ಉತ್ತರ ಕರ್ನಾಟಕದ ಜನರಿಗೆ ಶುಭ ಸುದ್ದಿ: ಶೀಘ್ರ 884 ಹೊಸ ಬಸ್‌ಗಳು ಸೇವೆಗೆ.. ನಿಮ್ಮೂರಿಗೆ ಬೇಗ ಹೋಗಬಹುದು!
ಉತ್ತರ ಕರ್ನಾಟಕ (North Karnataka) ಜನರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಲು ಮುಂದಾಗಿದೆ. 'ಪ್ರಯಾಣಿಕರ ಅನುಕೂಲಕ್ಕಾಗಿ 884 ಹೊಸ ಬಸ್‌ಗಳನ್ನು ಖರೀದಿಸಲಾಗುವುದು. ಈಗಾಗಲೇ 375 ಬಸ್ ಕೊಂಡುಕೊಳ್ಳಲು ಟೆಂಡರ್ ಕರೆಯಲಾಗಿದೆ' ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ರಾಜ್ಯಾದ್ಯಂತ ಶಕ್ತಿ ಯೋಜನೆ ಜಾರಿಯಾದ ಬಳಿಕ, ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಅಧಿಕಗೊಂಡಿದೆ. ಹೊಸ ಬಸ್‌ಗಳು ಆಗಮನವಾದಾಗ ಪ್ರಯಾಣಿಕರ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಮಾರ್ಚ್ 2024 ರೊಳಗೆ ನೂತನ ಬಸ್‌ಗಳನ್ನು ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುಂಬರುವ ದಿನಗಳಲ್ಲಿ ಹುಬ್ಬಳ್ಳಿ - ಧಾರವಾಡ ನಗರಗಳಿಗೆ 100 ಎಲೆಕ್ಟ್ರಿಕ್ ಬಸ್‌ಗಳು ಬರಲಿವೆ. ಜೊತೆಗೆ 2,000 ಹುದ್ದೆ ಭರ್ತಿಗೆ ನೇಮಕಾತಿಯನ್ನು ನಡೆಸಲಾಗುವುದು. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಯಾವುದೇ ಬಸ್‌ಗಳನ್ನು ಖರೀದಿಸಿಲ್ಲ. ನೇಮಕಾತಿ ಪ್ರಕ್ರಿಯೆಯನ್ನು ಮಾಡಿಲ್ಲ. ನಾವು ಉತ್ತರ ಕರ್ನಾಟಕ ಜನರಿಗೆ ಹಳೆಯ ಬಸ್‌ಗಳನ್ನು ನೀಡುವುದಿಲ್ಲ. ಹೊಸ ಬಸ್‌ಗಳನ್ನೇ ನೀಡುತ್ತೇವೆ' ಎಂದಿದ್ದಾರೆ.
ಬೆಂಗಳೂರು (Bengluru) ಹಾಗೂ ಹುಬ್ಬಳ್ಳಿ (Hubballi) ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸ್ಥಳಾವಕಾಶವಿದ್ದು, ಅದನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಲಾಗುವುದು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದಂತೆ ಇಲ್ಲಿಯೂ ಅಪಘಾತದ ಪರಿಹಾರ ಮೊತ್ತವನ್ನು ರೂ.1 ಕೋಟಿಗೆ ಹೆಚ್ಚಿಸುವ ಅಗತ್ಯವಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ.

ಕಾರ್ಮಿಕ ಸಚಿವ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ (Santosh Lad) ಮಾತನಾಡಿ, ಧಾರವಾಡದಲ್ಲಿ ಹೊಸ ಸಿಟಿ ಬಸ್ ನಿಲ್ದಾಣಕ್ಕೆ ರೂ.13 ಕೋಟಿ, ಹುಬ್ಬಳ್ಳಿಯ ಗೋಕುಲ್ ರಸ್ತೆಯ ಬಸ್ ನಿಲ್ದಾಣವನ್ನು ರೂ.23 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಫೆಬ್ರವರಿ ನಂತರ ಉತ್ತರ ಕರ್ನಾಟಕಕ್ಕೆ ಹೊಸ ಬಸ್‌ಗಳು ಲಭ್ಯವಾಗಲಿದ್ದು, ಮುಂಬರುವ ದಿನಗಳಲ್ಲಿ 5,000 ನೂತನ ಬಸ್‌ಗಳನ್ನು ಖರೀದಿಸಲಾಗುವುದು ಎಂದು ಹೇಳಿದ್ದಾರೆ.
