Delhi Expressway: ಎಕ್ಸ್‌ಪ್ರೆಸ್‌ವೇಯಲ್ಲಿ ಅತಿವೇಗದಲ್ಲಿದ್ದ ಬಸ್, ಹಠಾತ್ತನೇ ದಾರಿ ತಪ್ಪಿತು.. ಭಯ ಬೀಳಿಸುತ್ತೆ ವಿಡಿಯೋ!
ದೇಶದಲ್ಲಿ ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಗತಿ ಹಾಗೂ ಸುರಕ್ಷಿತ ಪ್ರಯಾಣಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಎಕ್ಸ್‌ಪ್ರೆಸ್‌ವೇಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದರೂ, ಅಲ್ಲಿ ನಾನಾ ಕಾರಣಗಳಿಗೆ ಅಪಘಾತಗಳು ಸಂಭವಿಸುತ್ತಲೇ ಇರುತ್ತಿವೆ. ಸದ್ಯ, ಅಂತಹದ್ದೇ ಘಟನೆ ಗುರುವಾರ ವರದಿಯಾಗಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಕೇವಲ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದೆಹಲಿ - ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ (Delhi - Meerut Expressway) ಅತಿವೇಗವಾಗಿ ಬಂದ ಬಸ್ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು, ಕೆಳಗೆ ಬಿದ್ದಿದೆ. ಪರಿಣಾಮ, ಕನಿಷ್ಠ 18 ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಹೇಗೆ ಸಂಭವಿಸಿತು ಎನ್ನುವುದಕ್ಕೆ ಅಲ್ಲೇ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯಗಳು ಸೆರೆಯಾಗಿದೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಈ ಬಸ್, ಮೀರತ್‌ನಿಂದ ದೆಹಲಿಗೆ ತೆರಳುತ್ತಿತ್ತು. ಅತಿವೇಗದಲ್ಲಿ ಚಲಿಸುತ್ತಿದ್ದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಮಸ್ಸೂರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಸಂಜಯ್ ನಗರದ ಸರ್ವೋದಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಈ ಬಸ್ ಚಾಲಕ ನಿದ್ರೆ ಮಂಪರಿನಲ್ಲಿದ್ದ ಕಾರಣ, ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. 'ನಾವು ನೋಡ ನೋಡುತ್ತಿದ್ದಂತೆ ಬಸ್ ಹೆದ್ದಾರಿ ಪಥದಿಂದ ಹೊರಬಂದು, ಡಿವೈಡರ್‌ಗೆ ಡಿಕ್ಕಿ ಹೊಡೆದು ಕೆಳಗೆ ಬಿತ್ತು' ಎಂದು ಸ್ಥಳೀಯರು ಹೇಳಿದ್ದಾರೆ. ಘಟನೆಯ ಸಮಯದಲ್ಲಿ ಆ ಬಸ್‌ನಲ್ಲಿ 20 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅದರಲ್ಲಿ 18 ಮಂದಿ ಗಾಯಗೊಂಡಿದ್ದಾರೆ.

ಭಾರತದಲ್ಲಿ ರಸ್ತೆ ಜಾಲವು ಸುಸಜ್ಜಿತ ಎಕ್ಸ್‌ಪ್ರೆಸ್‌ವೇಗಳೊಂದಿಗೆ ಆಧುನೀಕರಣಗೊಳ್ಳುತ್ತಿದೆ. ಆದರೆ, ಎಷ್ಟು ಚಾಲಕರಿಗೆ ಸಂಚಾರಿ ನಿಯಮಗಳು ವೇಗದ ಮಿತಿಯ ಬಗ್ಗೆ ಅರಿವು ಇರುವುದಿಲ್ಲ. ಆ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಜೊತೆಗೆ ಅವರಿಗೆ ಆಯಾಸವಾದಾಗ ವಿಶ್ರಾಂತಿಯ ಅಗತ್ಯವೂ ಹೆಚ್ಚಿರುತ್ತದೆ. ಆದರೆ, ಬಹುತೇಕರು, ಕೆಲಸದ ಒತ್ತಡ ಮತ್ತು ಅಧಿಕ ವೇತನದ ಸಲುವಾಗಿ ಇವುಗಳನ್ನು ಲೆಕ್ಕಿಸದೇ ಕಾರ್ಯನಿರ್ವಹಿಸುತ್ತಾರೆ.
ಮೋಟಾರ್ ಟ್ರಾನ್ಸ್‌ಪೋರ್ಟ್ ವರ್ಕರ್ಸ್ ಆಕ್ಟ್ (Motor Transport Workers Act) 1961ರ ಸೆಕ್ಷನ್ 13 ಅಡಿಯಲ್ಲಿ ಯಾವುದೇ ಚಾಲಕನಿಗೆ ದಿನದ ಎಂಟು ಗಂಟೆಗಳಿಗಿಂತ ಹೆಚ್ಚು ಅಥವಾ ವಾರದಲ್ಲಿ 48 ಗಂಟೆಗಳಿಗಿಂತ ಹೆಚ್ಚಿನ ಸಮಯ ಕೆಲಸ ಮಾಡಲು ಅನುಮತಿಸಲಾಗುವುದಿಲ್ಲ. ಅದನ್ನು ಮೀರಿ ಕೆಲಸ ಮಾಡಿದಾಗ ಇಂತಹ ಅಪಘಾತಗಳು ಸಂಭವಿಸುತ್ತವೆ.
ಹೆದ್ದಾರಿಯಲ್ಲಿ ವಾಹನ ಚಲಾಯಿಸುವ ಚಾಲಕರು, ಆ ರಸ್ತೆಗೆ ನಿಗದಿಪಡಿಸಿದ ವೇಗಮಿತಿಯಲ್ಲಿ ವಾಹನಗಳನ್ನು ಓಡಿಸಬೇಕು. ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಮದ್ಯಪಾನ ಮಾಡಿ, ಇಲ್ಲವೇ ಫೋನ್ ನಲ್ಲಿ ಮಾತನಾಡಿಕೊಂಡು ವಾಹನ ಚಲಾಯಿಸಬಾರದು. ಕಾರು ಅಥವಾ ಟ್ರಕ್ ಚಲಾಯಿಸುವಾಗ ಕಡ್ಡಾಯವಾಗಿ ಸಿಲ್ಟ್ ಬೆಲ್ಟ್ ಧರಿಸಬೇಕು. ಆಗ ಸಂಭಾವ್ಯ ಅಪಘಾತವನ್ನು ತಪ್ಪಿಸಬಹುದು
ಇನ್ನು, ರಾಜ್ಯದ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲೂ ಅಪಘಾತಗಳ ಸಂಖ್ಯೆ ಹೆಚ್ಚಳವಾಗಿತ್ತು. ಇದನ್ನು ನಿಯಂತ್ರಿಸಲು ರಾಜ್ಯ ಪೊಲೀಸ್ ಇಲಾಖೆ, ಹೆದ್ದಾರಿಯಲ್ಲಿ ಕೃತಕ ಬುದ್ದಿಮತ್ತೆ (AI) ಕ್ಯಾಮೆರಾ ಅಳವಡಿಸಿತ್ತು ಹಾಗೂ ವೇಗದ ಮಿತಿ ಹೇರಿತ್ತು. ಜೊತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಕ್ಸ್‌ಪ್ರೆಸ್‌ವೇಯಲ್ಲಿ ದ್ವಿಚಕ್ರ ವಾಹನ, ಆಟೋ ಮಾತ್ತು ಟ್ರಾಕ್ಟರ್ ಸಂಚಾರವನ್ನು ನಿಷೇಧಿಸಿತ್ತು. ಆ ಬಳಿಕ, ಅಪಘಾತಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications