Tunnel Road: ಬೆಂಗಳೂರಿಗೆ ಸುರಂಗ ರಸ್ತೆ ಬೇಡ, ಉಪಮುಖ್ಯಮಂತ್ರಿ ಡಿಕೆಶಿ ಭೇಟಿಯಾದ ತೇಜಸ್ವಿ ಸೂರ್ಯ
ಬೆಂಗಳೂರಿನಲ್ಲಿ (Bengaluru) ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಲು ಸುರಂಗ ರಸ್ತೆ (Tunnel Road) ನಿರ್ಮಾಣಕ್ಕೆ ರಾಜ್ಯ ಸರ್ಕಾರ ಯೋಜಿಸುತ್ತಿದೆ. ಟನೆಲ್ ರೋಡ್ ಬದಲಿಗೆ ಸಾರ್ವಜನಿಕ ಸಾರಿಗೆಯೂ ಹೆಚ್ಚು ಅಗತ್ಯವಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಬ್ಯಾಟಿಂಗ್ ಮಾಡಿದ್ದಾರೆ.
ಬೆಂಗಳೂರಿನ ಮೂಲಭೂತ ಸೌಕರ್ಯ, ಹಲವು ಅಭಿವೃದ್ಧಿ ಕಾರ್ಯಗಳ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಬುಧವಾರ ಭೇಟಿಯಾಗಿ ಚರ್ಚಿಸಲಾಯಿತು ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ. ಬೆಂಗಳೂರು ಮಹಾನಗರದಲ್ಲಿ ಉದ್ದೇಶಿಸಿರುವ ಸುರಂಗ ರಸ್ತೆ ನಿರ್ಮಾಣದ ಬದಲಾಗಿ, ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯತೆ ಇದ್ದು, ರೈಲು ಮಾರ್ಗ ನಿರ್ಮಾಣವಾದರೇ ಸಂಚಾರ ದಟ್ಟಣೆ ನಿಯಂತ್ರಣವಾಗಲಿದೆ ಎಂಬುದನ್ನು ಇದೇ ಸಂದರ್ಭದಲ್ಲಿ ವಿವರಿಸಿದ್ದೇನೆ ಎಂದಿದ್ದಾರೆ.

ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಾರ್ವಜನಿಕ ಸಾರಿಗೆ ಸಂಚಾರ ಉತ್ತೇಜನ ಅತಿದೊಡ್ಡ ಪರಿಹಾರವಾಗಿದ್ದು, ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂಬುದನ್ನು ಮನವರಿಕೆ ಮಾಡಿದ್ದೇನೆ. ಬನಶಂಕರಿ ಮೆಟ್ರೋ ಸ್ಟೇಷನ್ ಹಾಗೂ ಅಲ್ಲಿನ ಬಿಎಂಟಿಸಿ ಬಸ್ ನಿಲ್ದಾಣಗಳ ನಡುವೆ ಸ್ಕೈವಾಕ್ ನಿರ್ಮಾಣಕ್ಕೆ 2019ರಿಂದಲೂ ನಾನು ಒತ್ತಾಯಿಸುತ್ತ ಬಂದಿದ್ದೇನೆ. ಸ್ಕೈ ವಾಕ್ ನಿರ್ಮಾಣದಿಂದ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದ್ದೇನೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಈ ಯೋಜನೆಯು ನೀಲನಕ್ಷೆಯನ್ನು 2019ರಲ್ಲಿಯೇ ತಯಾರಾಗಿದ್ದು, ಬೇಗನೇ ಅನುಷ್ಠಾನಗೊಳಿಸುವಂತೆಯೂ ಕೂಡ ಒತ್ತಾಯಿಸಿದ್ದು, ಶೀಘ್ರ ಕ್ರಮ ಕೈಗೊಳ್ಳುವ ಭರವಸೆಯನ್ನು ಡಿಸಿಎಂ ನೀಡಿದ್ದಾರೆ. ಕಳೆದ 5 - 6 ತಿಂಗಳಿಂದ ಕೆ- ರೈಡ್ & ಬಿಎಂಆರ್‌ಸಿಎಲ್ ಎಂಡಿ ಹುದ್ದೆ ಖಾಲಿಯಿದ್ದು, ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಹುಮುಖ್ಯ ಕಾಮಗಾರಿಗಳಿಗೆ ಪೂರ್ಣಾವಧಿ ಎಂಡಿ ನೇಮಕದ ಅಗತ್ಯತೆ ಬಗ್ಗೆಯೂ ವಿವರಿಸಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ನಮ್ಮ ಮೆಟ್ರೋ ಮಾರ್ಗದ 3ನೇ ಹಂತದ ಕಾಮಗಾರಿಗೆ ಹಿಂದಿನ ಸರ್ಕಾರ ಈಗಾಗಲೇ ಹಸಿರು ನಿಶಾನೆ ತೋರಿಸಿದೆ. ಪರಿಷ್ಕೃತ ಡಿಪಿಆರ್ ಕೇಂದ್ರ ನಗರಾಭಿವೃದ್ಧಿ ಸಚಿವಾಲಯಕ್ಕೆ ಇನ್ನೂ ಸಲ್ಲಿಕೆಯಾಗಿಲ್ಲ. ಡಿಪಿಆರ್ ಸಲ್ಲಿಕೆ ವಿಳಂಬದಿಂದ ನಗರದ ಸಂಚಾರ ದಟ್ಟಣೆ ನಿಯಂತ್ರಣದಲ್ಲಿ ಬಹುಮುಖ್ಯ ಪಾತ್ರ ವಹಿಸುವ ಕಾಮಗಾರಿಗಳು ವಿಳಂಬಗೊಳ್ಳುವ ಸಾಧ್ಯತೆಯಿರುವ ಕುರಿತು ವಿವರಿಸಿದ್ದೇನೆ ಎಂದು ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ.
ಮೆಟ್ರೋ 3ನೇ ಹಂತದ ಕಾಮಗಾರಿಯೊಂದಿಗೆ ಇದೇ ಮಾರ್ಗದಲ್ಲಿ ಬಹು ಆಯಾಮದ ಫ್ಲೈಓವರ್ ನಿರ್ಮಾಣದಿಂದ ವೆಗಾ ಸಿಟಿ ಮಾಲ್ & ನಾಯಂಡಹಳ್ಳಿವರೆಗೆ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂಬುದರ ಬಗ್ಗೆಯೂ ತಿಳಿಸಿದ್ದಾನೆ. ನನ್ನ ಎಲ್ಲ ಮನವಿಗಳಿಗೆ ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಕಳೆದ ತಿಂಗಳು, 190 ಕಿಮೀ ಉದ್ದದ ಸುರಂಗ ರಸ್ತೆ ಯೋಜನೆಗೆ 45 ದಿನಗಳಲ್ಲಿ ಟೆಂಡರ್ ಆಹ್ವಾನಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದರು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಸುರಂಗ ರಸ್ತೆ ಯೋಜನೆಗೆ ಆಸಕ್ತಿ ತೋರಿದ 9 ಕಂಪನಿಗಳಲ್ಲಿ 8 ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ. ಆದಷ್ಟು ಬೇಗ ಕಾರ್ಯಸಾಧ್ಯತಾ ವರದಿ ನೀಡುವಂತೆ ತಿಳಿಸಲಾಗಿದೆ ಎಂದು ತಿಳಿಸಿದ್ದರು.
ಸುರಂಗ ರಸ್ತೆಯಲ್ಲಿ ನಿರ್ಮಾಣಕ್ಕೆ ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆ, ಎಸ್ಟೀಮ್ ಮಾಲ್ ಜಂಕ್ಷನ್ ನಿಂದ ಮೇಖ್ರಿ ಸರ್ಕಲ್, ಮಿಲ್ಲರ್ ಸರ್ಕಲ್, ಚಾಲುಕ್ಯ ಸರ್ಕಲ್, ಟ್ರಿನಿಟಿ ಸರ್ಕಲ್, ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಕನಕಪುರ ರಸ್ತೆಯಿಂದ ಕೃಷ್ಣರಾವ್ ಪಾರ್ಕ್, ತುಮಕೂರು ರಸ್ತೆಯಿಂದ ಯಶವಂತಪುರ ಜಂಕ್ಷನ್, ಹೊರ ವರ್ತುಲ ರಸ್ತೆ, ಗೊರಗುಂಟೆಪಾಳ್ಯ, ಕೆಆರ್ ಪುರಂ, ಸಿಲ್ಕ್ ಬೋರ್ಡ್ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ವರದಿಯಾಗಿತ್ತು.
ಇನ್ನು, ಬೆಂಗಳೂರಿನ ಸುರಂಗ ರಸ್ತೆ ನಿರ್ಮಾಣದ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ತಜ್ಞರ ತಂಡ ಕೂಡ ವರದಿ ಸಲ್ಲಿಸಿದ್ದು, ಇದು ನಗರಕ್ಕೆ ಮಾರಕವಾಗಲಿದೆ ಎಂದು ತಿಳಿಸಿದೆ. ಇದರಿಂದ ಸಂಚಾರ ದಟ್ಟಣೆ ಹಾಗೂ ವಾಯುಮಾಲಿನ್ಯ ಸಮಸ್ಯೆಯನ್ನು ಕಡಿಮೆಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ. ಸುರಂಗ ರಸ್ತೆ ಬದಲಿಗೆ ಮೆಟ್ರೋ ಉತ್ತಮ ಸಾರಿಗೆ ವಿಧಾನವಾಗಿದೆ ಎಂದು ತಿಳಿಸಿದೆ.


Click it and Unblock the Notifications