ಕರ್ನಾಟಕಕ್ಕೆ ತ್ರಿಬಲ್ ಧಮಾಕ: ಕಡಿಮೆ ಖರ್ಚಿನ 1 ಅಮೃತ್ ಭಾರತ್, 2 ವಂದೇ ಭಾರತ್‌ಗೆ ಡಿ.30ರಂದು ಚಾಲನೆ
ದೇಶದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲುಗಳು ಪ್ರಯಾಣಿಕರಿಗೆ ಐಷಾರಾಮಿ ಸೌಲಭ್ಯ ಒದಗಿಸುವ ಮೂಲಕ ಜನಮನ್ನಣೆ ಗಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 30ರಂದು 2 ಅಮೃತ್ ಭಾರತ್ ಹಾಗೂ 6 ವಂದೇ ಭಾರತ್ ರೈಲುಗಳನ್ನು ಲೋಕಾರ್ಪಣೆಗೊಳಿಸುವ ಸಾಧ್ಯತೆಯಿದೆ.
ಹೊಸ ರೈಲು ನಿಲ್ದಾಣ ಹಾಗೂ ಮರ್ಯಾದಾ ಪುರುಷೋತ್ತಮ ಶ್ರೀರಾಮ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಡಿ.30ಕ್ಕೆ ಅಯೋಧ್ಯೆಗೆ ಭೇಟಿ ನೀಡುವ ನಿರೀಕ್ಷೆಯಿದೆ. ಅಂದು ಈ ರೈಲುಗಳಿಗೆ ಚಾಲನೆ ನೀಡಲಿದ್ದಾರೆ ಎಂದು ವರದಿಯಾಗಿದೆ. ಪಶ್ಚಿಮ ಬಂಗಾಳದ ಮಾಲ್ಡಾ (Malda) - ಬೆಂಗಳೂರು (Bengaluru) ಮತ್ತು ದೆಹಲಿ (Delhi) - ದರ್ಬಂಗಾ (Darbhanga) ಮಧ್ಯೆ ಸಂಚರಿಸಲಿರುವ ಅಮೃತ್ ಭಾರತ್ ರೈಲುಗಳನ್ನು ಉದ್ಘಾಟಿಸಲಿದ್ದಾರೆ.

ತಮಿಳುನಾಡಿನ ಕೊಯಮತ್ತೂರು (Coimbatore) - ಬೆಂಗಳೂರು (Bengaluru), ಮಂಗಳೂರು (Mangaluru) - ಗೋವಾದ ಮಡ್‌ಗಾಂವ್ (Madgaon), ಅಯೋಧ್ಯೆ - ಆನಂದವಿಹಾರ್, ನವದೆಹಲಿ - ವೈಷ್ಣೋದೇವಿ, ಅಮೃತಸರ - ನವದೆಹಲಿ, ಹಾಗೂ ಜಲ್ನಾ - ಮುಂಬೈ ನಡುವೆ ಕಾರ್ಯಾಚರಣೆ ನಡೆಸಲಿರುವ 6 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದ್ದಾರೆ.
ಕರ್ನಾಟಕವು ಇದೇ ಮೊದಲ ಬಾರಿಗೆ ಕಡಿಮೆ ಖರ್ಚಿನ ಅಮೃತ್ ಭಾರತ್‌ಗೆ ಸಾಕ್ಷಿಯಾಗಲಿದೆ. ಈ ಹಿಂದೆ ಇದನ್ನು ವಂದೇ ಸಾಧಾರಣ್ (Vande Sadharan) ಎಂದು ಕರೆಯಲಾಗುತ್ತಿತ್ತು. ಅಮೃತ್ ಭಾರತ್ ರೈಲುವೊಂದನ್ನು ಅಭಿವೃದ್ಧಿಪಡಿಸಲು ರೈಲ್ವೆ ಇಲಾಖೆಯು ರೂ.65 ಕೋಟಿ ಖರ್ಚು ಮಾಡುತ್ತಿದೆ ಎಂದು ಅಂದಾಜಿಸಲಾಗಿದೆ..ಈ ರೈಲಿನಲ್ಲಿ ಸುಮಾರು 1,800 ಮಂದಿ ಆರಾಮದಾಯವಾಗಿ ಪ್ರಯಾಣಿಸಬಹುದು.

ಅಮೃತ್ ಭಾರತ್ ಗರಿಷ್ಠ ವೇಗಮಿತಿಯನ್ನು ಗಂಟೆಗೆ 130 ಕಿಮೀ.ಗೆ ಸೀಮಿತಗೊಳಿಸಬಹುದು. ಈ ರೈಲು, ಮುಂಭಾಗ - ಹಿಂಭಾಗ ಎಂಜಿನ್ ಹೊಂದಿದ್ದು, ದ್ವಿತೀಯ ದರ್ಜೆಯ ಸ್ಲೀಪರ್ ಕೋಚ್ ಹಾಗೂ ಕಾಯ್ದಿರಿಸದ ಕೋಚ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಹವಾನಿಯಂತ್ರಿತ (ಎಸಿ) ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲುಗಳು ಇರುವುದಿಲ್ಲ. ಸಿಸಿಟಿವಿ, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಎಲ್‌ಇಡಿ ಲೈಟ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಇರಲಿವೆ.
ಕಡಿಮೆ ಖರ್ಚಿನ ಅಮೃತ್ ಭಾರತ್ ರೈಲುಗಳನ್ನು ಹಗಲು - ರಾತ್ರಿ ಸಂಚಾರಕ್ಕೆ ಬಳಕೆ ಮಾಡುವಂತೆ ವಿನ್ಯಾಸ ಮಾಡಲಾಗಿದ್ದು, 22 ಕೋಚ್‌ಗಳನ್ನು ಹೊಂದಿರುವ ಈ ರೈಲು 800 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರವನ್ನು ಕ್ರಮಿಸಬಲ್ಲದು. ಈ ರೈಲು ಅ.29 ರಂದು ಮುಂಬೈನ ವಾಡಿ ಬಂದರ್ ಯಾರ್ಡ್‌ಗೆ ಆಗಮಿಸಿತ್ತು. ನವೆಂಬರ್ 8ರಂದು ಅಹಮದಾಬಾದ್ - ಮುಂಬೈ ನಡುವೆ ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರವನ್ನು ನಡೆಸಿತ್ತು.

ಬಹುನೀರಿಕ್ಷಿತ ಮಂಗಳೂರು ಸೆಂಟ್ರಲ್ (Mangaluru Central) - ಮಡ್‌ಗಾಂವ್ (Madgaon) ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೂ ಡಿಸೆಂಬರ್ 30 ರಂದೇ ಚಾಲನೆ ದೊರೆಯಲಿದೆ. ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ, ಮಂಗಳೂರಿನಿಂದ ಬೆಳಗ್ಗೆ 8.30ಕ್ಕೆ ಹೊರಡುವ ಈ ರೈಲು ಮಧ್ಯಾಹ್ನ 1.05ಕ್ಕೆ ಮಡಗಾಂವ್ (ಗೋವಾ) ತಲುಪಲಿದೆ. ಅಲ್ಲಿಂದ ಸಂಜೆ 6.10ಕ್ಕೆ ಸಂಚಾರವನ್ನು ಆರಂಭಿಸಿ, ರಾತ್ರಿ 10.45ಕ್ಕೆ ಮಂಗಳೂರು ಸೆಂಟ್ರಲ್‌ಗೆ ಬರಲಿದೆ.
ಸುಮಾರು 320 ಕಿ.ಮೀ ದೂರವನ್ನು ವಂದೇ ಭಾರತ್ ಎಕ್ಸ್‌ಪ್ರೆಸ್ ಬೇಗನೇ ಕ್ರಮಿಸಲಿದ್ದು, ಮಾರ್ಗ ಮಧ್ಯೆ ಉಡುಪಿ (Udupi) ಮತ್ತು ಕಾರವಾರ (Karwar)ದಲ್ಲಿ ನಿಲುಗಡೆಯಾಗಲಿದೆ ಎನ್ನಲಾಗಿದೆ. ಈ ಹಿಂದೆ, ಸೆಪ್ಟೆಂಬರ್ 22 ರಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಮಂಗಳೂರು-ಮಡಗಾಂವ್, ಮಂಗಳೂರು-ಬೆಂಗಳೂರು ನಡುವೆ ವಂದೇ ಭಾರತ್ ಸೇವೆ ಆರಂಭಿಸುವಂತೆ ಮನವಿ ಮಾಡಿದ್ದರು.
ಬೆಂಗಳೂರು (Bengaluru) - ಕೊಯಮತ್ತೂರು (Coimbatore) ಮಧ್ಯೆಯೂ ವಂದೇ ಭಾರತ್ ಎಕ್ಸ್‌ಪ್ರೆಸ್ ಲೋಕಾರ್ಪಣೆಯಾಗಲಿದ್ದು, ಈ ರೈಲು 8 ಕೋಚ್‌ಗಳನ್ನು ಒಳಗೊಂಡಿರಲಿದೆ. ಇವೆರೆಡು ನಗರಗಳ ನಡುವೆ ಕೇವಲ 5 ಗಂಟೆಗಳಲ್ಲಿ ಸಂಚಾರಲಿದೆ. ವಂದೇ ಭಾರತ್ ರೈಲುಗಳು ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದ್ದು, ಆರಾಮದಾಯಕ ಆಸನಗಳು, ವೈಫೈ ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲುಗಳನ್ನು ಪಡೆದುಕೊಂಡಿವೆ.


Click it and Unblock the Notifications