ಶಾಸಕ ಮಹೇಶ್ ಟೆಂಗಿನಕಾಯಿ (Mahesh Tenginakai) ಮಾತನಾಡಿ, ಶಕ್ತಿ ಯೋಜನೆ ಅನುಷ್ಠಾನಗೊಂಡ ನಂತರ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಂಡಿದ್ದು, ಹೊಸ ಬಸ್‌ಗಳನ್ನು ಖರೀದಿಸುವುದರಿಂದ ಪ್ರಯಾಣಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಎನ್‌ಡಬ್ಲ್ಯುಕೆಆರ್‌ಟಿಸಿಗೆ ವಿಶೇಷ ಅನುದಾನ ಒದಗಿಸುವುದು ತುಂಬಾ ಅಗತ್ಯವಾಗಿದ್ದು, ಬಸ್‌ಗಳಲ್ಲಿ ಸುಧಾರಿತ ತಂತ್ರಜ್ಞಾನವನ್ನು ಉಪಯೋಗಿಸಬೇಕು ಎಂದು ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಎನ್.ಹೆಚ್.ಕೋನರಡ್ಡಿ (N.H. Konaraddi) ಮಾತನಾಡಿ, ಎನ್‌ಡಬ್ಲ್ಯುಕೆಆರ್‌ಟಿಸಿ (NWKRTC) ಸಿಬ್ಬಂದಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುತ್ತಿದ್ದು, ನಿಗಮಕ್ಕೆ ಹಂಚಿಕೆಯಾಗುವ ಅನುದಾನದಲ್ಲಿ ತಾರಾಮಾತ್ಯ ಮಾಡಬಾರದು ಎಂದು ಹೇಳಿದ್ದಾರೆ. ಎನ್‌ಡಬ್ಲ್ಯುಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಭರತ್.ಎಸ್ ಮಾತನಾಡಿ, ನಿಗಮದಲ್ಲಿ 21,000 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ನೌಕರರು ಕುಂದುಕೊರತೆಯನ್ನು ಹೇಳಿಕೊಳ್ಳಲು 'ಸಾರಿಗೆ ಸ್ಪಂದನ' ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಈ ವರ್ಷ 2,000 ಹೊಸ ಬಸ್‌ಗಳನ್ನು ಪರಿಚಯಿಸಲು ಯೋಜಿಸಿದೆ. ವಿಟಿಎಂಎಸ್ (ವೆಹಿಕಲ್ ಟ್ರ್ಯಾಕಿಂಗ್ & ಮಾನಿಟರಿಂಗ್ ಸಿಸ್ಟಮ್), ಮೊಬೈಲ್ ಅಪ್ಲಿಕೇಶನ್, ನಗದು ರಹಿತ ಪ್ರಯಾಣದಂತಹ ಸೌಕರ್ಯಗಳನ್ನು ನೀಡಲು ಮುಂದಾಗಿದೆ. ಕಳೆದ ತಿಂಗಳು ಶುರು ಮಾಡಿದ 'ನಮ್ಮ ಕಾರ್ಗೋ' ಸೇವೆಯನ್ನು ಪ್ರಸ್ತುತವಿರುವ 20 ಟ್ರಕ್‌ಗಳಿಂದ ವರ್ಷಾಂತ್ಯದೊಳಗೆ 500 ಟ್ರಕ್‌ಗಳಿಗೆ ವಿಸ್ತರಿಸಲು ಸಿದ್ಧತೆ ನಡೆಸುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications