ಕೆಟ್ಟ BMW ಕಾರು.. ರಿಪೇರಿ ಮಾಡಿಸುವಷ್ಟರಲ್ಲಿ ಮಾಲೀಕನ ಜೇಬು ಖಾಲಿ, ಆ ಬಿಲ್ ಮೊತ್ತಕ್ಕೆ ಹೊಸ ಕಾರೇ ಸಿಗುತ್ತೆ!
ಮಳೆಗಾಲ ಬಂದರೆ ಸಾಕು ದೇಶದ ದೊಡ್ಡ ನಗರಗಳಾದ ದೆಹಲಿ, ಬೆಂಗಳೂರು, ಮುಂಬೈ, ಚೆನ್ನೈ ಹಾಗೂ ಹೈದರಾಬಾದ್ ನಿವಾಸಿಗಳ ಪಾಡು ಹೇಳತೀರದು. ವರುಣನ ಅಬ್ಬರಕ್ಕೆ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ, ಅವಾಂತರವೇ ಸೃಷ್ಟಿಯಾಗುತ್ತದೆ. ಇದು ಸಾಲದು ಎಂಬಂತೆ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ವಾಹನ ಸವಾರರು ತುಂಬಾ ಕಷ್ಟಪಡಬೇಕಾಗುತ್ತದೆ.
ಸದ್ಯ, ಹೈದರಾಬಾದ್ ನಗರದಲ್ಲಿ ಅಂತಹದ್ದೇ ಘಟನೆಯೊಂದು ನಡೆದಿದೆ. ಮಳೆಯಿಂದ ರಸ್ತೆ ಜಲಾವೃತಗೊಂಡ ಕಾರಣ, ಬಿಎಂಡಬ್ಲ್ಯೂ (BMW) 5 ಸೀರಿಯಸ್ ಸೆಡಾನ್ ಮುಂದೆ ಚಲಿಸಲಾಗದೇ ಅಲ್ಲಿಯೇ ಕೆಟ್ಟು ನಿಂತಿದೆ. ಗಂಟೆಗಟ್ಟಲೇ ಕಾದ ಬಳಿಕ, ಟೋಯಿಂಗ್ ವೆಹಿಕಲ್ ಬಂದು ಕಾರನ್ನು ಸರ್ವಿಸ್ ಸೆಂಟರ್ ಗೆ ಕೊಂಡೊಯ್ದಿದ್ದು, ಅಲ್ಲಿ ರಿಪೇರಿ ಕೆಲಸಗಳಿಗೆ ಸರಿ ಸುಮಾರು 40 ಲಕ್ಷ ರೂಪಾಯಿ ಬಿಲ್ ಮಾಡಲಾಗಿದೆ.

ಘಟನೆಯ ಹಿನ್ನೆಲೆ ನೋಡುವುದಾದರೆ, ಹೈದರಾಬಾದ್ ಒಆರ್‌ಆರ್‌ನ ಸರ್ವಿಸ್ ರಸ್ತೆಯಲ್ಲಿ ಬಿಎಂಡಬ್ಲ್ಯೂ ಜಿ30 5 ಸೀರಿಯಸ್ ಕಾರನ್ನು ಅದರ ಮಾಲೀಕ ಉದಯ್ ತೇಜಾ ಪಾರ್ಕಿಂಗ್ ಮಾಡಿ, ತಮ್ಮ ಗರ್ಭಿಣಿ ಪತ್ನಿಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿರುತ್ತಾರೆ. ಅಷ್ಟರಲ್ಲಿ ವಿಪರೀತ ಮಳೆ ಬಂದು, ಕಾರಿನೊಳಗೆ ನೀರು ತುಂಬಿಕೊಂಡು ಅದು ಕೆಟ್ಟು ನಿಂತಿದೆ.
ಪ್ರತಿ ಮಳೆಗಾಲದಲ್ಲೂ ಹೈದರಾಬಾದ್ ನಗರದಲ್ಲಿ ಈ ರೀತಿಯ ಸಮಸ್ಯೆಗಳು ಸಾಮಾನ್ಯವಾಗಿ ಬಿಟ್ಟಿವೆ. ಉದಯ್ ತೇಜಾ ಅವರೇ ಹೇಳುವಂತೆ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಗೆ ನಗರದ ಜಲಾವೃತ ರಸ್ತೆಯಲ್ಲಿ ಬರೋಬ್ಬರಿ 12 ಬಿಎಂಡಬ್ಲ್ಯೂ, 8 ಮರ್ಸಿಡಿಸ್ ಬೆಂಜ್ ಕಾರುಗಳು ಸಿಲುಕಿಕೊಂಡಿವೆ. ರಸ್ತೆ ಬದಿಯಲ್ಲಿ ಮಹಾನಗರ ಪಾಲಿಕೆ ಚರಂಡಿ ನಿರ್ಮಾಣ ಮಾಡದಿರುವುದರಿಂದ ಈ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.
ಹೇಗೋ ಮಾಡಿ.. ಬಿಎಂಡಬ್ಲ್ಯೂ ಮಾಲೀಕ ಉದಯ್, ಗಂಟೆಗಟ್ಟಲೇ ಕಾದು ಆ ಬಳಿಕ ಬಂದ ಟೋಯಿಂಗ್ ವಾಹನದಲ್ಲಿ ಕಾರನ್ನು ಸರ್ವಿಸ್ ಸೆಂಟರ್ ಗೆ ತೆಗೆದುಕೊಂಡು ಹೋದರೆ, ಅಲ್ಲಿನ ಸಿಬ್ಬಂದಿ ಕಾರನ್ನು ರಿಪೇರಿ ಮಾಡಿ, 40 ಲಕ್ಷ ರೂಪಾಯಿ ಬಿಲ್ ಕಟ್ಟುವಂತೆ ಅವರಿಗೆ ಕೇಳಿದ್ದಾರೆ. ಸದ್ಯ, ಉದಯ್ ಬಳಿಯಿರುವ ಬಿಎಂಡಬ್ಲ್ಯೂ ಜಿ30 5-ಸೀರಿಯಸ್ ಕಾರಿನ ಬೆಲೆ ರೂ.65 ಲಕ್ಷವಿದೆ.
ಈ ಕಾರಿನ ದುರಸ್ತಿಗೆ ಖರ್ಚು ಮಾಡಬೇಕಾದ ಹಣದಲ್ಲಿ ಹೊಸ ಬಿಎಂಡಬ್ಲ್ಯೂ ಎಂಟ್ರಿ ಲೆವೆಲ್ ಕಾರು ಸಿಗುತ್ತದೆ ಎಂಬುದು ಹಲವರ ಅಭಿಪ್ರಾಯವಾಗಿದೆ. ಈ ಘಟನೆಯನ್ನು ಕೂಲಂಕುಷವಾಗಿ ನೋಡುವುದಾದರೆ, ಕಾರಿನ ಮಾಲೀಕ ಹಾಗೂ ಮಹಾನಗರ ಪಾಲಿಕೆ ಇಬ್ಬರ ತಪ್ಪುಯಿದೆ. ನಗರಗಳು ಬೆಳದಂತೆ ಪಾಲಿಕೆಯು ಸುಗಮವಾಗಿ ಮಳೆ ನೀರು ಹೋಗಲು ವ್ಯವಸ್ಥೆ ಮಾಡಬೇಕು.
ಭಾರತದ ಬದಲಾದ ಹವಾಮಾನ ಪರಿಸ್ಥಿತಿಯಲ್ಲಿ ಮಳೆ ಯಾವ ಪ್ರಮಾಣದಲ್ಲಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕಾರುಗಳನ್ನು ರಸ್ತೆ ಬದಿ ನಿಲ್ಲಿಸದೇ ಸುರಕ್ಷಿತ ಸ್ಥಳದಲ್ಲಿ ಪಾರ್ಕಿಂಗ್ ಮಾಡುವುದು ಅದರ ಮಾಲೀಕರ ಜವಾಬ್ದಾರಿಯಾಗುತ್ತದೆ. ನೀವು ಹೋಗುವ ಜಾಗದಲ್ಲಿ ಸರಿಯಾಗಿ ವಾಹನ ನಿಲುಗಡೆಗೆ ಅವಕಾಶ ಇಲ್ಲದಿದ್ದಾಗ ಸಾರ್ವಜನಿಕ ಸಾರಿಗೆ ಅಥವಾ ಕ್ಯಾಬ್ ಬಳಸುವುದು ಸೂಕ್ತವಾದ ಮಾರ್ಗವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications