ವಾಹನ ಯಾವುದಾದರೇನು... ಸಂಭ್ರಮಾಚರಣೆ ಮುಖ್ಯ: ಬೆಂಝ್ ಕಾರಿನಂತೆ ಡೆಲಿವರಿ ಪಡೆದ ಚಾಯ್ ವಾಲ!
ಸ್ವಂತ ವಾಹನ ಹೊಂದುವುದು ಅನೇಕರ ಕನಸು, ಖರೀದಿಸಿದ ಬಳಿಕ ಆ ಸಂತೋಷವನ್ನು ವಿವಿಧ ರೀತಿಗಳಲ್ಲಿ ಆಚರಿಸುತ್ತಾರೆ. ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ವಾಹನ ಖರೀದಿಯನ್ನು ತೋರಿಸಲು ಫೋಟೋ, ವೀಡಿಯೋಗಳನ್ನು ಹಂಚಿಕೊಂಡು ಸಂಭ್ರಮಿಸುತ್ತಾರೆ. ಆದ್ರೆ ವಾಹನ ಖರೀದಿಸಿ ಆ ವಾಹನಕ್ಕೆ ವೆಚ್ಚಿಸಿದ ಹಣಕ್ಕೆ ದುಪ್ಪಟ್ಟು ಹಣವನ್ನು ಸಂಭ್ರಮಿಸಲು ಖರ್ಚು ಮಾಡುವವರನ್ನು ನೀವು ಎಂದೂ ನೋಡಿರಲು ಸಾಧ್ಯವಿಲ್ಲ. ಹೌದು, ಇಲ್ಲೊಬ್ಬ ವ್ಯಕ್ತಿ ಸಣ್ಣ ಮೊಪೆಡ್ ವಾಹನವನ್ನು EMI ನಲ್ಲಿ ಖರೀದಿಸಿ ದುಪ್ಪಟ್ಟು ಹಣವನ್ನು ಖರ್ಚು ಮಾಡಿ ಡಿಜೆ ಪಾರ್ಟಿ ಹಾಗೂ ನೃತ್ಯಕ್ಕೆ ವೆಚ್ಚಿಸಿದ್ದಾನೆ.
ಮಧ್ಯಪ್ರದೇಶದ ಶಿವಪುರಿ ಎಂಬಲ್ಲಿ ಚಹಾ ಮಾರಾಟ ಮಾಡುವ ಮುರಾರಿ ಲಾಲ್ ಕುಶ್ವಾಹ ಎಂಬಾತ ಇತ್ತೀಚಿಗೆ ಟಿವಿಎಸ್ ಎಕ್ಸ್‌ಎಲ್ ಮೊಪೆಡ್ ವಾಹನದ ಖರೀದಿಯನ್ನು ಅದ್ದೂರಿಯಾಗಿ ಆಚರಿಸಿದ್ದಾನೆ. ಹೊಸ ವಾಹನ ಖರೀದಿಯನ್ನು ವಿಶಿಷ್ಟವಾಗಿ ಆಚರಿಸಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದಾನೆ. ವಾಹನ ಖರೀದಿಯ ಸಂಭ್ರಮಾಚರಣೆಗೆ ಬರೋಬ್ಬರಿ 60,000 ರೂ.ಗಳನ್ನು ಖರ್ಚು ಮಾಡಿದ್ದಾನೆ.

ಸಂಭ್ರಮಾಚರಣೆಗೆ ಅಷ್ಟು ಖರ್ಚಾಗುವುದೇ ಎಂದು ನಿಮಗನಿಸಬಹುದು, ಆದ್ರೆ ಈತ ವಾಹನವನ್ನು ಮೇಲಕ್ಕೆತ್ತಲು ಜೆಸಿಬಿ ಬಾಡಿಗೆ ಪಡೆಯುವುದರ ಜೊತೆಗೆ, ಆಚರಣೆಯಲ್ಲಿ ಡಿಜೆ ಪಾರ್ಟಿ ಮತ್ತು ನೃತ್ಯವನ್ನು ಏರ್ಪಡಿಸಿದ್ದ ಎನ್ನಲಾಗಿದೆ. ಇದಕ್ಕೆ ಕಾರಣ ನೀಡಿರುವ ಮುರಾರಿ ಲಾಲ್ ಕುಶ್ವಾಹ, ಜೆಸಿಬಿಯಿಂದ ವಾಹನವನ್ನು ಎತ್ತಿ ಎಲ್ಲರಿಗೂ ತೋರಿಸುವುದರಿಂದ ತನಗೆ ಖುಷಿ ಸಿಗಲಿದೆ ಎಂದು ಹೇಳಿದ್ದಾನೆ.
ಹಾಗೆಯೇ ತನ್ನ ಕುಟುಂಬ ಮತ್ತು ಸ್ನೇಹಿತರು ವಾಹನವನ್ನು ನೋಡಿ ಸಂಭ್ರಮಿಸಲು ಹಾಗೂ ಇಂತಹ ಆಚರಣೆಗಳು ತಮ್ಮ ಮಕ್ಕಳ ಸಂತೋಷಕ್ಕಾಗಿ ಎಂದು ಹೇಳಿದ್ದಾನೆ. ಆದ್ರೆ ಇಲ್ಲಿ ಎಲ್ಲರಿಗೂ ಅಚ್ಚರಿಗೊಳಿಸುವ ಸಂಗತಿಯೆಂದರೆ ಮುರಾರಿ ಲಾಲ್ ಕುಶ್ವಾಹ 20,000 ರೂ.ಗಳ ಡೌನ್ ಪೇಮೆಂಟ್ ಪಾವತಿಸಿ, ಸಂಭ್ರಮಾಚರಣೆಗೆ ಬರೋಬ್ಬರಿ 60,000 ರೂ.ಗಳನ್ನು ಖರ್ಚು ಮಾಡಿರುವುದು.

ಈ ಸಂಭ್ರಮಾಚರಣೆಗೆ ವೆಚ್ಚಿಸಿದ ಹಣಕ್ಕೆ ಸಾಲವಿಲ್ಲದೇ ವಾಹನವನ್ನು ಖರೀದಿಸಬಹುದಾಗಿತ್ತು. ಆದ್ರೆ ಕುಶ್ವಾಹ ತನ್ನ ಸ್ನೇಹಿತರೊಂದಿಗೆ ಡಿಜೆ ಸಂಗೀತಕ್ಕೆ ನೃತ್ಯ ಮಾಡುತ್ತಾ ಮನೆಯಿಂದಲೇ ಆಚರಣೆಗಳನ್ನು ಪ್ರಾರಂಭಿಸಿ ಶೋರೂಂಗೆ ಮೆರವಣಿಗೆಯಲ್ಲಿ ಬಂದಿದ್ದಾನೆ. ನಂತರ, ಮೊಪೆಡ್ ಅನ್ನು ಹೂಮಾಲೆಯಿಂದ ಅಲಂಕರಿಸಿ, ಆ ಸಂದರ್ಭದ ನೆನಪಿಗಾಗಿ ಶೋರೂಂ ಮುಂದೆ ಹಬ್ಬದ ವಾತಾವರಣವನ್ನು ನಿರ್ಮಿಸಿದ್ದಾನೆ.
ಶಾಕ್ ಕೊಟ್ಟ ಪೊಲೀಸರು: ಈ ಆಚರಣೆಯನ್ನು ಸ್ಥಳೀಯರಂತೆ ಪೊಲೀಸರು ವೀಕ್ಷಿಸಲಿಲ್ಲ. ಶಬ್ದ ಮಾಲಿನ್ಯ ಮಾಡಿದ್ದಕ್ಕಾಗಿ ಮುರಾರಿ ಮತ್ತು ಡಿಜೆ ಆಪರೇಟರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲಿದ್ದ ಸಂಗೀತ ವಾದ್ಯಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ. ಸದ್ಯ ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತಿದ್ದು, ಚಹಾ ಮಾರುವ ಮುರಾರಿ ಲಾಲ್ ಕುಶ್ವಾಹ ಫೆಮಸ್ ಆಗಿದ್ದಾನೆ.
"ನಾನು ನನ್ನ ಕುಟುಂಬವನ್ನು ನೋಡಿಕೊಳ್ಳುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಪ್ರತಿ ಆಚರಣೆಯು ನನ್ನ ಮಕ್ಕಳಿಗೆ ಸಂತೋಷವನ್ನು ತರುವ ಒಂದು ಮಾರ್ಗವಾಗಿದೆ" ಎಂದು ಕುಶ್ವಾಹ ಹೇಳಿಕೊಂಡಿದ್ದಾನೆ. ಈತನಿಗೆ ಪ್ರಿಯಾಂಕಾ ಎಂಬ ಮಗಳು ಮತ್ತು ರಾಮ್ - ಶ್ಯಾಮ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.
ಮುರಾರಿ ಇಂತಹ ಆಚರಣೆಯನ್ನು ಆಯೋಜಿಸುತ್ತಿರುವುದು ಇದೇ ಮೊದಲಲ್ಲ. ಮೂರು ವರ್ಷಗಳ ಹಿಂದೆ, 12,500 ರೂ.ನ ಮೊಬೈಲ್ ಫೋನ್ ಅನ್ನು ಸಾಲದ ಮೇಲೆ ಖರೀದಿಸಿದ್ದ. ಈ ಸಂದರ್ಭವನ್ನು ಸಂಭ್ರಮಿಸಲು ಬರೋಬ್ಬರಿ 25,000 ರೂ. ಖರ್ಚು ಮಾಡಿದ್ದ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications