ಮಗಳ ಮದುವೆಯಲ್ಲಿ ಯಾವ ಮಾವಂದಿರೂ ಕೊಡದ ಗಿಫ್ಟ್ ಈ ಅಳಿಯನಿಗೆ ಸಿಕ್ತು..!
ಸಾಮಾನ್ಯವಾಗಿ ಯಾರಾದರೂ ತಮ್ಮ ಮಗಳಿಗೆ ಮದುವೆ ಮಾಡಿ ಕೊಟ್ಟರೆ ಅಳಿಯನಿಗೆ ಬೈಕ್ ಅಥವಾ ಕಾರನ್ನು ಗಿಫ್ಟ್ ಕೊಡುತ್ತಾರೆ. ಬಹಳಷ್ಟು ಕಡೆ ವಿವಾಹ ಸಮಾರಂಭಗಳಲ್ಲಿ ಇದು ವಾಡಿಕೆಯಾಗಿದೆ. ಆದರೆ, ಇಲೊಬ್ಬ ವ್ಯಕ್ತಿ ತನ್ನ ಮಗಳ ಮದುವೆಗೆ ಅಳಿಯನಿಗೆ ವಿಭಿನ್ನವಾಗಿ ಆಲೋಚಿಸಿ, ಬುಲ್ಡೋಜರ್ ಉಡುಗೊರೆಯಾಗಿ ನೀಡಿದ್ದಾನೆ.
ವರದಿಗಳ ಪ್ರಕಾರ, ಉತ್ತರ ಪದೇಶ ಹಮೀರ್‌ಪುರ ಜಿಲ್ಲೆಯ ಸುಮೇರ್‌ಪುರದ ದೇವಗಾಂವ್‌ನಲ್ಲಿ ವಾಸಿಸುತ್ತಿರುವ ನಿವೃತ್ತ ಸೇನಾಪಡೆ ಉದ್ಯೋಗಿ ಪರಶುರಾಮ್ ಪ್ರಜಾಪತಿ ಅವರು, ತಮ್ಮ ಮಗಳು ನೇಹಾ ಅವರನ್ನು ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಗೇಂದ್ರ ಅವರೊಂದಿಗೆ ಅದ್ದೂರಿಯಾಗಿ ವಿವಾಹ ಮಾಡಿಕೊಟ್ಟಿದ್ದಾರೆ. ಇವರ ಮದುವೆ ಸಮಾರಂಭಗಳು ಇದೇ ತಿಂಗಳ 15ರಂದು ನಡೆದಿದ್ದವು. ಮದುವೆ ನಂತರ ವಧುವಿನ ತಂದೆ ವರದಕ್ಷಿಣೆಯಾಗಿ ಬುಲ್ಡೋಜರ್ ನೀಡಿದ್ದರು. ಆ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಬುಲ್ಡೋಜರ್ ಅನ್ನು ಉಡುಗೊರೆಯಾಗಿ ನೀಡುವ ಕಲ್ಪನೆಯು ತುಂಬಾ ಹೊಸದು. ಈ ಹಿಂದೆ, ಇಂತಹ ಘಟನೆ ಎಲ್ಲಿಯೂ ನಡೆದಿಲ್ಲ ಎಂದು ಹೇಳಬಹುದು. ವಧುವಿನ ತಂದೆ ಪರಶುರಾಮ್ ಅಳಿಯನಿಗೆ ವರದಕ್ಷಿಣೆಯಾಗಿ ಕಾರು ನೀಡಿದರೆ, ಅದು ಮನೆ ಮುಂದೆ ನಿಲ್ಲಿಸಲಾಗುತ್ತದೆ. ಆದರೆ, ಬುಲ್ಡೋಜರ್ ಆದಾಯ ತಂದುಕೊಡುತ್ತದೆ ಎಂಬ ಪರಿಕಲ್ಪನೆಯಿಂದ ಈ ಉಡುಗೊರೆ ನೀಡಿದ್ದಾರೆ. 'ಇದೀಗ ತಮ್ಮ ಮಗಳು ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಬುಲ್ಡೋಜರ್ ಬಾಡಿಗೆಯಿಂದ ಆದಾಯ ಬರುವ ಕಾರಣ, ಪತಿಗೆ ತನ್ನ ವಿದ್ಯಾಭಾಸಕ್ಕೆ ಹಣ ಕೇಳುವ ಅವಶ್ಯಕತೆಯಿಲ್ಲ' ಎಂದು ವಧುವಿನ ತಂದೆ ಹೇಳಿದ್ದಾರೆ.
