ಹೆಲ್ಮೆಟ್ ಧರಿಸದ ಯುವಕನನ್ನು ಲಾಠಿಯಿಂದ ಥಳಿಸಿದ ಪೊಲೀಸ್
ದ್ವಿಚಕ್ರ ವಾಹನಗಳಿಗೆ ಅಪಘಾತವಾದಾಗ ತಲೆಗೆ ಪೆಟ್ಟು ಬೀಳುತ್ತದೆ ಎಂಬ ಕಾರಣಕ್ಕೆ ದ್ವಿ ಚಕ್ರ ವಾಹನ ಸವಾರರಿಗೆ ಹಾಗೂ ಹಿಂಬದಿಯ ಸವಾರರಿಗೆ ಹೆಲ್ಮೆಟ್ ಅನ್ನು ಕಡ್ಡಾಯಗೊಳಿಸಲಾಗಿದೆ. ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನದಲ್ಲಿ ಸಂಚರಿಸುವುದು ಕಂಡು ಬಂದರೆ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತದೆ.

ಆದರೂ ಸಹ ಬಹುತೇಕ ದ್ವಿ ಚಕ್ರ ವಾಹನ ಸವಾರರು ಇದನ್ನು ಪಾಲಿಸುವುದೇ ಇಲ್ಲ. ತಿಂಗಳುಗಳ ಹಿಂದೆ ಮದ್ರಾಸ್ ಹೈಕೋರ್ಟ್ ಹೆಲ್ಮೆಟ್ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಿದ ಕಾರಣ ತಮಿಳುನಾಡು ಪೊಲೀಸರು ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸುವವರ ವಿರುದ್ಧ ಅಭಿಯಾನವನ್ನು ಆರಂಭಿಸಿದ್ದಾರೆ.

ಈ ಅಭಿಯಾನದಲ್ಲಿ ಹೆಲ್ಮೆಟ್ ಧರಿಸದೇ ಚಲಿಸುವ ದ್ವಿಚಕ್ರ ವಾಹನಗಳ ತಪಾಸಣೆ ನಡೆಸಲಾಗುತ್ತಿತ್ತು. ಈ ಕಾರ್ಯದಲ್ಲಿ ಪುಲಿಯಂತೊಪ್ಪು ಠಾಣೆಯ ರಮೇಶ್ ಎಂಬ ಎಸ್‍ಎಐ (ಸ್ಪೆಷಲ್ ಅಸಿಸ್ಟೆಂಟ್ ಇನ್ಸ್ ಪೆಕ್ಟರ್)ರವರು ಪಾಲ್ಗೊಂಡಿದ್ದರು.

ಈ ವೇಳೆ ಸುರೇಂದರ್ ಎಂಬ 19 ವರ್ಷದ ಯುವಕ ಹೆಲ್ಮೆಟ್ ಧರಿಸದೇ ಆ ದಾರಿಯಲ್ಲಿ ಬಂದಿದ್ದಾನೆ. ಈ ಕಾರಣಕ್ಕೆ ಸುರೇಂದರ್‍ರವರಿಗೆ ದಂಡ ವಿಧಿಸುವುದಾಗಿ ರಮೇಶ್ ಹೇಳಿದ್ದಾರೆ. ಇದು ಸುರೇಂದರ್ ಹಾಗೂ ರಮೇಶ್‍ರವರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ.

ಇದರಿಂದ ಕುಪಿತಗೊಂಡ ರಮೇಶ್‍ರವರು ತಮ್ಮ ಬಳಿಯಿದ್ದ ಲಾಠಿಯಿಂದ ಸುರೇಂದರ್ ತಲೆಗೆ ಹೊಡೆದಿದ್ದಾರೆ. ಇದರಿಂದ ಸುರೇಂದರ್ ತಲೆಗೆ ಗಾಯವಾಗಿ ರಕ್ತ ಬಂದಿದೆ. ಈ ಘಟನೆಯ ನಂತರ ಸಾರ್ವಜನಿಕರು ಗುಂಪುಗೂಡಿದ್ದಾರೆ.

ಉದ್ರಿಕ್ತರ ಗುಂಪು ರಮೇಶ್‍ರವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದೆ. ವಿಷಯ ತಿಳಿದ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದಾರೆ. ಗಾಯಗೊಂಡ ಸುರೇಂದರ್‍ನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ರಮೇಶ್‍ರವರನ್ನು ಆ ಜಾಗದಿಂದ ಕಳುಹಿಸಿದ್ದಾರೆ.

ಸ್ಥಳದಲ್ಲಿದ್ದ ಜನರು ರಮೇಶ್‍ರವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಈ ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಗಾಯಾಳು ಸುರೇಂದರ್ ಘಟನೆಯ ಬಗ್ಗೆ ದೂರು ನೀಡಿದ್ದಾನೆ.

ಹೆಲ್ಮೆಟ್ ಧರಿಸದಿರುವುದು ಸುರೇಂದರ್‍ನ ತಪ್ಪಾದರೂ ಸ್ಥಳದಲ್ಲಿದ್ದ ಪೊಲೀಸ್ ಆತನ ಕೈ ಮಾಡಿದ್ದು ಸರಿಯಲ್ಲ. ಯಾವ ಕಾರಣಕ್ಕೆ ಮಾತಿನ ಚಕಮಕಿ ನಡೆಯಿತು. ಯಾವ ಕಾರಣಕ್ಕೆ ಪೊಲೀಸ್ ಆ ಯುವಕನ ಮೇಲೆ ಕೈ ಮಾಡಿದರು ಎಂಬುದು ತನಿಖೆಯ ನಂತರ ತಿಳಿದು ಬರಲಿದೆ.


Click it and Unblock the Notifications