ಲಿ ಪುತ್ರನ ಪರ ಪ್ರಚಾರ ನಡೆಸುತ್ತಿದ್ದು, ರಾಜಕೀಯ ಜೀವನದ ಆರಂಭಿಕ ದಿನಗಳಲ್ಲಿ ಖರೀದಿಸಿದ್ದ ಅಂಬಾಸಿಡರ್ ಸಿಕೆಆರ್ 45 ಕಾರಿನಲ್ಲಿ ಪುತ್ರ ವಿಜಯೇಂದ್ರರ ನಾಮಪತ್ರ ಸಲ್ಲಿಸಲು ಹತ್ತಿ ಹೊರಟ್ಟಿದ್ದು, ಎಲ್ಲರನ್ನು ಒಮ್ಮೆಲೇ ಆಶ್ಚರ್ಯಗೊಳಿಸಿತು. ಖುಷಿಯಿಂದ ಅವರು ಕಾರಿನಲ್ಲಿ ಮುಂಭಾಗ ಆಸನದಲ್ಲಿ ಕುಳಿತಿದ್ದರು. ಹಿಂಬದಿಯ ಆಸನದಲ್ಲಿ ಪುತ್ರ ಬಿ.ವೈ.ರಾಘವೇಂದ್ರ ಕುಳಿತುಕೊಂಡಿದ್ದರು.

ಈ ಅಂಬಾಸಿಡಾರ್ ಕಾರನ್ನು ತನ್ನ 'ಲಕ್ಕಿ' ಕಾರೆಂದು ಭಾವಿಸುವ ಯಡಿಯೂರಪ್ಪ ಅವರು, ಈಗಲೂ ತಮ್ಮ ಶಿಕಾರಿಪುರದ ತೋಟದ ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಬಿಎಸ್‌ವೈ ಅಂಬಾಸಿಡಾರ್ ಕಾರಿನಲ್ಲಿ ಪ್ರಯಾಣಿಸುತ್ತಿರುವ ವಿಡಿಯೋವನ್ನು ಪುತ್ರ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು, ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪೊಲೀಸ್ ಪೈಲೆಟ್ ವಾಹನಗಳ ಭದ್ರತೆಯಲ್ಲಿ ಅಂಬಾಸಿಡರ್ ಹೋಗುತ್ತಿರುವುದನ್ನು ಕಾಣಬಹುದು.
'ಹಳೆಯದು ಚಿನ್ನವಿದ್ದಂತೆ. ಪರಂಪರೆ ಯಾವಾಗಲೂ ಮುಂದುವರಿಯುತ್ತದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಮನೆಯಿಂದ ತಮ್ಮ ನೆಚ್ಚಿನ ಅಂಬಾಸಿಡರ್ ಸಿಕೆಆರ್ 45 ಕಾರಿನಲ್ಲಿ ಬಿಜೆಪಿ ಕಚೇರಿಗೆ ಪ್ರಯಾಣ ಬೆಳೆಸಿದರು' ಎಂದು ಬಿ.ವೈ.ರಾಘವೇಂದ್ರ ವಿಡಿಯೋಗೆ ಶೀರ್ಷೆಕೆ ಬರೆದಿದ್ದಾರೆ. ಬಿಎಸ್‌ವೈ ಅವರ ಅಂಬಾಸಿಡರ್ ಕಾರಿನ ಪ್ರೀತಿ ಬಗ್ಗೆ ಪುತ್ರ ವಿಜಯೇಂದ್ರ ಕೂಡ ಮಾತನಾಡಿದ್ದು, 'ಈ ಕಾರಿನ ಸಂಖ್ಯೆ ಮೇಲೆ ಅವರಿಗೆ ವಿಶೇಷವಾದ ನಂಬಿಕೆಯಿದೆ. ಈ ಕಾರಿನಲ್ಲಿ ಪ್ರವಾಸ ಮಾಡಿ, ರಾಜ್ಯಾದ್ಯಂತ ಪಕ್ಷ ಕಟ್ಟಿದ್ದಾರೆ' ಎಂದು ಹೇಳಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಬಳಿಯಿರುವ 'ಹಿಂದುಸ್ತಾನ್ ಅಂಬಾಸಿಡರ್ ಬಗ್ಗೆ ಒಂದಷ್ಟು ವಿಚಾರಗಳನ್ನು ಹೇಳುವುದಾದರೆ, 1988ರಲ್ಲಿ ಈ ಕಾರನ್ನು ಖರೀದಿಸಲಾಗಿತ್ತು. ಕರ್ನಾಟಕದಾದ್ಯಂತ ಇದೇ ಕಾರಿನಲ್ಲಿ ಪ್ರಯಾಣಿಸಿ, ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. 90ರ ದಶಕದಲ್ಲಿ ಈ ಕಾರಿನಲ್ಲಿ ಸಂಚರಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದ ಅವರು, ಪಕ್ಷದ ಕಾರ್ಯಕ್ರಮಗಳಿಗಾಗಿ ಕೇರಳ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಗೂ ಪ್ರವಾಸ ಮಾಡಿದ್ದಾರೆ. ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಅವರು ಇದೇ ಕಾರಿನಲ್ಲಿ ಓಡಾಡಿದ್ದಾರೆ.
