ಕರೋನಾ ವೈರಸ್ ಪರೀಕ್ಷೆಗೆ ಬಂತು ಡ್ರೈವ್-ಥ್ರೂ ಲ್ಯಾಬ್
ಕರೋನಾ ವೈರಸ್ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಎಲ್ಲ ದೇಶಗಳಿಗೂ ಅಪಾರ ಪ್ರಮಾಣದ ಹಾನಿಯನ್ನುಂಟು ಮಾಡಿದೆ. ಇದು ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ಈ ಮಾರಣಾಂತಿಕ ವೈರಸ್ ಗುಣಪಡಿಸಲು ಸಾಕಷ್ಟು ತೊಂದರೆ ಹಾಗೂ ಸವಾಲುಗಳಿವೆ.

ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರೆದಿರುವ ದೇಶಗಳು ಸಹ ಈ ವೈರಸ್ ಗೆ ಪರಿಹಾರ ಕಂಡುಕೊಳ್ಳಲು ಹೆಣಗಾಡುತ್ತಿವೆ. ಈ ಕಾರಣಕ್ಕೆ ವಿಶ್ವದ ಅನೇಕ ದೇಶಗಳು ತಮ್ಮ ನಾಗರಿಕರಿಗೆ ಪ್ರತ್ಯೇಕವಾಗಿರುವಂತೆ, ಮನೆಯಿಂದ ಹೊರಬರದಂತೆ ಸಲಹೆ ನೀಡಿವೆ.

ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ನಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಭಾರತದಲ್ಲಿ ಇದೇ ಪರಿಸ್ಥಿತಿ ಎದುರಾಗಿದೆ. ಈ ವೈರಸ್ ವೇಗವಾಗಿ ಹರಡುತ್ತಿರುವ ಕಾರಣಕ್ಕೆ ಏಪ್ರಿಲ್ 14ರ ನಂತರವೂ ಲಾಕ್ ಡೌನ್ ವಿಸ್ತರಿಸುವ ಸಾಧ್ಯತೆಗಳಿವೆ.

ಭಾರತದಲ್ಲಿರುವ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಮಾತ್ರ ಕರೋನಾ ವೈರಸ್ ಸೋಂಕು ಇರುವುದನ್ನು ಪತ್ತೆ ಹಚ್ಚಲಾಗುತ್ತಿದೆ. ಭಾರತದಂತಹ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಈಗ ಲಭ್ಯವಿರುವ ಸೌಲಭ್ಯಗಳು ಕಡಿಮೆಯಾಗಿವೆ.

ಸದ್ಯದ ಪರಿಸ್ಥಿತಿಯನ್ನು ಎದುರಿಸಲು ಆಯಾ ರಾಜ್ಯಗಳು ಹೊಸ ಲ್ಯಾಬ್ ಗಳನ್ನು ರಚಿಸುತ್ತಿವೆ. ಟೆಸ್ಟ್ ಕಿಟ್ ಗಳನ್ನು ಆಮದು ಮಾಡಿಕೊಳ್ಳುವುದರ ಜೊತೆಗೆ, ಅಭಿವೃದ್ಧಿಪಡಿಸಲಾಗುತ್ತಿದೆ.

ಡಾ. ಡ್ಯಾಂಗ್ಸ್ ಲ್ಯಾಬ್ ಎಂಬ ವೈದ್ಯಕೀಯ ಪ್ರಯೋಗಾಲಯವು ಕರೋನಾಗೆ ಡ್ರೈವ್-ಥ್ರೂ ಪ್ರಯೋಗಾಲಯವನ್ನು ಅಭಿವೃದ್ಧಿಪಡಿಸಿರುವ ಬಗ್ಗೆ ವರದಿಯಾಗಿದೆ. ಇದು ಕರೋನಾಗಾಗಿ ಅಭಿವೃಪಡಿಸಿರುವ ಭಾರತದ ಮೊದಲ ಡ್ರೈವ್-ಥ್ರೂ ಲ್ಯಾಬ್ ಆಗಿದೆ.

