ಇನ್ಮುಂದೆ ದುಬೈನಲ್ಲಿ 'ಕ್ವಾಡ್-ಕಾಪ್ಟರ್'ಗಳದ್ದೇ ಸದ್ದು..!!
ಮುಂಬರುವ ಜೂನ್ ಅಂತ್ಯದ ವೇಳೆಗೆ ದುಬೈ ಸರ್ಕಾರ ಚಾಲಕರಹಿತ ಹಾರುವ ಟ್ಯಾಕ್ಸಿಗಳನ್ನು (ಕ್ವಾಡ್-ಕಾಪ್ಟರ್) ಬಿಡುಗಡೆಗೊಳಿಸಲು ಮುಂದಾಗಿದ್ದು, ಹೊಸ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಶ್ರೀಮಂತಿಕೆಯ ತವರು ದುಬೈನಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರಜ್ಞಾನಗಳ ಅಭಿವೃದ್ಧಿ ಹೆಚ್ಚುತ್ತಿದ್ದು, ಇದೀಗ ವಿಶ್ವದಲ್ಲೇ ಮೊದಲ ಬಾರಿಗೆ ಸ್ವಯಂ ಚಾಲಿತ 'ಕ್ವಾಡ್-ಕಾಪ್ಟರ್'ಗಳು ಅಧಿಕೃತ ಸೇವೆ ನೀಡಲು ಸಿದ್ಧಗೊಳ್ಳುತ್ತಿವೆ.

ಚೈನಾ ನಿರ್ಮಾಣದ ಸ್ವಯಂ ಚಾಲಿತ "ಹ್ಯಾಂಗ್ 184" ಹೆಸರಿನ ಈ ವಾಹನವು ಪ್ರತಿ ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲದು. ಜೊತೆಗೆ ಭೂಮಿಯಿಂದ ಸುಮಾರು 300 ಮೀಟರ್ ಎತ್ತರಕ್ಕೆ ಹಾರಬಲ್ಲ ಸಾಮರ್ಥ್ಯ ಹೊಂದಿದೆ.

ಎಲೆಕ್ಟ್ರಿಕ್ ಎಂಜಿನ್ ಹೊಂದಿರುವ ಕ್ವಾಡ್ ಕಾಪ್ಟರ್ ವಾಹನಗಳಿಗೆ 2 ಗಂಟೆಗಳ ಕಾಲ ವಿದ್ಯುತ್ ಪೂರೈಸಿದರೆ 30 ನಿಮಿಷಗಳಷ್ಟು ಕಾಲ ಹಾರಬಲ್ಲದು ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಟ್ಯಾಕ್ಸಿಯಲ್ಲಿ ಕುಳಿತುಕೊಳ್ಳುವ ಪ್ರಯಾಣಿಕ ತಾನು ತಲುಪಬೇಕಾಗಿರುವ ನಿರ್ದಿಷ್ಟ ಸ್ಥಳವನ್ನು ಭೂಪಟದಲ್ಲಿ ಗುರುತಿಸಬೇಕು ಅಷ್ಟೇ, ಉಳಿದ ಎಲ್ಲಾ ಕೆಲಸಗಳನ್ನೂ ತಾನೇ ನೋಡಿಕೊಳ್ಳಲಿದೆ ಈ ಚಮತ್ಕಾರಿ ಟ್ಯಾಕ್ಸಿ.

"ವರ್ಲ್ಡ್ ಗವರ್ನಮೆಂಟ್ ಸಮಿತ್‌ನಲ್ಲಿ ಪ್ರದರ್ಶಿಸಲಾಗಿದ್ದ ಈ ವಾಹನವು ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿರದೆ, ಕಾರ್ಯರೂಪಕ್ಕೂ ತರುತ್ತಿರುವುದು ದುಬೈ ಸರ್ಕಾರದ ಹೆಗ್ಗಳಿಕೆ.

ಇದೇ ಜೂನ್ ಅಂತ್ಯದಲ್ಲಿ ಈ ಚಾಲಕ ರಹಿತ ಟ್ಯಾಕ್ಸಿಗಳು ಅಧಿಕೃತ ಸೇವೆ ಆರಂಭಿಸಲಿದ್ದು, ದುಬೈನ ಸಾರಿಗೆ ಇಲಾಖೆಯ ಮುಖ್ಯಸ್ಥ ಮಟ್ಟರ್ ಅಲ್-ಟಯೆರ್ ಮಾಹಿತಿ ಬಿಡುಗಡೆ ಮಾಡಿದ್ದಾರೆ.

ಎಂಟು ಬಲಿಷ್ಠ ರೆಕ್ಕೆಗಳು ಹೊಂದಿರುವ ಈ ಕ್ವಾಡ್-ಕಾಪ್ಟರ್ ಟ್ಯಾಕ್ಸಿಯು ಎಂತಹ ವಾತಾವರಣದಲ್ಲಿಯೂ ಸಹ ಸಮತೋಲನ ಕಾಯ್ದುಕೊಳ್ಳುವ ವ್ಯವಸ್ಥೆ ಹೊಂದಿದೆ.

ಕ್ವಾಡ್-ಕಾಪ್ಟರ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಹತ್ತಾರು ಸುರಕ್ಷಾ ಕ್ರಮಗಳನ್ನು ಇರಿಸಲಾಗಿದೆ.

ಟ್ರಾಫಿಕ್ ಸಮಸ್ಯೆಯಿಂದ ಬಳಲುವ ಬೃಹತ್ ನಗರಗಳಲ್ಲಿ ಕ್ವಾಡ್-ಕಾಪ್ಟರ್‌ಗಳು ವರದಾನವಾಗಲಿದೆ. ಜೊತೆಗೆ ದುಬೈನಲ್ಲಿ ಇವುಗಳ ಸೇವೆ ಜನಪ್ರಿಯಗೊಂಡಿದ್ದೇ ಆದಲ್ಲಿ, ಮುಂಬರುವ ದಿನಗಳಲ್ಲಿ ವಿಶ್ವದ ಬೃಹತ್ ನಗರಗಳಿಗೆ ಇವುಗಳು ಲಗ್ಗೆಯಿಡುವುದರಲ್ಲಿ ಯಾವುದೇ ಅನುಮಾನವಿಲ್ಲ.


Click it and Unblock the Notifications








