ಆಟೋಮೊಬೈಲ್ ದಿಗ್ಗಜರ ಚಾಲನೆಯ ಶಿಸ್ತು ಹಾಗೂ ಸಹಕಾರ ಜೀವನ

By ಮಹಾಂತ ವಕ್ಕುಂದ, ಮ್ಯುನಿಕ್ - ಜರ್ಮನಿ

German Auto Gaints Discipline And Co-ordination Of Life
ಕಳೆದ ಒಂದು ವರ್ಷಕ್ಕಿಂತ ಹೆಚ್ಚಿನ ಸಮಯ ಜರ್ಮನಿಯಲ್ಲಿ ವೃತ್ತಿ ಮಾಡಿಕೊಂಡಿರುವ ನಾನು ಒಬ್ಬ ಮೆಕ್ಯಾನಿಕಲ್ ಇಂಜಿನಿಯರ್. ಇಲ್ಲಿಗೆ ಬಂದಾಗಿನಿಂದ ನನ್ನ ವೃತ್ತಿಪರ ವಸ್ತುಗಳ ಬಗ್ಗೆ, ಇಲ್ಲಿಯ ಜನರ ಜೀವನ ಶೈಲಿಯಲ್ಲಿ ಆ ಎಲ್ಲ ವಸ್ತುಗಳ ಅಳವಡಿಕೆಗಳ ಬಗ್ಗೆ ದಿನೇ ದಿನೇ ಗಮನಿಸುತ್ತಿದ್ದೆ. ಆ ಅನುಭವಗಳ ಒಂದು ವಿಶ್ಲೇಷಣೆ ಇಲ್ಲಿದೆ. ಈ ದೇಶ ಇಡಿ ಜಗತ್ತಿಗೆ ನೀಡಿರುವ ಅತ್ತ್ಯುನ್ನತ ಕಾಣಿಕೆ ಇಂಜಿನಿಯರಿಂಗ್ ಅದರಲ್ಲೂ ಆಟೋಮೊಬೈಲ್ ಕ್ಷೇತ್ರದಲ್ಲಿ ಜರ್ಮನ್ನರು ಸರ್ವಶ್ರೆಷ್ಟರು ಎನ್ನುವುದು ನಮಗೆಲ್ಲ ತಿಳಿದಿರುವ ವಿಷಯ. ಇಂತಹ ಬೃಹತ್ ಉದ್ಯಮಶೀಲ ದೇಶದ ಜನರ ವಾಹನ ಚಾಲನಾ ಶಿಸ್ತು ನಿಜಕ್ಕೂ ನನ್ನ ಮನಸ್ಸಿನ ಮೇಲೆ ಆಗಾಧ ಪ್ರಭಾವ ಬೀರಿದೆ. ಅವುಗಳಲ್ಲಿನ ಕಿಂಚಿತ್ತಾದರೂ ಅಂಶಗಳನ್ನು ನಮ್ಮ ದೇಶದ ವಾಹನ ಚಾಲನೆಯ ನಿಯಮಗಳಲ್ಲಿ ಅಳವಡಿಸಿಕೊಂಡಲ್ಲಿ ನಮ್ಮೆಲ್ಲರ ಜೀವನ ಅದೆಷ್ಟೋ ರಿಸ್ಕ್-ಫ್ರೀ ಆಗಬಹುದೇನೋ ಎಂಬ ಉದ್ದೇಶದಿಂದ ಈ ಲೇಖನವನ್ನು ಬರಿಯುತ್ತಿದ್ದೇನೆ.

Audi, BMW, Porshe, Volks Wagen, Mercedes-BENZ, Opel ನಂತಹ ಪ್ರತಿಷ್ಠಿತ ಕಾರುಗಳ ಅಧಿಕೃತ ತಯಾರಕರು ಜರ್ಮನ್ನರು. Bugatti Veyron ನಂತಹ ಜಗತ್ತಿನ ಅತೀ ವೇಗದ ಕಾರು ಕೂಡ ಈ ದೇಶಕ್ಕೆ ಸೇರಿದ್ದು. ಜೀವನ ಶೈಲಿಯ ರಂಗೇರಿಸಲು ಆಟೋಮೊಬೈಲ್ ಕ್ಷೇತ್ರದಲ್ಲಿ ಅದೇನ್ನನ್ನೋ ಅಳವಡಿಸಬಹುದೋ ಅದೆಲ್ಲವೂ ಇಲ್ಲಿದೆ. ಈ ವೈಭವಗಳನ್ನು ಸಾರಲು ಇಲ್ಲಿರುವ BMW, Porshe ಹಾಗೂ Mercedes-BENZ ಮ್ಯೂಸಿಯಂಗಳೇ ಸಾಕು. ಭಯಂಕರವಾಗಿ ಓಡುವ ವಾಹನಗಳು, AUTOBAHN ನಂತಹ ಅತ್ತ್ಯುನ್ನತ ರಸ್ತೆಗಳಿದ್ದರೂ ತಮ್ಮ ಮಿತಿ ಮೀರದ ಈ ಜನರ ವಾಹನ ಚಾಲನೆಯ ಶಿಸ್ತು ಮಾತ್ರ ಮೆಚ್ಚಲೇಬೇಕಾದದ್ದು.

