ಸೈರನ್ ಹಾಕಿ ಮಿಂಚಿನ ವೇಗದಲ್ಲಿ ವಿದ್ಯಾರ್ಥಿಯನ್ನು ಎಕ್ಸಾಂ ಸೆಂಟರ್‌ಗೆ ತಲುಪಿಸಿದ ಪೊಲೀಸರು
ಬೆಂಗಳೂರು ನಗರದ ಹೊಯ್ಸಳ ಪೊಲೀಸ್ ಸಿಬ್ಬಂದಿಗಳ ಮಾನವೀಯತೆ ಮೆರೆದ ಹಲವು ಘಟನಗೆಳು ಅಗಾಗ ಸುದ್ದಿಯಾಗುತ್ತಿದೆ, ಇತ್ತೀಚೆಗೆ ಸೈರನ್ ಹಾಕಿಕೊಂಡು ಸಕಾಲಕ್ಕೆ ವಿದ್ಯಾರ್ಥಿಯನ್ನು ಸಿಇಟಿ ಪರೀಕ್ಷಾ ಕೇಂದ್ರಕ್ಕೆ ತಲುಪಿಸುವ ಮೂಲಕ ಬೆಂಗಳೂರು ನಗರದ ಹೊಯ್ಸಳ ಪೊಲೀಸ್ ಸಿಬ್ಬಂದಿ ಮಾನವೀಯತೆ ಮೆರೆದು ಮತ್ತೆ ಸುದ್ದಿಯಾಗಿದ್ದಾರೆ.
ಹೊಯ್ಸಳ ಪೊಲೀಸ್ ಸಿಬ್ಬಂದಿ ಮಾನವೀಯತೆ ಮೆರೆದ ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ನಟ್ಟಿಗರು ಈ ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಮೇ 19ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನೂತನ ಸರ್ಕಾರದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ಹಿನ್ನೆಲೆಯಲ್ಲಿ ಲಕ್ಷಕ್ಕೂ ಅಧಿಕ ಜನರು ಸೇರಿದ್ದರು.

ಈ ಹಿನ್ನೆಲೆ ಬೆಂಗಳೂರು ನಗರದ ಹಲವೆಡೆ ಟ್ರಾಫಿಕ್ ಶನಿವಾರ ಜಾಮ್ ಉಂಟಾಯಿತು. ಅದೇ ದಿನ ಸಿಇಟಿ ಪರೀಕ್ಷೆ ಕೂಡ ಇತ್ತು. ಇದರಿಂದ ಸಿಇಟಿ ಪರೀಕ್ಷೆ ಬರೆಯಲು ತೆರಳಿದ ಕೆಲವು ವಿದ್ಯಾರ್ಥಿಗಳೂ ತೊಂದರೆ ಅನುಭವಿಸಿದರು. ಈ ನಡುವೆ, ಮೆಜೆಸ್ಟಿಕ್ನಿಂದ ಕೋರಮಂಗಲಕ್ಕೆ ತೆರಳಲು ಪರದಾಡುತಿದ್ದ, ವಿದ್ಯಾರ್ಥಿಯನ್ನು ಗಮನಿಸಿ ಪೊಲೀಸರು ಆತನನ್ನು ವಿಚಾರಿಸಿದಾಗ ಸಿಇಟಿ ಪರೀಕ್ಷೆಗೆ ಹೋಗುತ್ತಿರುವುದಾಗಿ ಮತ್ತು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿರುವುದಾಗಿ ಆತ ಅಸಹಾಯಕತೆ ತೋಡಿಕೊಂಡಿದ್ದಾನೆ.
ಬಳಿಕ ಪರೀಕ್ಷಾ ಕೇಂದ್ರಕ್ಕೆ ಹೋಗಬೇಕಿದ್ದ ವಿದ್ಯಾರ್ಥಿ ಶರವಣ ಕುಮಾರ್‌ಗೆ ಧೈರ್ಯ ತುಂಬಿ,ಹೊಯ್ಸಳ ವಾಹನದಲ್ಲಿ ಕೇವಲ 15 ನಿಮಿಷದಲ್ಲಿ ಕೋರಮಂಗಲದ ಜೆ.ಎನ್.ಸಿ ಕಾಲೇಜಿಗೆ ತಲುಪಿಸುವ ಮೂಲಕ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಸಹಾಯ ಮಾಡಿ ಹೊಯ್ಸಳ ಸಿಬ್ಬಂದಿಗಳು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಹೊಯ್ಸಳ ಚಾಲಕ ಎಸ್.ಟಿ.ಸೋಮಶೇಖರ್, ಹೆಡ್ ಕಾನ್‌ಸ್ಟೆಬಲ್ ಗೌರೀಶ್ ನೇತೃತ್ವದಲ್ಲಿ ವಿದ್ಯಾರ್ಥಿಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಲಾಗಿದೆ.
ಇತ್ತೀಚೆಗೆ ಇದೇ ರೀತಿ ತಮಿಳುನಾಡಿನಲ್ಲಿ ತಪ್ಪು ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಅಲ್ಲಿನ ಟ್ರಾಫಿಕ್ ಪೊಲೀಸರು ಕೆಲವೇ ನಿಮಿಷದಲ್ಲಿ ಸರಿಯಾದ ಸೆಂಟರ್ ಗೆ ತಲುಪಿಸಿದ್ದಾರೆ. ಆ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ವಿಡಿಯೋದಲ್ಲಿ ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರದೊಳಗೆ ಓಡಿಹೋಗುತ್ತಿವುದನ್ನು ಕಾಣಬಹುದು. ಪೊಲೀಸರ ಪ್ರಕಾರ, ತಿತ್ತೂರಿನ ಬಿಆರ್ ಶಾಲೆಯ ವಿ.ಆನಂದಿ ಎಂಬ ವಿದ್ಯಾರ್ಥಿನಿ, ಆವಡಿಯ ಜಯಗೋಪಾಲ್ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದರು.
ಆದರೆ, ಅಲ್ಲಿನ ಸಿಬ್ಬಂದಿ ಆಕೆಯ ಪ್ರವೇಶ ಪತ್ರವನ್ನು ಪರಿಶೀಲಿಸಿದ್ದು, ತಪ್ಪು ಕೇಂದ್ರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ಗೊಂದಲಕ್ಕೆ ಒಳಗಾಗಿದ್ದ ವಿದ್ಯಾರ್ಥಿನಿಗೆ ಅಲ್ಲೇ ಇದ್ದ ಟ್ರಾಫಿಕ್ ಪೊಲೀಸರು ನೆರವಾಗಿದ್ದಾರೆ. ತಕ್ಷಣ ಆ ವಿದ್ಯಾರ್ಥಿನಿಯನ್ನು ಭದ್ರತೆಗೆ ನಿಯೋಜಿಸಿದ್ದ ಕಾರಿನಲ್ಲಿ ಕೂರಿಸಿಕೊಂಡು, ತಿರುಮುಲ್ಲೈವೊಯಲ್‌ನ ಸರಿಯಾದ ಪರೀಕ್ಷಾ ಕೇಂದ್ರಕ್ಕೆ ಕೆಲವೇ ನಿಮಿಷಗಳಲ್ಲಿ ತಲುಪಿಸಿದ್ದಾರೆ.
ಇದನ್ನು ನೆಟ್ಟಿಗರು ತುಂಬು ಮನಸ್ಸಿನಿಂದ ಶ್ಲಾಘಿಸಿದ್ದಾರೆ. ಅದ್ಬುತ ಕೆಲಸವೆಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೀವಿಬ್ಬರು ರೋಲ್ ಮಾಡೆಲ್ ಆಗಿದ್ದೀರಿ. ವಿದ್ಯಾರ್ಥಿನಿಗೆ ಸಹಾಯ ಮಾಡಿರುವ ನಿಮ್ಮ ಕಾರ್ಯವನ್ನು ಮೆಚ್ಚಲೇಬೇಕು ಎಂದು ಬರೆದುಕೊಂಡಿದ್ದಾರೆ. ವಿದ್ಯಾರ್ಥಿನಿಯನ್ನು ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರ ತಲುಪಿಸಲು ಪೊಲೀಸರು, ಟೊಯೊಟಾ ಇನೋವಾ ಕ್ರಿಸ್ಟಾವನ್ನು ಬಳಕೆ ಮಾಡಿದ್ದಾರೆ.
ಈಗಾಗಲೇ ತಮಿಳುನಾಡು, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯದಲ್ಲಿ ಇನೋವಾ ಪೊಲೀಸ್ ಇಲಾಖೆಯ ಮೆಚ್ಚಿನ ವಾಹನವಾಗಿದೆ. ದೊಡ್ಡ ಕಾರ್ಯಾಚರಣೆ ಹಾಗೂ ಬೆಂಗಾವಲು ವಾಹನವಾಗಿ ಇದನ್ನೇ ಉಪಯೋಗ ಮಾಡುತ್ತಾರೆ. ಅಷ್ಟರ ಮಟ್ಟಿಗೆ ಇದು ವಿಶ್ವಾಸಾರ್ಹ ವೆಹಿಕಲ್ ಆಗಿದೆ. ಇನ್ನು ಬೆಂಗಳೂರಿನಲ್ಲಿ ನಡೆದ ಘಟನೆಯಲ್ಲಿ ವಿದ್ಯಾರ್ಥಿಯನ್ನು ತಲುಪಿಸಿದ ವಾಹನ ಮಾರುತಿ ಎರ್ಟಿಗಾ ಎಂಪಿವಿಯಾಗಿದೆ


Click it and Unblock the Notifications