ಚಾಲಕನಿಲ್ಲದೆ ರಿವರ್ಸ್ ಚಲಿಸಿದ ಟಾಟಾ ಟಿಯಾಗೋ ಇವಿ! ವೈರಲ್ ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು
ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಅಕ್ಟೋಬರ್ 16 ರಂದು ನಡೆದ ವಿಚಿತ್ರ ಘಟನೆಯೊಂದರ ಸಿಸಿಟಿವಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಲ್ಲಿ ಚಾಲಕನೇ ಇಲ್ಲದೆ ಟಾಟಾ ಟಿಯಾಗೋ ಇವಿ (Tata Tiago EV) ಕಾರು ರಿವರ್ಸ್ ಮೂಡ್‌ನಲ್ಲಿ ಸಾಗಿದೆ! ಅಕ್ಟೋಬರ್ 19 ರಿಂದ ವೈರಲ್ ಆಗಿರುವ ಈ ವಿಡಿಯೋ ಇಂದಿಗೂ ಟ್ರೆಂಡಿಂಗ್‌ನಲ್ಲಿದೆ. ಘಟನೆ ನಡೆದಾಗ ಕಾರಿನ ಕೀ ನನ್ನ ಬಳಿಯೇ ಇತ್ತು ಎಂದು ಮಾಲೀಕರು ತಿಳಿಸಿದ್ದಾರೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಹಾಗಿದ್ದರೆ ಚಾಲಕನಿಲ್ಲದೆ ಕಾರು ಹಿಂದಕ್ಕೆ ಚಲಿಸಿದ್ದು ಹೇಗೆ? ಇದಕ್ಕೆ ತಾಂತ್ರಿಕ ಕಾರಣಗಳೇನು ಮತ್ತು ಕಾರು ಚಾಲಕರು ವಹಿಸಬೇಕಾದ ಜಾಗ್ರತೆಗಳೇನು? ಇಲ್ಲಿದೆ ಸಂಪೂರ್ಣ ವಿವರ.
ಈ ಘಟನೆ ಸಂಬಂಧ ಮೈನ್‌ಪುರಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದು, ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ, ಈವರೆಗೆ ಘಟನೆಗೆ ನಿಖರವಾದ ತಾಂತ್ರಿಕ ಕಾರಣವೇನೆಂಬುದು ಅಧಿಕೃತವಾಗಿ ಬಹಿರಂಗವಾಗಿಲ್ಲ. ಹೀಗಾಗಿ, ಈ ವಿಡಿಯೋ ನೋಡಿ ಕಾರಿನ ಬ್ರ್ಯಾಂಡ್ ಅಥವಾ ಮಾಡೆಲ್ ಬಗ್ಗೆ ತರಾತುರಿಯಲ್ಲಿ ನಿರ್ಧಾರಕ್ಕೆ ಬರುವ ಬದಲು, ಪ್ರತಿಯೊಬ್ಬ ವಾಹನ ಸವಾರರು ಸುರಕ್ಷತೆಯ ಪಾಠವಾಗಿ ಸ್ವೀಕರಿಸುವುದು ಒಳಿತು.

ಟಾಟಾ ಟಿಯಾಗೋ ಇವಿ ವೈರಲ್ ವಿಡಿಯೋ: ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?