ಪ್ರಮುಖವಾಗಿ ಇಲ್ಲಿನ ದೊಡ್ಡ ದೊಡ್ಡ ನಗರಗಳಲ್ಲಿ ಈ ಜನ ಸ್ವಂತ ಕಾರು ಅಥವ ಬೈಕಿನ ಬದಲು ಸಾರ್ವಜನಿಕ ಸಾರಿಗೆ ಉಪಯೋಗಿಸುತ್ತಾರೆ, ತಮ್ಮದೇ ಆದ ವಾಹನಗಳಿದ್ದರೂ ದಿನ ನಿತ್ಯ ಸಾರ್ವಜನಿಕ ಸಾರಿಗೆ ಉಪಯೋಗಿಸುವುದರಿಂದ ಇಲ್ಲಿ ವಾಹನ ದಟ್ಟನೆ ಕಡಿಮೆ. ಆದರೆ ವೀಕೆಂಡ್ ಮೋಜು ಮಸ್ತಿಗೆಲ್ಲ ಸ್ವಂತ ವಾಹನಗಳೇ ಬೇಕು.

ಆದರೆ ನಮ್ಮಲ್ಲಿ ಅದೂ ವಿಶೇಷವಾಗಿ ಬೆಂಗಳೂರಿನಲ್ಲಿ ಇಲೆಕ್ಟ್ರಾನಿಕ್ ಸಿಟಿ, ವೈಟ್ ಫೀಲ್ಡ್ ಕಡೆಗೆ ಹೋಗುವ ಅದೆಷ್ಟೋ ಜನ ನಮ್ಮ ಬಿಎಂಟಿ ಸಿ ಸಂಸ್ಥೆಯನ್ನೇ ಮರೆತಂತಿದೆ. ಒಂದು ಕಾರಿನಲ್ಲಿ ಒಬ್ಬೊಬ್ಬರೇ ಪ್ರಯಾಣಿಸಿ, ದಾರಿಯುದ್ದ ಅವರಿವರನ್ನೆಲ್ಲ ತೆಗಳಿ ಮನೆ ಸೇರೋ ಅಷ್ಟರಲ್ಲಿ ಅವರು ಪಾಡು ಏನಾಗಿರುತ್ತೋ ಆ ದೇವರಿಗೆ ಗೊತ್ತು. ಒಂದು ಸಮೀಕ್ಷೆ ಪ್ರಕಾರ ಈ ಕಾರು ಬಳಕೆದಾರರೆನಾದರು ಬಸ್ಸು ಉಪಯೋಗಿಸಿದಲ್ಲಿ, ಪ್ರತಿ ಬಸ್ಸಿನಿಂದಾಗಿ 30-40 ಕಾರುಗಳು ರಸ್ತೆಯಿಂದ ಕಣ್ಮರೆಯಾಗುತ್ತವೆ. ಟ್ರಾಫಿಕ್ ಸಮಸ್ಯೆ ಕಡಿಮೆಯಾಗಿ ಅಯಾಸರಹಿತ ಪ್ರಯಾಣ ನಮ್ಮದಾಗುತ್ತದೆ. ಇನ್ನು ಮೆಟ್ರೋ ಪೂರ್ತಿ ಕಾರ್ಯಾರಂಭ ಮಾಡಿದಲ್ಲಿ ಈ ಸಾರಿಗೆ ಅದೆಷ್ಟೋ ಸುಲಭ ಹಾಗು ತ್ವರಿತವಾಗುವುದರಲ್ಲಿ ಸಂಶಯವಿಲ್ಲ.

