ಕರೋನಾ ವೈರಸ್ ತಡೆಗಟ್ಟಲು ಡ್ರೋನ್ ಜೊತೆಗೆ ರೋಬೋಟ್ ತಂತ್ರಜ್ಞಾನ ಬಳಕೆ
ವಿಶ್ವಾದ್ಯಂತ ಈಗಾಗಲೇ 17 ಸಾವಿರಕ್ಕಿಂತಲೂ ಹೆಚ್ಚು ಜನರನ್ನು ಬಲಿ ಪಡೆದಿರುವ ಕರೋನಾ ವೈರಸ್ ಮಹಾಮಾರಿಯ ತಡೆಗೆ ಜನಗತ್ತಿನ ಎಲ್ಲಾ ರಾಷ್ಟ್ರಗಳು ಶಕ್ತಿ ಮೀರಿ ಪ್ರಯತ್ನಗಳನ್ನು ನಡೆಸಿದ್ದು, ಕರ್ನಾಟಕ ಸರ್ಕಾರವು ಸಹ ಹಲವು ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ.

ಜಗತ್ತಿನಾದ್ಯಂತ ಇದುವರೆಗೆ 3.95 ಲಕ್ಷ ಜನರಲ್ಲಿ ಕರೋನಾ ವೈರಸ್ ಸೋಂಕು ಪತ್ತೆಯಾಗಿದ್ದು, ಇದರಲ್ಲಿ 17,235 ಜನ ಪ್ರಾಣಕಳೆದುಕೊಂಡಿದ್ದಾರೆ. ಇದುವರೆಗೆ 103,736 ಜನ ಮಾತ್ರವೇ ಸೋಂಕಿನಿಂದ ಗುಣಮುಖರಾಗಿದ್ದು, 274,782 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಶೇ.4 ಸೋಂಕಿತರ ಆರೋಗ್ಯವು ತೀರಾ ಶೋಚನಿಯವಾಗಿದ್ದು, ರೋಗ ಹರಡುವಿಕೆ ತಡೆಯಲು ಹಲವಾರು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.

ಕರೋನಾ ವೈರಸ್ ಅನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಈಗಗಾಲೇ ಕೇಂದ್ರ ಸರ್ಕಾರ ಸೇರಿದಂತೆ ವಿವಿಧ ರಾಜ್ಯಗಳು ಸಹ ಗರಿಷ್ಠ ಮಟ್ಟದ ಮುಂಜಾಗ್ರತ ಕ್ರಮಗಳೊಂದಿಗೆ ಲಾಕ್ ಡೌನ್ ಮಾಡಲಾಗಿದ್ದು, ಕರ್ನಾಟಕ ಸರ್ಕಾರ ಸಹ ಹಲವು ಸುಧಾರಿತ ತಂತ್ರಜ್ಞಾನಗಳ ಸಹಾಯದೊಂದಿಗೆ ವೈರಸ್ ಮಟ್ಟ ಹಾಕುತ್ತಿದೆ.

ಜೊತೆಗೆ ದೇಶದ ಇತರೆ ರಾಜ್ಯಗಳಿಂತಲೂ ಹೆಚ್ಚು ಕರೋನಾ ಪಾಸಿಟಿವ್ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿರುವುದು ಜನರಲ್ಲಿ ಮಾತ್ರವಲ್ಲದೆ ಸರ್ಕಾರವನ್ನು ಚಿಂತೆಗೀಡು ಮಾಡಿದ್ದು, ವೈರಸ್ ಹರಡುವಿಕೆಯ 3ನೇ ಮತ್ತು 4ನೇ ಹಂತವನ್ನು ಕುಗ್ಗಿಸಲು ಕೆಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ.

ರಾಜ್ಯ ಗಡಿಭಾಗಗಳನ್ನು ಈಗಾಗಲೇ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ತುರ್ತು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಈ ವೇಳೆಯೂ ವೈರಸ್ ಹರಡದಂತೆ ನಂಜು ನಿರೋಧಕ(ಡಿಸ್ ಇನ್ಫೆಕ್ಷನ್) ರಾಸಾಯನಿಕವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಯ ಸಹಾಯದೊಂದಿಗೆ ಸಿಂಪರಣೆ ಮಾಡಲಾಗುತ್ತಿದ್ದು, ಇದೀಗ ಸೋಂಕು ಪಿಡಿತ ನಗರದೊಳಗಿನ ಸ್ವಚ್ಚತೆಗೂ ಹೆಚ್ಚಿನ ಆದ್ಯತೆ ನೀಡುವ ಮೂಲಕ ನಂಜು ನಿರೋಧಕವನ್ನು ಸಿಂಪರಣೆ ಮಾಡಲಾಗುತ್ತಿದೆ.

ಬೆಂಗಳೂರಿನ ಮಹಾನಗರ ಪಾಲಿಕೆಯು ಒಂದು ಹೆಜ್ಜೆ ಮುಂದೆ ಹೋಗಿ ನಂಜು ನಿರೋಧಕ(ಡಿಸ್ ಇನ್ಫೆಕ್ಷನ್) ಸಿಂಪರಣೆಗಾಗಿ ಡ್ರೋನ್ ಬಳಕೆ ಮಾಡುತ್ತಿದ್ದು, ಅತಿ ಕಡಿಮೆ ಸಮಯದಲ್ಲಿ ಇದು ಗರಿಷ್ಠ ಪ್ರದೇಶಗಳಲ್ಲಿ ನಂಜು ನಿರೋಧಕವನ್ನು ಸಿಂಪರಣೆ ಮಾಡಲು ಸಾಧ್ಯವಾಗುತ್ತಿದೆ.

ನಗರದಲ್ಲಿಂದು ಪ್ರಾಯೋಗಿಕವಾಗಿ ಡ್ರೋನ್ ಬಳಕೆ ಮಾಡಿ ನಂಜು ನಿರೋಧಕ ಔಷಧಿಯನ್ನು ಸಿಂಪರಣೆ ಮಾಡಲಾಗಿದ್ದು, ಸ್ವಚ್ಚತೆಗೆ ಮೆಕ್ಯಾನಿಕಲ್ ಸ್ವೀಪರ್ ಗಳನ್ನು ನಿಯೋಜಿಸಲಾಗಿದೆ. ಬಿಡಬ್ಲ್ಯೂ ಎಸ್ ಎಸ್ ಬಿಯ ಜೆಟ್ಟಿಂಗ್ ಮೆಷೀನ್ ಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ.

ಇದರೊಂದಿಗೆ ಕರೋನಾ ವೈರಸ್ ಸೋಂಕಿತರ ಮೇಲೆ ನಿಗಾ ಇಡಲು ವೈದ್ಯಕೀಯ ಕ್ಷೇತ್ರದಲ್ಲಿ ರೋಬೋಟಿಕ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದ್ದು, ಇದು ಚಿಕಿತ್ಸೆ ನೀಡುವ ವೈದ್ಯರಿಗೂ ವೈರಸ್ ಹರಡುವ ಸಾಧ್ಯತೆಗಳನ್ನು ತಗ್ಗಿಸಲು ಸಹಕಾರಿಯಾಗಲಿದೆ.

ಇನ್ನು ಕೈಗಾರಿಕೊದ್ಯಮವು ಸಂಪೂರ್ಣ ಸ್ತಬ್ದಗೊಂಡಿದ್ದು, ವೈರಸ್ ಮಹಾಮಾರಿಯಿಂದಾಗಿ ತಪ್ಪಿಸಿಕೊಳ್ಳಲು ಆಟೋಉತ್ಪಾದನಾ ಕಂಪನಿಗಳು ಕೂಡಾ ತಾತ್ಕಾಲಿಕವಾಗಿ ವಾಹನಗಳ ಉತ್ಪಾದನೆಯನ್ನು ಬಂದ್ ಮಾಡಿವೆ.

ಇದಲ್ಲದೇ ಪರಿಸ್ಥಿತಿಯ ನಿಯಂತ್ರಣಕ್ಕಾಗಿ ಮುಂದಿನ 21 ದಿನ ತನಕ ಮತ್ತೆ ಇಡೀ ದೇಶವನ್ನೇ ಲಾಕ್‌ಡೌನ್ ಮಾಡಲಾಗಿದ್ದು, ಭಾರತದಲ್ಲಿ ಇದುವರೆಗೆ 499ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವುದಲ್ಲದೆ 10ಕ್ಕೂ ಹೆಚ್ಚು ಜನ ಪ್ರಾಣಕಳೆದುಕೊಂಡಿದ್ದಾರೆ.


Click it and Unblock the Notifications