Helmet Man Of India ಮನೆ ಮಾರಿ ಉಚಿತ ಹೆಲ್ಮೆಟ್ ಹಂಚಿಕೆ... ಸೆಲಿಬ್ರಿಟಿಗಳು ಮೆಚ್ಚಿದ್ರಷ್ಟೇ ಕಷ್ಟಕ್ಕಾಗಲಿಲ್ಲ!
ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುವ ಜನರಿಗೆ ಉಚಿತವಾಗಿ ಹೆಲ್ಮೆಟ್ ನೀಡುತ್ತಿರುವ ವ್ಯಕ್ತಿಯೊಬ್ಬರು ಸೋಷಿಯಲ್ ವಿಡಿಯೋದಲ್ಲಿ ಸಖತ್ ವೈರಲ್ ಆಗಿದ್ದಾರೆ. ಸುಮ್ಮನೆ ವೈರಲ್ ಆಗುವ ಉದ್ದೇಶವಿದ್ದಿದ್ದರೇ ಕಡಿಮೆ ಗುಣಮಟ್ಟದ ಹೆಲ್ಮೆಟ್ ನೀಡಿ ಸುಮ್ಮನಿರಬಹುದಿತ್ತು. ಆದರೆ ಇವರದ್ದು ನಿಸ್ವಾರ್ಥ ಸೇವೆ, ತಾನಿದ್ದ ಮನೆಯನ್ನೇ ಮಾರಿ ಹೆಲ್ಮೆಟ್‌ಗಳನ್ನು ಹಂಚುತ್ತಿದ್ದಾರೆ.
ಕಳೆದ ತಿಂಗಳು ಆಗ್ರಾ-ಲಖನೌ ಎಕ್ಸ್‌ಪ್ರೆಸ್ ವೇಯಲ್ಲಿ ವಾಹನ ಸವಾರರಿಗೆ ಬಿಹಾರ ಮೂಲದ ರಾಘವೇಂದ್ರ ಕುಮಾರ್ ಉಚಿತ ಹೆಲ್ಮೆಟ್ ನೀಡುವ ವಿಡಿಯೋ ವೈರಲ್ ಆಗಿತ್ತು. ಈ ಹಿಂದೆಯೂ ಇವರ ಹಲವು ವಿಡಿಯೋಗಳು ಅಲ್ಲಲ್ಲಿ ಕಾಣಿಸಿಕೊಂಡಿದ್ದವು, ಆದರೆ ಈ ಬಾರಿ ದೇಶದ ಮೂಲೆ ಮೂಲಗೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಈತನ ನಿಸ್ವಾರ್ಥ ಸೇವೆಗೆ ನೆಟ್ಟಿಗರು ಮೆಚ್ಚಿ ಶ್ಲಾಘಿಸುತ್ತಿದ್ದಾರೆ. ಸದ್ಯ ಇವರನ್ನು 'Helmet man of India' ಎಂದು ಕರೆಯಲಾಗುತ್ತಿದೆ.

ಹೆಲ್ಮೆಟ್ ಹಂಚಲು ಕಾರಣವೇನು?
ಬಿಹಾರ ಮೂಲದ ರಾಘವೇಂದ್ರ ಕುಮಾರ್ ಜೀವನದಲ್ಲಿ ನಡೆದ ಒಂದು ದುರ್ಘಟನೆ ಅವರನ್ನು ಹೀಗೆ ಬದಲಿಸಿದೆ. ಒಂಬತ್ತು ವರ್ಷಗಳ ಹಿಂದೆ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ ನಡೆದಿತ್ತು. ಈ ಅಪಘಾತದಲ್ಲಿ ತನ್ನ ಇಬ್ಬರು ಸ್ನೇಹಿತರನ್ನು ರಾಘವೇಂದ್ರ ಕುಮಾರ್ ಕಳೆದುಕೊಂಡಿದ್ದರು. ಇದರಲ್ಲಿ ಒಬ್ಬರು ರೂಮ್‌ಮೇಟ್ ಮತ್ತು ಇನ್ನೊಬ್ಬರು ಆಪ್ತ ಸ್ನೇಹಿತ, ಈ ಘಟನೆಯು ತೀರ್ವ ಖಿನ್ನತೆಗೆ ಒಳಗಾಗುವಂತೆ ಮಾಡಿತು. ನಂತರ ಉಚಿತ ಹೆಲ್ಮೆಟ್‌ಗಳನ್ನು ವಿತರಿಸಲು ನಿರ್ಧರಿಸಿದರು.
ಇಲ್ಲಿಯವರೆಗೆ ದೇಶಾದ್ಯಂತ 56,000 ಕ್ಕೂ ಹೆಚ್ಚು ಹೆಲ್ಮೆಟ್‌ಗಳನ್ನು ವಿತರಿಸಿರುವ ರಾಘವೇಂದ್ರ ಕುಮಾರ್ ಅವರು, ಸದ್ಯ ಹಣದ ಕೊರತೆ ಎದುರಿಸುತ್ತಿದ್ದಾರೆ. ಹೆಲ್ಮೆಟ್‌ಗಳನ್ನು ಖರೀದಿಸುವ ಸಲುವಾಗಿ ಗ್ರೇಟರ್ ನೋಯ್ಡಾದಲ್ಲಿನ ತಮ್ಮ ಅಪಾರ್ಟ್ಮೆಂಟ್ ಅನ್ನು ಕೂಡ ಮಾರಾಟ ಮಾಡಿದ್ದಾರೆ. ಅವರ ಪತ್ನಿಯ ಆಭರಣಗಳನ್ನು ಅಡವಿಟ್ಟು ಸಾಲ ಪಡೆದಿದ್ದರು. ಆದರೆ ಈಗ ಅವರ ಬಳಿ ಏನೂ ಇಲ್ಲದ ಕಾರಣ ತಮ್ಮ ಗ್ರಾಮಕ್ಕೆ ಹಿಂತಿರುಗಿ ಮಗನನ್ನು ಸರ್ಕಾರಿ ಶಾಲೆಗೆ ಸೇರಿಸಲು ಮುಂದಾಗಿದ್ದಾರೆ.