ಜರ್ಮನಿ ಬೆಳೆದು ನಿಂತಿರುವ ದೇಶ, ಇಲ್ಲಿ ಎಲ್ಲವು ದುಬಾರಿ, ಆದರೆ ಎಲ್ಲವು ಸಹಕಾರಿ. ಉದಾಹರಣೆಗೆ ಉತ್ತರ ಜರ್ಮನಿಯ ಒಂದು ನಗರದಿಂದ ದಕ್ಷಿಣ ಜರ್ಮನಿಯ ಇನ್ನೊಂದು ನಗರಕ್ಕೆ ಈ ಜನ ಪ್ರಯಾಣ ಬೆಳೆಸುತ್ತಾರೆ ಎಂದುಕೊಳ್ಳೋಣ, ಸುಮಾರು 750 ಕೀ.ಮೀ ಅಂದಾಜಿಗೆ ನಮ್ಮ ಬೆಂಗಳೂರಿನಿಂದ ಪುಣೆ ನಗರಕ್ಕೆ ಇರುವಷ್ಟು ದೂರ. ಈ ಪ್ರಯಾಣಕ್ಕಾಗಿ ( ONEWAY ) ೨ನೆ ದರ್ಜೆಯ ಫಾಸ್ಟ್ AC ರೈಲಿನ ಪ್ರಯಾಣಕ್ಕೆ ಒಬ್ಬರು ಸುಮಾರು 80-140 ಯುರೋ (ಅಂದರೆ ಸುಮಾರು 6000-11000 ರೂಪಾಯಿ) ತೆತ್ತಬೇಕು. ಅತಿ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿದಲ್ಲಿ ಮಾತ್ರ ಈ ದರದಲ್ಲಿ ಕೊಂಚ ಕಡಿಮೆ ಆಗಬಹುದಷ್ಟೇ.

ಹೀಗಿರುವಾಗ ಜನರಿಗೆ ದುಡ್ಡು ಉಳಿಸುವ ಅದೆಷ್ಟೋ ಆಲೋಚನೆಗಳು ಕಾಡುತ್ತವೆ. ಆ ಕಾರಣಕ್ಕಾಗಿ ಇಲ್ಲಿಯ ಜನ ಕೆಲವೊಂದು ವೆಬ್ ಸೈಟ್ ಗಳ ಮೂಲಕ ಕಾರ್ ಶೇರಿಂಗ್ ಮಾಡಿಕೊಳ್ಳುತ್ತಾರೆ. ಅದೇನೆಂದರೆ ಒಂದು ಊರಿನಿಂದ ಇನ್ನೊಂದೂರಿಗೆ ಪ್ರಯಾಣಿಸುವ ವ್ಯಕ್ತಿಯ ಕಾರಿನಲ್ಲೆನಾದರು ಕೊಂಚ ಸ್ಥಳಾವಕಾಶವಿದ್ದರೆ ಆ ಬಗ್ಗೆ ಇಂತಹ ವೆಬ್ ಸೈಟ್ ನಲ್ಲಿ ಮಾಹಿತಿ ನೀಡುವುದು, ಆಸಕ್ತರು ಅವರನ್ನು ಸಂಪರ್ಕಿಸಿ ಎಲ್ಲರು ಒಟ್ಟಾಗಿ ಪ್ರಯಾನಿಸುವಂತದ್ದು. ಈ ತರಹದ ಗುಂಪು ಸಾರಿಗೆ ಇಲ್ಲಿಯ ರೈಲು ಸಾರಿಗೆಯ ಕಾಲು ಭಾಗದ ಬೆಲೆಯಲ್ಲಿ ಮುಗಿದು ಹೊಗುತ್ತದೆ. ಆದರೆ ಪ್ರಯಾಣಕ್ಕೆ ಮುನ್ನ ಮೋಸ ವಂಚನೆ ತಪ್ಪಿಸಲು ಎಲ್ಲರು ತಮ್ಮ ತಮ್ಮ ನಿಖರವಾದ ಮಾಹಿತಿ ನೀಡುವುದು ಕಡ್ದಾಯ. ಈ ಪ್ರಯತ್ನದಿಂದಾಗುವ ಫಲವೆಷ್ಟು ಗೊತ್ತೇ? ಸ್ವಂತ ಕಾರಿರುವವರಿಗೆ ಪೂರ್ತಿ ಇಂಧನಕ್ಕೆ ಹಣ ಸುರಿಯೋ ಅವಶ್ಯಕತೆ ಇಲ್ಲ, ದೂರ ದೂರ ಪ್ರಯಾಣಕ್ಕೆ ಜೊತೆಗೊಬ್ಬರು ಸಂಗಾತಿ ಸಿಗೋ ಖುಷಿ, ಕನಿಷ್ಠ ಪ್ರಯಾಣದ ಮೊತ್ತ, ಇಂಧನ ಉಳಿತಾಯ ಹಾಗೂ ಮಿತವ್ಯಯ, ಭಾರತದಂತಹ ಪ್ರಗತಿಶೀಲ ರಾಷ್ಟ್ರಕ್ಕಿದು ಎಷ್ಟು ಮುಖ್ಯವಲ್ಲವೆ ?

ಈ ಹಿಂದೆ ನಮ್ಮ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನ ಪೋಲಿಸ್ ಸಿಬ್ಬಂದಿ ಒಂದು ಯಮಹಾ ಬೈಕಿನ ಸೈಲೆನ್ಸರ್ ಕಿತ್ತು ಬೈಕನ್ನು ಮರಕ್ಕೆ ನೇತು ಹಾಕಿದ್ದ ಸನ್ನಿವೇಶವನ್ನು ನೆನಪಿಸಿಕೊಳ್ಳಿ. ಅಪಾಯಕಾರಿ ಚಾಲನೆ ಹಾಗು ಅನಾವಶ್ಯಕ ಶಬ್ದ ಮಾಲಿನ್ಯದ ಆರೋಪದಡಿ ಆ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ನಂತರ ಆ ವಾಹನಕ್ಕೆ ಹಾಗು ಅದರ ಮಾಲಿಕನಿಗೆ ತಕ್ಕ ಶಾಶ್ತಿ ಮಾಡಿದ್ದು ಪೋಲೀಸರ ಶ್ಲಾಘನೀಯ ಕೆಲಸವಾಗಿತ್ತು. ಕೇವಲ 100-135CC ಬೈಕ್ ಇಟ್ಟುಕೊಂಡು ಅದೆಷ್ಟು ಸಾಧ್ಯವೋ ಅಷ್ಟು ವೇಗದಲ್ಲಿ ಸಹಿಸಲಾಗದ ಸದ್ದು ಮಾಡಿಕೊಂಡು ವಾಹನ ಓಡಿಸುವ ಅದೆಷ್ಟೋ ಯುವಕರು ಅದೆಷ್ಟೋ ಸಲ ಹಾದಿ ಹೆಣವಾಗುತ್ತಾರೆ. ಜೊತೆಗೆ ಹಾದಿ ಹೊಕರನ್ನು ತಮ್ಮ ಸಾವಿನ ಜೊತೆ ಕರೆದೊಯ್ಯುತ್ತಾರೆ.

ಆದರೆ ಈ ದೇಶದಲ್ಲಿ(ಜರ್ಮನಿಯಲ್ಲಿ) ಜೀವಕ್ಕೆ ಬೆಲೆಯಿದೆ. ಇಲ್ಲಿನ ರಸ್ತೆಗಳಲ್ಲಿ ಜಗತ್ತಿನ ಅತಿ ವೇಗದ ಕಾರು ತನ್ನೆಲ್ಲ ಪೌರುಶತ್ವ ಮೀರಿ ಓಡುತ್ತಿದ್ದರೂ ದಾರಿಗೆ ಅಡ್ಡ ಬಂದ ಒಂದು ಪುಟ್ಟ ಬೆಕ್ಕಿನ ಮರಿಗೂ ಅದು ದಾರಿ ಮಾಡಿ ಕೊಟ್ಟು ನಂತರ ತಾನು ಸಾಗುವುದು ಇಲ್ಲಿಯ ನಿಯಮ. ಹೌದು ಇಲ್ಲಿನ ರಸ್ತೆಗಳಲ್ಲಿ ಕಾಲು ನಡಿಗೆಯಲ್ಲಿ ಓಡಾಡುವವರಿಗೆ ಮೊದಲ ಆದ್ಯತೆ, ಆ ನಂತರ ಸೈಕಲ್ ಸವಾರರಿಗೆ. ಆದರೆ ಯಾರೂ ಬೇಕಾ ಬಿಟ್ಟಿ ನಡೆದುಕೊಳ್ಳುವ ಹಾಗಿಲ್ಲ. ಹಾಗಂತ ಅವರ ಮೇಲೆ ಕಾನೂನಿನ ನಿರ್ಭಂದಗಳೇನೂ ಇಲ್ಲ, ಈ ಶಿಸ್ತು ಸ್ವಯಂ ಪ್ರೇರಿತ. ಆಂಬುಲೆನ್ಸ್, ಅಗ್ನಿ ಶಾಮಕ ದಳ ಹಾಗು ಪೋಲಿಸ್ ವಾಹನಗಳಿಗೆ ತುರ್ತು ಸಮಯದಲ್ಲಿ ಇವರು ನೀಡುವ ಪ್ರೋತ್ಸಾಹ ಹಾಗು ಸಹಕಾರ ಎಲ್ಲವು ಮೆಚ್ಚುವಂತದ್ದು. ಅನಾವಶ್ಯಕ ಹಾರ್ನ್ ಮಾಡುವುದು, ವಿಚಿತ್ರ ಸದ್ದುಗಳನ್ನು ಸೃಷ್ಟಿಸುವುದು, ವಾಯು ಮಾಲಿನ್ಯ ಅಥವಾ ಶಬ್ದ ಮಾಲಿನ್ಯ ಮಾಡಲು ಇಲ್ಲಿ ಅವಕಾಶಗಳಿಲ್ಲ. ಆದರೆ ನಮ್ಮ ದೇಶದಲ್ಲಿ ಈ ತರಹದ ವಿಷಯಗಳನ್ನು ಖಂಡಿಸುವರ ಸಂಖ್ಯೆಯು ಕಡಿಮೆ. ರಸ್ತೆಯ ನಿಯಮಗಳನ್ನು ಗಾಳಿಗೆ ತೂರಿ ಅತಿವೇಗದಲ್ಲಿ, ಅಜಾಗರೂಕರಾಗಿ ವಾಹನೆ ಚಾಲನೆ ಮಾಡುವ ನಮ್ಮ ಅದೆಷ್ಟೋ ಜನ ವಾಹನ ಚಲನೆಯ ಶೈಲಿಯಲ್ಲಿ ಸ್ವಲ್ಪ ಶಿಸ್ತು ಹಾಗು ನಿಯಮಗಳನ್ನ ಅನುಸರಿಸಿದರೆ ಹಿತವಲ್ಲವೆ ?

ಇನ್ನು ''ರಸ್ತೆಯಲ್ಲಿ ಗೌರವ'' ಅನ್ನುವ ಮಾತಿನ ಬಗ್ಗೆ ಹೇಳುವುದಾದರೆ, ಇವರು ಒಬ್ಬರಿನ್ನೊಬ್ಬರಿಗೆ ರಸ್ತೆಯಲ್ಲಿ ನಿಂದಿಸುವುದನ್ನು ನಾನಿಲ್ಲಿಯವರೆಗೆ ಕಂಡಿಲ್ಲ. ರಸ್ತೆಯಲ್ಲಿ ಸಹಕಾರ ಹಾಗು ಒಬ್ಬರಿನ್ನೊಬ್ಬರಿಗೆ ಅನುಕೂಲವಾಗುವಂತೆ ನಡೆದುಕೊಳ್ಳುವುದು ಇವರ ಇನ್ನೊಂದು ಧನಾತ್ಮಕ ಗುಣ, ಕಿರಿದಾದ ರಸ್ತೆಗಳಲ್ಲಿ ಎದುರಿಗೆ ಬರುವ ವ್ಯಕ್ತಿಗೆ ಅವಕಾಶ ಕೊಟ್ಟು ನಂತರ ತಾವು ಸಾಗುವ ದೊಡ್ಡತನ ಇವರದು, ತಿಳಿದೋ ತಿಳಿಯದೆಯೋ ಯಾರಾದರು ತಪ್ಪು ಮಾಡಿ ರಸ್ತೆ ನಿಯಮ ಉಲ್ಲಂಘಿಸಿದಲ್ಲಿ, ದಾರಿಗೆ ಅಡ್ಡ ಬಂದಲ್ಲಿ ಅವರನ್ನು ಕ್ಷಮಿಸಿ ಅವರೆಡೆಗೆ ಮುಗುಳ್ನಗೆ ಬೀರುವ ಶ್ರೀಮಂತ ಹೃದಯಿಗಳು ಈ ಜನ. ಕಿತ್ತಾಟ, ಅನಾವಶ್ಯಕ ವಾದದಲ್ಲಿ ಕಾಲ ಹರಣ ಮಾಡಲು ಇವರಿಗೆ ಆಸಕ್ತಿ ಇಲ್ಲ. ಇಲ್ಲಿಯ ಟ್ಯಾಕ್ಸಿ ಚಾಲಕರು ಪ್ರಯಾಣಿಕರಿಗಾಗಿ ಕಿತ್ತಾಡುವುದಿಲ್ಲ, ರಸ್ತೆಯ ನಡುಭಾಗದಲ್ಲೇ ಏಕಾ ಎಕಿ ಬ್ರೇಕ್ ಹಾಕಿ ಟ್ಯಾಕ್ಸಿ ನಿಲ್ಲಿಸುವುದಿಲ್ಲ, ಜನರೂ ಅಷ್ಟೇ ಎಲ್ಲೆಂದರಲ್ಲಿ ''ಟ್ಯಾಕ್ಸಿ'' ಎಂದು ಕೈ ತೋರುವುದಿಲ್ಲ, ನಿಲ್ದಾಣಕ್ಕೆ ಹೋಗಿ ಟ್ಯಾಕ್ಸಿ ಏರುತ್ತಾರೆ ಅಥವಾ ಫೋನ್ ಕಾಲ್ ಮಾಡಿ ತಮ್ಮ ವಿಳಾಸಕ್ಕೆ ಕರೆಯಿಸಿಕೊಳ್ಳುತ್ತಾರೆ . ಅದೆಲ್ಲವೂ ಅವರ ಸಂಸ್ಕೃತಿಯನ್ನು ತೋರಿಸುತ್ತದಲ್ಲವೇ ? ನಮ್ಮ ಸಂಸ್ಕೃತಿಯ ಬಗ್ಗೆ ನಾವು ಇಗಲಾದರು ಸ್ವಲ್ಪ ಅಲೋಚಿಸಬೆಕು. ನಮ್ಮ ವಾಹನ ಚಾಲನೆ ಅಥವಾ ರಸ್ತೆಯಲ್ಲಿ ನಡೆದುಕೊಳ್ಳಬೇಕಾದ ರೀತಿಗಳಲ್ಲೆನಾದರು ಕುಂದುಕೊರತೆಗಳಿದ್ದರೆ ಅದನ್ನು ತಿದ್ದಿಕೊಳ್ಳುವುದು, ನಗು ಮುಖದಿಂದ ಎಲ್ಲರನ್ನು ಗೌರವಿಸುವುದು ಅತಿ ಮುಖ್ಯ. ಇಲ್ಲವೇ ನಾವು ಅಸಭ್ಯರು ಅಥವಾ ಸಂಸ್ಕೃತಿ ಹೀನರು ಎಂಬ ಮಾತು ಇನ್ನೊಬ್ಬರ ಬಾಯಲ್ಲಿ ಬರಬಹುದೇನೋ ...

ಇನ್ನು ಸಾರ್ವಜನಿಕ ಸಾರಿಗೆಯ ಬಗ್ಗೆ ಹೇಳುವುದಾದರೆ, ನಮ್ಮ ಕೈ ಗಡಿಯಾರದ ಸಮಯದಲ್ಲೇನಾದರೂ ಏರು ಪೆರುಗಳಿದ್ದರೆ ಇಲ್ಲಿನ ಬಸ್ಸು ಹಾಗು ರೈಲಿನ ಆಗಮನದ ಸಮಯ ನೋಡಿ ನಾವು ನಮ್ಮ ಸಮಯವನ್ನು ಸರಿ ಮಾಡಿಕೊಳ್ಳಬೇಕಷ್ಟೇ, ಅಷ್ಟು ನಿಖರ ಹಾಗು ನಂಬಿಕಸ್ತ ಸೇವೆ ಇವರದು. ಪ್ರಯಾಣ ದರ ಕೊಂಚ ಜಾಸ್ತಿಯೇ ಆದರೆ ಅದು ಇಲ್ಲಿ ಗಳಿಸುವ ಸಂಭಾವನೆಯಿಂದಾಗಿ ಹೆಚ್ಚೆನ್ನಿಸುವುದಿಲ್ಲ. ಇಲ್ಲಿ ನಗುಮುಖದ ಚಾಲಕರಿದ್ದಾರೆ, ಸಭ್ಯ ನಿರ್ವಾಹಕರಿದ್ದಾರೆ, ಅಂಗವಿಕಲರನ್ನು ಕೈ ಹಿಡಿದು ಮೇಲೇರಿಸಿ ಅವರನ್ನು ಆಸೀನರಾಗಿಸುವ ಜವಾಬ್ದಾರಿ ಇಲ್ಲಿನ ಬಸ್ ಚಾಲಕರದ್ದು. ಆ ನಂತರವೇ ಅವರು ತಮ್ಮ ಸೀಟಿಗೆ ಮರಳಿ ವಾಹನ ಚಾಲನೆ ಮಾಡಬೆಕು. ಇವೆಲ್ಲವುಗಳಾದ ಮೇಲೆ ಸಮಯದ ಪರಿಪಾಲನೆ. ಪ್ರತಿ ನಿಲ್ದಾಣದ ಮಾಹಿತಿ ಕೊಡುವ ವಾಹನಗಳು, ಪ್ರತಿ ಬಸ್ಸು, ರೈಲಿನಲ್ಲಿ ನಗರದ ನಕ್ಷೆ, ಎಲ್ಲವೂ ಲಭ್ಯ. ಎಲ್ಲವನ್ನೂ ತಿಳಿಸಿ ಹೇಳುವ ತಾಳ್ಮೆಯು ಈ ವಾಹನ ಚಾಲಕರಲ್ಲಿ ಉಂಟು .

ಇನ್ನು ತಮ್ಮ ಸ್ವಂತದ ವಾಹನಗಳನ್ನು ಚಲಾಸಿಯಿಸುವಾಗಲು ತುಂಬಾ ಜಾಗರೂಕರಾಗಿ ಜವಾಬ್ದಾರರಾಗಿ ನಡೆದುಕೊಳ್ಳುತ್ತಾರೆ, ಸೀಟ್ ಬೆಲ್ಟ್ ಇಲ್ಲದೆ ಕಾರು ಓಡಿಸುವುದಿಲ್ಲ, ಹೆಲ್ಮೆಟ್, ಜಾಕೆಟ್, ನೀ ಪ್ಯಾಡ್ (ಮೊಳಕಾಲಿನ ಕವಚ), ಬೂಟು ಧರಿಸದೆ ದ್ವಿ ಚಕ್ರ ವಾಹನ ಚಲಾಯಿಸೊಲ್ಲ. ಸಿಗ್ನಲ್ ಜಂಪ್ ಮಾಡುವ ಪ್ರವೃತ್ತಿ, ಬೇಕಾಬಿಟ್ಟಿ ಲೇನ್ ಬದಲಾವಣೆ ಇವರಲ್ಲಿಲ್ಲ. ಇನ್ನು ಲಾರಿ ಚಾಲಕರು ಅಷ್ಟೇ ಒಂದೇ ದಿನದಲ್ಲಿ ೮ ಘಂಟೆಗೂ ಅಧಿಕವಾಗಿ ವಾಹನ ಚಲಾಯಿಸುವ ಹಾಗಿಲ್ಲ, ಅತಿ ದೊಡ್ಡ ವಾಹನಗಳು, ಲಾರಿಗಳು ಹೆದ್ದಾರಿಗಳಲ್ಲಿ ಚಲಿಸುವಾಗ ಎಲ್ಲ ನಿಯಮಗಳನ್ನು ಪಾಲಿಸಬೇಕು, ಎಲ್ಲೆಂದರಲ್ಲಿ ನಿಲುಗಡೆ ಮಾಡುವುದು, ಅವಶ್ಯಕ ಸೂಚನಾ ಫಲಕಗಳು ಹಾಗು ದೀಪಗಳಿಲ್ಲದೆ ಸಂಚರಿಸುವುದು ಲಾರಿಗಳಿಗೆ ಸೇರಿದಂತೆ ಎಲ್ಲ ವಾಹನಗಳಿಗೂ ನಿರ್ಭಂಧ .

ಇನ್ನು ಕೊನೆಯದಾಗಿ ಹೇಳುವುದಾದರೆ ಇಲ್ಲಿಯ ಸಾಗಿಗೆ ಕಛೇರಿ. ಒಬ್ಬ ಸಾಮಾನ್ಯ ಮನುಷ್ಯನಿಗೆ ವಾಹನ ಚಾಲನೆಯ ಪರವಾನಗಿ ಪತ್ರ ನೀಡಲು ಸುಮಾರು ೧ ವರ್ಷ ತೆಗೆದುಕೊಳ್ಳುತ್ತಾರೆ, ಸಾರಿಗೆ ನಿಯಮಗಳನ್ನೊಳಗೊಂಡ ಎಲ್ಲ ಪ್ರಶ್ನೆಗಳನ್ನು ಅಭ್ಯರ್ಥಿ ಉತ್ತರಿಸಿ ಪಾಸಾಗಬೆಕು. ''ರಸ್ತೆಯಲ್ಲಿ ಪ್ರಯಾಣಿಸುವಾಗ ಒಂದು ಅಪಘಾತ ಕಣ್ಣಿಗೆ ಕಾಣಿಸಿದಾಗ ನಿಮ್ಮ ಪ್ರತಿಕ್ರಿಯೆ ಏನು'' ಎಂಬಿತ್ತ್ಯಾದಿ ಪ್ರಶ್ನೆಗಳೆಲ್ಲ ಇಲ್ಲುಂಟು. ಇಷ್ಟೆಲ್ಲಾ ಪರೀಕ್ಷೆ ಪಾಸಾಗಿ ಕೈಗೆ ಡ್ರೈವಿಂಗ್ ಲೈಸೆನ್ಸ್ ಸಿಗುವಷ್ಟ್ರಲ್ಲಿ ನಮ್ಮ ಜೇಬಿಗೆ 1000-2000 ಯುರೋ (ಅಂದರೆ ಸುಮಾರು 70,000-140,000ರುಪಾಯಿಯ) ಕತ್ತರಿ. ಇಷ್ಟು ದುಡ್ಡು ತೆರಬೇಕು ಎಂಬ ಕಾರಣಕ್ಕೋ ಏನೋ ಕೇವಲ ಆಸಕ್ತರು ಹಾಗು ಯೋಗ್ಯ ಅಭ್ಯರ್ಥಿಗಳು ಮಾತ್ರ ಇಲ್ಲಿ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಿ, ನಿಯಮಗಳನ್ನು ಅರಿತು, ಪರೀಕ್ಷೆ ಬರೆದು ಪಾಸಾಗಿ, ನಿಯತ್ತಾಗಿ ಲೈಸೆನ್ಸ್ ಪಡೆದು ಗೌರವದಿಂದ ವಾಹನ ಚಾಲನೆ ಮಾಡುತ್ತಾರೆ. ತುಟ್ಟಿಯಾದರೂ ಕೂಡ ಇಲ್ಲಿನ ಸಾರಿಗೆ ಸಂಸ್ಥೆ ಅಭ್ಯರ್ಥಿಯನ್ನು ಸಭಲನನ್ನಾಗಿಸಿ ಲೈಸೆನ್ಸ್ ನೀಡುತ್ತದೆ. ಹೀಗಿರುವಾಗ ವಾಹನ ಸವಾರರಾದರು ಹೇಗೆ ತಪ್ಪು ಮಾಡಿಯಾರು ?

ಜಗತ್ತಿನ ಹಿಂತ ಅದೆಷ್ಟೋ ಮುಂದುವರೆದ ದೇಶಗಳಿಂದ ನಮಗದೆಷ್ಟೋ ಕಲಿಯೋದು ಇನ್ನು ಬಾಕಿ ಇದೆ, ಕೆಟ್ಟದ್ದು ನಮಗೆ ಬೇಡ ಆದರೆ ಒಳ್ಳೆಯದನ್ನು ನಾವು ಕಲಿತು ಒಳಿತನ್ನೇ ಮಾಡಿದರೆ ನಮಗೂ, ಈ ಜೀವನಕ್ಕೂ ಒಂದು ಅರ್ಥ. ದಯಮಾಡಿ ನಮ್ಮ ದೇಶದ ವಾಹನ ಚಾಲನೆಯ ನಿಯಮಗಳನ್ನ ಅರ್ಥೈಸಿಕೊಂಡು ಚಲಿಸಿ. ಒಳ್ಳೆಯವರಾಗಿ, ಒಳ್ಳೆಯದೇ ಮರಳಿ ಸಿಗುತ್ತದೆ.

Mahantesh Vakkund
Mobile: +49-176-59947066
Munich - Germany

More from DriveSpark

Article Published On: Friday, May 31, 2013, 11:17 [IST]
English summary
Read This Interesting article written by Mahantesh Vakkund from Munich, Germany.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+