ಈಗಲೂ ಶಿಕಾರಿಪುರಕ್ಕೆ ಬಂದಾಗ ಶಿವಮೊಗ್ಗಕ್ಕೆ ತೆರಳಲು ಆಗಾಗ ಅಂಬಾಸಿಡರ್ ಕಾರನ್ನೇ ಬಳಕೆ ಮಾಡುವ ಅವರು, ತಮಗೆ ಬೇಸರವಾದರೂ ಇದರಲ್ಲಿಯೇ ಕೆಲ ಸಮಯ ಸಂಚರಿಸುತ್ತಾರೆಯಂತೆ. ಸುಮಾರು 15 ವರ್ಷಗಳ ಹಿಂದೆ, ಬೆಂಗಳೂರಿನಗೆ ಹೋಗುವಾಗ ಅರಸೀಕೆರೆ ಸಮೀಪ ಕಾರಿನ ಚಕ್ರವೊಂದು ಕಿತ್ತು ಹೋಗಿ, ಮೂರು ಬಾರಿ ಪಲ್ಟಿಯಾಗುತ್ತದೆ. ಆದರೂ ಸಣ್ಣಪುಟ್ಟ ಗಾಯಗಳಾಗಿ ಯಡಿಯೂರಪ್ಪ ಅಪಘಾತದಿಂದ ಪಾರಾಗುತ್ತಾರೆ. ಅಂದಿನಿಂದ ಅವರು, ಯಾವುದೇ ಕಾರನ್ನು ಕೊಂಡುಕೊಂಡರೂ ಅವುಗಳ ಸಂಖ್ಯೆ 4545 ಎಂದು ಇಡುತ್ತಿದ್ದಾರೆ.
ಯಡಿಯೂರಪ್ಪ ಅವರು, ಸರಿ ಸಮಾರು 30 ವರ್ಷಗಳಿಂದ ಇಟ್ಟುಕೊಂಡಿರುವ ಈ ಕಾರಿನ ಎಂಜಿನ್ ಅನ್ನು ಕೇವಲ ಎರಡು ಬಾರಿ ರಿಪೇರಿ ಮಾಡಲಾಗಿದೆಯಂತೆ. ಇನ್ನು, ಹಿಂದುಸ್ತಾನ್ ಅಂಬಾಸಿಡರ್ ಕಾರಿನ ಹಿನ್ನೆಲೆಯನ್ನು ನೋಡುವುದಾದರೆ, 1957 ರಿಂದ 2014ವರೆಗೆ ಈ ಕಾರನ್ನು ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿತ್ತು. ರೂ.4 ಆರಂಭಿಕ ಬೆಲೆಯಲ್ಲಿ ಖರೀದಿಗೆ ದೊರೆಯುತ್ತಿದ್ದು. ಆಕರ್ಷಕ ವಿನ್ಯಾಸದಿಂದ ಕೂಡಿದ ಈ ಕಾರು ಎಷ್ಟೋ ಮಂದಿಗೆ ಫೆವರೇಟ್ ಆಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ


Click it and Unblock the Notifications