Budget 2024: ಸಿಹಿಯೋ.. ಕಹಿಯೋ.. ಎಲೆಕ್ಟ್ರಿಕ್ ವಾಹನಗಳ ಬೆಲೆ ಭಾರೀ ಇಳಿಕೆ?
ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. ನಾಳೆ (ಜುಲೈ 23) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು, 2024-25ರ ಪೂರ್ಣ ಪ್ರಮಾಣದ ಬಜೆಟ್ (Budget) ಮಂಡಿಸಲಿದ್ದಾರೆ. ಈ ಮೂಲಕ ಸತತ ಏಳನೇ ಬಾರಿಗೆ ಬಜೆಟ್ ಮಂಡಿಸಿದ ಮೊದಲ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ. ಈ ಬಜೆಟ್ ಮೇಲೆ ಜನಸಾಮಾನ್ಯರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ನರೇಂದ್ರ ಮೋದಿ ಸರ್ಕಾರವು 2030ರ ವೇಳೆಗೆ ಒಟ್ಟು ವಾಹನ ಮಾರಾಟದಲ್ಲಿ ಶೇಕಡ 30% ವಿದ್ಯುತ್ ಚಾಲಿತ ವಾಹನಗಳು (Electric Vehicle - EV) ಇರಬೇಕೆಂದು ಬಯಸಿದೆ. ಇದರಿಂದಾಗಿ ಈ ಬಾರಿಯ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ವಾಹನೋದ್ಯಮಕ್ಕೆ ಹೆಚ್ಚಿನ ಕೊಡುಗೆ ದೊರೆಯುವ ಸಾಧ್ಯತೆಯಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಈಗಾಗಲೇ, ಹೈಬ್ರಿಡ್ - ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಹಾಗೂ ಮಾರಾಟ ಬೆಂಬಲಿಸಲು ಫಾಸ್ಟರ್ ಅಡಾಪ್ಷನ್ & ಮ್ಯಾನುಫ್ಯಾಕ್ಚರಿಂಗ್ (ಫೇಮ್ FAME) ಯೋಜನೆಯನ್ನು ಎರಡು ಹಂತದಲ್ಲಿ ಅನುಷ್ಠಾನ ಮಾಡಲಾಗಿದೆ. ಮೂರನೇ ಹಂತದಲ್ಲಿ ಜಾರಿಗೊಳಿಸಲು ಹೆಚ್ಚಿನ ಅನುದಾನ ಮೀಸಲಿರಿಸಬಹುದು. ಸರಿ ಸುಮಾರು ರೂ.10,000 ಕೋಟಿ ಬಜೆಟ್‌ನಲ್ಲಿ ಹಂಚಿಕೆಯಾಗಬಹುದು ಎಂಬುದರ ಕುರಿತಂತೆ ಚರ್ಚೆಗಳು ನಡೆಯುತ್ತಿವೆ.
ಫೇಮ್-3 ಯೋಜನೆ ನಿರ್ವಹಣೆ ಸಂಬಂಧ ಭಾರೀ ಕೈಗಾರಿಕೆ ಸಚಿವಾಲಯ (Ministry of Heavy Industry), ಪ್ರಧಾನ ಮಂತ್ರಿ ಕಚೇರಿ (PMO)ಗೆ ಪ್ರಸ್ತಾವನೆ ಸಲ್ಲಿಸಿದ್ದು, ಹಣಕಾಸಿನ ಹಂಚಿಕೆ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ನಾಳೆ ಮಂಡಿಸುವ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಫೇಮ್-3 ಯೋಜನೆಯ ಬಗ್ಗೆ ಮಹತ್ವದ ಘೋಷಣೆ ಮಾಡಬಹುದು ಎಂದು ಎಲೆಕ್ಟ್ರಿಕ್ ವಾಹನೋದ್ಯಮ ಸಂಸ್ಥೆಗಳು ನೀರಿಕ್ಷೆ ಮಾಡಿವೆ.
