ಸಾಮಾನ್ಯರಂತೆ KSRTC ಬಸ್‍ನಲ್ಲಿ ಪ್ರಯಾಣಿಸಿ ಸರಳತೆ ಮೆರೆದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ - KSRTC) ಪ್ರಯಾಣಿಕರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸುವ ಮೂಲಕ ಜನಮನ್ನಣೆ ಗಳಿಸಿದೆ. ಇತರೆ ರಾಜ್ಯಗಳ ಸಾರಿಗೆ ನಿಗಮಗಳಿಗೆ ಹೋಲಿಸಿದರೆ, ಕೆಎಸ್‌ಆರ್‌ಟಿಸಿ ಗರಿಷ್ಠ ಸಂಖ್ಯೆಯಲ್ಲಿ ಪ್ರೀಮಿಯಂ ಬಸ್‍ಗಳನ್ನು ಹೊಂದಿದ್ದು, ಪ್ರಯಾಣಿಕರನ್ನು ಆರಾಮದಾಯಕ ಹಾಗೂ ಸುರಕ್ಷಿತವಾಗಿ ಗಮ್ಯ ಸ್ಥಾನವನ್ನು ತಲುಪಿಸುತ್ತದೆ.
ಕೆಎಸ್‌ಆರ್‌ಟಿಸಿ ಬಸ್‍ಗಳಲ್ಲಿ ಪ್ರಯಾಣಿಸುವಂತೆ ಸಾರ್ವಜನಿಕರನ್ನು ಉತ್ತೇಜಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Health Minister Dinesh Gundu Rao) ಅವರು, ಅಂಬಾರಿ ಡ್ರಿಮ್ ಕ್ಲಾಸ್‌ನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸಿದ್ದಾರೆ. ಈ ವೇಳೆ, ಜನರೊಂದಿಗೂ ಮಾತುಕತೆಯನ್ನು ನಡೆಸಿದ ಸಚಿವರು, ರಾಜ್ಯ ಸರ್ಕಾರದ ಯೋಜನೆಗಳ ಕುರಿತಾಗಿಯೂ ಚರ್ಚಿಸಿದ್ದಾರೆ. ದಿನೇಶ್ ಗುಂಡೂರಾವ್ ಅವರ ಸರಳತೆಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಕಳೆದ ವರ್ಷದ ಡಿಸೆಂಬರ್ ನಲ್ಲಿ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಅವರು ಕೂಡ ಬಿಎಂಟಿಸಿಯ ವಾಯು ವಜ್ರ ಬಸ್‌ನಲ್ಲಿ ಪ್ರಯಾಣಿಸಿದ್ದರು. ಈ ಬಗ್ಗೆ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಅವರು, 'ಕಚೇರಿಗೆ ಹೋಗುವ ದಾರಿಯಲ್ಲಿ ನನ್ನ ಕಾರು ಕೆಟ್ಟು ನಿಂತಿತು. ಚಿತ್ರದಲ್ಲಿರುವ ಕಂಡಕ್ಟರ್ ರಮೇಶ್ ಬಾಬು, ಚಾಲಕ ಸಿದ್ದರಾಜು ಅವರಿಗೆ ಹೇಳಿ, ಬಸ್ ನಿಲ್ಲಿಸಿ ನನ್ನನ್ನು ಹತ್ತಿಸಿಕೊಂಡು ಕರೆದುಕೊಂಡು ಹೋದರು. ಬಿಎಂಟಿಸಿ ಸೇವೆಗೆ ಧನ್ಯವಾದ' ಎಂದು ಬರೆದುಕೊಂಡಿದ್ದರು.
ಅದಕ್ಕೂ ಮೊದಲು ಸೆಪ್ಟೆಂಬರ್ 11, 2023ರಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ಬಂದ್ ಗೆ ಕರೆ ನೀಡಿತ್ತು. ಪರಿಣಾಮ, ಖಾಸಗಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಅಂದು ಅನಿಲ್ ಕುಂಬ್ಳೆ ಅವರು, ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸಿದ್ದರು. ಆ ಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶೇರ್ ಮಾಡಿದ್ದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), 1,000 ಪ್ರೀಮಿಯಂ ಸೇರಿದಂತೆ ಒಟ್ಟು 8,234 ಬಸ್‌ಗಳನ್ನು ಓಡಿಸುತ್ತಿದೆ. ಪ್ರತಿದಿನ 7,000 ಕಿಲೋಮೀಟರ್ ಸಂಚರಿಸುವ ನಿಗಮದ ಬಸ್‌ಗಳು, 23 ಲಕ್ಷ ಪ್ರಯಾಣಿಕರನ್ನು ಸುರಕ್ಷಿತವಾಗಿ ನಿರ್ದಿಷ್ಟ ಗಮ್ಯ ಸ್ಥಾನವನ್ನು ತಲುಪಿಸುತ್ತವೆ. ಕೆಎಸ್‌ಆರ್‌ಟಿಸಿ ಐರಾವತ, ಫ್ಲೈಬಸ್, ಐರಾವತ ಕ್ಲಬ್ ಕ್ಲಾಸ್, ಅಂಬಾರಿ, ಅಂಬಾರಿ ಉತ್ಸವ್, ಪಲ್ಲಕ್ಕಿ ಹಾಗೂ ರಾಜಹಂಸದಂತಹ ಬಸ್‌ಗಳನ್ನು ಹೊಂದಿದೆ.
ಕೆಎಸ್‌ಆರ್‌ಟಿಸಿಯ ಬಸ್‌ಗಳು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಹಾಸನ, ಮೈಸೂರು, ಮಂಡ್ಯ ಮತ್ತು ಚಾಮರಾಜನಗರದಿಂದ ಕಾರ್ಯಾಚರಣೆಯನ್ನು ನಡೆಸುತ್ತವೆ. ರಾಜ್ಯ ಹಾಗೂ ಹೊರರಾಜ್ಯದ ಹಲವು ನಗರಗಳಿಗೆ ಸಂಪರ್ಕದ ಕೊಂಡಿಯಾಗಿದ್ದು, ಸರಿ ಸುಮಾರು 34,904 ಸಿಬ್ಬಂದಿ ಹಗಲು - ರಾತ್ರಿ ಕೆಲಸ ಮಾಡುತ್ತಾರೆ.

ಫೆಬ್ರವರಿ 5, 2024ರಂದು ಕೆಎಸ್‌ಆರ್‌ಟಿಸಿ ಹೊಸ 100 ಅಶ್ವಮೇಧ ಕ್ಲಾಸಿಕ್ ಹೆಸರಿನ ಬಸ್‌ಗಳನ್ನು ಪರಿಚಯಿಸಿತ್ತು. ಇವು ಅತ್ಯಾಧುನಿಕ ಸೌಲಭ್ಯವನ್ನು ಪಡೆದಿದ್ದು, 52 ಆಸನಗಳು, ಮುಂಭಾಗ & ಹಿಂಭಾಗ ಎಲ್‌ಇಡಿ ಡೆಸ್ಟಿನೇಶನ್ ಬೋರ್ಡ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಎಮರ್ಜೆನ್ಸಿ ಬಟನ್, ಸೆನ್ಸರ್ ಆಧಾರಿತ ಡೋರ್ (ಬಾಗಿಲು) ಮತ್ತು ಜಿಪಿಎಸ್ ಒಳಗೊಂಡಿವೆ. ಈ ಬಸ್‌ಗಳಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರು ಕೂಡ ಉಚಿತವಾಗಿ ಪ್ರಯಾಣಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications