ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲು ತನ್ನ ಕಾರನ್ನೇ ಆಂಬ್ಯುಲೆನ್ಸ್ ಮಾಡಿದ ಹೃದಯವಂತ..!
ಕೋವಿಡ್ -19 ಇಡೀ ಮಾನವಕುಲಕ್ಕೆ ಅಪಾಯವನ್ನು ತಂದಿಟ್ಟಿದೆ. ಮನುಷ್ಯನಿಂದ ಮನುಷ್ಯನಿಗೆ ವೇಗವಾಗಿ ಹರಡುವ ಈ ವೈರಸ್ ಮತ್ತಷ್ಟು ಹರಡದಂತೆ ತಡೆಗಟ್ಟುವ ಸಲುವಾಗಿ ಭಾರತದಲ್ಲಿ 21 ದಿನಗಳ ಕಾಲ ಲಾಕ್ ಡೌನ್ ಜಾರಿಗೊಳಿಸಲಾಗಿದೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಬಸ್ಸು ಸೇರಿದಂತೆ ಎಲ್ಲಾ ರೀತಿಯ ಸಾರಿಗೆ ಸೇವೆಗಳನ್ನು ರದ್ದುಪಡಿಸಲಾಗಿದೆ. ಇದರಿಂದಾಗಿ ಜನರಿಗೆ ಆಸ್ಪತ್ರೆಗಳಿಗೂ ಹೋಗಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಯುವಕನೊಬ್ಬ ಜನರಿಗೆ ಸಹಾಯ ಮಾಡುತ್ತಿದ್ದಾನೆ.

ಈ ಯುವಕ ತನ್ನ ಕಾರನ್ನು ಆಂಬ್ಯುಲೆನ್ಸ್ ಆಗಿ ಪರಿವರ್ತಿಸಿ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾನೆ. ಜೊತೆಗೆ ಲಾಕ್ ಡೌನ್ ವೇಳೆಯಲ್ಲಿ ಹಲವು ಜನರ ಪ್ರಾಣವನ್ನು ಉಳಿಸಿದ್ದಾನೆ. ಈ ಹೃದಯವಂತ ಯುವಕನ ಹೆಸರು ಗಣೇಶ್ ಭಟ್.

ಉತ್ತರಾಖಂಡದ ತೆಹ್ರಿ ಜಿಲ್ಲೆಯ ದೇವ್‌ಪ್ರಯಾಗ್‌ನ 32 ವರ್ಷದ ಗಣೇಶ್ ಭಟ್ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ ನಂತರ ಹೆಚ್ಚು ಬಿಜಿಯಾಗಿದ್ದಾರೆ. ಅಂದ ಹಾಗೆ ಉತ್ತರಾಖಂಡದಲ್ಲಿ ಸದ್ಯಕ್ಕೆ ಆಂಬ್ಯುಲೆನ್ಸ್ ಸೇವೆಗಳು ದೊರೆಯುತ್ತಿಲ್ಲ.

ಈ ಕಷ್ಟದ ಸಮಯದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದ ಗಣೇಶ್ ಭಟ್ ತನ್ನ ಕಾರನ್ನು ಆಂಬ್ಯುಲೆನ್ಸ್ ಆಗಿ ಬಳಸುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಗಣೇಶ್ ಭಟ್ ರವರು ಆಂಬ್ಯುಲೆನ್ಸ್ ಸೇವೆಗಳು ಲಭ್ಯವಿಲ್ಲದ ಕಾರಣಕ್ಕೆ ಅನೇಕ ಸಮಸ್ಯೆಗಳು ಉಂಟಾಗುತ್ತಿವೆ. ಅದರಲ್ಲೂ ವಿಶೇಷವಾಗಿ ಗರ್ಭಿಣಿಯರು ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ.

ಹೃದಯ ಸಮಸ್ಯೆಗಳಿರುವ ವಯಸ್ಸಾದವರು ಸಹ ಬಳಲುತ್ತಿದ್ದಾರೆ. ಹಾಗಾಗಿ ನಾನು ಅವರಿಗೆ ಸಹಾಯ ಮಾಡುತ್ತಿದ್ದೇನೆ ಎಂದು ಹೇಳಿದರು. 108 ನಂಬರಿಗೆ ಕರೆ ಮಾಡಿದರೆ ಆಂಬ್ಯುಲೆನ್ಸ್ ಇಲ್ಲವೆಂದು ಅಥವಾ ದೂರದಲ್ಲಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಆಂಬ್ಯುಲೆನ್ಸ್ ರೋಗಿಯಿರುವ ಸ್ಥಳಕ್ಕೆ ಬರಲು ತಡವಾಗುತ್ತಿದೆ.

