ಎಲ್ಲಾ ಆಟೋಗಳಲ್ಲಿ ಒಂದು ವಾರದಲ್ಲಿ ಮೀಟರ್ ಅಳವಡಿಸಲು ಆದೇಶ
ಭಾರತದಲ್ಲಿ ಆಟೋ ರಿಕ್ಷಾಗಳನ್ನು ಬಳಸುವವರ ಸಂಖ್ಯೆಯು ಹೆಚ್ಚಿನ ಪ್ರಮಾಣದಲ್ಲಿದೆ. ಆದರೆ ಬಹುತೇಕ ಆಟೋ ಚಾಲಕರು ತಮ್ಮ ಆಟೋಗಳಲ್ಲಿ ಮೀಟರ್‍ಗಳನ್ನು ಅಳವಡಿಸಿಲ್ಲ. ಬದಲಿಗೆ ಇಷ್ಟು ದೂರಕ್ಕೆ ಇಷ್ಟು ಶುಲ್ಕ ಎಂಬಂತೆ ವಸೂಲಿ ಮಾಡುತ್ತಾರೆ.

ಇದರಿಂದಾಗಿ ಆಟೋದಲ್ಲಿ ಸಂಚರಿಸುವವರು ಹೆಚ್ಚು ತೊಂದರೆಗೆ ಒಳಗಾಗುತ್ತಿದ್ದಾರೆ. ಈ ಸಮಸ್ಯೆಯು ಕರ್ನಾಟಕದಲ್ಲಿ ಮಾತ್ರವಲ್ಲದೇ ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಹರಡಿಕೊಂಡಿದೆ. ಹರಿಯಾಣದ ಗುರುಗ್ರಾಮದಲ್ಲಿರುವ ಆಟೋಗಳಲ್ಲಿ ಮೀಟರ್‍ಗಳನ್ನು ಅಳವಡಿಸಿಲ್ಲ. ಇದರಿಂದಾಗಿ ನಿಗದಿ ಪಡಿಸಿರುವುದಕ್ಕಿಂತ ಹೆಚ್ಚಿನ ಶುಲ್ಕವನ್ನು ವಸೂಲಿ ಮಾಡುತ್ತಿದ್ದಾರೆ.

ಇದರ ಬಗ್ಗೆ ಹೆಚ್ಚಿನ ಸಂಖ್ಯೆಯ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಅಲ್ಲಿನ ಸಾರಿಗೆ ಇಲಾಖೆಯು ಫೆಬ್ರವರಿ 17ರಂದು ಆದೇಶವೊಂದನ್ನು ಹೊರಡಿಸಿ ಇನ್ನು ಒಂದು ವಾರದೊಳಗೆ ಎಲ್ಲಾ ಆಟೋಗಳಲ್ಲಿ ಮೀಟರ್ ಅಳವಡಿಸಿಕೊಳ್ಳಬೇಕೆಂದು ಆದೇಶಿಸಿದೆ.

ಇಲ್ಲದಿದ್ದಲ್ಲಿ 1988ರ ಮೋಟಾರು ವಾಹನ ಕಾಯ್ದೆ ಹಾಗೂ 1989ರ ಮೋಟಾರು ಟ್ರಾಫಿಕ್ ಕಾಯ್ದೆಯನ್ವಯ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ. ಎಂಸಿಜಿ ಗಡಿಯ ಐದು ಕಿ.ಮೀ ಹೊರಗೆ ಕಾರ್ಯನಿರ್ವಹಿಸುವ ಆಟೋಗಳಲ್ಲಿ ಮೀಟರ್ ಅಳವಡಿಸುವಂತೆ ಆದೇಶಿಸಲಾಗಿದೆ.

ಈ ಮೀಟರ್‍ಗಳನ್ನು ಅಳವಡಿಸಿಕೊಳ್ಳಲು ಆಟೋ ಡ್ರೈವರ್‍ಗಳು ಸರ್ಕಾರವು ನಿಗದಿಪಡಿಸಿರುವ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಮೀಟರ್‍ಗಳಲ್ಲಿ ಪ್ರತಿ ಕಿ.ಮೀಗೆ ರೂ.12 ನಿಗದಿಪಡಿಸಲಾಗಿದೆ. ನಂತರದ ಪ್ರತಿ ಕಿ.ಮೀಗೆ ರೂ.8 ನಿಗದಿಪಡಿಸಲಾಗಿದೆ.

ರಾತ್ರಿ ವೇಳೆಯಲ್ಲಿ 11 ಗಂಟೆಯಿಂದ 5 ಗಂಟೆಯವರೆಗೆ 25% ಹೆಚ್ಚು ಶುಲ್ಕವನ್ನು ವಿಧಿಸಬಹುದಾಗಿದೆ. ವೇಟಿಂಗ್ ಚಾರ್ಜ್ ಅನ್ನು ಪ್ರತಿ ಗಂಟೆಗೆ ರೂ.30 ಎಂದು ನಿಗದಿಪಡಿಸಲಾಗಿದೆ. ಪ್ರಯಾಣಿಕರು ಹೆಚ್ಚುವರಿ ಲಗೇಜ್ ತಂದರೆ, ಹೆಚ್ಚುವರಿಯಾಗಿ ರೂ.7.50 ವಿಧಿಸಬಹುದಾಗಿದೆ.

ಶಾಪಿಂಗ್ ಪ್ಯಾಕ್‍ಗಳಿಗೆ ಹಾಗೂ ಚಿಕ್ಕ ಗಾತ್ರದ ಸೂಟ್‍ಕೇಸ್‍ಗಳಿಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸುವಂತಿಲ್ಲ. ಇದರ ಜೊತೆಗೆ ಆಟೋರಿಕ್ಷಾಗಳಲ್ಲಿ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಪ್ರಯಾಣಿಕರನ್ನು ಕರೆದೊಯ್ಯುವಂತಿಲ್ಲ.

ಓವರ್‍ಲೋಡ್ ಮಾಡಿ ಪ್ರಯಾಣಿಕರನ್ನು ಕರೆದೊಯ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ. ಸಾರಿಗೆ ಇಲಾಖೆಯ ಈ ಹೊಸ ನಿಯಮದಿಂದಾಗಿ ಆಟೋ ರಿಕ್ಷಾಗಳಲ್ಲಿ ಓಡಾಡುವವರ ಮುಖದಲ್ಲಿ ಸಂತಸ ಮೂಡಿದೆ.

ಇದೇ ರೀತಿಯ ಆದೇಶವನ್ನು ಭಾರತದ ಬೇರೆ ರಾಜ್ಯಗಳಲ್ಲಿರುವ ಸಾರಿಗೆ ಇಲಾಖೆಯ ಅಧಿಕಾರಿಗಳೂ ಸಹ ಹೊರಡಿಸಲಿ ಎಂಬುದು ಸಾರ್ವಜನಿಕರ ಆಗ್ರಹ. ನಿಯಮಗಳಿದ್ದರೂ ಸಹ ಅವುಗಳನ್ನು ಸರಿಯಾಗಿ ಪಾಲಿಸುವುದಿಲ್ಲ. ಗುರುಗ್ರಾಮದ ಜನರು ಈ ನಿಯಮವಾದರೂ ಸರಿಯಾಗಿ ಪಾಲನೆಯಾಗಲಿ ಎಂದು ಬಯಸುತ್ತಿದ್ದಾರೆ.


Click it and Unblock the Notifications