Expressway: ಈ ನಗರಗಳ ಮಧ್ಯೆ ದೇಶದ ಅತಿ ಉದ್ದದ 2ನೇ ಎಕ್ಸ್‌ಪ್ರೆಸ್‌ವೇ.. ಕರ್ನಾಟಕದಲ್ಲೂ ಹಾದುಹೋಗುತ್ತೆ!
ಸೂರತ್ - ಚೆನ್ನೈ ಎಕ್ಸ್‌ಪ್ರೆಸ್‌ವೇ (Surat - Chennai Expressway) ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ - NHAI) ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ಮುಂದಿನ ವರ್ಷದ ಅಂತ್ಯದೊಳಗೆ ಈ ರಸ್ತೆಯು ವಾಹನ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಟೆಕ್ಸ್ ಟೈಲ್ (ಜವಳಿ) ಉದ್ಯಮಕ್ಕೆ ಹೆಸರಾಗಿರುವ ಗುಜರಾತ್‌ನ ಸೂರತ್ ಹಾಗೂ ಐಟಿ ಸೇರಿದಂತೆ ವಿವಿಧ ಕೈಗಾರಿಕೆಗಳನ್ನು ಹೊಂದಿರುವ ತಮಿಳುನಾಡಿನ ರಾಜಧಾನಿ ಚೆನ್ನೈ ನಡುವೆ ಈ ಎಕ್ಸ್‌ಪ್ರೆಸ್‌ವೇ ನಿರ್ಮಾಣಗೊಳ್ಳುತ್ತಿದೆ. ಇದರಿಂದ ಸಾರಿಗೆ ಸಂಪರ್ಕ ಸುಧಾರಿಸುತ್ತದೆ. ವ್ಯಾಪಾರ - ವಾಣಿಜ್ಯ ಚಟುವಟಿಕೆಗಳು ವೃದ್ಧಿಸಲಿದ್ದು, ಶೈಕ್ಷಣಿಕ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೂಡ ದೊಡ್ಡಮಟ್ಟದಲ್ಲಿ ಪ್ರಗತಿಯಾಗಲಿದೆ.

ಸೂರತ್ - ಚೆನ್ನೈ ಎಕ್ಸ್‌ಪ್ರೆಸ್‌ವೇಯು ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಹಾದುಹೋಗಲಿದ್ದು, ತಿರುಪತಿ, ಕಡಪ, ಕರ್ನೂಲ್, ಕಲಬುರಗಿ, ಸೋಲಾಪುರ, ಅಹಮದ್ ನಗರ ಮತ್ತು ನಾಸಿಕ್ ನಗರಗಳಿಗೂ ಸಂಪರ್ಕವನ್ನು ಕಲ್ಪಿಸಲಿದೆ. ಈ ಹೆದ್ದಾರಿ ಸಂಪೂರ್ಣವಾಗಿ ಸಿದ್ದಗೊಂಡ ಮೇಲೆ ಮುಂಬೈ ಹಾಗೂ ಪುಣೆ ನಗರಗಳಲ್ಲಿನ ಸಂಚಾರ ದಟ್ಟಣೆ ಸಮಸ್ಯೆಗೂ ಮುಕ್ತಿ ಸಿಗಲಿದೆ.
ನೂತನ ಎಕ್ಸ್‌ಪ್ರೆಸ್‌ವೇಯು ಸೂರತ್ ಮತ್ತು ಚೆನ್ನೈ ನಗರಗಳ ಮಧ್ಯೆ ಈಗಿರುವ 1600 ಕಿಲೋಮೀಟರ್ ಅಂತರವನ್ನು 1270 ಕಿಲೋಮೀಟರ್‌ಗೆ ಕಡಿತಗೊಳಿಸಲಿದೆ. ಈ ಹೆದ್ದಾರಿಯು ಉದ್ಘಾಟನೆಗೊಂಡ ಮೇಲೆ ದೆಹಲಿ - ಮುಂಬೈ ಬಳಿಕ, ದೇಶದ ಅತಿ ಉದ್ದದ ಎರಡನೇ ಎಕ್ಸ್‌ಪ್ರೆಸ್‌ವೇಯಾಗಿ ಹೊರಹೊಮ್ಮಲಿದ್ದು, ಪ್ರಯಾಣದ ಅವಧಿಯು 6 ಗಂಟೆಯಷ್ಟು ಇಳಿಕೆಯಾಗಲಿದೆ. ಈಗ ಚೆನ್ನೈನಿಂದ ಸೂರತ್‌ಗೆ ಹೋಗಲು 28 ಗಂಟೆ ಬೇಕಾಗುತ್ತದೆ.

