ಸಾವಿರಾರು ಕೋಟಿ ವೆಚ್ಚ: ಅಟಲ್ ಸೇತುವೆಗೆ ಆರಂಭದಲ್ಲೆ ಆತಂಕ: ಪ್ರಯಾಣಿಕರಿಗೆ ಪೊಲೀಸರ ವಾರ್ನಿಂಗ್
ಇತ್ತೀಚೆಗೆ ಉದ್ಘಾಟನೆಗೊಂಡ ಅಟಲ್ ಬಿಹಾರಿ ವಾಜಪೇಯಿ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ಸಾರ್ವಜನಿಕರಿಂದ ಹೆಚ್ಚು ಗಮನ ಸೆಳೆಯುತ್ತಿದೆ. ಈ 21.8 ಕಿಮೀ ಉದ್ದದ ಸಮುದ್ರ ಸಂಪರ್ಕವು ದೇಶದ ಅತಿ ಉದ್ದದ ಸೇತುವೆಯಾಗಿದೆ. ಮುಂಬೈನ ನವಿ ಮುಂಬೈ ಮತ್ತು ಸೆವ್ರಿಯನ್ನು ಇದು ಸಂಪರ್ಕಿಸುತ್ತದೆ.
ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಸಮುದ್ರ ಸಂಪರ್ಕದ ಸೇತುವೆಯನ್ನು ಉದ್ಘಾಟಿಸಿದರು. ಅಂದಿನಿಂದ ಸೇತುವೆ ಕರಿತ ಅನೇಕ ವೀಡಿಯೊಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡಿವೆ. ಹಲವರು ಸಮುದ್ರ ಸೇತುವೆಯ ಮೇಲೆ ನಿಂತು ವೀಕ್ಷಣೆಯನ್ನು ಆನಂದಿಸಿ ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಇನ್ನೂ ಕೆಲವರು ತಿಂಡಿ-ತಿನಿಸುಗಳನ್ನು ಎಲ್ಲಂದರಲ್ಲಿ ಎಸೆದು ಹೋಗಿದ್ದಾರೆ.

ಸಾವಿರಾರು ಕೋಟಿ ರೂ.ಗಳನ್ನು ವೆಚ್ಚಿಸಿ ನಿರ್ಮಿಸಿರುವ ಹೊಸ ಸೇತುವೆಗೆ ಆರಂಭದಲ್ಲೇ ಇಂತಹ ಕೃತ್ಯಗಳಿಂದ ಹಾಳಾಗುತ್ತಿರುವುದು ಅಲ್ಲಿನ ಆಡಳಿತವನ್ನು ಕೆರಳಿಸಿದೆ. ಇದರ ವಿರುದ್ಧ ಮುಂಬೈ ಪೊಲೀಸರು ಮುಂದೆ ಬಂದಿದ್ದು, ಸೇತುವೆ ಮೇಲೆ ವಾಹನ ನಿಲ್ಲಿಸದಂತೆ ವಾಹನ ಸವಾರರನ್ನು ಕೋರಿದ್ದಾರೆ. ತಮ್ಮ ಕಾರುಗಳನ್ನು ನಿಲ್ಲಿಸಿ ನಿಯಮ ಉಲ್ಲಂಘಿಸುವವರ ವಿರುದ್ಧ ಎಫ್‌ಐಆರ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅಟಲ್ ಸೇತುವೆ ಖಂಡಿತವಾಗಿಯೂ 'ವೀಕ್ಷಿಸಲು ಯೋಗ್ಯವಾಗಿದೆ' ಎಂದು ನಾವು ಒಪ್ಪುತ್ತೇವೆ. ಆದರೆ ವಾಹನಗಳನ್ನು ನಿಲ್ಲಿಸುವುದು ಮತ್ತು ಫೋಟೋಗಳನ್ನು ತೆಗೆಯುವುದು ಕಾನೂನುಬಾಹಿರ. ನೀವು MTHL (ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್) ನಲ್ಲಿ ನಿಲ್ಲಿಸಿದರೆ ಖಂಡಿತ FIR ಎದುರಿಸಬೇಕಾಗುತ್ತದೆ. ಅಟಲ್ ಸೇತುವೆ 21.8 ಕಿಮೀ ಉದ್ದದ ಪಿಕ್ನಿಕ್ ಸ್ಪಾಟ್ ಅಲ್ಲ ಎಂದು ಮುಂಬೈ ಪೊಲೀಸರು ತಮ್ಮ x (ಟ್ವಿಟರ್) ಹ್ಯಾಂಡಲ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಕಳೆದ ಶುಕ್ರವಾರ ಸೇತುವೆ ಉದ್ಘಾಟನೆಗೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಸೇತುವೆಯ ಮೇಲೆ ವಾಹನ ಸಂಚಾರ ಆರಂಭವಾಯಿತು. ಜನರು ತಮ್ಮ ಕಾರಿನ ರೂಫ್ ಮೇಲೆ ಕುಳಿತು ವೀಕ್ಷಣೆಯನ್ನು ಆನಂದಿಸುತ್ತಿರುವ ವೀಡಿಯೊಗಳು ಹರಿದಾಡುತ್ತಿವೆ. ಬಹುತೇಕರು ತಮ್ಮ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರಿಂದ ಇತರ ಸವಾರರಿಗೆ ತೊಂದರೆಯಾಗುತ್ತಿತ್ತು. ಅಲ್ಲದೇ ಸೇತುವೆ ಮೇಲೆ ಗಲೀಜು ಮಾಡಲಾಗುತ್ತಿದೆ. ಇಂತಹ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಪೊಲೀಸರು ಇದಕ್ಕೆ ಕಡಿವಾಣ ಹಾಕಲು ನಿರ್ಧರಿಸಿದ್ದಾರೆ.
ಮುಂಬೈ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಸೇತುವೆಯ ಮೇಲೆ ವಾಹನಗಳು ಅತಿ ವೇಗದಲ್ಲಿ ಹಾದು ಹೋಗುತ್ತವೆ. ಭಾರೀ ವಾಹನಗಳು ಸಹ ಇದೇ ಸೇತುವೆಯನ್ನು ಬಳಸುತ್ತವೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು. ಒಂದು ನಿರ್ಲಕ್ಷ್ಯದ ಕ್ರಿಯೆಯು ಸಮುದ್ರದ ಮಧ್ಯದಲ್ಲಿರುವ ಸೇತುವೆಯ ಮೇಲೆ ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.
ರಾಜಕಾರಣಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ: ಸೇತುವೆ ಮೇಲೆ ವಾಹನಗಳನ್ನು ಅನಗತ್ಯವಾಗಿ ನಿಲ್ಲಿಸಿದ್ದವರ ವಿರುದ್ಧ ಪೊಲೀಸರು ಈಗಾಗಲೇ 264 ವಾಹನ ಚಾಲಕರಿಗೆ ದಂಡ ವಿಧಿಸಿದ್ದಾರೆ. ಈ ಸೇತುವೆಯ ಮೇಲೆ ವಾಹನಗಳನ್ನು ನಿಲ್ಲಿಸಿದ ಜನರ ವಿರುದ್ಧ ಪೊಲೀಸರು ದಂಡ ವಿಧಿಸುತ್ತಿದ್ದರೆ, ಇತ್ತ ರಾಜಕಾರಣಿಗಳು ಅದೇ ಸೇತುವೆಯ ಮೇಲೆ ಇದೇ ಕೆಲಸವನ್ನು ಮಾಡುತ್ತಿರುವ ವೀಡಿಯೊಗಳಿಗೆ ನಾಗರಿಕರು ಸಹ ಪ್ರತಿಕ್ರಿಯಿಸಲು ಪ್ರಾರಂಭಿಸಿದ್ದಾರೆ.
ಇತ್ತೀಚೆಗೆ, ಮಾಜಿ ಲೋಕಸಭಾ ಸದಸ್ಯ ಮತ್ತು ಭಾರತೀಯ ಜನತಾ ಪಾರ್ಟಿಯ ಮಹಾರಾಷ್ಟ್ರ ಘಟಕದ ಪ್ರಸ್ತುತ ಉಪಾಧ್ಯಕ್ಷ ಕಿರಿತ್ ಸೋಮಯ್ಯ ಅವರು, ಸೇತುವೆಯ ಬದಿಯಲ್ಲಿ ಅವರ ಅಧಿಕೃತ ವಾಹನ ಸೇರಿದಂತೆ ಭದ್ರತಾ ತಂಡದ ವಾಹನಗಳನ್ನು ನಿಲ್ಲಿಸಿರುವ ವಿಡಿಯೋ ವೈರಲ್ ಆಗಿದೆ. ಕಾನೂನನ್ನು ಉಲ್ಲಂಘಿಸಿದ ರಾಜಕಾರಣಿಯ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೀರಾ? ಕಾನೂನು ಅವರಿಗೆ ಅನ್ವಯಿಸುವುದಿಲ್ಲವೇ ಎಂದು ಮುಂಬೈ ಪೊಲೀಸರನ್ನು ಪ್ರಶ್ನಿಸಿದ್ದಾರೆ.


Click it and Unblock the Notifications