ವಾಸ್ತವವಾಗಿ, ನಮ್ಮ ಜಗತ್ತು ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ಸಾಗುತ್ತಿದೆ. ಹಾಗಾಗಿ, ಜನರ ಆಲೋಚನೆಯು ಬದಲಾಗುತ್ತಿದೆ. ಹಿಂದಿನ ಕಾಲದಲ್ಲಿ ಬಹುತೇಕ ಕೃಷಿಕರೇ ಇದ್ದ ಕಾರಣ, ಹಸು, ಎಮ್ಮೆಗಳನ್ನು ಮದುವೆಗೆ ಉಡುಗೊರೆಯಾಗಿ ನೀಡುತ್ತಿದ್ದರು. ಆ ನಂತರ, ಸೈಕಲ್ ಕೊಡುತ್ತಿದ್ದರು. ಆದರೆ, ಈ ಆಧುನಿಕ ಯುಗದಲ್ಲಿ ಶ್ರೀಮಂತರು ದುಬಾರಿ ಕಾರು ಅಥವಾ ಬೈಕ್‌ಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರೆ, ಮಧ್ಯಮ ವರ್ಗದವರು ತಮ್ಮ ಕೈಗೆಟಕುವ ಬೆಲೆಗೆ ತಕ್ಕಂತೆ ಬೈಕ್ ಅಥವಾ ಕಾರುಗಳನ್ನು ಕೊಡುತ್ತಿದ್ದಾರೆ.
ಈ ಬದಲಾವಣೆಗಳನ್ನು ನೋಡಿದರೆ ಮುಂದಿನ ದಿನಗಳಲ್ಲಿ ಬೇರೆ ಯಾವ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು ಎಂದು ನಾವು ಊಹಿಸಿಕೊಳ್ಳಬಹುದು. ಆದರೆ, ಬುಲ್ಡೋಜರ್ ಅನ್ನು ಉಡುಗೊರೆಯಾಗಿ ನೀಡಿದ ತಂದೆ ದೊಡ್ಡದಾಗಿ ಯೋಚಿಸಿದ್ದರೆ ಎಂದೇ ಹೇಳಬಹುದು. ಏಕೆಂದರೆ, ಬುಲ್ಡೋಜರ್ ಬಾಡಿಗೆಗೆ ಬಿಟ್ಟರೆ ಹೆಚ್ಚು ಹಣ ಗಳಿಸಬಹುದು. ಇದು ಖಂಡಿತವಾಗಿಯೂ ಅವರಿಗೆ ತುಂಬಾ ಉಪಯುಕ್ತವಾಗುತ್ತದೆ. ಈ ರೀತಿಯ ಆಲೋಚನೆಗಳಿಗೆ ಜನರಿಂದ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಪ್ರಸ್ತುತ, ದೇಶದಲ್ಲಿ ವರದಕ್ಷಿಣೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಆದರೆ, ವಧುವಿನ ಪೋಷಕರು, ಅಳಿಯನಿಗೆ ಅವರ ಶ್ರೇಯೋಭಿವೃದ್ಧಿಗಾಗಿ ನಂಬಿಕೆಯಿಟ್ಟು ಏನಾದರೂ ಉಡುಗೊರೆ ಕೊಟ್ಟರೆ ತಪ್ಪಾಗಲಾರದು ಎಂದು ಈಗಾಲೂ ನಂಬುತ್ತಾರೆ. ಈ ಹಿಂದೆಯೂ ಇಂತಹ ಹಲವು ಸಂಗತಿಗಳು ಬೆಳಕಿಗೆ ಬಂದಿವೆ. ಮಗಳು ತವರು ಮನೆಯನ್ನು ಬಿಟ್ಟು ಅತ್ತೆ ಮನೆಗೆ ಹೋದಾಗ, ಅಲ್ಲಿ ಯಾವುದೇ ತೊಂದರೆಯಾಗದಂತೆ ಮತ್ತು ಅವರನ್ನು ಗಂಡನ್ನು ಮನೆಯವರು ಚೆನ್ನಾಗಿ ನೋಡಿಕೊಳ್ಳಲೆಂದು ದುಬಾರಿ ಉಡುಗೊರೆಗಳನ್ನು ನೀಡಲು ಮುಂದಾಗುತ್ತಾರೆ.
ಬುಲ್ಡೋಜರ್‌ಗಳಂತಹ ದೈತ್ಯ ವಾಹನಗಳು ದಿನನಿತ್ಯದ ಪ್ರಯಾಣಕ್ಕೆ ಕಾರು, ಬೈಕ್ ರೀತಿ ಉಪಯುಕ್ತವಾಗದಿರಬಹುದು. ಆದರೆ, ಇತ್ತೀಚಿನ ದಿನಗಳಲ್ಲಿ ಅವು ತುಂಬಾ ಬೇಡಿಕೆಯಲ್ಲಿವೆ. ಯಾವುದೇ ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ಬುಲ್ಡೋಜರ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಮನುಷ್ಯರು ಮಾಡಲಾಗದ ಕೆಲಸಗಳನ್ನೂ ವೇಗವಾಗಿ ಮಾಡುತ್ತವೆ. ಇದರಿಂದ ಸಮಯ ಸಾಕಷ್ಟು ಉಳಿತಾಯವಾಗುತ್ತದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಆದಾಯ ಗಳಿಸುವ ದೃಷ್ಟಿಯಿಂದ ಪರಶುರಾಮ ಪ್ರಜಾಪತಿ ತಮ್ಮ ಅಳಿಯನಿಗೆ ಬುಲ್ಡೋಜರ್ ಅನ್ನು ಬಹುಶಃ ಉಡುಗೊರೆಯಾಗಿ ನೀಡಿರಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications