ವೈರಲ್ ವಿಡಿಯೋ: ಛತ್ರಿ ಹಿಡಿದು ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಚಾಲನೆ.. ಡ್ರೈವರ್, ಕಂಡಕ್ಟರ್ ಸಸ್ಪೆಂಡ್
ಮಳೆಯಾಗುತ್ತಿದ್ದ ವೇಳೆ ಎನ್‌ಡಬ್ಲ್ಯೂಕೆಆರ್‌ಟಿಸಿ ಬಸ್‌ನ್ನು ಛತ್ರಿ ಹಿಡಿದು ಓಡಿಸುತ್ತಿದ್ದ ಚಾಲಕನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಈ ಘಟನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾದ ಟೀಕೆ ವ್ಯಕ್ತವಾಗಿತ್ತು. ಇದೀಗ, ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಕ್ಕಾಗಿ ಡ್ರೈವರ್ ಹಾಗೂ ಕಂಡಕ್ಟರ್‌ನ್ನು ಅಮಾನತು ಮಾಡಲಾಗಿದೆ.
ಈ ಕುರಿತು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯೂಕೆಆರ್‌ಟಿಸಿ - NWKRTC) ಸ್ಪಷ್ಟನೆ ನೀಡಿದೆ. ಘಟನೆ ಸಂಬಂಧ ಧಾರವಾಡ ಗ್ರಾಮಾಂತರ ವಿಭಾಗದ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯಲಾಗಿದೆ. ಅದರನ್ವಯ ಮೇ.23 ರಂದು ಬೆಟಗೇರಿ ಹಾಗೂ ಧಾರವಾಡ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್‌ನಲ್ಲಿ ಚಾಲಕ ಹನುಮಂತಪ್ಪ ಅ.ಕಿಲ್ಲೇದಾರ ಹಾಗೂ ನಿರ್ವಾಹಕಿ ಅನಿತಾ ಹೆಚ್.ಬಿ ಕಾರ್ಯನಿರ್ವಹಿಸುತ್ತಿದ್ದರು.

ಮಳೆ ಬರುತ್ತಿದ್ದ ಸಂದರ್ಭದಲ್ಲಿ ಅಂದು ಸಂಜೆ 4.30ರ ಸುಮಾರಿಗೆ ಬಸ್‌ನಲ್ಲಿ ಪ್ರಯಾಣಿಕರಿಲ್ಲದೆ ಖಾಲಿಯಿದ್ದ ಹಿನ್ನೆಲೆ, ಚಾಲಕ ನಿರ್ವಾಹಕಿಯಿಂದ ಕೊಡೆಯನ್ನು ಪಡೆದಿದ್ದಾರೆ. ಅದನ್ನು ಹಿಡಿದುಕೊಂಡು ಚಾಲನೆಯನ್ನು ಮಾಡಿದ್ದು, ನಿರ್ವಾಹಕಿಯು ಮೊಬೈಲ್‌ನಲ್ಲಿ ವಿಡಿಯೋವನ್ನು ಚಿತ್ರೀಕರಣ ಮಾಡಿದ್ದಾರೆ. ಆ ವೇಳೆಯಲ್ಲಿ ಬಸ್ ಚಾವಣಿಯಾಗಲಿ, ಪ್ರಯಾಣಿಕರು ಕುಳಿತುಕೊಂಡಿರುವ ಸ್ಥಳದಲ್ಲಿ ಸೋರಿಕೆ ಇರಲಿಲ್ಲ ಎಂದು ತಿಳಿದುಬಂದಿರುತ್ತದೆ.
ಬಸ್ ಚಾವಣಿ ಸೋರಿಕೆ ಕುರಿತು ಡ್ರೈವರ್, ಕಂಡಕ್ಟರ್ ಹಾಗೂ ಪ್ರಯಾಣಿಕರಿಂದ ಯಾವುದೇ ದೂರುಗಳು ಬಂದಿಲ್ಲ. ಈ ಬಸ್‌ನ್ನು ನಿಗಮದ ತಾಂತ್ರಿಕ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದು, ಮೇಲ್ಚಾವಣಿಯಲ್ಲಿ ಯಾವುದೇ ರೀತಿಯಲ್ಲಿ ಸೋರಿಕೆ ಇಲ್ಲದಿರುವುದನ್ನು ಖಚಿತಪಡಿಸಿದ್ದಾರೆ. ಘಟನೆ ಸಂಬಂಧ ಚಾಲನಾ ಸಿಬ್ಬಂದಿಗಳಿಂದ ಸ್ಪಷ್ಟಿಕರಣ ಪಡೆಯಲಾಗಿದ್ದು, ಇದು ಕೇವಲ ಮನೋರಂಜನೆಗಾಗಿ ಮಾಡಿದ ವಿಡಿಯೋ ಚಿತ್ರೀಕರಣವಾಗಿದೆ ಎಂದು ತಿಳಿಸಿದ್ದಾರೆ.
ಈ ರೀತಿ ಸಂಸ್ಥೆಯ ಬಗ್ಗೆ ತಪ್ಪು ಅಭಿಪ್ರಾಯ ಮೂಡಲು ಕಾರಣರಾದ ಸದರಿ ಸಿಬ್ಬಂದಿಗಳನ್ನು ಕೂಡಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಎನ್‌ಡಬ್ಲ್ಯೂಕೆಆರ್‌ಟಿಸಿ ಸ್ಪಷ್ಟನೆ ಕೊಟ್ಟಿದೆ. ಆದಾಗ್ಯೂ ಘಟನೆ ಸಂಬಂಧ ಜನಸಾಮಾನ್ಯರಿಂದ ತರಹೇವಾರಿ ಅಭಿಪ್ರಾಯಗಳು ವ್ಯಕ್ತವಾಗಿವೆ. 'ಮೊದಲೂ ಸರ್ಕಾರಿ ವಾಹನಗಳಲ್ಲಿ ರೀಲ್ಸ್ ಮಾಡುವುದನ್ನು ನಿಲ್ಲಿಸಬೇಕು' ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಹೇಳಿದ್ದಾರೆ.
ಬಿಜೆಪಿ ಟೀಕೆ: ಛತ್ರಿ ಹಿಡಿದು ವಾಯುವ್ಯ ಕರ್ನಾಟಕ ಸಾರಿಗೆ ಬಸ್‌ನ್ನು ಚಾಲಕ ಓಡಿಸುತ್ತಿದ್ದ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಪಕ್ಷ ಬಿಜೆಪಿಯು ರಾಜ್ಯ ಸರ್ಕಾರವನ್ನು ಟೀಕಿಸಿತ್ತು. ಗುರುವಾರ ತನ್ನ ಅಧಿಕೃತ 'ಎಕ್ಸ್' ಖಾತೆಯಲ್ಲಿ ವ್ಯಂಗ್ಯಚಿತ್ರವೊಂದನ್ನು ಪೋಸ್ಟ್ ಮಾಡಿದ್ದು, 'ಛತ್ರಿ ಭಾಗ್ಯಕ್ಕೆ ಚಾಲನೆ ನೀಡಿದ ಸರ್ಕಾರ' ಎಂದು ಆಕ್ರೋಶವನ್ನು ವ್ಯಕ್ತಪಡಿಸಿತ್ತು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡು ಟೀಕೆ ಮಾಡಿದ್ದರು. 'ಇದು ಸರ್ಕಾರಿ ಬಸ್ಸುಗಳ ದುಃಸ್ಥಿತಿ. ಒಂದು ಕೈಯಲ್ಲಿ ಕೊಡೆ, ಮತ್ತೊಂದು ಕೈಯಲ್ಲಿ ಸ್ಟೀರಿಂಗ್ ವೀಲ್ ಬ್ಯಾಲೆನ್ಸ್ ಮಾಡುತ್ತ ಓಡಿಸುವುದರಿಂದ ಚಾಲಕರು ಹಾಗೂ ಪ್ರಯಾಣಿಕರ ಜೀವಕ್ಕೆ ಕುತ್ತು, ಇದೇನಾ ಚಾಲಕರಿಗೆ ಇರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ?, ಚಾಲಕ ಹಾಗೂ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ಇರಲಿ' ಎಂದಿದ್ದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications