ಹೋಂಡಾ ಅಮೇಜ್ ಖರೀದಿಸಿ ಮೋಸ ಹೋಗ್ಬೇಡಿ?
ಹೋಂಡಾ ಎಂಬ ಹೆಸರು ಕೇಳಿದಾಕ್ಷಣ ವಿಶ್ವಾಸಾರ್ಹ ಎಂಜಿನ್ ಎಂಬುದು ಮೊದಲು ನೆನಪಿಗೆ ಬರುತ್ತದೆ. ಗ್ರಾಹಕರಿಗೆ ಸಂತೃಪ್ತದಾಯಕ ಸೇವೆ ಒದಗಿಸುವ ಹೋಂಡಾ ದೇಶದಲ್ಲಿ ಬೆಳೆದು ಬರುತ್ತಿರುವ ವಾಹನ ಸಂಸ್ಥೆಗಳಲ್ಲಿ ಒಂದಾಗಿದೆ. ಆದರೆ ಇಲ್ಲಿ ಎದುರಾಗಿರುವ ಪ್ರಕರಣವೇ ಬೇರೆ.
ಗಾಜಿಯಾಬಾದ್‌ನ ಸಂಜೀವ್ ಗುಪ್ತಾ ಎನ್ನುವ ಗ್ರಾಹಕ ಸರಿ ಸುಮಾರು ಎರಡು ವರ್ಷಗಳ ಹಿಂದೆ ಅಂದರೆ 2014ರಲ್ಲಿ ಹೊಚ್ಚ ಹೊಸ ಹೋಂಡಾ ಅಮೇಜ್ ಡೀಸೆಲ್ ಕಾರನ್ನು ಖರೀದಿಸಿದ್ದರು. ಆದರೆ ತದಾ ಬಳಿಕ ಅವರಿಗೆ ಎದುರಾಗಿರುವ ದುಸ್ಥಿತಿಯ ವರದಿಯನ್ನು ನೀವೇ ಓದಿ ನೋಡಿ...

ಕಳೆದೆರಡು ವರ್ಷಗಳಲ್ಲಿ 33,000 ಕೀ.ಮೀ. ದೂರವನ್ನು ಕ್ರಮಿಸಿದ ಬಳಿಕ ಎಕ್ಸಾಸ್ಟ್ ಕೊಳವೆಯಲ್ಲಿ ಬಿಳಿ ಹೊಗೆ ಬರುತ್ತಿರುವುದನ್ನು ಸಂಜೀವ್ ಗಮನಿಸಿದ್ದರು.

ಈ ಸಂಬಂಧ ಡೀಲರುಗಳನ್ನು ಸಂಪರ್ಕಿಸಿದಾಗ ದೋಷ ಬಗೆ ಹರಿಸಲು ಅಂದಾಜು 60,000 ರುಪಾಯಿ ಖರ್ಚಾ ತಗುಲಿದೆಯೆಂದು ಡೀಲರುಗಳು ತಿಳಿಸಿದ್ದರು.

ಕಾರಿಗೆ ಆಗಲೇ ವಾರಂಟಿ ಇರುವುದರಿಂದ ಗ್ರಾಹಕ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಕಾರು ಕೊಳ್ಳುವಾಗ ಎರಡು ವರ್ಷ ಅಥವಾ 40,000 ಕೀ.ಮೀ. ವಾರಂಟಿ ಸೌಲಭ್ಯವಿತ್ತು ಎಂಬುದನ್ನು ಸಂಜೀವ್ ವಿವರಿಸುತ್ತಾರೆ.

ಬಳಿಕ ಎಂಜಿನ್ ನೊಳಗೆ ನೀರು ಪ್ರವೇಶಿಸಿದೆ ಎಂದು ಡೀಲರುಗಳು ವಿವರಣೆ ನೀಡಿದ್ದರು. ಅದೇಗೆ ಸಾಧ್ಯ ಎಂಬುದನ್ನು ಪ್ರಶ್ನಿಸಿದಾಗ ಧಾರಾಕಾರ ಮಳೆಯಲ್ಲಿ ಸಂಚಾರಿಸಿರಬಹುದೆಂಬ ಉತ್ತರ ದೊರಕಿತ್ತು.

ತದಾ ಬಳಿಕ ಸಮಸ್ಯೆ ಬಗೆಹರಿಸಲು ಎರಡು ತಿಂಗಳುಗಳಷ್ಟು ಕಾಲ ಡೀಲರುಗಳ ಬಳಿಯೇ ಕಾರನ್ನು ಬಿಟ್ಟು ಬಂದಿದ್ದರು. ಇನ್ನೊಂದು ಕಡೆ ಸಂಜೀವ್ ಸಾಲದ ಇಎಂಐ ಪಾವತಿಸುತ್ತಲೇ ಬಂದಿದ್ದರು.

ಈ ಸಂಬಂಧ ಹೋಂಡಾ ಕಾಲ್ ಸೆಂಟರನ್ನು ಕರೆ ಮಾಡಿದಾಗಲೂ ಅಧಿಕೃತರು ಹಿಂತುರುಗಿ ಕರೆ ಮಾಡಲಿದ್ದಾರೆಂಬ ಮಾತು ಕೊಟ್ಟಿದ್ದರೂ ಯಾವುದೇ ಪ್ರತಿಕ್ರಿಯೆ ಉಂಟಾಗಲಿಲ್ಲ.

ಕಾರಿಗೆ ವಿಮೆ ಸೌಲಭ್ಯ ಇದ್ದರೂ ಎಂಜಿನ್ ತಾಂತ್ರಿಕ ತೊಂದರೆಯನ್ನು ಬಗೆಹರಿಸಲು ಹೋಂಡಾ ಎಂಜಿನಿಯರ್ ಗಳಿಂದ ಯಾವುದೇ ಪ್ರಯತ್ನವೂ ನಡೆಯಲಿಲ್ಲ.

ಸಂಜೀವ್ ತಮ್ಮ ಮಾತುಗಳಲ್ಲೇ ತಿಳಿಸುವಂತೆಯೇ, ಸಾಮಾನ್ಯ ಮಳೆಯ ದಿನಗಳಲ್ಲಿ ಮಾತ್ರ ಕಾರಿನಲ್ಲಿ ಸಂಚರಿಸಿದ್ದೇನೆ. ಹಾಗೊಂದು ವೇಳೆ ಧಾರಾಕಾರ ಮಳೆಯಲ್ಲಿ ಸಂಚರಿಸಬಾರದೆಂಬ ಎಚ್ಚರಿಕೆಯನ್ನು ಹೋಂಡಾ ನೀಡಿದ್ದರೆ ತಾನು ಪಾಲಿಸುತ್ತಿದ್ದೆ ಎಂದಿದ್ದಾರೆ.

ತನ್ನಿಂದಾಗುವ ಎಲ್ಲದನ್ನು ಮಾಡಿದ ಬಳಿಕ ಕೊನೆಗೂ 37,749 ರುಪಾಯಿಗಳನ್ನು ಪಾವತಿಸಿದ ಬಳಿಕ ಅಮೇಜ್ ಕಾರನ್ನು ಸಂಜೀವ್ ಹೊರತಂದಿದ್ದರು. ಆದರೆ ತಮಗೆ ಎದುರಾದ ಅನುಭವವನ್ನುಕಾರು ಖರೀದಿಸಲು ಬಯಸುವ ಇತರೆ ಗ್ರಾಹಕರ ಜೊತೆಗೆ ಹಂಚಿಕೊಳ್ಳಲು ಬಯಸಿದ್ದರು.

ಬಳಿಕ ಸಾಮಾಜಿಕ ಜಾಲತಾಣವನ್ನು ತಮ್ಮ ಅಸ್ತ್ರವನ್ನಾಗಿ ಬಳಸಿಕೊಂಡ ಸಂಜೀವ್, ತಮ್ಮ ಕಾರಿನ ದೇಹದಲ್ಲಿ ಆಂಗ್ಲ ಮತ್ತು ಹಿಂದಿ ಭಾಷೆಗಳಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

'ಹೋಂಡಾ ಕಾರಿಗೆ ಬೇಡ ಅನ್ನಿ, ಕಾರಿನ ಎಂಜಿನ್ ಗೆ ನೀರು ನುಗ್ಗುತ್ತದೆ' ದು:ಖತಪ್ತನಾದ ಗ್ರಾಹಕ ಎಂದು ಕಾರಿನ ಮುಂಭಾಗದಲ್ಲೇ ಮೊಬೈಲ್ ನಂಬರ್ ನಮೂದಿಸುತ್ತಾ ಬರೆದಿಟ್ಟಿದ್ದಾರೆ.

ಕಾರಿನ ಬದಿಯಲ್ಲೂ ಹೋಂಡಾ ತರಾಟೆಗೆ ತೆಗೆದುಕೊಂಡಿರುವ ಸಂಜೀವ್, ವಾರಂಟಿ ಹೊಂದಿರುವ ಹೊರತಾಗಿಯೂ 37,749 ರು.ಗಳನ್ನು ಈಡು ಮಾಡಿರುವುದಾಗಿ ಆರೋಪಿಸಿದ್ದಾರೆ. ಅಲ್ಲದೆ ಅತ್ಯಂತ ಕೆಟ್ಟ ಹೋಂಡಾ ಎಂಜಿನ್ ಗಳಿಗೆ ಯಾವುದೇ ವಾರಂಟಿ ಸಿಗುವುದಿಲ್ಲ ಎಂದಿದ್ದಾರೆ.

ಕಾರಿನ ಹಿಂಬದಿಯಲ್ಲೂ ಗ್ರಾಹಕರಿಗೆ ಹೋಂಡಾ ಅಮೇಜ್ ಖರೀದಿಸುವುದು ಬೇಡವೆಂದು ಸಲಹೆ ಮಾಡಿರುವ ಅವರು, ಅಮೇಜ್ ಖರೀದಿಸಿ ತಾನೀಗ ರಕ್ತ ಕಣ್ಣೀರು ಸುರಿಸುತ್ತಿದ್ದೇನೆ. ನೀವು ಕೂಡಾ ಆಳುವುದು ಬೇಡ ಎಂದು ದು:ಖತಪ್ತ ಗ್ರಾಹಕ ಬೇಡಿಕೊಂಡಿದ್ದಾನೆ.

ಕೊನೆಗೆ ಎಚ್ಚೆತ್ತುಕೊಂಡು ಜಪಾನ್ ಮೂಲದ ಹೋಂಡಾ ಸಂಸ್ಥೆಯು ಎಂಜಿನ್ ಬದಲಾಯಿಸಿ ಕೊಡುವುದಾಗಿ ತನಗೆ ಮಾತು ಕೊಟ್ಟಿರುವುದಾಗಿ ಸಂಜೀವ್ ತಿಳಿಸುತ್ತಾರೆ.


Click it and Unblock the Notifications