ಗದಗ: ಶಕ್ತಿ ಯೋಜನೆ ಎಫೆಕ್ಟ್.. ಸಾರಿಗೆ ಬಸ್‌ನಲ್ಲಿ ಸೀಟ್ ಸಿಗಲಿಲ್ಲ, ಈ ತಾಯಿಯ ಕಷ್ಟ ದೇವರಿಗೆ ಪ್ರೀತಿ!
ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಆಡಳಿತರೂಢ ಕಾಂಗ್ರೆಸ್ ಸರ್ಕಾರ, ಜೂನ್ 11ರಿಂದ ರಾಜ್ಯಾದ್ಯಂತ ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶವನ್ನು ಕಲ್ಪಿಸಿತ್ತು. ಈ ಯೋಜನೆಗೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಸ್‌ಗಳು ತುಂಬಿತುಳುಕುತ್ತಿವೆ. ಅದೇ ಈಗ ಅಪಾಯಕಾರಿ ಪ್ರಯಾಣಕ್ಕೂ ದಾರಿ ಮಾಡಿಕೊಡುತ್ತಿದೆ.
ಗದಗ ನಗರದಲ್ಲಿ ಮಗುವನ್ನು ಮಹಿಳೆಯೊಬ್ಬರು ಮಡಿಲಿನಲ್ಲಿ ಮಲಗಿಸಿಕೊಂಡು ಫುಟ್‌ಬೋರ್ಡ್‌ನಲ್ಲಿ ಕುಳಿತುಕೊಂಡು ಪ್ರಯಾಣಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶುಕ್ರವಾರ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ನಗರ ಸಾರಿಗೆ ಬಸ್‌ನಲ್ಲಿ ಕುಳಿತುಕೊಳ್ಳಲು ಸೀಟ್ ಸಿಗದ ಹಿನ್ನೆಲೆ, ಮಹಿಳೆಯು ಈ ರೀತಿಯಾಗಿ ಪ್ರಯಾಣಿಸಬೇಕಾಗಿ ಬಂದಿದೆ ಎಂಬುದು ತಿಳಿದುಬಂದಿದೆ.

ಮಹಿಳೆಯು ತನ್ನ ಮಗುವನ್ನು ತೊಡೆಯ ಮೇಲೆ ಮಲಗಿಕೊಂಡು ಕುಳಿತಿದ್ದರೂ ಯಾವ ಸಹ ಪ್ರಯಾಣಿಕರು ಸೀಟ್ ಬಿಟ್ಟುಕೊಟ್ಟಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಬಸ್ ಪ್ರಯಾಣ ಆರಂಭಿಸುವ ಮೊದಲು ಬಾಗಿಲುಗಳನ್ನು ಮುಚ್ಚಬೇಕೆಂದು ತಿಳಿದಿದ್ದರೂ ಚಾಲಕ ಹಾಗೂ ನಿರ್ವಾಹಕರು ಇತ್ತ ಕಡೆ ಗಮನ ಹರಿಸಿಲ್ಲ. ಕೆಲ ನಿಮಿಷಗಳ ಬಳಿಕ, ಮಹಿಳೆ ಮಗುವನ್ನು ಎತ್ತಿಕೊಂಡು ಒಳಹೋಗುತ್ತಿರುವುದನ್ನು ವಿಡಿಯೋಯಲ್ಲಿ ಕಾಣಬಹುದು.
ಇದೇ ರೀತಿಯ ಮತ್ತೊಂದು ಘಟನೆ ಕಳೆದ ಜುಲೈ ತಿಂಗಳಲ್ಲಿಯೂ ನಡೆದಿತ್ತು. ಹುಲಿಗಿಯಿಂದ ಕೊಪ್ಪಳಕ್ಕೆ ತೆರಳುತ್ತಿದ್ದ ಬಸ್‌ನ ಫುಟ್‌ಬೋರ್ಡ್ ಮೇಲೆ ಕುಳಿತುಕೊಂಡು ವೃದ್ದೆಯೊಬ್ಬರು ಮಗುವನ್ನು ಮಡಿಲಿನಲ್ಲಿ ಮೇಲೆ ಮಲಗಿಸಿಕೊಂಡು ಪ್ರಯಾಣಿಸಿದ್ದರು. ಅವರೇ ಹೇಳುವಂತೆ ಜನರಿಂದ ಬಸ್ ತುಂಬಿತ್ತು. ಕುಳಿತುಕೊಳ್ಳಲು ಜಾಗವಿಲ್ಲ, ಬಸ್ಸಿನೊಳಗೆ ಹೋದರೆ ಉಸಿರುಗಟ್ಟಿಸುತ್ತದೆ. ಅದಕ್ಕೆ ಈ ರೀತಿಯಾಗಿ ಪ್ರಯಾಣಿಸಿದೆ ಎಂದು ಹೇಳಿದ್ದರು.
ಫುಟ್‌ಬೋರ್ಡ್ ಮೇಲೆ ಕುಳಿತುಕೊಂಡು ಅಥವಾ ನಿಂತುಕೊಂಡು ಪ್ರಯಾಣಿಸುವುದು ಅಪಾಯಕಾರಿಯಾಗಿದೆ. ವೇಗವಾಗಿ ಬಸ್ ಹೋಗುವಾಗ ಇದ್ದಕ್ಕಿಂದಂತೆ ಬ್ರೇಕ್ ಹಾಕಿದಾಗ ಪ್ರಯಾಣಿಕರು, ಮುಗ್ಗರಿಸಿ, ಕೆಳಗೆ ಬೀಳಬಹುದು. ಇದರಿಂದ ಪ್ರಾಣಗೂ ಹಾನಿಯಾಗಬಹುದು. ಕಳೆದ ಜೂನ್ ನಲ್ಲಿ ಹಾವೇರಿ ಜಿಲ್ಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಎನ್‌ಡಬ್ಲ್ಯುಕೆಆರ್‌ಟಿಸಿ) ಬಸ್‌ನಿಂದ 14 ವರ್ಷದ ಶಾಲಾ ಬಾಲಕಿಯೊಬ್ಬಳು ಆಯತಪ್ಪಿ ಕೆಳಗೆ ಬಿದ್ದು, ಜೀವ ಬಿಟ್ಟಿದ್ದಳು.
ಆ ಬಳಿಕ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಎಲ್ಲ ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಪ್ರಯಾಣಿಕರ ಸುರಕ್ಷತೆಗಾಗಿ ಬಸ್ ಗಳು ಪ್ರಯಾಣ ಆರಂಭಿಸುವ ಮೊದಲು ಬಾಗಿಲುಗಳನ್ನು ಮುಚ್ಚಬೇಕೆಂದು ಸೂಚಿಸಿದ್ದರು. ಕೆಎಸ್‌ಆರ್‌ಟಿಸಿ ಕೂಡ ಪ್ರಯಾಣಿಕರ ಸೇಫ್ಟಿ ಸಲುವಾಗಿ ಸುತ್ತೋಲೆ ಹೊರಡಿಸಿತ್ತು. ಡಿಪೋಗಳಿಂದ ಟ್ರಿಪ್‌ಗೆ ತೆರಳುವ ಮೊದಲು ಬಸ್‌ನ ಎಲ್ಲ ಬಾಗಿಲುಗಳನ್ನು ಪರಿಶೀಲಿಸಬೇಕು ಎಂದು ತಿಳಿಸಿತ್ತು.
ಬಸ್ ಚಾಲಕ ಮತ್ತು ಕಂಡಕ್ಟರ್ ಮುಂಬಾಗಿಲು, ಹಿಂಬಾಗಿಲು ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳಬೇಕು. ನಂತರವೇ ಬಸ್ ಸಂಚಾರವನ್ನು ಪ್ರಾರಂಭಿಸಬೇಕು. ಜೊತೆಗೆ ಯಾವುದೇ ಪ್ರಯಾಣಿಕರು, ಬಸ್ ಫುಟ್‌ಬೋರ್ಡ್‌ನಲ್ಲಿ ನಿಂತುಕೊಂಡು ಅಥವಾ ಕುಳಿತುಕೊಂಡು ಪ್ರಯಾಣಿಸಲು ಅವಕಾಶ ನೀಡದಂತೆ ಬಸ್ ಸಿಬ್ಬಂದಿಗೆ ನಿರ್ದೇಶನ ನೀಡಿತ್ತು. ಬಸ್ ನಿಲ್ದಾಣದಲ್ಲಿ ನಿಗದಿಯಾಗಿರುವ ಪ್ಲಾಟ್‌ಫಾರ್ಮ್‌ನಲ್ಲಿ ಬಸ್ ನಿಲ್ಲುವವರೆಗೆ ಚಾಲಕ ಬಾಗಿಲು ತೆರೆಯಬಾರದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.
ಇನ್ನು, ಗದಗ ನಗರದಲ್ಲಿ ಮಗುವನ್ನು ಮಹಿಳೆಯೊಬ್ಬರು ಮಡಿಲಿನಲ್ಲಿ ಮಲಗಿಸಿಕೊಂಡು ಫುಟ್‌ಬೋರ್ಡ್‌ನಲ್ಲಿ ಕುಳಿತುಕೊಂಡು ಪ್ರಯಾಣಿಸಿರುವುದು ಬೇಸರದ ಸಂಗತಿಯಾಗಿದೆ. ಅದರಲ್ಲೂ ಫುಟ್‌ಬೋರ್ಡ್ ಮೇಲೆ ಕುಳಿತುಕೊಂಡು ಅಥವಾ ನಿಂತುಕೊಂಡು ಪ್ರಯಾಣಿಸುವುದು ಅಪಾಯಕಾರಿಯಾಗಿದ್ದು, ಪ್ರಾಣಕ್ಕೂ ಹಾನಿಯಾಗಬಹುದು. ಇಂತಹ ಘಟನೆಗಳು ರಾಜ್ಯದಲ್ಲಿ ಮರುಕಳಿಸದಿರಲು ಸಾರಿಗೆ ನಿಗಮ ಅಧಿಕಾರಿಗಳು, ಮುನ್ನೆಚರಿಕೆ ತೆಗೆದುಕೊಳ್ಳಬೇಕಾಗಿದೆ. ಸಾರ್ವಜನಿಕರು ತಮ್ಮ ಸುರಕ್ಷತೆಯ ದೃಷ್ಟಿಯಿಂದ ಈ ರೀತಿಯಾಗಿ ಪ್ರಯಾಣ ಮಾಡದಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications