ನಾಯಿಗೂ ಹೆಲ್ಮೆಟ್ ಹಾಕಿದ ಬೈಕ್ ಸವಾರ..!
ಭಾರತದ ರಸ್ತೆಗಳಲ್ಲಿ ಉಲ್ಲಂಘನೆಯಾಗುವಷ್ಟು ಸಂಚಾರಿ ನಿಯಮಗಳು ಪ್ರಪಂಚದ ಬೇರೆ ಯಾವ ದೇಶದಲ್ಲಿಯೂ ಆಗುವುದಿಲ್ಲ. ಈ ಕಾರಣಕ್ಕೆ ಪ್ರತಿ ವರ್ಷ 1.50 ಲಕ್ಷ ಜನರು ಭಾರತದಲ್ಲಿ ಉಂಟಾಗುವ ರಸ್ತೆ ಅಪಘಾತಗಳಿಂದ ಸಾವನ್ನಪ್ಪುತ್ತಿದ್ದಾರೆ. ವಾಹನ ಸವಾರರ ತಪ್ಪುಗಳಿಂದಾಗಿ ರಸ್ತೆ ಅಪಘಾತಗಳಾಗುತ್ತಿವೆ.

ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸುವುದು, ಕುಡಿದು ವಾಹನ ಚಾಲನೆ ಮಾಡುವುದು, ಸಾರ್ವಜನಿಕ ರಸ್ತೆಗಳಲ್ಲಿ ರೇಸಿಂಗ್ ಮಾಡುವುದು, ಅತಿವೇಗ, ಸೀಟ್ ಬೆಲ್ಟ್ ಧರಿಸದೇ ಇರುವುದು ಸೇರಿದಂತೆ ಹಲವು ರೀತಿಯ ಉಲ್ಲಂಘನೆಗಳನ್ನು ವಾಹನ ಸವಾರರು ಮಾಡುತ್ತಲೇ ಇರುತ್ತಾರೆ.

ದ್ವಿ ಚಕ್ರ ವಾಹನ ಸವಾರರು ಮಾಡುವ ದೊಡ್ಡ ಉಲ್ಲಂಘನೆಯೆಂದರೆ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವುದು. ಭಾರತದಲ್ಲಿ ದ್ವಿಚಕ್ರ ವಾಹನ ಸವಾರ ಹಾಗೂ ಹಿಂಬದಿಯ ಸವಾರರಿಬ್ಬರೂ ಹೆಲ್ಮೆಟ್ ಧರಿಸುವುದು ಕಡ್ಡಾಯ. ಆದರೆ ಬಹುತೇಕ ದ್ವಿಚಕ್ರ ವಾಹನ ಸವಾರರು ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ.

ಚೆನ್ನೈನಲ್ಲಿ ನಡೆದಿರುವ ಘಟನೆಯೊಂದರಲ್ಲಿ ಬೈಕಿನ ಸವಾರನು ತಾನು ಮಾತ್ರ ಹೆಲ್ಮೆಟ್ ಧರಿಸದೆ ತನ್ನ ಹಿಂಬದಿಯಲ್ಲಿ ಕುಳಿತಿರುವ ತನ್ನ ನಾಯಿಗೂ ಸಹ ಹೆಲ್ಮೆಟ್ ಹಾಕಿದ್ದಾನೆ. ಬೈಕಿನ ಹಿಂಬದಿಯಲ್ಲಿ ಈ ನಾಯಿಯು ತನ್ನ ಮಾಲೀಕನ ಭುಜದ ಮೇಲೆ ತನ್ನ ಮುಂಭಾಗದ ಕಾಲುಗಳನ್ನು ಹಾಕಿ ಮನುಷ್ಯರಂತೆಯೇ ಕುಳಿತುಕೊಂಡಿದೆ.

ಈ ಘಟನೆ ನಡೆದಿರುವುದು ಚೆನ್ನೈನಲ್ಲಿರುವ ವಿರುಗಾಂಪಕ್ಕಂನ ಟೆಂಪಲ್ ಸ್ಟ್ರೀಟ್‍ನಲ್ಲಿ. ಈ ಬೈಕಿನ ಹಿಂದೆ ಬರುತ್ತಿದ್ದ ಬೇರೆ ವಾಹನಗಳ ಸವಾರರು ಈ ದೃಶ್ಯವನ್ನು ರೆಕಾರ್ಡ್ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವೀಡಿಯೊ ಫೇಸ್‍ಬುಕ್, ವಾಟ್ಸ್ ಅಪ್, ಟ್ವಿಟರ್ ಸೇರಿದಂತೆ ಬಹುತೇಕ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕರು ಬೈಕ್ ಮಾಲೀಕರನ್ನು ಶ್ಲಾಘಿಸುತ್ತಿದ್ದಾರೆ. ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿ ಮಾಡಲಾಯಿತೇ ಅಥವಾ ಪೊಲೀಸರು ದಂಡ ವಿಧಿಸುತ್ತಾರೆಂಬ ಕಾರಣಕ್ಕೆ ಈ ರೀತಿ ಮಾಡಲಾಯಿತೇ ಎಂಬುದು ತಿಳಿದು ಬಂದಿಲ್ಲ.

ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂಬ ಕಾನೂನನ್ನು ತಮಿಳುನಾಡಿನಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತಂದಿಲ್ಲ. ಈ ಬಗ್ಗೆ ಕೆಲವು ತಿಂಗಳ ಹಿಂದೆ ಮದ್ರಾಸ್ ಹೈಕೋರ್ಟ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತ್ತು. ಇದಾದ ನಂತರ ಎಚ್ಚೆತ್ತ ತಮಿಳುನಾಡು ಪೊಲೀಸರು ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವ ದ್ವಿಚಕ್ರ ವಾಹನ ಸವಾರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪೊಲೀಸರ ಕಾರ್ಯಾಚರಣೆಯಲ್ಲಿ ನೊಂದ ವ್ಯಕ್ತಿ ಪೊಲೀಸರ ವಿರುದ್ಧ ಈ ರೀತಿ ಆಕ್ರೋಶ ವ್ಯಕ್ತಪಡಿಸುತ್ತಿರಬಹುದೆಂದು ಕೆಲವರು ಅಭಿಪ್ರಾಯ ಪಟ್ಟರೆ, ತನ್ನ ನೆಚ್ಚಿನ ನಾಯಿಗೆ ತೊಂದರೆಯಾಗದಿರಲೆಂದು ಈ ರೀತಿ ಹೆಲ್ಮೆಟ್ ಹಾಕಿರಬಹುದೆಂದು ಇನ್ನೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಒಂದು ವೇಳೆ ಅಪಘಾತ ಸಂಭವಿಸಿದರೆ, ತನ್ನ ನೆಚ್ಚಿನ ನಾಯಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಹೆಲ್ಮೆಟ್ ಹಾಕಿರುವ ಸಾಧ್ಯತೆಗಳಿವೆ. ಈ ವೀಡಿಯೊದಿಂದ ಹೆಚ್ಚಿನ ಸಂಖ್ಯೆಯ ಜನರು ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಲು ಮುಂದಾಗಬಹುದು.
ಅಪಘಾತವಾದಾಗ ತಲೆಗೆ ಪೆಟ್ಟು ಬೀಳುವುದನ್ನು ತಪ್ಪಿಸಲು ಹೆಲ್ಮೆಟ್‍ಗಳು ಸಹಕಾರಿಯಾಗುತ್ತವೆ. ಆದರೆ ಜನರು ಕೂದಲು ಉದುರುತ್ತದೆ ಎಂದು ಹಾಗೂ ಬೆವರುತ್ತದೆ ಎಂಬ ಕಾರಣಗಳನ್ನು ನೀಡಿ ಹೆಲ್ಮೆಟ್ ಧರಿಸಲು ಹಿಂದೇಟು ಹಾಕುತಾರೆ. ಈ ವೀಡಿಯೊ ಅವರಿಗೆ ಪಾಠವಾಗಲಿದೆ.

ದ್ವಿ ಚಕ್ರ ವಾಹನದಲ್ಲಿ ಸಂಚರಿಸುವಾಗ ಅಪಘಾತವಾದರೆ ಮೊದಲು ತಲೆಗೆ ಪೆಟ್ಟು ಬೀಳುತ್ತದೆ. ಈ ಕಾರಣಕ್ಕಾಗಿಯಾದರೂ ಜನರು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಾಗ ಗುಣಮಟ್ಟದ ಹೆಲ್ಮೆಟ್‍ಗಳನ್ನು ಧರಿಸುವುದು ಒಳ್ಳೆಯದು.


Click it and Unblock the Notifications