ಸದ್ದಿಲ್ಲದೆ ಕಾರು ಕೊಂಡೊಯ್ದ ಕಾನಿಸ್ಟೇಬಲ್ ವಜಾ... ಜಡ್ಜ್‌ಗೆ ಎಲ್ಲಿಲ್ಲದ ಕೋಪ... ಕಾರು ಯಾರದ್ದು ಗೊತ್ತಾ?
ಹೈಕೋರ್ಟ್ ನ್ಯಾಯಾಧೀಶರ ಮನೆಯಲ್ಲಿ ನೈಟ್ ಗಾರ್ಡ್ ಆಗಿ ನಿಯೋಜಿಸಲಾಗಿದ್ದ ಮಹಾರಾಷ್ಟ್ರದ ಕಾನ್ಸ್ಟೇಬಲ್ ಒಬ್ಬರನ್ನು ಅಪಘಾತ ಮಾಡಿದ ಪ್ರಕರಣದಲ್ಲಿ ಕೆಲಸದಿಂದ ವಜಾಗೊಳಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತಿಳಿಯದಂತೆ ನ್ಯಾಯಾಧೀಶರ ಕಾರನ್ನು ಕೊಂಡೊಯ್ದು ಅಪಘಾತ ಮಾಡಿದ್ದಾರೆ ಎನ್ನಲಾಗಿದೆ.
ಈ ಪ್ರಕರಣ ಸಂಬಂಧ ನಾಗ್ಪುರ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಸೋಮವಾರ ಕಾನಿಸ್ಟೇಬಲ್ ಅಮಿತ್ ಜಿಲ್ಪೆರನ್ನು ಸೇವೆಯಿಂದ ವಜಾಗೊಳಿಸಿದ್ದಾರೆ. ಅಲ್ಲದೇ ಅಪಘಾತಕ್ಕೀಡಾಗಿದ್ದ ಕಾರಿಗೆ ರಿಪೇರಿಗಾಗಿ ಸುಮಾರು 2 ಲಕ್ಷ ರೂ.ಗಿಂತ ಹೆಚ್ಚು ಹಣ ಖರ್ಚಾಗಿದ್ದು, ಸಂಪೂರ್ಣ ಮೊತ್ತವನ್ನು ಕಾನಿಸ್ಟೇಬಲ್ ರಿಂದ ವಸೂಲಿ ಮಾಡಲು ಆದೇಶಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸಾಂಧರ್ಭಿಕ ಚಿತ್ರ
ನಡೆದಿದ್ದೇನು?: ಕಳೆದ ಏಪ್ರಿಲ್ 5 ರಂದು ನ್ಯಾಯಮೂರ್ತಿ ವಾಲ್ಮೀಕಿ ಸಾ ಮೆನೆಜಸ್ ಅವರ ಕುಟುಂಬವು ಹೊರ ಹೋಗಿದ್ದಾಗ ನ್ಯಾಯಾಧೀಶರ ಕಾರನ್ನು ಜಾಲಿ ರೈಡ್ ಹೋಗಲು ಕಾನಿಸ್ಟೇಬಲ್ ಸದ್ದಿಲ್ಲದೆ ಹೊರತಂದಿದ್ದಾರೆ. ಅಪಘಾತದ ಬಳಿಕ ಸದ್ದಿಲ್ಲದೇ ತಂದು ಮರಳಿ ಅದೇ ಸ್ಥಳದಲ್ಲಿ ನಿಲ್ಲಿಸಿದ್ದಾರೆ. ವಾಹನಕ್ಕೆ ಹಾನಿಯಾಗಿರುವುದು ಇನ್ನೊಬ್ಬ ಸಿಬ್ಬಂದಿ ನೋಡಿ ನ್ಯಾಯಾಧೀಶರ ಗಮನಕ್ಕೆ ತಂದಿದ್ದಾರೆ.
ಈ ಬಗ್ಗೆ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ಪ್ರೋಟೋಕಾಲ್ ವಿಭಾಗವು ಠಾಣೆಗೆ ದೂರು ದಾಖಲಿಸಿತ್ತು. ವಾಹನದ ಹಾನಿಯ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ, ಕಾನ್ಸ್ಟೇಬಲ್ ಅಮಿತ್ ಜಿಲ್ಪೆ, ಕುಟುಂಬವು ಹೊರಗೆ ಹೋದ ಸ್ವಲ್ಪ ಹೊತ್ತಿಗೆ ನ್ಯಾಯಾಧೀಶರ ಕಾರಿನಲ್ಲಿ ಸಿವಿಲ್ ಲೈನ್ಸ್ ಬಂಗಲೆಯಿಂದ ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ.
ವಾಹನ ಹೊರತಂದು ಹಲವೆಡೆ ಓಡಾಡಿದ್ದಾರೆ ಎಂದು ತಿಳಿದುಬಂದಿದೆ. ಪಶ್ಚಿಮ ನಾಗ್ಪುರ ಪ್ರದೇಶದ ಫುಟಾಲಾ ಸರೋವರ, ವಾಯುಸೇನಾ ನಗರ ಸೇರಿದಂತೆ ಹಲವೆಡೆ ಹೋಗಿದ್ದರು. ಬಳಿಕ ಕಾರನ್ನು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ವಾಹನದ ಎಡ ಬದಿಯ ಬಾಗಿಲು ತೀರ್ವ ಹಾನಿಗೊಂಡಿತ್ತು. ಬಳಿಕ ಏನೂ ತಿಳಿಯದಂತೆ ಕಾನ್‌ಸ್ಟೇಬಲ್ ಕಾರನ್ನು ಮತ್ತೆ ಬಂಗಲೆಯಲ್ಲಿ ನಿಲ್ಲಿಸಿದರು.
ನಂತರ ಅಮಿತ್ ಜಿಲ್ಪೆ ಅಪಘಾತದ ಬಗ್ಗೆ ಯಾರಿಗೂ ಹೇಳದೇ ಹೊರಟಿದ್ದರು, ಆದರೆ ಬಂಗಲೆಯ ಇನ್ನೊಬ್ಬ ಸಿಬ್ಬಂದಿ ಮರುದಿನ ಕಾರಿಗೆ ಹಾನಿಯಾಗಿದ್ದನ್ನು ಗುರುತಿಸಿ ಪ್ರೋಟೋಕಾಲ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಸದರ್ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಲಾಗಿತ್ತು. ಸದ್ಯ ಕಾರನ್ನು ರಿಪೇರಿಗಾಗಿ ಕಳುಹಿಸಲಾಗಿದ್ದು, ಬರೋಬ್ಬರಿ ರೂ. 2.28 ಲಕ್ಷ ಖರ್ಚಾಗಿದೆ.
ಈ ಕಾನ್‌ಸ್ಟೇಬಲ್ 2016 ರಲ್ಲಿ ಸೇವೆಗೆ ನೇಮಕಗೊಂಡಿದ್ದು, ಈ ಹಿಂದೆಯೂ ವಿವಿಧ ಕಾರಣಗಳಿಂದಾಗಿ ಅಮಾನತುಗೊಂಡಿದ್ದರು. 2019 ರಲ್ಲಿ ನಡೆದ ಇಲ್ಲಿನ ಲೋಕಸಭಾ ಚುನಾವಣೆಯ ಸಮಯದಲ್ಲಿ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಕಾರಣ ಅವರನ್ನು 90 ದಿನಗಳಿಗಿಂತ ಹೆಚ್ಚು ಕಾಲ ಮೊದಲ ಬಾರಿಗೆ ಅಮಾನತುಗೊಳಿಸಲಾಗಿತ್ತು. ಇದೀಗ ವಜಾ ಗೊಳಿಸಿದ್ದು, ಕಾರಿನ ವೆಚ್ಚವನ್ನು ವಸೂಲಿ ಮಾಡಲು ಆದೇಶಿಸಲಾಗಿದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications