ಟ್ರಾಫಿಕ್ ಸಿಗ್ನಲ್‌ನಲ್ಲಿ ಸಿಕ್ಕ ಬಡ ಮಕ್ಕಳಿಗೆ 5-ಸ್ಟಾರ್ ಹೋಟೆಲ್ ಭೋಜನ ರುಚಿ ತೋರಿಸಿದ ವ್ಯಕ್ತಿ!
ಟ್ರಾಫಿಕ್ ಸಿಗ್ನಲ್‌ಗಳ ಬಳಿ ಕಾರುಗಳನ್ನು ಸ್ವಚ್ಛಗೊಳಿಸುವವರು, ಸಾಹಸಗಳನ್ನು ಪ್ರದರ್ಶಿಸುವವರು ಮತ್ತು ಭಿಕ್ಷುಕರು ಕಂಡುಬರುವುದು ಸಾಮಾನ್ಯವಾಗಿಬಿಟ್ಟಿದೆ. ಇಂತಹ ಚಟುವಟಿಕೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದು ವಯಸ್ಕರಷ್ಟೇ ಅಲ್ಲ, ಮಕ್ಕಳೂ ಕೂಡ. ಮಕ್ಕಳು ಇಂತಹ ಸಾಹಸಗಳನ್ನು ಮಾಡುವುದರಿಂದ ಅವರನ್ನು ಉತ್ತೇಜಿಸಬೇಕೇ ಅಥವಾ ಭಿಕ್ಷೆ ಬೇಡುತ್ತಾರೆ ಎಂದು ನಿರ್ಲಕ್ಷಿಸಬೇಕೆ ಎಂಬುದು ವಿಭಿನ್ನ ಚರ್ಚೆಯಾಗಿದೆ.
ಇತ್ತೀಚೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಟ್ರಾಫಿಕ್ ಸಿಗ್ನಲ್‌ನಲ್ಲಿ ತಮ್ಮ ಕಾರನ್ನು ಸ್ವಚ್ಛಗೊಳಿಸಿದ ಮಕ್ಕಳನ್ನು ಗುರುತಿಸಿ, ಅವರನ್ನು ತನ್ನ ಕಾರಿಗೆ ಆಹ್ವಾನಿಸಿ 5-ಸ್ಟಾರ್ ಹೋಟೆಲ್‌ನಲ್ಲಿ ಊಟಕ್ಕೆ ಕರೆದೊಯ್ದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ಕಾವಲ್ಜೀತ್ ಸಿಂಗ್ ಎಂಬಾತ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಕಾವಲ್ಜೀತ್ ಸಿಂಗ್ ಅವರ ಷೆವರ್ಲೆ ಕ್ರೂಜ್ ಸೆಡಾನ್ ಟ್ರಾಫಿಕ್ ಸಿಗ್ನಲ್ ಬಳಿ ನಿಂತಾಗ ಮಕ್ಕಳ ಗುಂಪೊಂದು ಸ್ವಚ್ಛಗೊಳಿಸುತ್ತಿದ್ದರು. ಕಾವಲ್ಜೀತ್ ಸಿಂಗ್ ಕಿಟಕಿಯನ್ನು ಕೆಳಗಿಳಿಸಿ ತನ್ನ ಕಾರನ್ನು ಸ್ವಚ್ಛಗೊಳಿಸುತ್ತಿದ್ದ ಮಕ್ಕಳೊಂದಿಗೆ ಮಾತನಾಡುತ್ತಾರೆ. ಈ ವೇಳೆ ಮಕ್ಕಳು ರಾತ್ರಿ ಊಟಕ್ಕಾಗಿ ಹಣ ಸಂಪಾದಿಸಲು ಈ ಕೆಲಸವನ್ನು ಮಾಡುತ್ತಿರುವುದು ತಿಳಿಯುತ್ತದೆ. ವೀಡಿಯೊದಲ್ಲಿ ಕಂಡುಬರುವ ಹೆಚ್ಚಿನ ಮಕ್ಕಳು 10 ವರ್ಷಕ್ಕಿಂತ ಕೆಳಗಿನವರಾಗಿದ್ದರು.
ಕರಗಿತು ಮನಸ್ಸು: ಕಾವಲ್ಜೀತ್ ಸಿಂಗ್ ಮಕ್ಕಳನ್ನು ಅವರು ಊಟ ಮಾಡುವ ಸ್ಥಳದ ಬಗ್ಗೆ ತಿಳಿದು ಒಂದು ಕ್ಷಣ ಮಂಕಾಗುತ್ತಾರೆ. ರಸ್ತೆಯ ಕೆಳಗೆ ಇದ್ದ ಒಂದು ಸಣ್ಣ ಅಂಗಡಿಯಲ್ಲಿ ಊಟ ಮಾಡುವುದಾಗಿ ಹೇಳಿದ್ದಾರೆ. ಕೂಡಲೇ ಎಲ್ಲಾ ಮಕ್ಕಳನ್ನು ಕಾರಿನೊಳಗೆ ಹತ್ತಿಸಿಕೊಂಡ ಕಾವಲ್ಜೀತ್ ಸಿಂಗ್, ತನ್ನ ಚಾಲಕನಿಗೆ ಹತ್ತಿರದ 5-ಸ್ಟಾರ್ ಹೋಟೆಲ್‌ಗೆ ಹೋಗುವಂತೆ ಹೇಳುತ್ತಾರೆ.

ಮಕ್ಕಳಲ್ಲಿ ಒಬ್ಬ ಹುಡುಗ ಅವರು ಸಾಮಾನ್ಯವಾಗಿ ತಿನ್ನುವ ಅಂಗಡಿ ಹಿಂದೆ ಇದೆ ಎಂದು ಕಾವಲ್ಜೀತ್ ಅವರಿಗೆ ಹೇಳುವುದನ್ನು ಕಾಣಬಹುದು. ಆದರೆ ಕವಲ್ಜೀತ್ ಸಿಂಗ್ ಮಕ್ಕಳಿಗೆ 5-ಸ್ಟಾರ್ ಹೋಟೆಲ್‌ನಲ್ಲಿ ಭರ್ಜರಿ ಭೋಜನ ಕೊಡಿಸುವ ಬಗ್ಗೆ ಅವರಿಗೆ ಅರಿವಿರಲಿಲ್ಲ. ಹೋಟಲ್ ಬಳಿ ಎಂಟ್ರಿ ಕೊಡುತ್ತಿದ್ದಂತೆ ಸಿಬ್ಬಂದಿ ಮಕ್ಕಳನ್ನು ಹೋಟೆಲ್‌ನೊಳಗೆ ಆಹ್ವಾನಿಸುವುದನ್ನು ಕಂಡು ಮಕ್ಕಳು ಅಚ್ಚರಿಗೊಳ್ಳುವುದನ್ನು ನೋಡಬಹುದು.
ಏಕೆಂದರೆ ಅವರು 5-ಸ್ಟಾರ್ ಹೋಟೆಲ್ ಅನ್ನು ಒಳಗಿನಿಂದ ನೋಡುತ್ತಿರುವುದು ಬಹುಶಃ ಇದೇ ಮೊದಲಾಗಿರಬಹುದು. ಕಾವಲ್ಜೀತ್ ಸಿಂಗ್ ಮತ್ತು ಮಕ್ಕಳು ದುಬಾರಿ ರೆಸ್ಟೊರೆಂಟ್‌ನಲ್ಲಿ ಊಟ ಮಾಡಿ ಒಮ್ಮೆ ಹೊಟ್ಟೆ ತುಂಬಿದ ನಂತರ ಅವರೆಲ್ಲರೂ ಹೋಟೆಲ್‌ನಿಂದ ಹೊರಟರು. ಬಳಿಕ ಟೊಯೊಟಾ ಇನ್ನೋವಾವನ್ನು ಕರೆಸಿ ಮಕ್ಕಳು ಆಯ್ಕೆ ಮಾಡಿದ ಸ್ಥಳದಲ್ಲಿ ಬಿಡಲು ವ್ಯವಸ್ಥೆ ಮಾಡಿದ್ದರು.

ವ್ಯಾಪಾರ, ಮಾಧ್ಯಮ ಸಲಹೆಗಾರ ಮತ್ತು ರಾಜಕೀಯ ವಿಶ್ಲೇಷಕರಾಗಿರುವ ಕಾವಲ್ಜೀತ್ ಸಿಂಗ್, "ನಿಮಗೆ ಕಾಳಜಿ ಇದ್ದರೆ ಹಂಚಿಕೊಳ್ಳಿ. ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾಣುವ ಮಕ್ಕಳು ತಮ್ಮ ಒಂದು ಹೊತ್ತಿನ ಊಟದ ಹಣಕ್ಕಾಗಿ ಕಾರುಗಳನ್ನು ಸ್ವಚ್ಛಗೊಳಿಸುತ್ತಿದ್ದರು. ಕೇವಲ ಹಣ ನೀಡುವ ಬದಲು, ಅದೇ ಊಟವನ್ನು ಪಂಚತಾರಾ ಹೋಟೆಲ್‌ನಲ್ಲಿ ರಾತ್ರಿಯ ಊಟವಾಗಿ ಕೊಡಿಸಿದ್ದೇನೆ.
ಒಟ್ಟಿಗೆ ಕುಳಿತು ಊಟ ಮಾಡಿದ್ದೇನೆ, ಅವರ ಸಂತೋಷವು ನಿಜವಾಗಿತ್ತು. ಅವರು ಊಟವನ್ನು ಆನಂದಿಸುವುದನ್ನು ನೋಡಿದಾಗ ಮನಮುಟ್ಟಿತು. ಅವರು ನನಗೆ ನೂರು ಬಾರಿ ಧನ್ಯವಾದ ಹೇಳುತ್ತಲೇ ಇದ್ದರು. ಅದು ಇಡೀ ಅನುಭವವನ್ನು ಗಾಢವಾಗಿ ಭಾವನಾತ್ಮಕವಾಗಿಸಿತು. ಅಂತಹ ಅನಿರೀಕ್ಷಿತ, ಹೃದಯಸ್ಪರ್ಶಿ ಕ್ಷಣಗಳು ಸಾಧ್ಯವಾಗಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications