ಕುರುಡಾಗಿ ಗೂಗಲ್ ಮ್ಯಾಪ್ಸ್ ನಂಬಬೇಡಿ: ಜೀವ ಉಳಿಸಿಕೊಂಡಿದ್ದೆ ಅಚ್ಚರಿ! ವಿಡಿಯೋ ನೋಡಿ
ಗೂಗಲ್ ಮ್ಯಾಪ್ಸ್ ಅನುಸರಿಸಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವ್ಯಕ್ತಿಗಳು ಕಾರಿನ ಸಮೇತ ನದಿಗೆ ಬಿದ್ದಿರುವ ಘಟನೆ ಕೇರಳದಲ್ಲಿ ನಡೆದಿದೆ. ಅವಘಡದ ಕುರಿತು ತಿಳಿಯುತ್ತಿದ್ದಂತೆ ರಕ್ಷಣಾ ತಂಡ ಮತ್ತು ಸ್ಥಳೀಯರು ಕ್ಷಣಾರ್ಧದಲ್ಲಿ ಸ್ಥಳಕ್ಕೆ ತಲುಪಿ ಅವರನ್ನು ರಕ್ಷಿಸಿದ್ದಾರೆ. ಘಟನೆಯ ಬಳಿಕ ಕಾರು ಸ್ಥಳದಿಂದ ಸುಮಾರು ಒಂದು ಕಿ.ಮೀ ದೂರದಲ್ಲಿ ಪತ್ತೆಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು 'ವಾರ್ತಾ ಮಲಯಾಳಂ ನ್ಯೂಸ್' ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದೆ. ವರದಿಗಳ ಪ್ರಕಾರ, ನಿನ್ನೆ ಮುಂಜಾನೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದವರು ಬೇತೂರ್ಪಾರಾ - ಪಾಂಡಿ ಅರಣ್ಯ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಕಾರಿನಲ್ಲಿದ್ದವರು ಕಾಸರಗೋಡಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಆಸ್ಪತ್ರೆಗೆ ಹೋಗುತ್ತಿದ್ದರು. ಅವರು ಬಹುಶಃ ಈ ಮಾರ್ಗಕ್ಕೆ ಹೊಸಬರಾಗಿರಬಹುದಾಗಿದ್ದು, ತಮ್ಮ ಗಮ್ಯಸ್ಥಾನವನ್ನು ತಲುಪಲು ಗೂಗಲ್ ಮ್ಯಾಪ್ ಬಳಸುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಮುಂದೆ ಸೇತುವೆ ಇದೆ ಎಂಬುದು ಅವರಿಗೆ ತಿಳಿದಿರಲಿಲ್ಲ. ಸೇತುವೆಗೆ ಯಾವುದೇ ರೇಲಿಂಗ್ ಕೂಡ ಇರಲಿಲ್ಲ. ಇದು ರಸ್ತೆಯ ಜಲಾವೃತ ಭಾಗ ಎಂದು ಚಾಲಕ ಭಾವಿಸಿ ಕಾರನ್ನು ನೇರವಾಗಿ ಓಡಿಸಿ ನದಿಗೆ ಬಿದ್ದಿದ್ದಾರೆ.

ಏನಾಯಿತು ಎಂದು ಅರಿತುಕೊಳ್ಳುವ ಹೊತ್ತಿಗೆ ತುಂಬಾ ತಡವಾಗಿತ್ತು. ಇಬ್ಬರು ಕಾರಿನ ಕಿಟಕಿಯಿಂದ ಹೊರ ಬಂದು ಜೀವ ಉಳಿಸಿಕೊಂಡಿದ್ದಾರೆ. ಮುಂಜಾನೆಯಾದ್ದರಿಂದ ಮಸುಕಿನಲ್ಲಿ ನದಿಯಿಂದ ಆಚೆ ಬರಲು ತಿಳಿಯದ ಪರಿಸ್ಥಿತಿಯಲ್ಲಿ ಕೆಲವು ಪೊದೆಗಳು ಮತ್ತು ಸಣ್ಣ ಗಿಡಗಳನ್ನು ಹೊಂದಿರುವ ಜಾಗವನ್ನು ಗುರುತಿಸಿ ಸುರಕ್ಷಿತ ಸ್ಥಳವನ್ನು ಕಂಡುಕೊಂಡಿದ್ದಾರೆ. ನಂತರ ತಮ್ಮ ಸಂಬಂಧಿಕರು ಮತ್ತು ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿ ಕರೆಸಿಕೊಂಡಿದ್ದಾರೆ.
ಈ ಅಪಘಾತ ಸಂಭವಿಸಿದ ಸೇತುವೆ ಹಳೆಯದಾಗಿದ್ದು, ಇದು ತುಂಬಾ ಎತ್ತರವಾಗಿರಲಿಲ್ಲ. ಆದರೆ ಮಳೆಗಾಲದಲ್ಲಿ, ನದಿಯ ನೀರಿನ ಮಟ್ಟ ಹೆಚ್ಚಾದಾಗ ಸೇತುವೆ ಜಲಾವೃತಗೊಳ್ಳುತ್ತದೆ. ನಾಲ್ಕು ವರ್ಷಗಳ ಹಿಂದೆ, ಅಧಿಕಾರಿಗಳು ಹೊಸ ಸೇತುವೆಯನ್ನು ನಿರ್ಮಿಸಿದ್ದರು. ಇದು ಹಳೆಯ ಸೇತುವೆಯಾಗಿದ್ದು, ಹೊಸ ಸೇತುವೆ 500 ಮೀಟರ್ ದೂರದಲ್ಲಿದೆ. ಗೂಗಲ್ ಮ್ಯಾಪ್ಸ್ ಹೊಸ ಮಾರ್ಗವನ್ನು ಅಪ್‌ಡೇಟ್ ಮಾಡಿಲ್ಲ.

ಗೂಗಲ್ ಮ್ಯಾಪ್ಸ್ ಅಥವಾ ನ್ಯಾವಿಗೇಷನ್ ಎಂಬುದು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಉತ್ತಮ ಮಾರ್ಗವನ್ನು ಕಂಡುಹಿಡಿಯಲು ಬಹುತೇಕ ಎಲ್ಲರೂ ಬಳಸುವ ವೈಶಿಷ್ಟ್ಯವಾಗಿದೆ. ಇದು ಹೆಚ್ಚಿನ ನಗರಗಳಲ್ಲಿ ದೋಷರಹಿತವಾಗಿ ಕಾರ್ಯನಿರ್ವಹಿಸುತ್ತದೆಯಾದರೂ, ಕೆಲವೊಮ್ಮೆ ಮ್ಯಾಪ್ಸ್ ಅನುಸರಿಸಿದವರ ಜೀವವನ್ನು ಅಪಾಯಕ್ಕೆ ತಳ್ಳಿದ ಸಂದರ್ಭಗಳು ಕೂಡ ಇವೆ.
ಇತ್ತೀಚೆಗೆ, ಫೋರ್ಡ್ ಎಂಡೀವರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದು ನದಿಗೆ ಬಿದ್ದಿತ್ತು. ಹೈದರಾಬಾದ್‌ನಿಂದ ಮುನ್ನಾರ್‌ಗೆ ಪ್ರವಾಸಕ್ಕೆ ಹೊರಟು ಕೊಟ್ಟಾಯಂ ಜಿಲ್ಲೆಯ ಅಲಪ್ಪುಳಕ್ಕೆ ತಲುಪಿದಾಗ ಈ ಅಪಘಾತ ಸಂಭವಿಸಿದೆ. ಭಾರಿ ಮಳೆಯಿಂದಾಗಿ ಅವರು ಪ್ರಯಾಣಿಸುತ್ತಿದ್ದ ರಸ್ತೆ ಜಲಾವೃತವಾಗಿತ್ತು. ರಸ್ತೆಗಳ ಪರಿಚಯವಿಲ್ಲದ ಕುಟುಂಬವು ಗೂಗಲ್ ನಕ್ಷೆಗಳನ್ನು ಕುರುಡಾಗಿ ಅನುಸರಿಸಿ ನೇರವಾಗಿ ನದಿಗೆ ಬಿದ್ದಿತ್ತು.

ನೀವು ಹೊಸ ಸ್ಥಳಕ್ಕೆ ಪ್ರಯಾಣಿಸುತ್ತಿದ್ದರೆ ಮತ್ತು ಮಾರ್ಗದ ಪರಿಚಯವಿಲ್ಲದಿದ್ದರೆ, ನಕ್ಷೆಗಳನ್ನು ಕುರುಡಾಗಿ ಅನುಸರಿಸುವ ಬದಲು ದಾರಿಯಲ್ಲಿ ಸ್ಥಳೀಯರನ್ನು ಕೇಳುವುದು ಒಳ್ಳೆಯದು. ಕೇಳಲು ರಸ್ತೆಯಲ್ಲಿ ಯಾರನ್ನೂ ಕಾಣದಿದ್ದರೆ, ಎಚ್ಚರಿಕೆಯಿಂದ ವಾಹನ ಚಲಾಯಿಸಿ. ಯಾವುದೇ ಕಾರಣಕ್ಕೂ ಮ್ಯಾಪ್ಸ್ ಅನ್ನು ಕುರುಡಾಗಿ ಅನುಸರಿಸುವ ಮೊದಲು ಸುತ್ತಮುತ್ತಲಿನ ಪ್ರದೇಶಗಳನ್ನು ಪರಿಶೀಲಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








