Viral video: ಕಾಡಾನೆ ಕೋಪಕ್ಕೆ ಕಾರಿನಲ್ಲಿದ್ದವರು ದೌಡು... ಪ್ರವಾಸಕ್ಕೆ ಬಂದವರಿಗೆ ಪ್ರಯಾಸ!
ತಮಿಳುನಾಡಿನ ಮೆಟ್ಟುಪಾಳ್ಯಂ - ಕೋಟಗಿರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಟ್ಯಾಕ್ಸಿ ಮೇಲೆ ಕಾಡಾನೆಯೊಂದು ದಾಳಿ ಮಾಡಿದ್ದು, ಕಾರಿನಲ್ಲಿದ್ದ ಪ್ರವಾಸಿಗರು ಮತ್ತು ಚಾಲಕ ಕಾರಿನಿಂದ ಓಡಿಹೋಗಿದ್ದರಿಂದ ಸ್ವಲ್ಪದರಲ್ಲೇ ದಾಳಿಯಿಂದ ಪಾರಾಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ವಿಡಿಯೋ ವೈರಲ್ ಆಗಿದೆ.
ಕಾಡುಪ್ರಾಣಿಗಳು ರಸ್ತೆಗೆ ಇಳಿದು ವಾಹನಗಳಿಗೆ ಹಾಗೂ ಸ್ಥಳೀಯರಿಗೆ ಅಡ್ಡಿಪಡಿಸುವ ಹಲವು ವಿಡಿಯೋಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಹೆಚ್ಚಿನ ಸಂದರ್ಭಗಳಲ್ಲಿ ಕಾಡಾನೆಗಳು ಆಗಾಗ್ಗೆ ಆಹಾರವನ್ನು ಹುಡುಕಿಕೊಂಡು ಕಾಡಿನಿಂದ ಹೊರಬರುತ್ತವೆ. ಅವು ಸಾಮಾನ್ಯವಾಗಿ ಹೊಲಗಳು, ಮನೆಗಳನ್ನು ನಾಶಮಾಡುವುದರ ಜೊತೆಗೆ ಮನುಷ್ಯರ ಮೇಲೂ ದಾಳಿ ಮಾಡುತ್ತವೆ. ಆದರೆ ಇಲ್ಲಿ ಅದೃಷ್ಟವಶಾತ್ ಆನೆ ದಾಳಿಗೆ ಗುರಿಯಾದವರು ಪ್ರಾಣಾಪಯಾದಿಂದ ಪಾರಾಗಿದ್ದಾರೆ.

ತಮಿಳುನಾಡಿನ ಮೆಟ್ಟುಪಾಳ್ಯಂ - ಕೋಟಗಿರಿ ರಾಷ್ಟ್ರೀಯ ಹೆದ್ದಾರಿಯನ್ನು ಹೆಚ್ಚಾಗಿ ಪ್ರವಾಸಿಗರು ಊಟಿ ತಲುಪಲು ಬಳಸುತ್ತಾರೆ. ಇದೇ ರಸ್ತೆಯಲ್ಲಿ ಇತ್ತೀಚೆಗೆ ಪ್ರವಾಸಿಗರು ಪ್ರಯಾಣಿಸುತ್ತಿದ್ದ ಹ್ಯುಂಡೈ ಎಕ್ಸೆಂಟ್ ಕಾರಿನ ಮೇಲೆ ಆನೆ ದಾಳಿ ಮಾಡಿದೆ. ಈ ಕುರಿತ ವಿಡಿಯೋವನ್ನು ಏಷ್ಯಾನೆಟ್ ನ್ಯೂಸ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ.
ವರದಿಯ ಪ್ರಕಾರ, ಪ್ರವಾಸಿಗರು ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದರು, ಅವರು ವಿಡಿಯೋದಲ್ಲಿ ಕಾಣುವ ನಿರ್ದಿಷ್ಟ ಸ್ಥಳಕ್ಕೆ ಬಂದಾಗ ಆನೆಯನ್ನು ರಸ್ತೆಯಲ್ಲಿ ನೋಡಿ ನಿಲ್ಲಿಸಿದ್ದಾರೆ. ಕಾರನ್ನು ಕಂಡ ಆನೆ ಅದರತ್ತ ಓಡತೊಡಗಿದೆ. ಕೊಯಮತ್ತೂರಿನ ಪೊಲ್ಲಾಚಿಯವರು ಎನ್ನಲಾದ ಚಾಲಕ ಸೇರಿದಂತೆ ಕಾರಿನಲ್ಲಿ ಕುಳಿತಿದ್ದವರು ಭಯಭೀತರಾಗಿ ಎಲ್ಲರೂ ಬಾಗಿಲು ತೆರೆದು ಕಾರಿನಿಂದ ಓಡಿಹೋಗಿದ್ದಾರೆ.

ಬಳಿಕ ಆನೆ ಕಾರಿನ ಮೇಲೆ ದಾಳಿ ಮಾಡಿದ್ದು, ಕಿಟಕಿಗಳು ಜಖಂಗೊಂಡಿವೆ. ಆನೆ ಕಾರಿನಲ್ಲಿದ್ದ ವಸ್ತುಗಳನ್ನು ತೆಗೆದು ರಸ್ತೆಯ ಮೇಲೆ ಎಸೆದಿದೆ. ಅಂತೆಯೇ ಕಾರಿನ ಚಾಲಕನ ಬಾಗಿಲಿಗೂ ಹಾನಿ ಮಾಡಿದೆ. ಎದುರಿನಿಂದ ಕಾರಿಗೆ ದಾಳಿ ಮಾಡಿದ ನಂತರ ಆನೆ ಹಿಂಬದಿಯತ್ತ ಸಾಗಿ ಸೊಂಡಿಲಿನಿಂದ ಕಾರಿಗೆ ಬಲವಾಗಿ ಹೊಡೆದು ಕಾರನ್ನು ಮೇಲಕ್ಕೆತ್ತಿ ಕೆಳಕ್ಕೆ ಬಿಟ್ಟಿದೆ. ಹಾಗೆಯೇ ಕಾರನ್ನು ರಸ್ತೆಯಿಂದ ಕೆಳಗೆ ಉರಳಿಸಲು ಪ್ರಯತ್ನಿಸಿದ್ದು, ಆನೆಯನ್ನು ಕಾಡಿಗಟ್ಟಲು ರಸ್ತೆಯಲ್ಲಿದ್ದವರು ಕಿರುಚಾಡುವುದನ್ನು ವಿಡಿಯೋದಲ್ಲಿ ನೋಡಬಹುದು.
ವೀಡಿಯೊದಲ್ಲಿ ಕಾರು ಹಾನಿಗೊಳಗಾದಂತೆ ಕಾಣುತ್ತಿದೆ. ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ಆನೆಯನ್ನು ಮತ್ತೆ ಕಾಡಿಗಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರದೇಶದಲ್ಲಿ ಆನೆಯೊಂದು ವಾಹನದ ಮೇಲೆ ದಾಳಿ ಮಾಡಿರುವುದು ಇದೇ ಮೊದಲು. ಆದರೆ ದೇಶದಲ್ಲಿ ಇಂತಹ ಘಟನೆಗಳು ಲೆಕ್ಕವಿಲ್ಲದಷ್ಟು ದಾಖಲಾಗಿವೆ. ಇತ್ತೀಚೆಗಷ್ಟೆ ಟ್ರಕ್‌ನ ಹಿಂದೆ ನಿಲ್ಲಿಸಿದ್ದ ಬೈಕ್ ಸವಾರರ ಮೇಲೆ ಕಾಡಾನೆ ದಾಳಿಗೆ ಮುಂದಾಗಿತ್ತು. ಸಮಯಕ್ಕೆ ಟ್ರಕ್‌ನೊಳಗೆ ಹತ್ತಿದ ಕಾರಣ ಅವರಿಬ್ಬರೂ ಪಾರಾಗಿದ್ದಾರೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ರಾತ್ರಿಯಲ್ಲಿ ಇಂತಹ ಪ್ರದೇಶಗಳ ಮೂಲಕ ಪ್ರಯಾಣಿಸುವುದನ್ನು ತಪ್ಪಿಸಿ. ಇಂತಹ ಸಂದರ್ಭಗಳು ಎದುರಾದರೆ, ಯಾವಾಗಲೂ ಶಾಂತವಾಗಿ ಕಾರಿನೊಳಗೆ ಇರಲು ಪ್ರಯತ್ನಿಸಿ. ಪ್ರಾಣಿಗಳು ನಿಮ್ಮ ಕಡೆಗೆ ಬರುವುದನ್ನು ನೀವು ನೋಡಿದರೆ, ಹೆಚ್ಚು ಶಬ್ದ ಮಾಡದೆ ನಿಧಾನವಾಗಿ ಕಾರನ್ನು ಹಿಮ್ಮುಖವಾಗಿ ಓಡಿಸಿ. ನಿಮಗೆ ಸಮಯವಿದ್ದರೆ, ಕಾರನ್ನು ಹಿಂದಕ್ಕೆ ಓಡಿಸಲು ಸಾಧ್ಯವಾಗದಿದ್ದರೆ ಸುರಕ್ಷಿತ ಸ್ಥಳಕ್ಕೆ ಓಡುವುದು ಉತ್ತಮ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications