Video.. ಟೈಟು ಟೈಟು ಫುಲು ಟೈಟು: ಕಾರಿನ ಮೇಲೆ ಹುಚ್ಚಾಟ, ನಶೆ ಇಳಿದ ಮೇಲೆ ಪೊಲೀಸರು ಕೊಟ್ರು ಬಿಗ್ ಶಾಕ್!
ಸಾರ್ವಜನಿಕ ರಸ್ತೆಯಲ್ಲಿ ಕಾರುಗಳಲ್ಲಿ ಸ್ಟಂಟ್ ಮಾಡುವುದು ಯುವಕರಿಗೆ ಫ್ಯಾಶನ್ ಆಗಿಬಿಟ್ಟಿದೆ. ಈ ರೀತಿಯ ಸಾಹನ ಪ್ರದರ್ಶನ ತೋರುವುದು ಅಪರಾಧವೆಂದು ತಿಳಿದಿದ್ದರೂ ಪುನಃ ಪುನಃ ಇದೇ ಕೆಲಸಕ್ಕೆ ಕೈಹಾಕುತ್ತಾರೆ. ಕೆಲವೊಮ್ಮೆ ಅಪಾಯಕಾರಿ ಸ್ಟಂಟ್ ಮಾಡಲು ಹೋಗಿ ಎಷ್ಟೋ ಮಂದಿ ತಮ್ಮ ಜೀವಕ್ಕೆ ಸಂಚಕಾರ ತಂದುಕೊಳ್ಳುತ್ತಾರೆ.
ಸದ್ಯ, ಅಂತಹದ್ದೇ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಪೊಲೀಸರು ವಿಧಿಸಿದ ದಂಡ ಮೊತ್ತಕ್ಕೆ ಆ ಯುವಕರು ಆಘಾತಕ್ಕೆ ಒಳಗಾಗಿದ್ದಾರೆ. ಹರಿಯಾಣದ ರಾಜಧಾನಿ ಗುರುಗ್ರಾಮದಲ್ಲಿ ಯುವಕರ ತಂಡವೊಂದು ನಡುರಸ್ತೆಯಲ್ಲಿ ಚಲಿಸುತ್ತಿರುವ ಮಾರುತಿ ಸುಜುಕಿ ಆಲ್ಟೊ ಕಾರಿನಲ್ಲಿ ಪುಂಡಾಟ ನಡೆಸಿದ್ದು, ಮದ್ಯಪಾನ ಮಾಡಿದ್ದ ಅವರೆಲ್ಲರೂ ಮನಸೋ ಇಚ್ಛೆ ವರ್ತಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಅದರಲ್ಲೂ ವ್ಯಕ್ತಿಯೊಬ್ಬ ಸಂಪೂರ್ಣ ಪಾನಮತ್ತನಾಗಿ ಕಾರಿನ ಮೇಲೆಯೇ ಪುಷ್ಅಪ್ ಮಾಡಿದ್ದಾನೆ. ಆತನ ಸ್ನೇಹಿತರು ಕಿಟಕಿಗಳಿಂದ ಹೊರಬಂದು ಆತನನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ಪೋಸ್ ನೀಡುತ್ತಿದ್ದಾರೆ. ಬಳಿಕ, ಅಲ್ಲೇ ಡ್ಯಾನ್ಸ್ ಕೂಡ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವುದು ಆರಂಭವಾಗಿದ್ದು, ನೆಟ್ಟಿಗರ ಕೆಂಗಣ್ಣಿಗೂ ಗುರಿಯಾಗಿದೆ.
ಈ ವಿಡಿಯೋಗೆ ಟ್ವಿಟರ್ ಬಳಕೆದಾರನೊಬ್ಬ, 'ಕಾನೂನಿನ ಭಯ ಎಷ್ಟಿದೆ ಎಂಬುದು ಇಲ್ಲಿ ಕಾಣಿಸುತ್ತಿದೆ' ಎಂದು ಹೇಳಿದ್ರೆ, ಮತ್ತೊಬ್ಬ, 'ಅವರೆಲ್ಲರೂ ಬದುಕಿನೊಂದಿಗೆ ಆಟವಾಡುತ್ತಿದ್ದಾರೆ' ಎಂದು ಕಾಮೆಂಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹರಿಯಾಣ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಪುಂಡಾಟ ನಡೆಸಿದ ಯುವಕರ ಗುರುತನ್ನು ಪತ್ತೆ ಹಚ್ಚಿ, ರೂ.65,000 ದಂಡ ವಿಧಿಸಿದ್ದಾರೆ.
ಜೊತೆಗೆ ಘಟನೆ ಸಂಬಂಧ ಟ್ವೀಟ್ ಮಾಡಿರುವ ಪೊಲೀಸ್ ಇಲಾಖೆ, 'ಟ್ರಾಫಿಕ್ ನಿಯಮ ಉಲ್ಲಂಘಿಸುವ ಮೂಲಕ ತಮ್ಮ ಹಾಗೂ ಇತರರ ಜೀವಕ್ಕೆ ಅಪಾಯವನ್ನುಂಟು ಮಾಡದಂತೆ ಎಲ್ಲ ವಾಹನ ಸವಾರಲ್ಲಿಯೂ ಮನವಿ ಮಾಡುತ್ತೇವೆ' ಎಂದು ಹೇಳಿದೆ. ಇನ್ನು, ಪೊಲೀಸರು ರಸ್ತೆಯಲ್ಲಿ ಹುಚ್ಚಾಟ ನಡೆಸುವವರಿಗೆ ಎಷ್ಟೇ ದೊಡ್ಡ ಮೊತ್ತದ ದಂಡ ವಿಧಿಸಿದರೂ ಇಂತಹ ಕೆಲಸ ಮಾಡುವುದನ್ನು ನಿಲ್ಲಿಸುವುದೇ ಇಲ್ಲ.
ಇತ್ತಿಚೆಗೆ ಉಡುಪಿಯಲ್ಲಿ ಹೆದ್ದಾರಿಯಲ್ಲೂ ಯುವಕರ ಪುಂಡಾಟ ನಡೆಸಿದ್ದರು. ರಾಷ್ಟ್ರೀಯ ಹೆದ್ದಾರಿ ಎಂದು ಗೊತ್ತಿದ್ದರೂ, ರೋಡ್ ಡಿವೈಡರ್ ಮೇಲೆ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಯುವಕರ ಗುಂಪೊಂದು, ಈ ಅಪಾಯಕಾರಿ ಜಾಲಿರೈಡ್ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿತ್ತು. ಇದು ವೈರಲ್ ಆಗಿ, ದೂರುಗಳು ಬಂದ ಹಿನ್ನೆಲೆ, ಪೊಲೀಸರು ಆ ಯುವಕರನ್ನು ವಶಕ್ಕೆ ಪಡೆದಿದ್ದರು.
ದೇಶದ ಜನಸಂಚಾರಿ ರಸ್ತೆಯಲ್ಲಿ ಸಾಹಸ ಪ್ರದರ್ಶನ ಮಾಡುವುದು ಅಪರಾಧ ಎಂದು ತಿಳಿದಿದ್ದರೂ ಹಲವರು ಬೇಗ ಖ್ಯಾತಿಗಳಿಸಬೇಕೆಂಬ ದುರುದ್ದೇಶದಿಂದ ಇಂತಹ ಕೆಲಸಗಳನ್ನು ಮಾಡುತ್ತಾರೆ. ಪೊಲೀಸರು, ಈ ರೀತಿಯ ಕೃತ್ಯಗಳನ್ನು ವೆಸಗುವವರ ವಿರುದ್ಧ ಎಷ್ಟೇ ದಂಡದ ಅಸ್ತ್ರ ವಿಧಿಸಿದರೂ ಬುದ್ದಿಯನ್ನು ಕಲಿಯುವುದಿಲ್ಲ. ಇಂತಹವರ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಕೈಗೊಂಡರೇ ಅಪಾಯಕಾರಿ ಸ್ಟಂಟ್ ಮಾಡುವುದನ್ನು ಬಿಡಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.


Click it and Unblock the Notifications