ದಿವಂಗತ ನಟ ಪುನೀತ್ ರಾಜ್‌ಕುಮಾರ್ ಗೌರವಾರ್ಥ ಹೆಲ್ಮೆಟ್ ಅಭಿಯಾನ
ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಗೌರವಾರ್ಥ ಗುಣಮಟ್ಟದ ಹೆಲ್ಮೆಟ್‌ಗಳ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೆಂಗಳೂರು ಪೊಲೀಸರು ಹೊಸ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.

ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರನ್ನು ಗೌರವಿಸುವ ಸಲುವಾಗಿ, ದ್ವಿಚಕ್ರ ವಾಹನಗಳಾದ ಮೋಟಾರ್‌ಸೈಕಲ್ ಮತ್ತು ಸ್ಕೂಟರ್‌ಗಳನ್ನು ಓಡಿಸುವಾಗ ಉತ್ತಮ ಗುಣಮಟ್ಟದ ಹೆಲ್ಮೆಟ್‌ಗಳನ್ನು ಧರಿಸುವುದರಿಂದವ ಹೇಗೆ ಸುರಕ್ಷತವಾಗಿರಬಹುದು ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಈ ಅಭಿಯಾನವನ್ನು ಆಯೋಜಿಸಿದ್ದರು.

ಬೆಂಗಳೂರು ಪೊಲೀಸರು ಪ್ರಾರಂಭಿಸಿದ ಈ ಇತ್ತೀಚಿನ ಸಾರ್ವಜನಿಕ ಜಾಗೃತಿ ಅಭಿಯಾನವು, ರಸ್ತೆ ಅಪಘಾತಗಳ ಸಮಯದಲ್ಲಿ ದ್ವಿಚಕ್ರ ವಾಹನ ಸವಾರರ ಜೀವವನ್ನು ಉಳಿಸುವಲ್ಲಿ ಉತ್ತಮ ಗುಣಮಟ್ಟದ ಹೆಲ್ಮೆಟ್‌ಗಳ ಪಾತ್ರವನ್ನು ಕೇಂದ್ರೀಕರಿಸುತ್ತದೆ. ಇನ್ನು ಇದೇ ವಳೇ ಪುನೀತ್ ರಾಜ್‌ಕುಮಾರ್ ಅವರನ್ನು ಸನ್ಮಾನಿಸುವ ಸಾರ್ವಜನಿಕ ಜಾಗೃತಿ ಅಭಿಯಾನವನ್ನು ಪುನಿತ್‌ರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಉದ್ಘಾಟಿಸಿದರು.

ಹೆಲ್ಮೆಟ್ ಧರಿಸಲು ಪುನೀತ್ ಮನವಿ
ನಟ ಪುನೀತ್ ರಾಜ್‌ಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರು ಹೆಲ್ಮೆಟ್ ಕುರಿತು ಸಾರ್ವಜನಿಕರಿಗೆ ಜಗೃತಿ ನೀಡಿರುವ 1.2 ನಿಮಿಷಗಳ ವಿಡಿಯೋ ಸಂದೇಶವನ್ನು ಆಯುಕ್ತ ಕಮಲ್ ಪಂತ್ ಬಿಡುಗಡೆಗೊಳಿಸಿದರು. ಈ ವಿಡಿಯೋ ನೋಡಿ ಪುನೀತ್ ಪತ್ನಿ ಅಶ್ವಿನಿ ಸೇರಿದಂತೆ ಹಲವರು ಅಭೀಮಾನಿಗಳು ಭಾವುಕರಾದರು.

ದಯವಿಟ್ಟು ವಾಹನಗಳನ್ನು ಹೆಲ್ಮೆಟ್ ಇಲ್ಲದೆ ಓಡಿಸಬೇಡಿ. ಟ್ರಾಫಿಕ್ ರೂಲ್ಸ್ ಫಾಲೋ ಮಾಡಿ. ಟೂವ್ಹೀಲರ್‌ಗಳಲ್ಲಿ ಹೆಲ್ಮೆಟ್ ಬಳಸೋದನ್ನು ಮರೆಯಬೇಡಿ. ನಿಮ್ಮ ಹಿಂದೆ ಕುಳಿತವರಿಗೂ ಹೆಲ್ಮೆಟ್ ಹಾಕಿಸಿ. ಒಳ್ಳೆಯದಾಗಲಿ ಟೇಕ್ ಕೇರ್' ಎಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಂದೇಶ ನೀಡಿದ್ದಾರೆ.

ಜೀವ ಅಮೂಲ್ಯ. ಬೈಕ್ ಚಲಾಯಿಸುವಾಗ ಐಎಸ್‌ಐ ಮಾರ್ಕ್ ಇರುವ ಹೆಲ್ಮೆಟ್ ಬಳಸಿ ಜೀವ ಉಳಿಸಲಿದೆ. ನಮ್ಮೆಲ್ಲರ ಪ್ರೀತಿಯ ಅಪ್ಪು ಇದನ್ನೇ ಹೇಳ್ತಾ ಇದ್ರು. ಅವರ ಮಾತನ್ನು ಗೌರವಿಸೋಣ. ಹೆಲ್ಮೆಟ್ ಜೀವ ರಕ್ಷಕ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ.

ಜಂಟಿ ಆಯುಕ್ತ (ಸಂಚಾರ) ಡಾ.ಬಿ.ಆರ್.ರವಿಕಾಂತೇಗೌಡ ಮಾತನಾಡಿ, ಸಂಚಾರ ಸುರಕ್ಷತೆ ಬಗ್ಗೆ ಪುನೀತ್ ಕಾಳಜಿ ಹೊಂದಿದ್ದರು. ಹೀಗಾಗಿ ಈ ಅಭಿಯಾನಕ್ಕೆ ಅವರನ್ನೇ ರಾಯಭಾರಿಯಾಗಿ ಆಯ್ಕೆ ಮಾಡಲು ಇಚ್ಛೆ ಇತ್ತು. ಆದರೆ ಸಾಧ್ಯವಾಗಲಿಲ್ಲ. ಹೆಲ್ಮಟ್ ಕುರಿತ ಅಭಿಯಾನವನ್ನು ಪುನೀತ್ ಅವರಿಗೆ ಅರ್ಪಿಸುತ್ತಿದ್ದೇವೆ ಎಂದು ಹೇಳಿದರು.

ಕನ್ನಡದ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಕಳೆದ ವರ್ಷ ಅಕ್ಟೋಬರ್ 29 ರಂದು ಹೃದಯಾಘಾತದಿಂಧ ನಿಧನರಾದರು. ಪವರ್‌ಸ್ಟಾರ್ ನೀಡಿದ್ದ ಮಾತಿನಂತೆ ಅವರ ಕುಟುಂಬ ಸದಸ್ಯರು ಪುನೀತ್ ಅವರ ಕಣ್ಣುಗಳನ್ನು ದಾನ ಮಾಡಿದ್ದಾರೆ. ಅವರ ಕಣ್ಣುಗಳಿಂದ ನಾಲ್ಕು ಜನರಿಗೆ ದೃಷ್ಟಿ ನೀಡಲಾಗಿದೆ.

ಅಲ್ಲದೆ, ನಟನ ವಿಧಿವಿಧಾನಗಳನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಅವರ ಪಾರ್ಥಿವ ಶರೀರವನ್ನು 3 ದಿನಗಳ ಕಾಲ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತು. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ತಂದೆ-ತಾಯಿಯ ಸಮಾಧಿಯ ಪಕ್ಕದಲ್ಲಿ ಪುನೀತ್ ಅವರನ್ನು ಸಮಾಧಿ ಮಾಡಲಾಗಿದೆ.

ಇದರ ಜೊತೆಗೆ ಪುನೀತ್ ಅವರ ಕೊನೆಯ ಚಿತ್ರ ಜೇಮ್ಸ್ ಈಗಾಗಲೇ ಥಿಯೇಟರ್‌ಳಿಗೆ ಅಪ್ಪಳಿಸಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದು ಕರ್ನಾಟಕದ ಜನರಿಗೆ ಭಾವನಾತ್ಮಕ ಚಿತ್ರವಾಗಿದ್ದು, ಸಿನಿಮಾ ರಿಲೀಸ್ ಆದಾಗಿನಿಂದಲೂ ಹೌಸ್‌ಫುಲ್ ಬೋರ್ಡ್‌ಗಳೇ ಕಾಣುತ್ತಿವೆ. ಜೇಮ್ಸ್ ಚಿತ್ರದಲ್ಲಿ ನಟರಾದ ಶ್ರೀಕಾಂತ್, ಆರ್ ಶರತ್‌ಕುಮಾರ್, ಹರೀಶ್ ಪೆರಾಡಿ, ಪ್ರಿಯಾ ಆನಂದ್ ಮತ್ತು ಇನ್ನೂ ಕೆಲ ತಾರಾಗಣವಿದೆ.

ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಜೇಮ್ಸ್ ಸಿನಿಮಾವನ್ನು ಸೋಲೋವಾಗಿ ಬಿಡುಗಡೆ ಮಾಡಲು ಕನ್ನಡ ಚಿತ್ರರಂಗ ನಿರ್ಧರಿಸಿದೆ. ಅಲ್ಲದೇ ಈ ಚಿತ್ರವು ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಂತಹ ವಿವಿಧ ಭಾಷೆಗಳಲ್ಲಿಯೂ ಸಹ ಡಬ್ ಆಗಿದೆ.


Click it and Unblock the Notifications