ರಾಘವೇಂದ್ರ ಅವರು ಸೋನು ಸೂದ್ ಸೇರಿದಂತೆ ಇತರ ಸೆಲೆಬ್ರಿಟಿಗಳ ಹೊರತಾಗಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರಿಂದಲೂ ಶ್ಲಾಘನೆ ಪಡೆದಿದ್ದಾರೆ. "ನನ್ನನ್ನು ಹುಚ್ಚ ಎಂದು ಕರೆದರೂ ಚಿಂತೆಯಿಲ್ಲ ನಾನ್ನ ಪ್ರಯತ್ನಗಳನ್ನು ಮುಂದುವರೆಸುತ್ತೇನೆ. ಮುಂದಿನ ಕೆಲವು ವಾರಗಳಲ್ಲಿ, ನನಗೆ ಹೆಲ್ಮೆಟ್ ಖರೀದಿಸುವ ವೆಚ್ಚ ಹೆಚ್ಚಾಗಲಿದೆ. ಹಾಗಾಗಿ ನಗರದಲ್ಲಿ ಜೀವಿಸುವುದು ಕಷ್ಟವಾಗಲಿದ್ದು, ಬಿಹಾರದ ಕೈಮೂರ್ ಜಿಲ್ಲೆಯ ನನ್ನ ಗ್ರಾಮಕ್ಕೆ ಹಿಂತಿರುಗುತ್ತೇನೆ ಎಂದಿದ್ದಾರೆ.
ನನಗೆ ಆರು ವರ್ಷದ ಮಗನಿದ್ದಾನೆ, ನನ್ನ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ವೆಚ್ಚ ಕಡಿತದ ಕ್ರಮವಾಗಿ ಅಲ್ಲಿ ಸೇರಿಸಲು ನಾನು ಯೋಜಿಸುತ್ತಿದ್ದೇನೆ. ಆದರೆ ಯಾವುದೇ ಕಾರಣಕ್ಕೂ ನಾನು ಹೆಲ್ಮೆಟ್ ಖರೀದಿಸುವುದನ್ನು ಬಿಡುವುದಿಲ್ಲ. ನಿಮ್ಮ ಕೈಯಲ್ಲಾದರೆ ಜೀವಗಳನ್ನು ಉಳಿಸಿ," ಎಂದು ಕುಮಾರ್ ಹೇಳಿದ್ದಾರೆ. ರಾಘವೇಂದ್ರ ಕುಮಾರ್ ಪೂರ್ಣ ಸಮಯದ ರಸ್ತೆ ಸುರಕ್ಷತಾ ಸ್ವಯಂಸೇವಕರಾಗುವ ಮೊದಲು ಅನೇಕ ಬಹುರಾಷ್ಟ್ರೀಯ ಕಂಪನಿಗಳಿಗೆ ಕಾನೂನು ಸಲಹೆಗಾರರಾಗಿದ್ದರು ಎಂದು ತಿಳಿದು ಬಂದಿದೆ.

ರಾಘವೇಂದ್ರ ಕುಮಾರ್ ಉಚಿತ ಹೆಲ್ಮೆಟ್ ನೀಡುವ ಪ್ರಯತ್ನದಲ್ಲಿ ಮನೆ, ಹೆಂಡತಿಯ ಒಡವೆ ಸೇರಿದಂತೆ ತನ್ನ ಬಹುತೇಕ ಆಸ್ತಿಯನ್ನು ಕಳೆದುಕೊಂಡಿದ್ದಾರೆ. ಒಂದೆಡೆ ಇಂತಹ ಮಹಾನುಭಾವರ ಈ ಪ್ರಯತ್ನಗಳು ಓದುಗರಿಗೆ, ನೊಡುಗರಿಗೆ ಒಂದೊಳ್ಳೆ ಭಾವನೆ ನೀಡುತ್ತದೆ. ಆದರೂ ನಮ್ಮಲ್ಲಿ ಹಲವರು ಹೆಲ್ಮೆಟ್ ಧರಿಸಲು ಹಿಂದೆ ಮುಂದೆ ನೋಡುತ್ತಾರೆ. ದೇಶದಲ್ಲಿನ ಬಹುತೇಕ ಅಪಘಾತಗಳು ಹೆಲ್ಮೆಟ್ ಇಲ್ಲದ ಕಾರಣದಿಂದಲೇ ಸಾವನಪ್ಪಿರುವ ಪ್ರಕರಣಗಳು ಹೆಚ್ಚು. ಇನ್ನಾದರು ಚಾಲಕರು ಹಿಂಬದಿ ಕುಳಿತುಕೊಳ್ಳುವವರು ಹೆಲ್ಮೆಟ್ ಧರಿಸಿ ತಮ್ಮ ಜೀವಕ್ಕೆ ತಾವೆ ಹೊಣೆಗಾರರು ಎಂಬುದನ್ನು ಮರೆಯಬಾರದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications