Rahul Gandhi: ಟ್ರ್ಯಾಕ್ಟರ್ ಚಾಲಕರಾದ ರಾಹುಲ್ ಗಾಂಧಿ, ಭಾರೀ ಮೆಚ್ಚುಗೆ
'ಭಾರತ್ ಜೋಡೋ ಯಾತ್ರೆ' ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜನ ಸಾಮಾನ್ಯರೊಂದಿಗೆ ಹೆಚ್ಚಾಗಿ ಬೆರೆತು ಕಷ್ಟ ಸುಖವನ್ನು ಆಲಿಸುವ ಮೂಲಕ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇಂದು ಗದ್ದೆಯಲ್ಲಿ ಭತ್ತದ ನಾಟಿ ಮಾಡಲು ರೈತರೊಂದಿಗೆ ಪಾಲ್ಗೊಂಡು ಟ್ರ್ಯಾಕ್ಟರ್ ಓಡಿಸಿ, ಅವರೊಂದಿಗೆ ಕೆಲ ಕಾಲ ಮಾತುಕತೆಯನ್ನು ನಡೆಸಿದ್ದಾರೆ.
ದೆಹಲಿಯಿಂದ ಶಿಮ್ಲಾಕ್ಕೆ ಹೊರಟಿದ್ದ ರಾಹುಲ್ ಗಾಂಧಿ ಅವರು, ಹರಿಯಾಣದ ಸೋನಿಪತ್ ಜಿಲ್ಲೆಯ ಹಳ್ಳಿಯೊಂದರ ಮಾರ್ಗವಾಗಿ ಹೋಗುತ್ತಿದ್ದಾಗ ಬೆಳ್ಳಂಬೆಳ್ಳಗೆ ಭತ್ತ ನಾಟಿ ಮಾಡುತ್ತಿದ್ದ ರೈತರನ್ನು ಕಂಡಿದ್ದಾರೆ. ತಕ್ಷಣವೇ ತಮ್ಮ ಕಾರನ್ನು ನಿಲ್ಲಿಸಿ, ಗ್ರಾಮೀಣ ಭಾಗದ ಯುವಕರಂತೆ ಮೊಣಕಾಲುದ್ದಕ್ಕೆ ಪ್ಯಾಂಟ್ ಮಡಿಸಿಕೊಂಡು ನೇರವಾಗಿ ಗದ್ದೆಗೆ ಇಳಿದು, ಅವರಿಗೆ ಸಹಾಯ ಮಾಡಿದ್ದಾರೆ.

ಜೊತೆಗೆ ರೈತರೊಂದೊಗೆ ಸಂವಾದ ನಡೆಸಿ, ಆ ಬಳಿಕ ಸ್ವತಃ ಅವರೇ ಟ್ರ್ಯಾಕ್ಟರ್ ಚಲಾಯಿಸಿ, ಕಷ್ಟ ಸುಖಗಳನ್ನು ಕೇಳಿ ಎಲ್ಲರ ಗಮನ ಸೆಳೆದಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಇತರೆ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ದಾರೆ. ಇದು, ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ರಾಹುಲ್ ಗಾಂಧಿ ಅವರ ಕಾರ್ಯಕ್ಕೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಕೆಲವೇ ದಿನಗಳ ಹಿಂದೆಯಷ್ಟೇ ದೆಹಲಿಯ ಬೈಕ್ ಗ್ಯಾರೇಜ್‌ಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅವರು, ಅಲ್ಲಿ ಕುಳಿತು, ಬೈಕ್ ಮೆಕ್ಯಾನಿಕ್‌ಗಳ ಜೊತೆ ಮಾತುಕತೆ ನಡೆಸಿ, ಸಮಸ್ಯೆಗಳನ್ನು ಕೇಳಿದ್ದರು. ಅಷ್ಟು ಮಾತ್ರವಲ್ಲದೇ, ಕೆಟ್ಟು ನಿಂತ್ತಿದ್ದ ಬೈಕ್ ಅನ್ನು ಸರಿಪಡಿಸಲು ಯತ್ನಿಸಿದ್ದರು. ಅದರ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದವು.

ಈ ಪೋಸ್ಟ್ ಇಂಟರ್ನೆಟ್ ನಲ್ಲಿ ಸಖತ್ ಹಲ್ ಚಲ್ ಸೃಷ್ಟಿಸಿತ್ತು. ನೆಟ್ಟಿಗರು, ಪರ - ವಿರೋಧ ಪ್ರತಿಕ್ರಿಯೆ ನೀಡಿದ್ದರು. ಹಲವಾರು ರಾಹುಲ್ ಗಾಂಧಿ ಅವರ ಕಾರ್ಯವನ್ನು ಶ್ಲಾಘಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನೂ ಕೆಲವರು ಮುಂಬರುವ ಚುನಾವಣೆಯಲ್ಲಿ ಅವರು, ಹೆಚ್ಚಿನ ಮತಗಳನ್ನು ಪಡೆಯಲು ಈ ರೀತಿಯಾಗಿ ನಾಟಕವಾಡುತ್ತಿದ್ದಾರೆ ಎಂದು ಟೀಕಿಸಿದ್ದರು.
ಕಳೆದ ಮೇ ತಿಂಗಳಲ್ಲಿಯು ರಾಹುಲ್ ಗಾಂಧಿ, ಹರಿಯಾಣದ ಸೋನಿಪತ್ ಹೆದ್ದಾರಿಯಲ್ಲಿರುವ ಡಾಬಾದಲ್ಲಿ ರಾತ್ರಿ ವೇಳೆ ಟ್ರಕ್ ಡ್ರೈವರ್‌ಗಳನ್ನು ಭೇಟಿಯಾಗಿದ್ದರು. ಬಳಿಕ, ಅಂಬಾಲಾವರೆಗೆ ಲಾರಿಯಲ್ಲಿ ತೆರಳಲು ನಿರ್ಧರಿಸಿದ್ದ ಅವರು, ಚಾಲಕನ ಪಕ್ಕದಲ್ಲಿ ಕುಳಿತು ಆತನೊಂದಿಗೆ ಮಾತುಕತೆ ನಡೆಸಿ, ನೋವು ನಲಿವನ್ನು ಆಲಿಸಿದ್ದರು. ಅದು ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.
ರಾಜ್ಯ ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿಯು ರಾಹುಲ್ ಗಾಂಧಿ ಬೆಂಗಳೂರಿನ ಜೀವನಾಡಿ ಬಿಎಂಟಿಸಿ ಬಸ್ಸಿನಲ್ಲಿ ಸಾಮಾನ್ಯ ಪ್ರಯಾಣಿಕರಂತೆ ತೆರಳಿ, ಮಹಿಳಾ ಸಹ ಪ್ರಯಾಣಿಕರೊಂದಿಗೆ ಸಂವಾದ ನಡೆಸಿ, ಸಮಸ್ಯೆಗಳನ್ನು ಕೇಳಿದ್ದರು. ಅದಕ್ಕೂ ಮೊದಲು, ಫುಡ್ ಡೆಲಿವರಿ ಬಾಯ್ ಜೊತೆ ಬೈಕ್ ನಲ್ಲಿ ತೆರಳಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಗೊಂಡಿತ್ತು. ಬಹುತೇಕ ನೆಟ್ಟಿಗರು ಶ್ಲಾಘಿಸಿದ್ದರು.
ತಮಿಳುನಾಡಿನ ಕನ್ಯಾಕುಮಾರಿಯಿಂದ ಜಮ್ಮು - ಕಾಶ್ಮೀರಾದ ಶ್ರೀನಗರದವರೆಗೆ ನಡೆಸಿದ 'ಭಾರತ್ ಜೋಡೋ ಯಾತ್ರೆ' ಬಳಿಕ, ರಾಹುಲ್ ಗಾಂಧಿ ಅವರು ಶ್ರೀಸಾಮಾನ್ಯರೊಂದಿಗೆ ಬೆರೆಯುವುದು ಅಧಿಕವಾಗಿದೆ. ಅದಕ್ಕೆ, ಡೆಲಿವರಿ ಬಾಯ್ ಬೈಕಿನಲ್ಲಿ ತೆರಳವುದು. ಬಿಎಂಟಿಸಿ ಬಸ್ಸಿನಲ್ಲಿ ಸಾಮಾನ್ಯರಂತೆ ಪ್ರಯಾಣಿಸುವುದು, ಟ್ರಕ್ ನಲ್ಲಿ ಹೋಗುವುದು ಹಾಗೂ ಮೆಕ್ಯಾನಿಕ್‌ಗಳನ್ನು ಭೇಟಿಯಾಗುವುದು ಉತ್ತಮ ನಿದರ್ಶನವಾಗಿದೆ.


Click it and Unblock the Notifications