ಅದಕ್ಕಾಗಿಯೇ ಗಣೇಶ್ ಭಟ್ ತಮ್ಮ ಕಾರನ್ನು ಆಂಬ್ಯುಲೆನ್ಸ್ ಆಗಿ ಬದಲಿಸಿದ್ದಾರೆ. ಗಣೇಶ ಭಟ್ ಪ್ರತಿದಿನ ಕಡಿಮೆಯೆಂದರೂ ನಾಲ್ಕು ಜನರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾರೆ. ಅವರು ಇದುವರೆಗೂ 20ಕ್ಕೂ ಹೆಚ್ಚು ಜನರಿಗೆ ಸಹಾಯ ಮಾಡಿದ್ದಾರೆ. ಅಂದ ಹಾಗೆ ಗಣೇಶ್ ಭಟ್ ತಮ್ಮ ನೀಲಿ ಬಣ್ಣದ ಟಾಟಾ ನ್ಯಾನೋವನ್ನು ಆಂಬ್ಯುಲೆನ್ಸ್ ಆಗಿ ಪರಿವರ್ತಿಸಿದ್ದಾರೆ.

ಗಣೇಶ್ ತಮ್ಮ ಮೊಬೈಲ್ ನಂಬರ್ ಗಳನ್ನು ಕಾರಿನ ಮುಂಭಾಗ ಹಾಗೂ ಹಿಂಭಾಗದ ಗ್ಲಾಸುಗಳ ಮೇಲೆ ಲಗತ್ತಿಸಿದ್ದಾರೆ. ತುರ್ತು ಸಂದರ್ಭದಲ್ಲಿ ಗಣೇಶ್ ಭಟ್ ಅವರಿಗೆ ಕರೆ ಮಾಡಿದಾಗಲೆಲ್ಲಾ ಅವರು ಸಹಾಯಕ್ಕಾಗಿ ಧಾವಿಸುತ್ತಾರೆ. ಈ ಬಗ್ಗೆ ಗಣೇಶ್ ಭಟ್ ಮಾರ್ಚ್ 21ರಂದು ಮೊದಲ ಬಾರಿಗೆ ತಮ್ಮ ಫೇಸ್‌ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದರು.

ತಮ್ಮ ಮೊಬೈಲ್ ನಂಬರ್ ಗಳನ್ನು ನೀಡಿ, ವೈದ್ಯಕೀಯ ನೆರವು ಬೇಕಾದರೆ ತಕ್ಷಣ ತಮ್ಮನ್ನು ಸಂಪರ್ಕಿಸುವಂತೆ ಸಾರ್ವಜನಿಕರನ್ನು ಕೋರಿದರು. ಮೊದಲ ಬಾರಿಗೆ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಹೇಳಿರುವ ಅವರು ಅದಾದ ನಂತರ ಹುಡುಗನೊಬ್ಬನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಎಂದು ತಿಳಿಸಿದ್ದಾರೆ.

ಲಾಕ್ ಡೌನ್ ವೇಳೆಯಲ್ಲಿ ಗಣೇಶ್ ಭಟ್ ಅನೇಕರಿಗೆ ಸಹಾಯ ಮಾಡುತ್ತಿದ್ದಾರೆ. ಕಾರನ್ನು ಆಂಬ್ಯುಲೆನ್ಸ್ ಆಗಿ ಬದಲಿಸಿ, ತುರ್ತು ಸಮಯದಲ್ಲಿ ರೋಗಿಗಳಿಗೆ ಸಹಾಯ ಮಾಡುತ್ತಿರುವ ಗಣೇಶ್ ಭಟ್ ರವರ ಕಾರ್ಯಕ್ಕೆ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ.
ಮೂಲ: ದಿ ಬೆಟರ್ ಇಂಡಿಯಾ


Click it and Unblock the Notifications