ಲಾಕ್ ಡೌನ್ ಹಿನ್ನೆಲೆ: ವಿದೇಶಿಯರನ್ನು ಜೈಪುರದಿಂದ ದೆಹಲಿಗೆ ಕರೆತಂದ ಓಲಾ
ಚೀನಾದ ವುಹಾನ್ ನಗರದಿಂದ ಹರಡಿದ ದ ಕೋವಿಡ್ -19 ವೈರಸ್ ಪ್ರಪಂಚವನ್ನೇ ಬೆಚ್ಚಿಬೀಳಿಸಿದೆ. ಕೋವಿಡ್ -19 ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 70 ಸಾವಿರ ಮುಟ್ಟಿತ್ತಿದೆ. ಈ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಕೋವಿಡ್ -19 ವೈರಸ್ ಹರಡದಂತೆ ತಡೆಯಲು ಜಗತ್ತಿನ ಬಹುತೇಕ ದೇಶಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಭಾರತದಲ್ಲಿಯೂ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಬಸ್, ರೈಲು, ವಿಮಾನ ಸೇವೆಗಳನ್ನು ರದ್ದುಪಡಿಸಲಾಗಿದ್ದು, ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಅನಗತ್ಯವಾಗಿ ಹೊರಬರುವ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಸಾರ್ವಜನಿಕ ಸಾರಿಗೆ ಇಲ್ಲದಿರುವ ಕಾರಣಕ್ಕೆ ತುರ್ತು ಪರಿಸ್ಥಿತಿಗಳಲ್ಲಿ ಹೊರಗೆ ಹೋಗಬೇಕಾದವರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

ಇದೇ ರೀತಿ ರಾಜಸ್ಥಾನದ ಜೈಪುರದಲ್ಲಿ ಸಿಲುಕಿದ್ದ 4 ವಿದೇಶಿಯರಿಗೆ ದೆಹಲಿಯ ಓಲಾ ಕಂಪನಿ ಸಹಾಯಹಸ್ತವನ್ನು ಚಾಚಿದೆ. ಈ ನಾಲ್ವರೂ ಆಸ್ಟ್ರೇಲಿಯಾಕ್ಕೆ ಸೇರಿದವರು, ಇವರಲ್ಲಿ ಇಬ್ಬರು ಮಹಿಳೆಯರಿದ್ದರು. ಈ ನಾಲ್ವರೂ ಶನಿವಾರ ಮಧ್ಯಾಹ್ನ ದೆಹಲಿ ತಲುಪಿದ್ದಾರೆ.

ಲಾಕ್ ಡೌನ್ ಜಾರಿಗೊಳಿಸುವ ಮುನ್ನ ಈ ನಾಲ್ವರೂ ಜೈಪುರದಲ್ಲಿದ್ದರು. ಬಸ್, ರೈಲು, ವಿಮಾನ ವಾಯು ಸೇವೆಗಳನ್ನು ರದ್ದುಪಡಿಸಿದ ಕಾರಣಕ್ಕೆ ಅವರಿಗೆ ಜೈಪುರದಿಂದ ಹೊರ ಬರಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಅವರು ದೆಹಲಿಯಲ್ಲಿರುವ ಆಸ್ಟ್ರೇಲಿಯಾದ ಹೈಕಮಿಷನ್ನರ ಸಹಾಯ ಕೋರಿದ್ದಾರೆ.

ಪರವಾನಗಿ ಹಾಗೂ ಪಾಸ್‌ಗಳನ್ನು ಪಡೆದ ನಂತರ ಓಲಾ ಕಂಪನಿಯು ಈ ನಾಲ್ವರನ್ನು ದೆಹಲಿಗೆ ಕರೆದೊಯ್ದಿದೆ. ಈ ನಾಲ್ವರನ್ನು ದೆಹಲಿಗೆ ಕರೆತರಲು ಓಲಾ ಕಂಪನಿಯು ಅನುಭವಿ ಡ್ರೈವರ್ ಜೊತೆಗೆ ಸೋಂಕು ನಿವಾರಕ ಕಾರಿನ ವ್ಯವಸ್ಥೆಯನ್ನು ಮಾಡಿತ್ತು.

ದೆಹಲಿಗೆ ವಾಪಸಾಗುವ ಮುನ್ನ ಅವರನ್ನು ಜೈಪುರದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಲ್ಲಿ ಯಾರಿಗೂ ಕೋವಿಡ್ -19 ವೈರಸ್ ಸೋಂಕು ಇರಲಿಲ್ಲ. ಸಾರ್ವಜನಿಕ ಸಾರಿಗೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಓಲಾ ಕಂಪನಿಯು ಆಸ್ಟ್ರೇಲಿಯನ್ನರನ್ನು ದೆಹಲಿಗೆ ಕರೆತರಲು ಮುಂದಾಗಿದೆ.

ಓಲಾ ಕಂಪನಿಯು ಕರ್ನಾಟಕದಲ್ಲಿ ಕರೋನಾ ಮಹಾಮಾರಿಗೆ ಚಿಕಿತ್ಸೆ ನೀಡುತ್ತಿರುವ ಡಾಕ್ಟರ್ ಗಳಿಗೆ ಅನುಕೂಲವಾಗುವ ಉದ್ದೇಶದಿಂದ 500 ವಾಹನಗಳನ್ನು ಕರ್ನಾಟಕ ಸರ್ಕಾರಕ್ಕೆ ಪೂರೈಸಲು ಮುಂದಾಗಿದೆ. ಈ ವಾಹನಗಳನ್ನು ಕೋವಿಡ್ -19 ಸಂಬಂಧಿತ ಕಾರ್ಯಾಚರಣೆಗಳಿಗೆ ಬಳಸಲಾಗುತ್ತದೆ. ಕರೋನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿರುವ ಓಲಾ ಕಂಪನಿಯ ಕ್ರಮ ಶ್ಲಾಘನೀಯ.
ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.


Click it and Unblock the Notifications