ಎಎನ್‌ಐ ವೆಬ್ ಸೈಟ್ ನಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. ಜೊತೆಗೆ ಕಂಪನಿಯು ಮೊಬೈಲ್ ಲ್ಯಾಬ್ ಬಗ್ಗೆ ವೀಡಿಯೊವನ್ನು ಬಿಡುಗಡೆಗೊಳಿಸಿದೆ. ತಪಾಸಣೆಗಾಗಿ ಬರುವವರ ಮಾದರಿಗಳನ್ನು ಕಾರಿನಲ್ಲಿಯೇ ಸಂಗ್ರಹಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಅವರು ಕಾರಿನಿಂದ ಕೆಳಕ್ಕಿಳಿಯುವ ಅವಶ್ಯಕತೆಯಿಲ್ಲ.

ಡ್ರೈವ್-ಥ್ರೂ ಅಂದರೆ ಏನು ಎಂಬ ಪ್ರಶ್ನೆ ಎದುರಾಗಬಹುದು. ಕಾರಿನಲ್ಲಿ ಬಂದು ಮಾದರಿಗಳನ್ನು ನೀಡಿ ಹೋಗುವುದೇ ಈ ಡ್ರೈವ್-ಥ್ರೂ. ಈ ರೀತಿಯ ಲ್ಯಾಬ್ ಗಳು ವಿದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿವೆ. ಈ ಲ್ಯಾಬ್ ದೆಹಲಿಯಲ್ಲಿರುವ ಏಕೈಕ ಡ್ರೈವ್-ಥ್ರೂ ಲ್ಯಾಬ್.

ಡಾ. ಡ್ಯಾಂಗ್ಸ್ ಲ್ಯಾಬ್ ಒಂದು ಲ್ಯಾಬ್‌ಗೆ ಬೇಕಾಗಿರುವ ಎಲ್ಲಾ ಉಪಕರಣಗಳನ್ನು ಈ ಪ್ರಯೋಗಾಲಯದಲ್ಲಿ ಹೊಂದಿದೆ. ಇದನ್ನು ಸಣ್ಣ ಟೆಂಟ್‌ನಂತೆ ವಿನ್ಯಾಸಗೊಳಿಸಲಾಗಿದೆ. ಮಾದರಿಗಳನ್ನು ನೀಡಿದ ನಂತರ ರಶೀದಿಗಾಗಿ ಕಾಯುವ ಅಗತ್ಯವಿಲ್ಲ. ಮಾದರಿಗಳ ವರದಿಯನ್ನು ತೆಗೆದುಕೊಳ್ಳಲು ಲ್ಯಾಬ್‌ಗೆ ಬರುವ ಅಗತ್ಯವಿಲ್ಲ.

ವರದಿಗಳನ್ನು ಇಮೇಲ್ ಹಾಗೂ ಎಸ್‌ಎಂಎಸ್ ಮೂಲಕ ಕಳುಹಿಸಲಾಗುತ್ತದೆ. ಈ ವಿಶೇಷ ಪ್ರಯೋಗಾಲಯದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ವೈರಸ್ ಹರಡದಂತೆ ಸಾಕಷ್ಟು ಭದ್ರತೆ ಒದಗಿಸಲಾಗಿದೆ. ಇಲ್ಲಿನ ಸಿಬ್ಬಂದಿಗೆ ರಕ್ಷಣಾತ್ಮಕ ಉಡುಪು, ಉಪಕರಣ ಹಾಗೂ ಸೋಂಕುನಿವಾರಕಗಳನ್ನು ನೀಡಲಾಗಿದೆ.
ಡಾ. ಡ್ಯಾಂಗ್ಸ್ ಲ್ಯಾಬ್‌ನ ಈ ಸೇವೆ ಪಡೆಯಲು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ನಂತರ ಕರೆ ಮಾಡಿ ಅಪಾಯಿಂಟ್ಮೆಂಟ್ ನೀಡಲಾಗುತ್ತದೆ.

ಕರೋನಾ ವೈರಸ್ ವಿರುದ್ಧ ಹೋರಾಡಲು ಹಲವು ಕಂಪನಿಗಳು ಹಲವು ರೀತಿಯಲ್ಲಿ ಸಹಾಯ ಮಾಡಲು ಮುಂದಾಗಿವೆ. ಡಾ ಡ್ಯಾಂಗ್ಸ್ ಲ್ಯಾಬ್ ಸಹ ಡ್ರೈವ್-ಥ್ರೂ ಟೆಸ್ಟಿಂಗ್ ಲ್ಯಾಬ್ ಮೂಲಕ ನೆರವಾಗುತ್ತಿದೆ.


Click it and Unblock the Notifications