ಎಲೆಕ್ಟ್ರಿಕ್ ವಾಹನಗಳು (EV) ಆನ್‌ನಲ್ಲಿದ್ದು ಗೇರ್ ಹಾಕ್ಕೊಂಡಿದ್ದರೆ, ಆಕ್ಸಿಲರೇಟರ್ ನೀಡದಿದ್ದರೂ ಕಾರು ಮೆಲ್ಲಗೆ ಚಲಿಸಲು (Creep feature) ಪ್ರಾರಂಭಿಸುತ್ತದೆ. ರಿವರ್ಸ್ ಗೇರ್‌ನಲ್ಲಿದ್ದಾಗಲೂ ಇದು ಸಾಧ್ಯ. ಇಷ್ಟೇ ಅಲ್ಲದೆ, ಇಳಿಜಾರಿನಲ್ಲಿ ಮ್ಯಾನುಯಲ್ ಪಾರ್ಕಿಂಗ್ ಬ್ರೇಕ್ ಅಥವಾ ಹ್ಯಾಂಡ್‌ಬ್ರೇಕ್ ಅನ್ನು ಸರಿಯಾಗಿ ಹಾಕದಿದ್ದರೆ ಕಾರು ತಾನಾಗಿಯೇ ಉರುಳುವ ಸಾಧ್ಯತೆಯಿರುತ್ತದೆ. ಟಿಯಾಗೋ ಇವಿಯಲ್ಲಿ ಮೆಕ್ಯಾನಿಕಲ್ ಹ್ಯಾಂಡ್‌ಬ್ರೇಕ್ ನೀಡಲಾಗಿದ್ದು, ಕೆಲ ಆವೃತ್ತಿಗಳಲ್ಲಿ ಹಿಲ್-ಹೋಲ್ಡ್ ಸೌಲಭ್ಯವಿದೆಯೇ ಹೊರತು ಆಟೋ-ಹೋಲ್ಡ್ ಇಲ್ಲ. ಇನ್ನು ಕೀ-ಲೆಸ್ ಕಾರುಗಳಲ್ಲಿ ಕೀ (ಫೋಬ್) ಹೊರಗಿದ್ದರೂ ಕಾರು ಆನ್‌ನಲ್ಲಿದ್ದರೆ ಚಲಿಸಬಲ್ಲದು.
| 60 ಸೆಕೆಂಡ್ ಸುರಕ್ಷತಾ ಚೆಕ್‌ಲಿಸ್ಟ್ | ನೀವೇನು ಮಾಡಬೇಕು? |
|---|---|
| ಪವರ್ ಸ್ಟೇಟ್ (Power State) | ಕಾರಿನಿಂದ ಕೆಳಗಿಳಿಯುವ ಮುನ್ನ ವಾಹನ ಸಂಪೂರ್ಣ ಆಫ್ ಆಗಿದೆಯೇ ಎಂದು ಸ್ಪೀಡೋಮೀಟರ್/ಕ್ಲಸ್ಟರ್ ಲೈಟ್ ನೋಡಿ ಖಚಿತಪಡಿಸಿಕೊಳ್ಳಿ. |
| ಗೇರ್ ಪೊಸಿಷನ್ (Gear position) | ಇಳಿಜಾರಿನಲ್ಲಿ ಕಾರು ನಿಲ್ಲಿಸುವಾಗ ನ್ಯೂಟ್ರಲ್ ಅಥವಾ ರಿವರ್ಸ್ ಗೇರ್‌ನಲ್ಲೇ ಬಿಟ್ಟು ಹೋಗಬೇಡಿ. |
| ಹ್ಯಾಂಡ್‌ಬ್ರೇಕ್ (Handbrake) | ಹ್ಯಾಂಡ್‌ಬ್ರೇಕ್ ಅನ್ನು ಗಟ್ಟಿಯಾಗಿ ಎಳೆಯಿರಿ. ಲಿವರ್ ಸಂಪೂರ್ಣ ಲಾಕ್ ಆಗಿದೆಯೇ ಎಂದು ಗಮನಿಸಿ. |
| ವೀಲ್ಸ್ (Wheels) | ಇಳಿಜಾರಿನಲ್ಲಿದ್ದಾಗ ಕಾರಿನ ಚಕ್ರಗಳನ್ನು ರಸ್ತೆ ಬದಿಯ ಕಡೆಗೆ ಕ್ರಾಸ್ ಮಾಡಿ ತಿರುಗಿಸಿ; ಜಾಸ್ತಿ ಇಳಿಜಾರಿದ್ದರೆ ವೀಲ್ ಚಾಕ್ (ಸ್ಟಾಪರ್) ಬಳಸಿ. |
| ಹಿಲ್-ಹೋಲ್ಡ್ (Hill‑hold) | ನಿಮ್ಮ ಕಾರಿನಲ್ಲಿ ಹಿಲ್-ಹೋಲ್ಡ್ ಇದೆಯೇ ಎಂದು ತಿಳಿದುಕೊಳ್ಳಿ. ನೆನಪಿಡಿ, ಹಿಲ್-ಹೋಲ್ಡ್ ಪಾರ್ಕಿಂಗ್ ಬ್ರೇಕ್ ಅಲ್ಲ! |