ಸೂರತ್ - ಚೆನ್ನೈ ಎಕ್ಸ್‌ಪ್ರೆಸ್‌ವೇ (Surat - Chennai Expressway), 6 ಪಥಗಳನ್ನು ಹೊಂದಿರಲಿದ್ದು, ವಾಹನಗಳು ಗಂಟೆ 120 ಕಿ.ಮೀ ಗರಿಷ್ಠ ವೇಗದಲ್ಲಿ ಸಂಚರಿಸಲು ಸಾಧ್ಯವಾಗುವಂತೆ ಈ ಹೆದ್ದಾರಿಯನ್ನು ಅಭಿವೃದ್ದಿಪಡಿಸಲಾಗುತ್ತಿದೆ. ನೂತನ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಬರೋಬ್ಬರಿ ರೂ.45,000 ರಿಂದ ರೂ.50,000 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, 2025ರ ಡಿಸೆಂಬರ್ ಅಂತ್ಯದೊಳಗೆ ಲೋಕಾರ್ಪಣೆಗೊಳ್ಳಬಹುದು ಎನ್ನಲಾಗಿದೆ.
ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru - Chennai Expressway) ಸಹ ಈ ವರ್ಷಾಂತ್ಯದೊಳಗೆ ನಿರ್ಮಾಣವಾಗಲಿದೆ. 262 ಕಿಮೀ ಉದ್ದದ ಈ ಹೆದ್ದಾರಿಯು ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಹಾದುಹೋಗಲಿದೆ. ಬೆಂಗಳೂರು ಮತ್ತು ಚೆನ್ನೈ ನಡುವೆ ಈಗಿರುವ 5 ರಿಂದ 6 ಗಂಟೆ ಪ್ರಯಾಣ ಅವಧಿಯು 2 ಗಂಟೆ 30 ನಿಮಿಷಗಳಿಗೆ ಕಡಿತಗೊಳ್ಳುವ ಸಾಧ್ಯತೆಯಿದೆ.
ಈ ಎಕ್ಸ್‌ಪ್ರೆಸ್‌ವೇ 17 ಫ್ಲೈಓವರ್‌ಗಳು, 41 ವೆಹಿಕಲ್ ಅಂಡರ್‌ಪಾಸ್ ಗಳನ್ನು ಹೊಂದಿದ್ದು, ಉದ್ಘಾಟನೆಗೊಂಡ ಮೇಲೆ ದೇಶದ ಮೊದಲ 'ಹಸಿರು ಹೆದ್ದಾರಿ' ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ. ರಸ್ತೆ ನಿರ್ಮಾಣಕ್ಕೆ 33 ಕಿಲೋಮೀಟರ್ ಅರಣ್ಯ ಜಾಗವನ್ನು ಬಳಕೆ ಮಾಡಲಾಗುತ್ತಿದೆ. ಹೊಸ ಹೆದ್ದಾರಿಯು ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ ಶುರುವಾಗಿ, ಚೆನ್ನೈ ಹೊರವಲಯದ ಶ್ರೀಪೆರಂಬದೂರಿನಲ್ಲಿ ಕೊನೆಗೊಳ್ಳಲಿದೆ. ಪ್ರಸ್ತುತ, 4 ಪಥದ ಹೆದ್ದಾರಿಯಾಗಿರಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








