ಸ್ವಾತಂತ್ರ್ಯ ದಿನಾಚರಣೆಗೆ ವಿಶೇಷ 'ರಾಯಲ್' ಸವಾರಿ
ದೇಶದೆಲ್ಲ ನಿವಾಸಿಗಳು 69ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ದೇಶಭಕ್ತಿಯಿಂದ ಆಚರಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕೆಲವು ರಾಯಲ್ ಎನ್‌ಫೀಲ್ಡ್ ಉತ್ಸಾಹಿ ಸವಾರರು ವಿಶೇಷ ಬೈಕ್ ಪಯಣ ಹಮ್ಮಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಬೆಂಗಳೂರಿನ ಅರಮನೆ ರಸ್ತೆಯ ಸಮೀಪ ಸ್ಥಿತಗೊಂಡಿರುವ ಸಿವಿಎಸ್ ಮೋಟಾರ್ಸ್ ಮುಂದಾಳತ್ವದಲ್ಲಿ ಸ್ವಾತಂತ್ರ್ಯ ಚಾಲನೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ 60ರಷ್ಟು ಸವಾರರು ಭಾಗವಹಿಸುವ ಮೂಲಕ ತಮ್ಮ ಪಯಣವನ್ನು ಸ್ಮರಣೀಯವಾಗಿಸಿದ್ದರು.

ಸಿವಿಎಸ್ ಮೋಟಾರ್ಸ್ 10ನೇ ವಾರ್ಷಿಕೋತ್ಸವದ ಅಂಗವಾಗಿ ಸ್ವಾತಂತ್ರ್ಯ ಚಾಲನೆ ಏರ್ಪಡಿಸಲಾಗಿತ್ತು. ಇದರಲ್ಲಿ ರಾಯಲ್ ಎನ್ ಫೀಲ್ಡ್ ಸವಾರರು ಬಹಳ ಉತ್ಸುಕತೆಯಿಂದ ಭಾಗವಹಿಸಿದ್ದರು.

ಬೆಂಗಳೂರಿನಿಂದ ಪಯಣ ಬೆಳೆಸಿದ ತಂಡವು ನೇರವಾಗಿ ತಮಿಳುನಾಡಿನ ಮಸನಗುಡಿಯಲ್ಲಿರುವ ನೀಲಗಿರಿ ಬೆಟ್ಟದತ್ತ ಸಾಗಿತ್ತು.

ಅದ್ಭುತ ರಸ್ತೆ ಸಾನಿಧ್ಯವನ್ನು ಹೊಂದಿರುವ ರಾಯಲ್ ಎನ್ ಫೀಲ್ಡ್ ಬೈಕ್ ಗಳು ರಸ್ತೆಯಲ್ಲಿ ಭಾರಿ ಶಬ್ದದೊಂದಿಗೆ ಚಲಿಸುವುದನ್ನು ನೋಡುವುದೇ ಒಂಥರ ಖುಷಿಯ ಅನುಭವವಾಗಿತ್ತು.

ಪ್ರಸ್ತುತ 60ರಷ್ಟು ಬೈಕ್ ಉತ್ಸಾಹಿಗಳು ಭಾಗವಹಿಸಿದ್ದರಿಂದ ಸುಗಮ ಸವಾರಿಗಾಗಿ ವಿವಿಧ ತಂಡಗಳಾಗಿ ವಿಂಗಡಿಸಲಾಗಿತ್ತು.

ಸುರಕ್ಷಿತ ಪಯಣವನ್ನು ಪ್ರೋತ್ಸಾಹಿಸುವುದೇ ಸ್ವಾತಂತ್ರ್ಯ ಚಾಲನೆಯ ಉದ್ದೇಶವಾಗಿತ್ತು ಎಂದು ಸಿವಿಎಸ್ ಮೋಟಾರ್ಸ್ ಮಾಲಿಕ ಮಯೂರ್ ಚಂದ್ರಶೇಖರ್ ಅಭಿಪ್ರಾಯಪಡುತ್ತಾರೆ.

ಮುದುಮಲೈ ಹುಲಿ ಅರಣ್ಯಧಾಮ ಪ್ರದೇಶದ ಮುಖಾಂತರ ಮಸನಗುಡಿ ಪ್ರವೇಶಿಸಿದ ತಂಡವು ಪರಿಪೂರ್ಣ ದೀರ್ಘ ಪಯಣವನ್ನು ಆಸ್ವಾದಿಸಿತ್ತು.

ಭಾರತಕ್ಕೆ ಮಧ್ಯ ರಾತ್ರಿಯಲ್ಲಿ ಸ್ವಾತಂತ್ರ್ಯ ಸಿಕ್ಕಿರುವುದನ್ನು ನೆನಪಿಸುವುದಕ್ಕೆ ಸಮಾನವಾಗಿ ನಡುರಾತ್ರಿಯಲ್ಲೇ ದೇಶ ಧ್ವಜ ಹಾರಿಸುವ ಮೂಲಕ ಸಂತೋಷವನ್ನು ಹಂಚಿಕೊಂಡರು.

ಮಧ್ಯರಾತ್ರಿಯಲ್ಲಿ ಕ್ಯಾಂಪ್ ಫೈರ್ ಆಯೋಜಿಸುವ ಮೂಲಕ ಬೈಕ್ ಸವಾರಿಯನ್ನು ಮತ್ತಷ್ಟು ಮಧುರವಾಗಿಸಿಕೊಂಡರು.

ಪಶ್ಚಿಮ ಘಟ್ಟದಲ್ಲಿ ಹರಡಿರುವ ನೀಲಗಿರಿ ಬೆಟ್ಟವನ್ನು ನೋಡುವುದೇ ಮನಸ್ಸಿಗೆ ನೆಮ್ಮದಿಯ ಅನುಭವ ನೀಡುತ್ತಿತ್ತು.

ಕಾಲಹಟ್ಟಿ ಘಾಟಿ ಪ್ರದೇಶದಲ್ಲಿ 36ರಷ್ಟು ಕಡಿದಾದ ತಿರುವುಗಳನ್ನು ಸುರಕ್ಷಿತವಾಗಿ ದಾಟುವಲ್ಲಿ ಪ್ರಯಾಣಿಕರು ಯಶ ಕಂಡಿದ್ದರು.

ಬಳಿಕ ಪೈಕಾರ ಬೋಟ್ ಹೌಸ್ ಸ್ವಲ್ಪ ಸಮಯವನ್ನು ಮನರಂಜನೆಗಾಗಿ ಮೀಸಲಿರಿಸಿದ್ದರು.

ಬೆಂಗಳೂರಿನ ಬಿಡುವಿಲ್ಲದ ಜೀವನದ ನಡುವೆಯೂ ಸ್ವಲ್ಪ ಸಮಯವನ್ನು ಮೀಸಲಿರಿಸಿದ್ದ ತಂಡವು ರಾಯಲ್ ಎನ್ ಫೀಲ್ಡ್ ಬುಲೆಟ್ ಜೊತೆಗೆ ತಮ್ಮ ಪಯಣವನ್ನು ವಿಶೇಷವಾಗಿಸಿದರು.


Click it and Unblock the Notifications