| ಕೀ-ಲೆಸ್ (Keyless) | ಕಾರು ಆನ್‌ನಲ್ಲಿದ್ದರೆ ಕೀ ನಿಮ್ಮ ಬಳಿಯಿದ್ದರೂ ವಾಹನ ಮುಂದೆ ಅಥವಾ ಹಿಂದೆ ಚಲಿಸಬಹುದು. |
ಕೀ-ಲೆಸ್ ಕಾರುಗಳ ಸತ್ಯಾಸತ್ಯತೆ ಮತ್ತು ಇಳಿಜಾರಿನಲ್ಲಿ ಸುರಕ್ಷಿತ ಪಾರ್ಕಿಂಗ್
ಕೀ ಹಿಡಿದು ಕಾರಿನಿಂದ ದೂರ ಹೋದ ತಕ್ಷಣ ಚಾಲನೆಯಲ್ಲಿರುವ ಕೀ-ಲೆಸ್ ಕಾರುಗಳು ಆಟೋಮ್ಯಾಟಿಕ್ ಆಗಿ ಆಫ್ ಆಗುವುದಿಲ್ಲ. ಬ್ರ್ಯಾಂಡ್‌ಗೆ ತಕ್ಕಂತೆ ಅಲರ್ಟ್‌ಗಳು ಬೇರೆ ಬೇರೆಯಾಗಿರುತ್ತವೆ, ಹೀಗಾಗಿ ಕಾರು ಪೂರ್ಣ ಆಫ್ ಆಗಿದೆಯೇ ಎಂದು ನೀವೇ ಸ್ವತಃ ಪರಿಶೀಲಿಸುವುದು ಸುರಕ್ಷಿತ. ಇಳಿಜಾರಿನಲ್ಲಿ ಕಾರು ನಿಲ್ಲಿಸುವಾಗ ಸಾಧ್ಯವಾದಷ್ಟು ಮೇಲ್ಮುಖವಾಗಿ ಪಾರ್ಕ್ ಮಾಡಿ, ಹ್ಯಾಂಡ್‌ಬ್ರೇಕ್ ಬಿಗಿಯಾಗಿ ಹಾಕಿ, ಚಕ್ರಗಳನ್ನು ಬದಿಗೆ ತಿರುಗಿಸಿ ನಿಲ್ಲಿಸಿ. ಹಿಲ್-ಹೋಲ್ಡ್ ಎನ್ನುವುದು ಚಾಲನೆಗೆ ತಾತ್ಕಾಲಿಕ ನೆರವು ಅಷ್ಟೇ, ಅದನ್ನು ಪಾರ್ಕಿಂಗ್ ಬ್ರೇಕ್ ಎಂದು ಭಾವಿಸಬೇಡಿ.
ಪ್ರಸ್ತುತ ಸ್ಥಿತಿ: ಕಾರಿನ ಮಾಲೀಕರು, ಕಂಪನಿ ಮತ್ತು ಪೊಲೀಸ್ ತನಿಖೆ
"ನಾನು ನಾಲ್ಕು ತಿಂಗಳ ಹಿಂದಷ್ಟೇ ಟಾಟಾ ಟಿಯಾಗೋ ಇವಿ ಖರೀದಿಸಿದ್ದೆ, ಕಾರು ಸುಮಾರು 4,500 ಕಿ.ಮೀ ಓಡಿದೆ," ಎಂದು ಮಾಲೀಕರು 'ಟೈಮ್ಸ್ ಆಫ್ ಇಂಡಿಯಾ'ಗೆ ತಿಳಿಸಿದ್ದು, ಘಟನೆ ಬಳಿಕ ಕಂಪನಿಯನ್ನು ಸಂಪರ್ಕಿಸಿರುವುದಾಗಿ ಹೇಳಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತನಿಖೆಯ ಅಧಿಕೃತ ವರದಿ ಬರುವವರೆಗೆ, ಕಾರು ಆಫ್ ಮಾಡುವಾಗ ಮತ್ತು ಪಾರ್ಕಿಂಗ್ ಮಾಡುವಾಗ ಸರಿಯಾದ ಕ್ರಮಗಳನ್ನು ಅನುಸರಿಸುವುದು ಹಾಗೂ ಯಾವುದೇ ತಾಂತ್ರಿಕ ದೋಷ ಕಂಡುಬಂದಲ್ಲಿ ತಕ್ಷಣ ಕಂಪನಿಗೆ ತಿಳಿಸುವುದು ವಾಹನ ಸವಾರರ ಜವಾಬ್ದಾರಿಯಾಗಿದೆ.


Click it and Unblock the Notifications