ಆದಾಗ್ಯೂ, ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಭಾರೀ ಕೈಗಾರಿಕೆಗಳ ಸಚಿವ ಎಚ್.ಡಿ ಕುಮಾರಸ್ವಾಮಿ (H.D.Kumaraswamy) ಅವರು, ಹಸಿರು ಚಲನಶೀಲತೆ (Green Mobility) ಉತ್ತೇಜಿಸುವ ಸಲುವಾಗಿ ಫೇಮ್-3 (ಫಾಸ್ಟರ್ ಅಡಾಪ್ಷನ್ ಮತ್ತು ಮ್ಯಾನುಫ್ಯಾಕ್ಚರಿಂಗ್) ಯೋಜನೆಯನ್ನು ಸದ್ಯದಲ್ಲಿಯೇ ಘೋಷಿಸಲಾಗುವುದು. ಆದರೆ, ಈ ಬಜೆಟ್‌ನಲ್ಲಿ ಅಲ್ಲ ಎಂದು ಹೇಳಿದ್ದರು.
ಕೇಂದ್ರ ಸರ್ಕಾರವು ಏಪ್ರಿಲ್ 1, 2015ರಂದು ರೂ.895 ಕೋಟಿ ಅನುದಾನದೊಂದಿಗೆ 5 ವರ್ಷಗಳ ಅವಧಿಗೆ ಫೇಮ್-1 ಸಬ್ಸಿಡಿ ಯೋಜನೆ ಜಾರಿಗೊಳಿಸಿತ್ತು. ಅದೇ ರೀತಿಯಲ್ಲಿ ಏಪ್ರಿಲ್ 1, 2019 ರಿಂದ ಮಾರ್ಚ್ 31, 2024ರವರೆಗೆ ಫೇಮ್-2 ಯೋಜನೆ ಅನುಷ್ಠಾನಗೊಳಿಸಿತ್ತು. ಇದಕ್ಕಾಗಿ ರೂ.10,000 ಕೋಟಿ ಅನುದಾನ ಮೀಸಲಿಟ್ಟಿತ್ತು.
ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಫೆಡರೇಶನ್ (FADA) ಪ್ರಕಾರ, 2024ರ ಹಣಕಾಸು ವರ್ಷದಲ್ಲಿ ಎಲೆಕ್ಟ್ರಿಕ್ ಪ್ರಯಾಣಿಕ ವಾಹನ (Electric Passenger Vehicles)ಗಳ ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ ಶೇಕಡ 91% (90,996 ಯುನಿಟ್) ಹೆಚ್ಚಳಗೊಂಡಿದೆ. ಎಲೆಕ್ಟ್ರಿಕ್ ವಾಣಿಜ್ಯ ವಾಹನ (Electric Commercial Vehicles)ಗಳ ಮಾರಾಟವು ಮೂರು ಪಟ್ಟು ಅಧಿಕಗೊಂಡಿದೆ.
ಈ ಬಾರಿಯ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ವಾಹನೋದ್ಯಮವನ್ನು ಉತ್ತೇಜಿಸಲು ಬ್ಯಾಟರಿ ತಯಾರಿಕೆಗೆ ಪ್ರೋತ್ಸಾಹ, ಫೇಮ್-3 ಯೋಜನೆ ಜಾರಿ ಹಾಗೂ ಚಾರ್ಜಿಂಗ್ ಮೂಲಸೌಕರ್ಯಕ್ಕಾಗಿ ಅನುದಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕಾಗಿದೆ. ಇದರಿಂದ ಎಲೆಕ್ಟ್ರಿಕ್ ವಾಹನ ಉತ್ಪಾದನೆ ವೇಗಗೊಂಡು, ಖರೀದಿದಾರರ ಸಂಖ್ಯೆ ಕೂಡ ಹೆಚ್ಚಳಗೊಳ್ಳಲಿದೆ ಎಂಬುದು ಆಟೋಮೊಬೈಲ್ ತಜ್ಞರ ಅಭಿಪ್ರಾಯವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications